ಉತ್ತರಕನ್ನಡ: ಕ್ರೀಡೆಯಲ್ಲಿ ಧರ್ಮದ ಅಮಲಿಗೆ ತೆರೆ..!

By Girish GoudarFirst Published Jan 21, 2023, 12:00 AM IST
Highlights

ಕಾರವಾರದಲ್ಲಿ ಆಯೋಜನೆಯಾಗುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಆಯೋಜಕರು ವಿವಾದಕ್ಕೆ ಕಾರಣವಾಗುತ್ತಿದ್ದ ನಿಯಮಗಳಿಂದ ಹಿಂಪಡೆದಿದ್ದಾರೆ. 

ಭರತ್‌ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರಕನ್ನಡ(ಜ.21): ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದ ವಿವಾದಕ್ಕೆ ಕೊನೆಗೂ ತೆರೆಬಿದ್ದಿದೆ. 7 ಮಂದಿ ಕಡ್ಡಾಯ ಮುಸ್ಲಿಮರು ಹಾಗೂ 4 ಮಂದಿ‌ ಇತರ ಧರ್ಮೀಯರು ತಂಡದಲ್ಲಿ ಇರಬೇಕೆಂದು ನಿಯಮ ಮಾಡಿದ್ದ ಕಾರವಾರ ಮುಸ್ಲಿಂ ಪ್ರೀಮಿಯರ್ ಲೀಗ್ ಆಯೋಜಕರು ಏಷಿಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ವರದಿ ಪ್ರಸಾರಗೊಂಡ ಕೊನೆಗೂ ತಮ್ಮ ನಿಯಮಗಳಿಂದ ಹಿಂದೆ ಸರಿದಿದ್ದಾರೆ. ಈ ಮೂಲಕ ಕರಾವಳಿಯಲ್ಲಿ ಕ್ರೀಡೆಯಲ್ಲಿ ಕಾಣಲ್ಪಟ್ಟಿದ್ದ ಧರ್ಮ ದಂಗಲ್ ಮುಕ್ತಾಯ ಕಂಡಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ.... 

ಕಾರವಾರದಲ್ಲಿ ಕ್ರೀಡೆಯಲ್ಲಿ ಕಂಡಿದ್ದ ಧರ್ಮ ದಂಗಲ್‌ಗೆ ಕೊನೆಗೂ ತೆರೆ 

ಹೌದು, ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಫೆಬ್ರುವರಿ 1,2,3,4,5ರಂದು ಜಿಲ್ಲಾಮಟ್ಟದ "ವೈಸಿಸಿ ಕಾರವಾರ ಮುಸ್ಲಿಂ ಪ್ರೀಮಿಯರ್ ಲೀಗ್" ಆಯೋಜಿಸಿದ್ದಾರೆ. ಕಾರವಾರದ ಯುವಕರು ಹಾಗೂ ಯೂತ್ ಕಾಂಗ್ರೆಸ್ ಸದಸ್ಯರು ಸೇರಿ ಯೂತ್ ಕ್ರಿಕೆಟ್ ಕ್ಲಬ್ ನೇತೃತ್ವದಲ್ಲಿ ಆಯೋಜಿಸುತ್ತಿರುವ ಈ ಕ್ರಿಕೆಟ್ ಪಂದ್ಯಾವಳಿಯ ನಿಯಮಗಳೇ ವಿಚಿತ್ರವಾಗಿತ್ತು. ಈ ಲೀಗ್‌ನಲ್ಲಿ ಜಿಲ್ಲೆಯಿಂದ ಆಯ್ದ ತಂಡಗಳಿಗೆ ಭಾಗವಹಿಸಲು ಅವಕಾಶವಿದ್ದು, ಭಾಗವಹಿಸುವ ಪ್ರತೀ ತಾಲೂಕಿನ ತಂಡಗಳಲ್ಲಿ ಕಡ್ಡಾಯ 7 ಮುಸ್ಲಿಂ ಆಟಗಾರರು‌ ಇರಲೇಬೇಕೆಂಬ ನಿಯಮ ಮಾಡಲಾಗಿತ್ತು. ಧರ್ಮದ ಅಮಲಿನ ಆಟಕ್ಕೆ ಕಾರವಾರದ ಸರಕಾರಿ ಮಾಲಾದೇವಿ ಮೈದಾನ ಬಳಕೆ ಮಾಡಲಾಗುತ್ತಿತ್ತು. ಆದರೆ, ಆಯೋಜಕರು ಮಾಡಿದ್ದ ಪಂದ್ಯಾವಳಿಯ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಕೂಡ ಆಕ್ರೋಶಪಡಿಸಲಾರಂಭಿಸಿದ್ದರು. 

ಕ್ರಿಕೆಟ್‌ ತಂಡದಲ್ಲಿ 7 ಜನ ಮುಸ್ಲಿಂ ಆಟಗಾರರು ಕಡ್ಡಾಯ: ಕಾರವಾರದಲ್ಲಿ ಕ್ರೀಡೆಯಲ್ಲೂ ಧರ್ಮದ ಅಮಲು

ಕ್ರೀಡೆಗೆ ಧರ್ಮ ಎಂಟ್ರಿ ಕೊಟ್ಟಿರೋದು ತಪ್ಪು. ಇಂತಹ ನಿಯಮಾವಳಿಗಳ ಬದಲು ಮುಸ್ಲಿಂ ಯುವಕರದ್ದೇ ಪಂದ್ಯಾವಳಿ ಅಥವಾ ಓಪನ್ ಪಂದ್ಯಾವಳಿ ನಡೆಸಬಹುದಾಗಿತ್ತು. ಆದರೆ, ಧರ್ಮಕ್ಕೆ ಒತ್ತು ನೀಡಿ ಈ ಪಂದ್ಯಾವಳಿ ನಡೆಸುವುದು ತಪ್ಪು‌. ಅಲ್ಲದೇ, ಜಾತಿ, ಧರ್ಮ ಸಂಬಂಧಿತ ಪಂದ್ಯಾವಳಿಗೆ ಸರಕಾರಿ ಮೈದಾನ ನೀಡುವುದು ಕೂಡಾ ತಪ್ಪು ಎಂದು ಕಾರವಾರದ ಜನರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಪಂದ್ಯಾವಳಿಯ ಕುರಿತಂತೆ ಏಷಿಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ವರದಿ ಪ್ರಸಾರದ ಬಳಿಕ ಕಾರವಾರ ಮುಸ್ಲಿಂ ಪ್ರೀಮಿಯರ್ ಲೀಗ್ ಆಯೋಜಕರು ತಮ್ಮ ನಿಯಮಗಳಿಂದಲೇ ಹಿಂದೆ ಸರಿದಿದ್ದಾರೆ.

ಕಾರವಾರ ಮುಸ್ಲಿಂ ಪ್ರೀಮಿಯರ್ ಲೀಗ್‌ನ ಆಯೋಜಕರು ಇದೀಗ ತಮ್ಮ‌ ನಿಯಮಗಳಿಂದ ಹಿಂದೆ ಸರಿದಿದ್ದು, 7 ಮುಸ್ಲಿಮರು ಕಡ್ಡಾಯ ಎಂಬ ನಿಯಮವನ್ನು ಹಿಂಪಡೆದಿದ್ದಾರೆ. ಕ್ರಿಕೆಟ್ ಪಂದ್ಯಾವಳಿ ಸಮಿತಿ ಸದಸ್ಯ ಸಾದಿಕ್ ಖಾನ್ ಏಷಿಯಾನೆಟ್ ಸುವರ್ಣ ನ್ಯೂಸ್‌ಗೆ ನೀಡಿದ ಹೇಳಿಕೆ ಪ್ರಕಾರ, ಕಾರವಾರ ಕ್ರಿಕೆಟ್ ಕ್ಲಬ್ ಮೂಲಕ ಪ್ರತೀ ವರ್ಷ ಪಂದ್ಯಾವಳಿ ಆಯೋಜನೆ ಮಾಡ್ತಿದ್ವಿ. ಶಾಂತಿ, ಸೌಹಾರ್ದದಿಂದಲೇ ಪ್ರತೀ ವರ್ಷ ಕಾರವಾರ ಮುಸ್ಲಿಂ ಪ್ರೀಮಿಯರ್ ಲೀಗ್ ನಡೆಸ್ತಿದ್ವಿ. ಆದರೆ, ನಮ್ಮ ಯುವಕರೇ ಮಾಡಿದ ಪೋಸ್ಟರ್‌ ನಾಲ್ವೆಡೆ ಹಬ್ಬಿ ಕೆಟ್ಟ ಅಭಿಪ್ರಾಯ ನಿರ್ಮಾಣವಾಗಿದೆ. ನಿಯಮ ಬದಲಾವಣೆಯೊಂದಿಗೆ ನಾವು ಫೆ. 1ರಿಂದ 5ರವರೆಗೆ ಶಾಂತಿ, ಸೌಹಾರ್ದತೆಯಿಂದ ಮಾಡ್ತೇವೆ. ನಮ್ಮ ಯುವಕರೇ ಮಾಡಿದ ತಪ್ಪಿನಿಂದ ಈ ರೀತಿ ವಿವಾದಕ್ಕೆ ಕಾರಣವಾಯ್ತು. ನಾವು ಕಾರವಾರ ಮುಸ್ಲಿಂ ಪ್ರೀಮಿಯರ್ ಲೀಗ್ ಅಂತಾ ಮಾಡ್ತೇವೆ. ಬದಲಾವಣೆಯಂತೆ ಮುಸ್ಲಿಮರು ಮಾತ್ರ ಕ್ರಿಕೆಟ್ ಆಡ್ತೇವೆ. ಎಲ್ಲರೂ ಸೇರಿ ಆಡುವ ಅನ್ನೋ ಅಭಿಪ್ರಾಯವೂ ಇದೆ. ಈ ಕುರಿತಂತೆ ಸಭೆ ನಡೆಸಿ ನಿರ್ಧರಿಸಲಾಗುವುದು ಎಂದು ಸಾದಿಕ್ ತಿಳಿಸಿದ್ದಾರೆ. ಇನ್ನು ಈ ಟೂರ್ನಿಯ ಪ್ರವೇಶ ಶುಲ್ಕ 8,000ರೂ. ಆಗಿದ್ದು, ಪ್ರಥಮ ಬಹುಮಾನ 1,00,786ರೂ. ಹಾಗೂ ದ್ವಿತೀಯ ಬಹುಮಾನ 50, 786ರೂ. ನಿಗದಿಪಡಿಸಲಾಗಿದೆ. ಅಲ್ಲದೇ, ಭಾಗವಹಿಸುವ ತಂಡಗಳನ್ನು ತಮ್ಮನ್ನು ನೋಂದಾಯಿಸಿಕೊಳ್ಳಲು ಜ.25ಕ್ಕೆ ಕೊನೇ ದಿನ ಎಂದು ಆಯೋಜಕರು ತಿಳಿಸಿದ್ದಾರೆ. 

ಒಟ್ಟಿನಲ್ಲಿ ಕಾರವಾರದಲ್ಲಿ ಆಯೋಜನೆಯಾಗುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಆಯೋಜಕರು ವಿವಾದಕ್ಕೆ ಕಾರಣವಾಗುತ್ತಿದ್ದ ನಿಯಮಗಳಿಂದ ಹಿಂಪಡೆದಿದ್ದಾರೆ. ಕಾರವಾರದಲ್ಲಿ ಶಾಂತಿ, ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಆಯೋಜಕರು ಮುಂದೆ ಯಾವ ಅಂತಿಮ ನಿರ್ಧಾರ ಕೈಗೊಳ್ತಾರೆ ಅನ್ನೋದನ್ನು ಕಾದು ನೋಡಬೇಕಷ್ಟೇ.  

click me!