ಒತ್ತುವರಿ ತೆರವಿಗೆ ನಿರ್ಲಕ್ಷ್ಯದಿಂದಲೇ ಬೆಂಗಳೂರಲ್ಲಿ ಪ್ರವಾಹ ಸೃಷ್ಟಿ: ಹೈಕೋರ್ಟ್‌

By Kannadaprabha News  |  First Published Sep 13, 2022, 8:06 AM IST

ರಾಜಕಾಲುವೆಗೆ ಸೇರಿದ ಜಾಗದ ಒತ್ತುವರಿ ತೆರವುಗೊಳಿಸುವಲ್ಲಿ ಬಿಬಿಎಂಪಿ ವಿಫಲವಾಗಿರುವ ಕಾರಣದಿಂದಲೇ ಬೆಂಗಳೂರಲ್ಲಿ ಸುರಿದ ಭಾರಿ ಮಳೆಯಿಂದ ರಸ್ತೆ ಮತ್ತು ಕೆಲ ಪ್ರದೇಶಗಳು ಜಲಾವೃತವಾದ ಪರಿಸ್ಥಿತಿ ಉದ್ಭವಿಸಿತು ಎಂದು ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್‌


ಬೆಂಗಳೂರು(ಸೆ.13):  ಕಳೆದ 2019ರ ಜೂ.18ರಂದು ನೀಡಿರುವ ನಿರ್ದೇಶನದ ಅನ್ವಯ ನಗರದಲ್ಲಿನ ರಾಜಕಾಲುವೆಯ ಒತ್ತುವರಿಯನ್ನು ತೆರವುಗೊಳಿಸಲು ಸರ್ಕಾರ ಮತ್ತು ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟಎಲ್ಲ ಪ್ರಾಧಿಕಾರಗಳು ತಕ್ಷಣವೇ ಕ್ರಮ ಕೈಗೊಂಡು ವಸ್ತುಸ್ಥಿತಿ ವರದಿ ಸಲ್ಲಿಸಬೇಕು. ಹಾಗೂ ರಾಜಕಾಲುವೆ ಮತ್ತು ಮಳೆ ನೀರು ಕಾಲುವೆಗೆ ಯಾವುದೇ ರೀತಿ ತಾಜ್ಯ ಸುರಿಯುವುದನ್ನು ತಡೆಗಟ್ಟಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರಿನ ಕೆರೆಗಳ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರ ನೇತೃತ್ವದ ವಿಭಾಗೀಯ ಪೀಠ, ರಾಜಕಾಲುವೆಗೆ ಸೇರಿದ ಜಾಗದ ಒತ್ತುವರಿ ತೆರವುಗೊಳಿಸುವಲ್ಲಿ ಬಿಬಿಎಂಪಿ ವಿಫಲವಾಗಿರುವ ಕಾರಣದಿಂದಲೇ ನಗರದಲ್ಲಿ ಸುರಿದ ಭಾರಿ ಮಳೆಯಿಂದ ರಸ್ತೆ ಮತ್ತು ಕೆಲ ಪ್ರದೇಶಗಳು ಜಲಾವೃತವಾದ ಪರಿಸ್ಥಿತಿ ಉದ್ಭವಿಸಿತು ಎಂದು ಅಸಮಾಧಾನ ವ್ಯಕ್ತಪಡಿಸಿತು.

Tap to resize

Latest Videos

ಬೆಂಗಳೂರು ಪ್ರವಾಹ ಎಫೆಕ್ಟ್: ಒತ್ತುವರಿ ತೆರವಿಗೆ ಟೊಂಕಕಟ್ಟಿ ನಿಂತ ಸಿಎಂ!

ವಿಚಾರಣೆ ವೇಳೆ ವಕೀಲ ಜಿ.ಆರ್‌.ಮೋಹನ್‌ ಮಧ್ಯಂತರ ಅರ್ಜಿ ಸಲ್ಲಿಸಿ, ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಉಂಟಾಗಿದ್ದ ಪ್ರವಾಹದ ಕುರಿತು ನ್ಯಾಯಪೀಠಕ್ಕೆ ಫೋಟೋ ಸಹಿತ ಮಾಹಿತಿ ಒದಗಿಸಿದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ರಾಜಕಾಲುವೆ ಮತ್ತು ಮಳೆ ನೀರು ಕಾಲುವೆ ಜಾಗದ ಒತ್ತುವರಿ ತೆರವುಗೊಳಿಸುವ ಸಂಬಂಧ ನ್ಯಾಯಾಲಯ ಹಲವು ಬಾರಿ ನಿರ್ದೇಶನ ನೀಡಿದೆ. ಅಲ್ಲದೆ, ಮಳೆನೀರು ಕಾಲುವೆಗಳ ಸಮೀಕ್ಷೆ ನಡೆಸುವ ಹಾಗೂ ಅವುಗಳ ಒತ್ತುವರಿಗಳನ್ನು ತೆರವುಗೊಳಿಸುವಂತೆ 2019ರ ಜೂ.18ರಂದು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಿ, ಆ ಕುರಿತು ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಲು ಆರು ವಾರ ಕಾಲಾವಕಾಶ ನೀಡಿತ್ತು. ಆದರೆ, ಈವರೆಗೂ ನ್ಯಾಯಾಲಯದ ನಿರ್ದೇಶನಗಳು ಪಾಲನೆಯಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿತು.

ಹೈಕೋರ್ಟ್‌ ನಿರ್ದೇಶನದಂತೆ ನಗರದಲ್ಲಿನ ಮಳೆನೀರು ಕಾಲುವೆಗಳ ಒತ್ತುವರಿಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ಉದ್ಭವಿಸಿದೆ. ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ರಾಜಕಾಲುವೆಯ ಒತ್ತುವರಿಯನ್ನು ತೆರವಿಗೆ ಕೂಡಲೇ ಕ್ರಮ ಜರುಗಿಸಬೇಕು ಎಂತು ತಾಕೀತು ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಅ.10ಕ್ಕೆ ಮುಂದೂಡಿದೆ.
 

click me!