ಸಣ್ಣ ಗುತ್ತಿಗೆದಾರರಿಗೆ ಕಾಮಗಾರಿ ನೀಡಲು ಒತ್ತಾಯ

By Kannadaprabha News  |  First Published Mar 26, 2023, 5:00 AM IST

ಬೆಸ್ಕಾಂ ತಿಪಟೂರು ಉಪವಿಭಾಗದ ಕಛೇರಿಯಲ್ಲಿ ಸುಮಾರು 5500 ರೈತರ ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಯೋಜನೆಯಡಿಯಲ್ಲಿ, ರೈತರಿಂದ ತಲಾ 27ಸಾವಿರ ಹಣ ಪಾವತಿಸಿಕೊಂಡು ವರ್ಷ ಕಳೆದರೂ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಲ್ಲಿ ವಿಳಂಬ ಹಾಗೂ ಸಣ್ಣ ಗುತ್ತಿಗೆದಾರರಿಗೆ ಕಾಮಗಾರಿ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ಬಿಳಿಗೆರೆ ರವೀಂದ್ರಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.


  ತಿಪಟೂರು :  ಬೆಸ್ಕಾಂ ತಿಪಟೂರು ಉಪವಿಭಾಗದ ಕಛೇರಿಯಲ್ಲಿ ಸುಮಾರು 5500 ರೈತರ ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಯೋಜನೆಯಡಿಯಲ್ಲಿ, ರೈತರಿಂದ ತಲಾ 27ಸಾವಿರ ಹಣ ಪಾವತಿಸಿಕೊಂಡು ವರ್ಷ ಕಳೆದರೂ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಲ್ಲಿ ವಿಳಂಬ ಹಾಗೂ ಸಣ್ಣ ಗುತ್ತಿಗೆದಾರರಿಗೆ ಕಾಮಗಾರಿ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ಬಿಳಿಗೆರೆ ರವೀಂದ್ರಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ತಾಲೂಕು ಶಾಖೆಯ ಅಧ್ಯಕ್ಷ ರವೀಂದ್ರಕುಮಾರ್‌ ಹಾಗೂ ಪದಾಧಿಕಾರಿಗಳು ಜಂಟಿಯಾಗಿ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ರೈತರ ಅಕ್ರಮ ಪಂಪ್‌ಸೆಟ್‌ ಸಕ್ರಮಗೊಳಿಸಲು ತಿಪಟೂರು, ಚಿಕ್ಕನಾಯಕನಹಳ್ಳಿ ಮತ್ತು ತುರುವೇಕೆರೆ ತಾಲೂಕುಗಳ ಸುಮಾರು ಐದೂವರೆ ಸಾವಿರ ರೈತರುಗಳಿಂದ ತಲಾ 27ಸಾವಿರ ರೂಗಳನ್ನು ಪಾವತಿಸಿಕೊಂಡು ಸಮಯಕ್ಕೆ ಸರಿಯಾಗಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸದ ಕಾರಣ ರೈತರು ಬೆಳೆ ಬೆಳೆಯಲಾಗದೆ ಆರ್ಥಿಕ ನಷ್ಠವುಂಟಾಗಿ ಜೀವನ ನಡೆಸದಂತಹ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದ್ದಾರೆ.

Tap to resize

Latest Videos

ಈಗಾಗಲೇ ಬೇಸಿಗೆ ಕಾಲ ಪ್ರಾರಂಭವಾಗಿದ್ದು ಪರಿವರ್ತಕಗಳು ಅಧಿಕ ವಿದ್ಯುತ್‌ ಹೊರೆಯಿಂದಾಗಿ ಸುಟ್ಟು ಹೋಗುತ್ತಿವೆ. ಇದರಿಂದ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಕೋಟ್ಯಂತರ ರೂ ನಷ್ಠವಾಗುತ್ತಿರುವುದಲ್ಲದೆ, ಪರಿವರ್ತಕಗಳನ್ನು 20-25 ದಿವಸಗಳಾದರೂ ಬದಲಿಸಿ ಕೊಡದಿರುವುದರಿಂದ ರೈತರ ಬೆಳೆಗಳು ನೀರಿಲ್ಲದೆ ಒಣಗಿ ಹೋಗುತ್ತಿದ್ದು ರೈತ ಆರ್ಥಿಕವಾಗಿ ದಿವಾಳಿ ಅಂಚಿಗೆ ಬರಲಿದ್ದಾನೆ. ಆರ್ಥಿಕ ಸದೃಢರಾಗಿರುವ ರೈತರ ಯೋಜನೆಯಾದ ತತ್ಕಾಲ್‌ ಯೋಜನೆಯೊಂದಕ್ಕೆ ಮಾತ್ರ ಸರ್ಕಾರ ಅನುದಾನ ನೀಡಿದ್ದು, ಆರ್ಥಕವಾಗಿ ಹಿಂದುಳಿದ ಬಡ ರೈತರ ಯೋಜನೆಯಾದ ಅಕ್ರಮ ಸಕ್ರಮಕ್ಕೂ ರಾಜ್ಯದ ಎಲ್ಲಾ ವಿದ್ಯುತ್‌ ಸರಬರಾಜು ಕಂಪನಿಗಳಿಗೂ ನಿರ್ಲಕ್ಷ್ಯ ಮಾಡದೆ ಅನುದಾನ ನೀಡುವ ಮೂಲಕ ಸಣ್ಣಪುಟ್ಟಗುತ್ತಿಗೆದಾರರ ನೆರವಿಗೆ ಸರ್ಕಾರ ಮುಂದಾಗಬೇಕಿದೆ ಎಂದಿದ್ದಾರೆ.

ಐದು ಲಕ್ಷದೊಳಗಿನ ಅಕ್ರಮ ಸಕ್ರಮ ಯೋಜನೆಯಡಿ ಬರುವ ಎಲ್ಲಾ ಕಾಮಗಾರಿಗಳನ್ನು ಕ್ರೂಢಿಕರಿಸಿ ಬೃಹತ್‌ ಮಟ್ಟದ ಟೆಂಡರ್‌ ಕರೆದು ದೊಡ್ಡ ಕಂಪನಿಗಳಿಗೆ ಈಗ ಕೆಲಸ ನೀಡಲಾಗುತ್ತಿದೆ. ಅದರ ಬದಲು 5ಲಕ್ಷಗಳ ಕಾಮಗಾರಿಗಳನ್ನು ರಾಜ್ಯ ಅನುಮತಿ ಪಡೆದ ಸಣ್ಣಪುಟ್ಟಗ್ರಾಮೀಣ ಬಡ ಗುತ್ತಿಗೆದಾರರಿಗೆ ತುಂಡು ಗುತ್ತಿಗೆ ಮೂಲಕ ಸರ್ಕಾರ ನೀಡಬೇಕು. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿ ಹಾಲಿ ಇಂಧನ ಸಚಿವರಿಗೆ ಮನವಿ ಮಾಡಿದ್ದರೂ ಇನ್ನೂ ಆದೇಶವಾಗದೆ ಬಡ ಗ್ರಾಮೀಣ ಪ್ರದೇಶದ ಗುತ್ತಿಗೆದಾರರುಗಳಿಗೆ ಕೆಲಸವಿಲ್ಲದೆ ಜೀವನ ನಿರ್ವಹಣೆ ಕಷ್ಟಕರವಾಗಿ ನಮ್ಮಗಳ ಬದುಕು ಬೀದಿಗೆ ಬಿದ್ದಿದೆ.

ಆದ್ದರಿಂದ ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ರಾಜ್ಯಾದ್ಯಂತ ಅಕ್ರಮ ಸಕ್ರಮ ಪಂಪ್‌ಸೆಟ್‌ ಯೋಜನೆಗೆ ಕೂಡಲೆ ಅನುದಾನ ಬಿಡುಗಡೆ ಮಾಡುವ ಮೂಲಕ ಸರ್ಕಾರ ಕೂಡಲೆ ಸ್ಥಳೀಯ ಬಡ ಗ್ರಾಮೀಣ ವಿದ್ಯುತ್‌ ಗುತ್ತಿಗೆದಾರರಿಗೆ ತುಂಡು ಗುತ್ತಿಗೆ ನೀಡಿ ಅವರ ಕುಟುಂಬಕ್ಕೆ ಆಸರೆಯಾಗಬೇಕು. ಇಲ್ಲವಾದಲ್ಲಿ ತಿಪಟೂರು ವಿಭಾಗೀಯ ಕಚೇರಿಯ ಮುಂದೆ ರೈತರು, ವಿದ್ಯುತ್‌ ಗುತ್ತಿಗೆದಾರರು ಸೇರಿ ನಿರಂತರ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಗುವುದು ಎಂದು ತಾಲೂಕು ಸಮಿತಿಯ ಪದಾಧಿಕಾರಿಗಳು ಸರ್ಕಾರಕ್ಕೆ ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.

click me!