
ಹುಬ್ಬಳ್ಳಿ (ಜು.25): ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು, ಪ್ರಧಾನ್ ರಾಜೀನಾಮೆ ಅಗತ್ಯವಿಲ್ಲ ಎಂದು ಹೇಳಿರುವುದು ರಾಜ್ಯದಲ್ಲಿ ಸಂಚಲ ಸೃಷ್ಟಿಸಿದೆ.
ನಿಜವಾದ ನೀಟ್ ವಿದ್ಯಾರ್ಥಿಗಳ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ಪ್ರಧಾನ್ ರಾಜೀನಾಮೆ ಅಗತ್ಯವಿಲ್ಲ. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕೇಂದ್ರ ಸರ್ಕಾರ ಹಠಿಣ ನಿರ್ದಾರ ತೆಗೆದುಕೊಂಡಿದೆ. ಹೀಗಾಗಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಗತ್ಯವಿಲ್ಲ ಎಂದು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಸಮರ್ಥಿಸಿಕೊಂಡರು.
ವಿದೇಶಿ ಶಕ್ತಿಗಳು ವಿದ್ಯಾರ್ಥಿಗಳ ನೀಟ್ ಹೋರಾಟವನ್ನ ಹೈಜಾಕ್ ಮಾಡಿದ್ದಾರೆ. ವಿದೇಶಗಳಿಂದ ಕಾಕ್ರೋಚ್ ಜನತಾ ಪಾರ್ಟಿಗೆ ನೂರಾರು ಕೋಟಿ ಫಂಡಿಂಗ್ ಆಗಿದೆ. ಭಾರತದ ಶತ್ರುಗಳು ಸಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ, ಖಾಲಿಸ್ತಾನಿಗಳು ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ. ಇದರೊಂದಿಗೆ ಕೇಂದ್ರ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿರುವುದು ಕೂಡ ವಿರೋಧಕ್ಕೆ ಕಾರಣವಾಗಿದೆ. ತಕ್ಷಣ ಮರು ಪರೀಕ್ಷೆ ನಡೆಸಿ ಫಲಿತಾಂಶ ನೀಡಲಾಗಿದೆ. ಇದಾದಮೇಲೆ ಪ್ರತಿಭಟನೆ ನಡೆಸುವ ಅವಶ್ಯವೇನು? ಎಂದು ಪ್ರಶ್ನಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಕಾಂಗ್ರೆಸ್‌ಗೆ ನೈತಿಕತೆ, ಯೋಗ್ಯತೆ ಇಲ್ಲ. ಶಿಕ್ಷಣಕ್ಕೆ ಕಾಂಗ್ರೆಸ್ ಕೊಡೂಗೆ ಏನು? ಮತಾಂಧರ ಪಠ್ಯ ಕ್ರಮದಿಂದಾಗಿ ದೇಶದ್ರೋಹಿಗಳು ಹುಟ್ಟಿಕೊಂಡಿವೆ. ಗುಲಾಮಗಿರಿ ಶಿಕ್ಷಣ ಕಲಿಸಿರುವುದು ಕಾಂಗ್ರೆಸ್‌ನ ಸಾಧನೆ. ರಾಜ್ಯ ಕಾಂಗ್ರೆಸ್ ಮೂರು ಸಾವಿರ ಅತಿಥಿ ಶಿಕ್ಷಕರಿಗೆ ಸಂಬಂಳ ನೀಡಿಲ್ಲ. ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡುವ ಕಾಂಗ್ರೆಸ್ ತನ್ನದೇ ಸರ್ಕಾರ ಆಡಳಿತವಿರುವ ಕಾಂಗ್ರೆಸ್‌ನಲ್ಲಿ ಕೆಪಿಎಸ್‌ಸಿ ಹಗರಣವಾಗಿದೆ. ಪಶುವೈದ್ಯರ ಹುದ್ದೆಗೆ ಲಕ್ಷ ಲಕ್ಷ ಹಣಕ್ಕೆ ಮಾರಾಟ ಮಾಡಲಾಗಿದೆ ಈ ಬಗ್ಗೆ ರಾಹುಲ್ ಗಾಂಧಿ ಪಟಾಲಂ ಏನು ಹೇಳುತ್ತಾರೆ. ಇದಕ್ಕಾಗಿ ಯಾರು ರಾಜೀನಾಮೆ ಕೊಡುತ್ತಾರೆ? ಈ ಹಿಂದೆ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿದ್ದಾಗ ಕಾನೂನು ಮಸೂದೆ ಯಾಕೆ ತರಲಿಲ್ಲ? ಮೋದಿ ಈಗ ಮಸೂದೆ ಜಾರಿಗೆ ತಂದಿದ್ದಾರೆ. ಇನ್ಮುಂದೆ ತಪ್ಪು ಮಾಡಿದವರಿಗೆ ಹತ್ತು ವರ್ಷ ಶಿಕ್ಷೆ ಆಗಲಿದೆ. ಇಷ್ಟೆಲ್ಲ ಬದಲಾವಣೆ ತಂದಂಥ ಮೋದಿ ವಿರುದ್ಧ ಕಾಂಗ್ರೆಸ್ ಮಾತನಾಡುವ ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಹೋರಾಟದ ನೆಪದಲ್ಲಿ ಇದರಲ್ಲಿ ತುಕುಡೆ ಗ್ಯಾಂಗ್ ನುಸುಳಿದೆ, 2500 ಕ್ರಿಮಿನಲ್ ಗಳು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಪ್ರತಿಭಟನೆ ವೇಳೆ ಹಿಂಸಾಚಾರ ನಡೆಸುವುದು, ಪಾರ್ಲಿಮೆಂಟ್‌ಗೆ ನುಗ್ಗುವ ಯತ್ನ, ಪೊಲೀಸರ ಮೇಲೆ ಕಲ್ಲು ತೂರಾಟದಂತಹ ಕೃತ್ಯಗಳು ಈ ದೇಶದ್ರೋಹಿಗಳಿಂದಲೇ ನಡೆದಿವೆ. ಮೋದಿಯವರನ್ನ ಟಾರ್ಗೆಟ್ ಮಾಡಿ ಪ್ರತಿಭಟನೆ ಹಿಂಸಾಚಾರ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.