ಕೊಬ್ಬರಿ ಖರೀದಿ ನೋಂದಣಿಗೆ ಮತ್ತೆ ಅವಕಾಶ ಕಲ್ಪಿಸಲು ಒತ್ತಾಯ

By Kannadaprabha NewsFirst Published Mar 14, 2024, 10:57 AM IST
Highlights

ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೊಬ್ಬರಿ ಖರೀದಿ ನೋಂದಣಿ ಮಾಡಿಸಲು ಸಾಧ್ಯವಾಗದ ರೈತರಿಗೆ ಮತ್ತೆ ಅವಕಾಶ ಕಲ್ಪಿಸಿಕೊಡಬೇಕೆಂದು ರೈತ ಸಂಘ, ಹಸಿರು ಸೇನೆ, ಪ್ರಾಂತ್ಯ ರೈತ ಸಂಘದ ವತಿಯಿಂದ ಗ್ರೇಡ್-2 ತಹಸೀಲ್ದಾರ್ ರವಿಕುಮಾರ್‌ಗೆ ಮನವಿ ಸಲ್ಲಿಸಲಾಯಿತು.

  ತಿಪಟೂರು : ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೊಬ್ಬರಿ ಖರೀದಿ ನೋಂದಣಿ ಮಾಡಿಸಲು ಸಾಧ್ಯವಾಗದ ರೈತರಿಗೆ ಮತ್ತೆ ಅವಕಾಶ ಕಲ್ಪಿಸಿಕೊಡಬೇಕೆಂದು ರೈತ ಸಂಘ, ಹಸಿರು ಸೇನೆ, ಪ್ರಾಂತ್ಯ ರೈತ ಸಂಘದ ವತಿಯಿಂದ ಗ್ರೇಡ್-2 ತಹಸೀಲ್ದಾರ್ ರವಿಕುಮಾರ್‌ಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಪ್ರಾಂತ್ಯ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ ಮಾತನಾಡಿ, 2024ರ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೊಬ್ಬರಿ ಖರೀದಿಗೆ ನೋಂದಣಿ ಮಾಡಿಸುವ ಸಲುವಾಗಿ ಪ್ರಾರಂಭವಾದ ದಿನದಿಂದ ಕೊನೆಯ ದಿನದವರೆಗೂ ಸರದಿ ಸಾಲಿನಲ್ಲಿ ನಿಂತರೂ ಕೆಲ ರೈತರಿಗೆ ಸಾಧ್ಯವಾಗಿಲ್ಲ. ನೋಂದಣಿ ವಂಚಿತ ರೈತ ಸಂಖ್ಯೆಯೂ ತುಂಬಾ ಹೆಚ್ಚಿದೆ. ರಾಜ್ಯ ಸರ್ಕಾರ 2024ರ ಆದೇಶದ ಪ್ರಕಾರ ತುಮಕೂರು ಜಿಲ್ಲೆಗೆ 3 ಲಕ್ಷ 50ಸಾವಿರ ಕ್ವಿಂಟಾಲ್ ಖರೀದಿಸಲು ನಿರ್ಧರಿಸಲಾಗಿತ್ತು.

ಆದರೆ ಮಾರ್ಪಾಡು ಆದೇಶದ ಪ್ರಕಾರ ತುಮಕೂರು ಜಿಲ್ಲಾ ಪ್ರಮಾಣವನ್ನು 3. 25 ಸಾವಿರ ಕ್ವಿಂಟಾಲ್‌ಗೆ ಇಳಿಸಲಾಗಿದೆ. ನೋಂದಣಿ ಪ್ರಕ್ರಿಯೆಯ ಕೊನೆಯ ದಿನದಂದು 3.17.917 ಕ್ವಿಂಟಾಲಿಗೆ ನಿಗದಿಪಡಿಸಲಾಗಿದೆ. ಅಂದಾಜು 32 ಸಾವಿರ ಕ್ವಿಂಟಾಲ್ ಕೊಬ್ಬರಿ ಖರೀದಿಯ ಪ್ರಮಾಣನ್ನು ತುಮಕೂರು ಜಿಲ್ಲೆಯ ರೈತರಿಂದ ಕಸಿದುಕೊಳ್ಳಲಾಗಿದೆ. ಕೊಬ್ಬರಿ ಧಾರಣೆಯು ಮಾರುಕಟ್ಟೆಯಲ್ಲಿ 9 ಸಾವಿರದ ಆಜುಬಾಜಿದ್ದು, ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ನಾಫೆಡ್‌ನಲ್ಲಿ ಕ್ವಿಂಟಾಲ್‌ಗೆ 13.500 ರು. ರೈತರಿಗೆ ದೊರಕಲಿದೆ. ನೋಂದಣಿ ಮಾಡಿಸದ ರೈತರಿಗೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ನಾಲ್ಕು ಸಾವಿರ ರು. ನಷ್ಟವಾಗಲಿದ್ದು, ಮತ್ತೊಂದು ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.

ಕೊಬ್ಬರಿ ಹೋರಾಟ ಸಮಿತಿ ಅಧ್ಯಕ್ಷ ಯೋಗೀಶ್ವರಸ್ವಾಮಿ ಮಾತನಾಡಿ, ಕೊಬ್ಬರಿ ಖರೀದಿ ಪ್ರಮಾಣ ಕಡಿತದಿಂದ ರೈತರಿಗೆ ನೋಂದಣಿ ಮಾಡಿಸಲು ಅವಕಾಶ ತಪ್ಪಿ ಹೋಗಿದೆ. ಆದ ಕಾರಣ ನಮ್ಮ ಜಿಲ್ಲೆಗೆ ಹಿಂದೆ ನಿಗದಿಪಡಿಸಿದ್ದ 3.50ಸಾವಿರ ಕ್ವಿಂಟಾಲ್ ಕೊಬ್ಬರಿ ಪ್ರಮಾಣವನ್ನು ಮರು ನಿಗಧಿಪಡಿಸಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೊಬ್ಬರಿ ಮಾರಾಟ ಮಾಡಲು ಮರು ಅವಕಾಶ ಕಲ್ಪಿಸಿಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಜಯಚಂದ್ರ ಶರ್ಮ, ರೈತ ಸಂಘದ ಶ್ರೀಕಾಂತ್ ಕೆಳಹಟ್ಟಿ, ತಿಮ್ಲಾಪುರ ದೇವರಾಜು ಸೇರಿದಂತೆ ನೋಂದಣಿ ವಂಚಿತ ರೈತರು ಭಾಗವಹಿಸಿದ್ದರು. 

click me!