ಮಡಿಕೇರಿಯಲ್ಲಿ ಮನಸೂರೆಗೊಂಡ ಪದವಿ ವಿದ್ಯಾರ್ಥಿಗಳ ಜಾನಪದ ನೃತ್ಯ

By Girish GoudarFirst Published Jan 21, 2023, 12:30 AM IST
Highlights

ಆಂತರಿಕ ಗುಣಮಟ್ಟ ಕೋಶ ಮತ್ತು ಐನ್ ಮನೆ ಕೆಫೆ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆ 

ವರದಿ: ರವಿ ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು(ಜ.21): ಆಧುನಿಕತೆ ಹೆಚ್ಚಾದಂತೆ, ಜಾಗತೀಕರಣ ಮತ್ತು ಪಾಶ್ಚಾತ್ಯ ಸಂಸ್ಕøತಿಯ ಭಾಗವಾಗಿ ದೇಶೀ ಸಂಸ್ಕøತಿ, ಆಚಾರಗಳು ನಶಿಸುತ್ತಿವೆ. ಈ ಹಿನ್ನೆಲೆಯಲ್ಲಿ ಅದನ್ನು ಇಂದಿನ ಯುವಜನರಿಗೆ ತೋರಿಸಿ, ಕಲಿಸುವುದಕ್ಕಾಗಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಜಾನಪದ ನೃತ್ಯ ಸ್ಪರ್ಧೆ ನಡೆಯಿತು. ಆ ಸ್ಪರ್ಧೆಯ ಝಲಕ್ ಹೇಗಿತ್ತು ನೋಡಿ. ಸಂಕ್ರಾಂತಿ ಅಂಗವಾಗಿ ಜನಪದರ ಕೃಷಿಯ ಬದುಕಿನ ಭಾಗವಾಗಿರುವ ಮೊರ, ಒನಕೆ ಮತ್ತು ಭತ್ತದ ರಾಶಿಗಳನಿಟ್ಟು ಪೂಜೆ ಸಲ್ಲಿಸಿರುವ ದೃಶ್ಯ ಒಂದೆಡೆ. ಅದಕ್ಕೆ ಕಬ್ಬು, ಹೂವುಗಳಿಂದ ಸಿಂಗಾರ ಮಾಡಿರುವ ವಿದ್ಯಾರ್ಥಿಗಳು. ಇದು ಯಾವುದೇ ಕಣದಲ್ಲಿ ಒಕ್ಕಣೆ ಮಾಡುವುದಕ್ಕಾಗಿ ಪೂಜಿಸಿರುವುದಲ್ಲ. ಬದಲಾಗಿ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಕೋಶ ಮತ್ತು ಐನ್‍ಮನೆ ಕೆಫೆ ಸಹಭಾಗಿತ್ವದಲ್ಲಿ ಆಯೋಜನೆ ಮಾಡಿದ್ದ ರಾಜ್ಯಮಟ್ಟದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯಗಳಿವು.

ಮೈಸೂರಿನ ಕಾಲೇಜಿನಿಂದ ಆಗಮಿಸಿದ್ದ ಇಂಡಸ್ ತಂಡದ ವಿದ್ಯಾರ್ಥಿಗಳು ಮುಂಗುಂಡಾದ ನಂಜುಂಡಾಗೆ ಶರಣು, ಶರಣಯ್ಯ ಎಂಬ ಜಾನಪದ ಗೀತೆಗೆ ವಿದ್ಯಾರ್ಥಿಗಳು ಮಾಡಿದ ತಾಡಬಟ್ಲು ಕಂಸಾಳೆ ನೃತ್ಯ ಎಲ್ಲರ ಮೈನವಿರೇಳುವಂತೆ ಮಾಡಿತು. ಇನ್ನು ಕೊಡಗಿನ ವಿರಾಜಪೇಟೆ ಪದವಿ ಕಾಲೇಜಿನ  ಯಮುನಾ ತಂಡದಿಂದ ನಡೆದ ಕಾಡಿನ ಜನರ ನೃತ್ಯ ಎಲ್ಲರ ಗಮನ ಸೆಳೆಯಿತು. ಇನ್ನು ಪಿರಿಯಾಪಟ್ಟಣದ ಕಾಲೇಜಿನಿಂದ ಆಗಮಿಸಿದ್ದ ಗಂಗಾ ತಂಡದಿಂದ ತಟ್ಟಬಟ್ಲು ಕಂಸಾಳೆ ಜೊತೆಗೆ ಮಾಡಿದ ನೃತ್ಯವು ಸಖತ್ ಖುಷಿ ನೀಡಿತು. ನೇತ್ರಾವತಿ ತಂಡದಿಂದ ಚನ್ನಪ್ಪ ಚನ್ನೆಗೌಡ ಕುಂಬಾರ ಮಾಡಿದ ಕೊಡನವ್ವ ಎಂಬ ಜಾನಪದ ಗೀತೆಗೆ ಮಾಡಿದ ನೃತ್ಯ ಎಲ್ಲರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಮಹಾನದಿ ತಂಡದಿಂದ ಗಂಡು ಕಲೆಯಾದ ಯಕ್ಷಗಾನ ನೃತ್ಯದ ಮೂಲಕ ಕಂಸವಧೆ ಪ್ರಸಂಗವನ್ನು ಪ್ರದರ್ಶಿಸಿದ ಪರಿ ನೆರೆದಿದ್ದ ಪ್ರೇಕ್ಷಕರ ರೋಮಾಂಚನಗೊಳಿಸಿತು. ನೃತ್ಯ ಪ್ರದರ್ಶನಕ್ಕಾಗಿ ವಿದ್ಯಾರ್ಥಿಗಳು ಯಕ್ಷಗಾನ ಉಡುಪು ಧರಿಸಿ ವೇದಿಕೆ ಮೇಲೆ ಬರುತ್ತಿದ್ದಂತೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಕಾವೇರಿ ತಂಡ ಚನ್ನಪ್ಪ ಚನ್ನೆಗೌಡ ಕುಂಬಾರ ಮಾಡಿದ ಕೊಡನವ ಗೀತೆಗೆ ಜಾನಪದ ನೃತ್ಯ ಮಾಡಿ ಎಲ್ಲರಿಗೂ ಖುಷಿ ನೀಡಿತು. ಜೊತೆಗೆ ಕೊಡಗಿನ ಆದಿವಾಸಿಗಳ ಮೂಲ ಜಾನಪದ ನಂಗ ಕಾಡಿನ ಮಕ್ಕಳು ದೂರಿ ದೂರಿ ಗೀತೆಗೆ ನೃತ್ಯ ಮಾಡುತ್ತಿದ್ದಂತೆ ವಿದ್ಯಾರ್ಥಿಗಳು ಕುಳಿತಲ್ಲಿಯೇ ಮೈಕುಣಿಸುತ್ತಿದ್ದರು.ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ತಾವು ಉತ್ತಮ ಪ್ರದರ್ಶನ ನೀಡಿದ್ದು ಗೆಲ್ಲುವ ವಿಶ್ವಾಸವಿದೆ ಎಂದು ಸ್ಪರ್ಧಾ ವಿದ್ಯಾರ್ಥಿ ಆದಿತ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಲದ ಶೂಲಕ್ಕೆ ಸಿಲುಕಿದ ಕುಟುಂಬಕ್ಕೆ ನೆರವಾದ BIG-3: ನೊಂದವರ ಬಾಳಲ್ಲಿ ಮೂಡಿತು ಮಂದಹಾಸ

ಸಂಸ್ಕೃತಿಯ ಮೂಲ ಕಲೆಗಳಾದ ಜಾನಪದ ಗೀತೆಗಳಿಗೆ ಜಾನಪದ ನೃತ್ಯಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳು ನೆರೆದಿದ್ದ ಪ್ರೇಕ್ಷಕರನ್ನು ಮನಸೂರೆಗೊಳಿಸಿದವು. ಕೊಡಗು ಜಿಲ್ಲೆಯ ವಿವಿಧ ಪದವಿ ಕಾಲೇಜುಗಳು ಸೇರಿದಂತೆ, ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹತ್ತಾರು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಈ ಕುರಿತು ಮಾತನಾಡಿದ ಆಂತರಿಕ ಗುಣಮಟ್ಟದ ಸಂಯೋಜಕರಾದ ಅನುಪಮ ಸಭಾಪತಿ ಅವರು ಮಾತನಾಡಿ ಜಾಗತಿಕರಣ, ಪಾಶ್ಚಿಮಾತ್ಯದ ಭಾಗವಾಗಿ ದೇಶದ ಮೂಲಕ ಸಂಸ್ಕøತಿ, ಆಚರಣೆ ಮತ್ತು ಕಲೆಗಳು ನಶಿಸಿಹೋಗುತ್ತಿವೆ. ಹೀಗಾಗಿ ಅವುಗಳನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ. ಈ ದೃಷ್ಟಿಯಿಂದಲೇ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಜಾನಪದ ನೃತ್ಯ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ಗೆಲ್ಲುವ ಮೊದಲ ತಂಡಕ್ಕೆ ಐದು ಸಾವಿರ ನಗದು ಜೊತೆಗೆ ಟ್ರೋಫಿ, ಎರಡನೇ ಬಹುಮಾನವಾಗಿ ಎರಡುವರೆ ಸಾವಿರ ನಗದು ಜೊತೆಗೆ ಟ್ರೋಫಿ ನೀಡಲಾಯಿತು ಎಂದು ತಿಳಿಸಿದರು.

ಒಟ್ಟಿನಲ್ಲಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಜನಪದ ನೃತ್ಯ ಸ್ಪರ್ಧೆ ನೋಡುಗರ ಕಣ್ಮನ ಸೆಳೆಯುವುದರ ಜೊತೆಗೆ, ನಾಡಿನ ಸಂಸ್ಕøತಿ, ಕಲೆ, ಸಾಹಿತ್ಯವನ್ನು ಅತ್ಯುತ್ತಮವಾಗಿ ಸಾದರಪಡಿಸಿದ್ದಂತು ಸತ್ಯ.

click me!