ಕೊರೋನಾತಂಕದಲ್ಲಿ ಹಕ್ಕಿ​ಪಿಕ್ಕಿ ಸಮು​ದಾ​ಯ​ಕ್ಕೆ ಗಿಫ್ಟ್

By Suvarna NewsFirst Published Aug 13, 2020, 9:14 AM IST
Highlights

ಕೊರೋನಾ ಆತಂಕದ ನಡವೆ ಹಲವೆಡೆ ಜನರು ನಿತ್ಯ ಜೀವನ ನಡೆಸಲು ಪರದಾಡುತ್ತಿದ್ದು ಇದೇ ನಿಟ್ಟಿನಲ್ಲಿ ಆಹಾರ ಸಾಮಾಗ್ರಿ ಸೇರಿ ವಿವಿಧ ರೀತಿಯ ನೆರವು ನೀಡಲಾಗುತ್ತಿದೆ. 

ತುಮ​ಕೂರು (ಆ.13):  ಕೊರೋನದಿಂದ ತೀವ್ರ ಸಂಕಷ್ಟಕ್ಕೊಳಗಾಗಿ ವೃತ್ತಿ ಜೀವನ ನಡೆಸಲು ಸಾಧ್ಯವಾಗದ ಅಮಲಾಪುರ ಕೇಂದ್ರೀಯ ವಿದ್ಯಾಲಯದ ಸಮೀಪವಿರುವ ಹಕ್ಕಿಪಿಕ್ಕಿ ಜನಾಂಗದ ಸುಮಾರು 35 ಕುಟುಂಬಗಳಿಗೆ ಬುಧವಾರ ದಿನಸಿ ಪದಾರ್ಥಗಳ ಆಹಾರ ಕಿಟ್‌ ವಿತರಿಸುವ ಮೂಲಕ ಜಿಲ್ಲಾ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ರಂಗೇಗೌಡ ಮತ್ತು ಸ್ನೇಹಿತರು ಕೊರೋನ ಸಂಕಷ್ಟದಲ್ಲಿ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರು ಹಾಗೂ ಜಿಲ್ಲಾ ಅಲೆಮಾರಿ ಅಭಿವೃದ್ಧಿ ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿ ರಂಗೇಗೌಡ, ಕೋವಿಡ್‌-19 ಲಾಕ್‌ಡೌನ್‌ ನಂತರ ಅಲೆಮಾರಿ ಜಾತಿ ಜನರ ಪರಿಸ್ಥಿತಿ ತೀವ್ರ ಸಂಕಷ್ಟದಲ್ಲಿದ್ದು, ಪ್ರತಿನಿತ್ಯದ ಊಟಕ್ಕೂ ಪರದಾಡುತ್ತಿದ್ದಾರೆ. ಊರೂರು ಸುತ್ತಿ ವ್ಯಾಪಾರ ಮಾಡಿ ಜೀವನ ಮಾಡುವ ಇವರು ಕೋರೊನಾದಿಂದಾಗಿ ಜನ ಗ್ರಾಮಕ್ಕೆ ಇವರನ್ನು ಸೇರಿಸುತ್ತಿಲ್ಲ. ವ್ಯಾಪಾರವಿಲ್ಲದೆ ಜೀವನ ದುಸ್ಥರವಾಗಿರುವಂತಹ ಸಂದರ್ಭದಲ್ಲಿ ಕಷ್ಟಕ್ಕೆ ಸ್ಪಂಧಿಸುವಂತೆ ಅಲೆಮಾರಿ ಸಮುದಾಯ ಮನವಿ ಮಾಡಿದ ಹಿನ್ನಲೆಯಲ್ಲಿ ಇಂದು ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ವಿತರಿಸುತ್ತಿದ್ದೇವೆ ಎಂದರು.

ಅಲೆಮಾರಿ ಜನಾಂಗ ಬಳೆ, ಪಾತ್ರೆ, ಲೋಲಾಕ ಮುಂತಾದ ಕೆಲವು ಅಲಂಕಾರಿಕ ವಸ್ತುಗಳನ್ನು ವ್ಯಾಪಾರ ಮಾಡಲು ಗ್ರಾಮಗಳಿಗೆ ಹೋಗುತ್ತಾರೆ. ಅದೇ ರೀತಿ ಹಕ್ಕಿಪಿಕ್ಕಿ ಜನರೂ ಕೂಡ ಹೇರ್‌ ಪಿನ್‌, ಬಳೆ, ಹರಿಶಿನ ಕುಂಕುಮ, ಜೀರಿಗೆ ಇತ್ಯಾದಿ ವಸ್ತುಗಳನ್ನು ಮಾರುತ್ತಾರೆ, ಹಾಗೂ ಹೆಳವ ಸಮುದಾಯದ ಜನ ತಲೆಕೂದಲು ಸಂಗ್ರಹಿಸಿ ಮಾರುತ್ತಾರೆ. ಕೊರೋನ ಸಂದರ್ಭದಲ್ಲಿ ಇವರಿಗೆ ಊರಿನ ಒಳಗೆ ಪ್ರವೇಶ ನೀಡದಿರುವುದರಿಂದ  ಇವರಿಗೆ ಬರುತ್ತಿದ್ದ ಅಲ್ಪಸ್ವಲ್ಪ ಆದಾಯಕ್ಕೂ ಕಂಟಕವಾಗಿದೆ ಎಂದು ಹೇಳಿದರು.

ಕೊರೋನಾ ವಿರುದ್ಧ ಹೋರಾಟ: ಖಾಸಗಿ ಆಸ್ಪತ್ರೆಯ ಬಳಸದ ಬೆಡ್‌ ಸೀಲ್‌, ಬಿಬಿಎಂಪಿ

ಕೊರೋನಾ ಸಂದಿಗ್ಧತೆಯ ಇಂತಹ ಸಮಯದಲ್ಲಿ ನಾನು ಮತ್ತು ನನ್ನ ಸ್ನೇಹಿತರು ಸೇರಿ ಇಂತಹ ಅಲೆಮಾರಿ ಮತ್ತು ಹಕ್ಕಿಪಿಕ್ಕಿ ಸಮುದಾಯಗಳಿಗೆ ಊಟ, ಬಟ್ಟೆ, ಔಷಧಗಳಿಗೆ ಸಹಾಯ ಮಾಡುವ ನಿರ್ಧಾರ ಕೈಗೊಂಡೆವು. ಮೊದಲ ಹಂತವಾಗಿ ಸುಮಾರು 130 ಕುಟುಂಬಗಳಿಗೆ ದಿನಸಿ ವಿತರಿಸಲು ಕಾರ್ಯಪ್ರವೃತ್ತರಾಗಿದ್ದು, ಇಂದು 35 ಕುಟುಂಬಗಳಿಗೆ ಆಹಾರ ಪದಾರ್ಥಗಳ ದಿನಸಿಕಿಟ್‌ಗಳನ್ನು ವಿತರಿಸುತ್ತಿದ್ದೇವೆ ಎಂದು ತಿಳಿಸಿದರು.

ದಾನಿಗಳಿಂದ ಸಂಗ್ರಹವಾಗುವ ಹಣವನ್ನು ಒಂದು ಕಡೆ ಇಟ್ಟು ಮುಂದೆ ತುರ್ತು ಇದ್ದಾಗ ಅದನ್ನು ಉಪಯೋಗಿಸುವ ಒಂದು ಅಭಿಯಾನಕ್ಕೆ ಈಗ ಚಾಲನೆ ನೀಡಲಾಗಿದೆ. ಈ ಬಡಜನತೆಗೆ ಸಹಾಯ ಮಾಡಲು ಮನಸ್ಸಿರುವ ದಾನಿಗಳಿಂದ ಹಣ ಸಂಗ್ರಹಿಸುವುದು ಹಾಗೂ ಮುಂದೆ ಈ ಸಮುದಾಯಗಳಿಗೆ ಇನ್ನೂ ಹೆಚ್ಚೆಚ್ಚು ಅನುದಾನವನ್ನು ಸರ್ಕಾರದ ಕಡೆಯಿಂದ ನೀಡುವಂತೆ ಕೋರಿ ಉಸ್ತುವಾರಿ ಸಚಿವರ ಮೂಲಕ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.

ಕೊರೋನಾ ಟೆಸ್ಟ್‌ ರಿಪೋರ್ಟ್‌ ಇದ್ದರಷ್ಟೇ ಎಪಿಎಂಸಿಗೆ ಪ್ರವೇಶ...

ಈ ಸಂದರ್ಭದಲ್ಲಿ ನಾಗಭೂಷಣ್‌ ಬಗ್ಗನಡು ಮಾತನಾಡಿ, ಉತ್ತಮ ಆಲೋಚನೆಯುಳ್ಳ ರಂಗೇಗೌಡರು, ಅಧಿಕಾರಿಗಳು ಎಂದರೆ ಕೇವಲ ಕಚೇರಿ ಮತ್ತು ಫೈಲ್‌ಗಳಿಗೆ ಸೀಮಿತರಾಗಿರುತ್ತಾರೆ ಎಂದು ಕೊಂಡಿರುತ್ತಾರೆ ಆದರೆ ಮನಸ್ಸುಗಳ ಮೂಲಕ ಮಾತನಾಡುವಂತಹ ವ್ಯಕ್ತಿ ಎಂಬುದನ್ನು ತೋರಿಸಿದ್ದಾರೆ. ಇದು ಕೇವಲ ಪ್ರಚಾರಕ್ಕೆ ಮಾಡುತ್ತಿಲ್ಲ, ಇದರ ಹಿಂದೆ ದೊಡ್ಡ ಚರಿತ್ರೆಯೇ ಇದೆ. ಆ ಚರಿತ್ರೆಯೇ ಬಹಳ ಮುಖ್ಯವಾದುದು ಇದಕ್ಕೆ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಅಲೆಮಾರಿ ಸಮುದಾಯ ಎಂದರೆ ಭಾರತದಲ್ಲಿ ದೊಡ್ಡ ಸಮಸ್ಯೆಯಾಗಿರತಕ್ಕಂತಹದ್ದು, ಸುಮಾರು 14 ಕೋಟಿ ಜನ ಈ ಸಮುದಾಯದವರಿದ್ದಾರೆ. ಈ ಸಮುದಾದವರು ಅನ್ನವಿಲ್ಲದೆ, ಸೂರಿಲ್ಲದೆ, ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಇಂದು ಮಂಗಳ ಗ್ರಹಕ್ಕೆ, ಚಂದ್ರಲೋಕಕ್ಕೆ ಹೋಗುತ್ತಿದ್ದೇವೆ.ಇಂತಹ ಸಂದರ್ಭದಲ್ಲಿ ಇಂತಹ ಸಮುದಾಯಗಳನ್ನು ಕೈಹಿಡಿಯಲು ಸಾಧ್ಯವಾಗದಂತಹ ಸ್ಥಿತಿಯಲ್ಲಿ ಉತ್ತಮ ಮನಸ್ಸಿರುವಂತಹ ರಂಗೇಗೌಡರು ಈ ಸಮುದಾಯಗಳಿಗೆ ನೆರವಾಗುವ ಮೂಲಕ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ ಎಂದು ಹೇಳಿದರು.

ಈ ಸಮುದಾಯಗಳಿಗೆ ಸಹಾಯ ಮಾಡಲಿಚ್ಚಿಸುವ ದಾನಿಗಳು ಪೋ.9964331318 ಇವರನ್ನು ಸಂಪರ್ಕಿಸಬಹುದು. ಈ ಅಭಿಯಾನದ ಪ್ರಾರಂಭದಲ್ಲಿ ರಂಗೇಗೌಡರು ಮೊದಲು 40 ಸಾವಿರ ರೂಗಳಲ್ಲಿ 15 ವಸ್ತುಗಳಿರುವ 50 ದಿನಸಿ ಕಿಟ್‌ಗಳನ್ನು ವ್ಯಾಪಾರವಿಲ್ಲದೆ ಸಂಕಷ್ಟದಲ್ಲಿರುವ ತುಮಕೂರಿನ ಅಮಲಾಪುರದ ಹಾಗೂ ಗುಬ್ಬಿ ಬಳಿಯ ಹಕ್ಕಿಪಿಕ್ಕಿ, ಹೆಳವ ಜನರಿಗೆ ವಿತರಿಸಿ, ನಂತರ ಸಂಗ್ರಹವಾಗುವ ಹಣದಲ್ಲಿ ಚಿಕ್ಕನಾಯಕನಹಳ್ಳಿ, ತಿಪಟೂರು ಮುಂತಾದ ಕಡೆ ಅವಶ್ಯಕತೆ ಇರುವವರಿಗೆ ವಿತರಿಸಲು ನಿರ್ಧರಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಅಲೆಮಾರಿ ಮುಖಂಡರಾದ ಹುಳಿಯಾರ್‌ ರಾಜಪ್ಪ, ವೆಂಕಟೇಶ್‌, ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಸಿಬ್ಬಂದಿಗಳಾದ ಮಹಾಂತೇಶ್‌, ದೇವರಾಜ್‌, ತಾರಕೇಶ್‌, ಸೋಮಶೇಖರ್‌ ಮುಂತಾದವರು ಹಾಜರಿದ್ದರು.

click me!