ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ 8 ಅಭ್ಯರ್ಥಿಗಳನ್ನು ಘೋಷಿಸುವುದರೊಂದಿಗೆ ಜಿಲ್ಲೆಯಲ್ಲಿ ರಾಜಕೀಯ ಅಖಾಡಕ್ಕೆ ನಾಂದಿ ಹಾಡಿದೆ.
ಉಗಮ ಶ್ರೀನಿವಾಸ್
ತುಮಕೂರು : ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ 8 ಅಭ್ಯರ್ಥಿಗಳನ್ನು ಘೋಷಿಸುವುದರೊಂದಿಗೆ ಜಿಲ್ಲೆಯಲ್ಲಿ ರಾಜಕೀಯ ಅಖಾಡಕ್ಕೆ ನಾಂದಿ ಹಾಡಿದೆ.
ತುಮಕೂರು ನಗರ, ತುಮಕೂರು ಗ್ರಾಮಾಂತರ ಹಾಗೂ ಗುಬ್ಬಿಯನ್ನು ಹೊರೆತುಪಡಿಸಿ ಉಳಿದ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಚಿಕ್ಕನಾಯಕನಹಳ್ಳಿಗೆ ಕಿರಣಕುಮಾರ್, ತಿಪಟೂರಿಗೆ ಕೆ. ಷಡಕ್ಷರಿ, ತುರುವೇಕೆರೆಗೆ ಬೆಮೆಲ್ ಕಾಂತರಾಜು, ಕುಣಿಗಲ್‌ಗೆ ಡಾ. ಎಚ್.ಡಿ. ರಂಗನಾಥ್, ಕೊರಟಗೆರೆಗೆ ಡಾ. ಜಿ. ಪರಮೇಶ್ವರ್, ಶಿರಾ, ಟಿ.ಬಿ. ಜಯಚಂದ್ರ, ಪಾವಗಡಕ್ಕೆ ಹೆಚ್.ವಿ. ವೆಂಕಟೇಶ್, ಮಧುಗಿರಿಗೆ ಕೆ.ಎನ್. ರಾಜಣ್ಣ ಹೆಸರನ್ನು ಘೋಷಿಸಲಾಗಿದೆ.
ಸದ್ಯ ಹಾಲಿ ಶಾಸಕರಾಗಿರುವ ಡಾ. ರಂಗನಾಥ್, ಡಾ. ಜಿ. ಪರಮೇಶ್ವರ್ ಅವರಿಗೆ ಮಾತ್ರ ನೀಡಿದೆ. ಇನ್ನು ಪಾವಗಡ ಶಾಸಕ ವೆಂಕಟರಮಣಪ್ಪ ಅವರಿಗೆ ವಯಸ್ಸಿನ ಕಾರಣ ಟಿಕೆಟ್ ನಿರಾಕರಿಸಿದ್ದು ಅವರ ಬದಲಿಗೆ ಅವರ ಪುತ್ರ ವೆಂಕಟೇಶ್‌ಗೆ ಮಣೆ ಹಾಕಲಾಗಿದೆ. ಉಳಿದಂತೆ ಶಿರಾಕ್ಕೆ ಮತ್ತೆ ಜಯಚಂದ್ರ ಅವರಿಗೆ ಮಣೆ ಹಾಕಿದೆ. 2018 ರ ಸಾರ್ವತ್ರಿಕ ಚುನಾವಣೆ ಬಳಿಕ ನಡೆದ ಉಪಚುನಾವಣೆಯಲ್ಲಿ ಪರಾಜಿತಗೊಂಡಿರುವ ಜಯಚಂದ್ರ ಅವರಿಗೆ ಟಿಕೆಟ್ ತಪ್ಪುತ್ತದೆ ಎಂಬ ಚರ್ಚೆ ಆರಂಭವಾಗಿತ್ತು. ಆದರೆ ಈಗ ಹೈಕಮಾಂಡ್ ಮತ್ತೆ ಅವರಿಗೆ ಮಣೆ ಹಾಕಿದ್ದು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದೆ. ಸತತ ಎರಡು ಬಾರಿ ಪರಾಭವಗೊಂಡಿರುವ ಜಯಚಂದ್ರ ಅವರು ಅನುಕಂಪದ ಅಲೆಯ ನಿರೀಕ್ಷೆಯಲ್ಲಿಯೂ ಇದ್ದಾರೆ.
ಇನ್ನು ಚಿಕ್ಕನಾಯಕನಹಳ್ಳಿಯಲ್ಲಿ ಕಳೆದ ಬಾರಿ ಜಯಚಂದ್ರ ಅವರ ಪುತ್ರ ಸಂತೋಷ್ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಬಾರಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ವಲಸೆ ಬಂದಿರುವ ಕಿರಣಕುಮಾರ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಹೀಗಾಗಿ ಅಲ್ಲಿಯೂ ಕೂಡ ತುರುಸಿನ ಸ್ಪರ್ಧೆ ಏರ್ಪಡಲಿದೆ. ತಿಪಟೂರಿನಿಂದ ಯುವ ಮುಖಂಡ ಶಶಿಧರ್ ಸಿ.ಬಿ. ಅವರು ಪ್ರಬಲ ಆಕಾಂಕ್ಷಿಗಳಾಗಿದ್ದರು. ತಿಪಟೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ ಶಶಿಧರ್ ಸ್ಥಳೀಯ ಬಿಜೆಪಿ ವಿರುದ್ಧ ದೊಡ್ಡ ಆಂದೋಲನವನ್ನೇ ರೂಪಿಸಿದ್ದರು. 2 ಬಾರಿ ಶಾಸಕರಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟುಗುರುತಿಸಿಕೊಂಡಿರುವ ಕೆ. ಷಡಕ್ಷರಿ ಅವರಿಗೆ ಪಕ್ಷ ಮತ್ತೆ ಟಿಕೆಟ್ ನೀಡಿದ್ದು ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಲು ಕಸರತ್ತು ನಡೆಸಿದ್ದಾರೆ.
ಜೆಡಿಎಸ್‌ನಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಬಳಿಕ ಆ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಬೆಮೆಲ್ ಕಾಂತರಾಜು ಅವರಿಗೆ ತುರುವೇಕೆರೆಯಲ್ಲಿ ಪಕ್ಷ ಟಿಕೆಟ್ ನೀಡಿದೆ. ಹಾಗೆ ನೋಡಿದರೆ ಜಗ್ಗೇಶ್ ಅವರು ಒಮ್ಮೆ ಈ ಕ್ಷೇತ್ರದಿಂದ ಗೆದ್ದಿದ್ದರು. ಆದರೆ ಆಪರೇಷನ್ ಕಮಲದಿಂದಾಗಿ ರಾಜಿನಾಮೆ ನೀಡಿದ ಬಳಿಕ ಕಾಂಗ್ರೆಸ್ ಇಲ್ಲಿ ಸಾಧನೆಯನ್ನು ಮಾಡಿಲ್ಲ. ಈ ಬಾರಿ ಬೆಮೆಲ್ ಕಾಂತರಾಜು ಅವರ ಸ್ಪರ್ಧೆಯಿಂದ ಕಣ ರಂಗೇರಿದೆ.
ಕುಣಿಗಲ್‌ನಲ್ಲಿ ಈ ಬಾರಿಯೂ ಕಾಂಗ್ರೆಸ್‌ನ ಹಾಲಿ ಶಾಸಕ ಡಾ. ರಂಗನಾಥ್ ಅವರಿಗೆ ಟಿಕೆಟ್ ದೊರಕಿದೆ. ಡಿ.ಕೆ ಶಿವಕುಮಾರ್ ಅವರ ಸಂಬಂಧಿಯೂ ಆಗಿರುವ ರಂಗನಾಥ್ ಎರಡನೇ ಬಾರಿ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ.
ಕೊರಟಗೆರೆ ಮೀಸಲು ವಿಧಾನಸಭಾ ಕ್ಷೇತ್ರದಿಂದ ಪರಮೇಶ್ವರ್ ಅವರು ಮತ್ತೆ ಸ್ಪರ್ಧಿಸುತ್ತಿದ್ದಾರೆ. ಇವರು ಜೆಡಿಎಸ್‌ನ ಸುಧಾಕರಲಾಲ್ ಹಾಗೂ ಬಿಜೆಪಿ ಅಭ್ಯರ್ಥಿಯಿಂದ ಪ್ರಬಲ ಸ್ಪರ್ಧೆ ಎದುರಿಸುತ್ತಿದ್ದಾರೆ. ಈಗಾಗಲೇ ಐದು ಬಾರಿ ಶಾಸಕರಾಗಿರುವ ಇವರು ಮುಖ್ಯಮಂತ್ರಿ ಅಭ್ಯರ್ಥಿಗಳಲ್ಲೊಬ್ಬರೂ ಆಗಿರುವುದು ವಿಶೇಷ. 2013 ರ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಇವರು ಆ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಹೀಗಾಗಿ ಮುಖ್ಯಮಂತ್ರಿ ಪಟ್ಟಕೈ ತಪ್ಪಿತ್ತು. ಕಳೆದ ಬಾರಿ ಜಯಸಾಧಿಸಿ ಕೆಲ ಕಾಲ ಉಪಮುಖ್ಯಮಂತ್ರಿಯೂ ಆಗಿದ್ದರು. ಈಗ ಮತ್ತೆ 6ನೇ ಬಾರಿ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ.
ಪಾವಗಡದಲ್ಲಿ ಈ ಬಾರಿ ಹಾಲಿ ಶಾಸಕ ವೆಂಕಟರಮಣಪ್ಪ ಅವರಿಗೆ ವಯಸ್ಸಿನ ಕಾರಣ ಟಿಕೆಟ್ ನಿರಾಕರಿಸಿದ್ದು ಅವರ ಪುತ್ರ ವೆಂಕಟೇಶ್ ಅವರಿಗೆ ಪಕ್ಷ ಟಿಕೆಟ್ ಘೋಷಿಸಿದೆ. ವೆಂಕಟೇಶ್ ಜಿ.ಪಂ. ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರ ತಂದೆ ವೆಂಕಟರಮಣಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಈ ಹಿಂದೆ ಗೆದ್ದು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲೂ ಕೂಡ ಕೆಲ ಕಾಲ ಸಚಿವರಾಗಿದ್ದರು. ಈಗ ವಯಸ್ಸಿನ ಕಾರಣದಿಂದಾಗಿ ಅವರು ಚುನಾವಣೆ ನಿವೃತ್ತಿಯಾಗಿದ್ದು ಅವರ ಪುತ್ರ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ.
ಇನ್ನು ಮಧುಗಿರಿಯಿಂದ ಡಿಸಿಸಿ ಬ್ಯಾಂಕ್ ಹಾಲಿ ಅಧ್ಯಕ್ಷ ಕೆ.ಎನ್. ರಾಜಣ್ಣ ಸ್ಪರ್ಧಿಸಿದ್ದಾರೆ. ಹಿಂದುಳಿದ ವರ್ಗಗಳ ನಾಯಕನೆಂದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಜಣ್ಣ ಅವರು ಕಳೆದ ಬಾರಿ ಜೆಡಿಎಸ್‌ನ ವೀರಭದ್ರಪ್ಪ ಅವರಿಂದ ಸೋಲನ್ನು ಅನುಭವಿಸಿದ್ದರು. ಇವರ ಪುತ್ರ ವಿಧಾನ ಪರಿಷತ್ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದು ಚುನಾವಣೆಗೆ ಈಗಾಗಲೇ ಸಜ್ಜಾಗಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್ ತನ್ನ 8 ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಜಿಲ್ಲೆಯ ಚುನಾವಣ ಅಖಾಡದಲ್ಲಿ ರಂಗು ಮೂಡಿಸಿದ್ದಾರೆ.
ಇನ್ನು ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ತುರುಸಿನ ಸ್ಪರ್ಧೆ ಇದ್ದು, ಗುಬ್ಬಿ ಸೇರಿದಂತೆ ಈ ಮೂರು ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಘೋಷಣೆಯಾಗಲಿದೆ. ಒಟ್ಟಾರೆಯಾಗಿ ಕಲ್ಪತರು ಜಿಲ್ಲೆಯಲ್ಲಿ ಚುನಾವಣಾ ಅಖಾಡ ಸದ್ದು ಮಾಡುತ್ತಿದೆ.
ಇಬ್ಬರು ಹಾಲಿ ಶಾಸಕರಿಗೆ ಮಣೆ, ಒಬ್ಬರಿಗೆ ಕೋಕ್
ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಈ ಬಾರಿ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್ ಘೋಷಿಸಿದ್ದು, ಒಬ್ಬರಿಗೆ ಕೋಕ್ ನೀಡಿದೆ. ಕುಣಿಗಲ್‌ನ ಶಾಸಕ ಡಾ. ರಂಗನಾಥ್ ಮತ್ತು ಕೊರಟಗೆರೆ ಶಾಸಕ ಡಾ.ಜಿ ಪರಮೇಶ್ವರ್ ಅವರಿಗೆ ಪಕ್ಷ ಮತ್ತೇ ಮಣೆ ಹಾಕಿದೆ. ಆದರೆ ವಯಸ್ಸಿನ ಕಾರಣದಿಂದಾಗಿ ಪಾವಗಡದ ಹಾಲಿ ಶಾಸಕ ವೆಂಕಟರಮಣಪ್ಪರ ಬದಲಿಗೆ ಅವರ ಪುತ್ರ ವೆಂಕಟೇಶ್‌ಗೆ ಟಿಕೆಟ್ ಘೋಷಣೆಯಾಗಿದೆ.
ಅಭ್ಯರ್ಥಿ ಆಗಮನದ ನಿರೀಕ್ಷೆಯಲ್ಲಿ ಗುಬ್ಬಿ
ಮೊದಲದ ಹಂತದಲ್ಲಿ ಜಿಲ್ಲೆಯ 3 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿಲ್ಲ. ಅದರಲ್ಲಿ ಗುಬ್ಬಿ ವಿಧಾನಸಭಾ ಕ್ಷೇತ್ರವೂ ಒಂದಾಗಿದೆ. ಗುಬ್ಬಿಯ ಜೆಡಿಎಸ್ ಶಾಸಕ ಶ್ರೀನಿವಾಸ್ ಕೂಡ ಒಂದೆರೆಡು ದಿವಸದಲ್ಲಿ ಜೆಡಿಎಸ್‌ಗೆ ರಾಜಿನಾಮೆ ನೀಡಿ ಕಾಂಗ್ರೆಸ್ ಸೇರಲಿದ್ದು, ಅವರಿಗೆ ಟಿಕೆಟ್ ನೀಡುವ ಉದ್ದೇಶದಿಂದ ಈ ಕ್ಷೇತ್ರದ ಟಿಕೇಟ್ ಘೋಷಣೆಯನ್ನು ಎರಡನೇ ಹಂತಕ್ಕೆ ಮುಂದೂಡಿದೆ.