ಪೊಲೀಸರ ಮೇಲೆ ವಿದೇಶಿಗರ ದಾಳಿ: ಸುಡಾನ್‌ ವಿದ್ಯಾರ್ಥಿಗಳಿಗೆ ಬಿದ್ವು ಗೂಸಾ!

By Kannadaprabha NewsFirst Published Mar 10, 2020, 9:52 AM IST
Highlights

ಮಧ್ಯರಾತ್ರಿ ರಸ್ತೆಬದಿ ಬೈಕ್‌ ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕೃತ್ಯ| ಹೆಬ್ಬಾಳ ರಿಂಗ್‌ ರೋಡಲ್ಲಿ ಘಟನೆ| ವಿದ್ಯಾರ್ಥಿಗಳಿಗೆ ಮನೆಗೆ ತೆರಳುವಂತೆ ಕಾನ್‌ಸ್ಟೇಬಲ್‌ ಸೂಚನೆ| ಕಾನೂನು ಕ್ರಮದ ಎಚ್ಚರಿಕೆ ನೀಡಿದರೂ ಇಂಗ್ಲಿಷ್‌ನಲ್ಲಿ ನಿಂದನೆ ಪೇದೆ ಮುಖಕ್ಕೆ ಪಂಚ್‌, ಮತ್ತೊಬ್ಬನಿಂದ ಕಪಾಳ ಮೋಕ್ಷ| 

ಬೆಂಗಳೂರು(ಮಾ.10): ನಡು ರಾತ್ರಿ ರಸ್ತೆ ಬದಿ ಬೈಕ್‌ ನಿಲ್ಲಿಸಿಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ಗಸ್ತು ಸಿಬ್ಬಂದಿ ಮೇಲೆ ಗೂಂಡಾಗಿರಿ ನಡೆಸಿದ ಆರೋಪದ ಮೇರೆಗೆ ಇಬ್ಬರು ವಿದೇಶಿ ವಿದ್ಯಾರ್ಥಿಗಳಿಗೆ ಸ್ಥಳೀಯರು ಗೂಸಾ ಕೊಟ್ಟು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಹೆಬ್ಬಾಳ ರಿಂಗ್‌ ರೋಡ್‌ ಸಮೀಪ ನಡೆದಿದೆ.

ವರ್ತೂರು ನಿವಾಸಿಗಳಾದ ಐಫಾದುಲ್ಲಾ ಸಬೀ ಹಾಗೂ ಜಲಾಲ್‌ ಬಂಧಿತರಾಗಿದ್ದು, ಹೆಬ್ಬಾಳ ರಿಂಗ್‌ ರೋಡ್‌ನಲ್ಲಿ ಶನಿವಾರ ರಾತ್ರಿ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಹಲ್ಲೆಗೊಳಗಾಗಿರುವ ಅಮೃತಹಳ್ಳಿ ಠಾಣೆ ಕಾನ್‌ಸ್ಟೇಬಲ್‌ ವಿಜಯ್‌ ಕುಮಾರ್‌ ದಾನೆನವರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕಾನ್‌ಸ್ಟೇಬಲ್‌ ನೀಡಿದ ದೂರಿನ ಮೇರೆಗೆ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿದ್ಯಾರ್ಥಿಗಳು ಮೂಲತಃ ಸುಡಾನ್‌ ದೇಶದವರಾಗಿದ್ದು, ವರ್ತೂರು ಸಮೀಪದ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಶನಿವಾರ ರಾತ್ರಿ ಜಾಲಿ ರೈಡ್‌ಗೆ ಬಂದಿದ್ದ ಅವರು, ಹೆಬ್ಬಾಳ ರಿಂಗ್‌ ರೋಡ್‌ನಲ್ಲಿ ಬೈಕ್‌ ನಿಲ್ಲಿಸಿ ದುಂಡಾವರ್ತನೆ ತೋರುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಮೃತಹಳ್ಳಿ ಠಾಣೆಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ) ರಾಜಣ್ಣ ಹಾಗೂ ಕಾನ್‌ಸ್ಟೇಬಲ್‌ ವಿಜಯ್‌ ಕುಮಾರ್‌ ಅವರು ಶನಿವಾರ ರಾತ್ರಿ ಗಸ್ತಿನಲ್ಲಿದ್ದರು. ರಾತ್ರಿ ಸುಮಾರು 1.30ಕ್ಕೆ ಹೆಬ್ಬಾಳ ರಿಂಗ್‌ ರೋಡ್‌ಗೆ ಬಂದ ಗಸ್ತು ಪೊಲೀಸರು, ಅಲ್ಲಿ ಗುಂಪುಗೂಡಿದ್ದ ಸಾರ್ವಜನಿಕರನ್ನು ಚದುರಿಸಿದರು. ಆ ವೇಳೆ ರಸ್ತೆ ಬದಿ ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದ ವಿದ್ಯಾರ್ಥಿಗಳನ್ನು ಗಸ್ತು ಸಿಬ್ಬಂದಿ ನೋಡಿದ್ದಾರೆ. ಆಗ ರಾತ್ರಿ ವೇಳೆ ಏಕೆ ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದೀರಾ ಎಂದು ಪ್ರಶ್ನಿಸಿದ ಪೊಲೀಸರು, ಮನೆಗೆ ತೆರಳುವಂತೆ ಸೂಚಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ಇಂಗ್ಲಿಷಿನಲ್ಲಿ ನಿಂದಿಸಿ ಅನುಚಿತವಾಗಿ ವರ್ತಿಸಿದ್ದಾರೆ. ಕಾನ್‌ಸ್ಟೇಬಲ್‌, ಇಲ್ಲಿಂದ ತೆರಳದೆ ಹೋದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದರಿಂದ ಕೆರಳಿದ ವಿದ್ಯಾರ್ಥಿಗಳ ಪೈಕಿ ಒಬ್ಬಾತ, ಕಾನ್‌ಸ್ಟೇಬಲ್‌ ವಿಜಯ್‌ ಕುಮಾರ್‌ಗೆ ಪಂಚ್‌ ಮಾಡಿದ್ದಾನೆ. ಮತ್ತೊಬ್ಬ ಕಪಾಳಕ್ಕೆ ಹೊಡೆದಿದ್ದಾನೆ. ಇದರಿಂದ ಕಾನ್‌ಸ್ಟೇಬಲ್‌ ತುಟಿ ಹರಿದು ಹಲ್ಲುಗಳಿಗೆ ತೀವ್ರ ಪೆಟ್ಟಾಗಿದೆ.

ಈ ಗೂಂಡಾಗಿರಿಯಿಂದ ರೊಚ್ಚಿಗೆದ್ದ ಸಾರ್ವಜನಿಕರು, ವಿದ್ಯಾರ್ಥಿಗಳ ಮೇಲೆ ತಿರುಗಿ ಬಿದ್ದಿದ್ದಾರೆ. ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುತ್ತಿದ್ದನ್ನು ಗಮನಿಸಿದ ಎಎಸ್‌ಐ ರಾಜಣ್ಣ, ವಾಕಿಟಾಕಿನಲ್ಲಿ ಠಾಣೆಗೆ ಸಂದೇಶ ಕಳುಹಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ತೆರಳಿದ ಹೊಯ್ಸಳ ಸಿಬ್ಬಂದಿಗೆ ವಿದ್ಯಾರ್ಥಿಗಳನ್ನು ಸ್ಥಳೀಯರು ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಈ ಘಟನೆ ಬಗ್ಗೆ ಗಾಯಾಳು ಕಾನ್‌ಸ್ಟೇಬಲ್‌ ನೀಡಿದ ದೂರಿನ ಮೇರೆಗೆ ಅಮೃತಹಳ್ಳಿ ಠಾಣೆ ಪೊಲೀಸರು, ವಿದೇಶಿ ವಿದ್ಯಾರ್ಥಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇತ್ತ ವಿದೇಶಿ ವಿದ್ಯಾರ್ಥಿಗಳು, ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರ ವಿರುದ್ಧ ಪ್ರತಿದೂರು ನೀಡಿದ್ದಾರೆ. ಅಂತೆಯೇ ಎಫ್‌ಐಆರ್‌ ದಾಖಲಾಗಿದೆ.
 

click me!