ಉತ್ತರ ಕನ್ನಡ: ಕದ್ರಾ ಡ್ಯಾಂ ಪ್ರದೇಶದಲ್ಲಿ ನೆರೆ ಆತಂಕ

By Kannadaprabha News  |  First Published Jul 16, 2022, 8:43 AM IST

ಬೈರಾ, ಕದ್ರಾ, ಗೋಟೆಗಾಳಿ, ಕೆರವಡಿ, ಸಿದ್ದರ, ಕಿನ್ನರ, ಕುರ್ನಿಪೇಟ್‌ ಮೊದಲಾದ ಗ್ರಾಮಗಳಲ್ಲಿ ನೆರೆ ಆತಂಕ ಶುರುವಾಗಿದೆ. 


ಕಾರವಾರ(ಜು.16):  ಜಿಲ್ಲೆಯ ಕರಾವಳಿ ಭಾಗದಲ್ಲಿ ಶುಕ್ರವಾರ ಮಳೆ ಕಡಿಮೆಯಾಗಿದ್ದು, ಕೆಲವು ಕಡೆ ಬಿಸಿಲು ಮೂಡಿದೆ. ಕಾರವಾರ ತಾಲೂಕಿನ ಕದ್ರಾ ಜಲಾಶಯ ಕೆಳಭಾಗದಲ್ಲಿ ನೆರೆ ಆತಂಕ ಪ್ರಾರಂಭವಾಗಿದೆ. ಕದ್ರಾ, ಬೊಮ್ಮನಹಳ್ಳಿ ಜಲಾಶಯದ ಗೇಟ್‌ ಮೂಲಕ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಕದ್ರಾದಲ್ಲಿ 8 ರೇಡಿಯಲ್‌ ಗೇಟ್‌ ತೆರೆಯಲಾಗಿದೆ. ಇದರಿಂದ 20,200 ಕ್ಯೂಸೆಕ್‌ ನೀರು, ವಿದ್ಯುತ್‌ ಉತ್ಪಾದನೆಯಿಂದ 20,131 ಕ್ಯೂಸೆಕ್‌ ನೀರು ಸೇರಿದಂತೆ ಒಟ್ಟು 40,331 ಸಾವಿರ ಕ್ಯೂಸೆಕ್‌ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ಈ ಜಲಾಶಯದ ನೀರಿನ ಗರಿಷ್ಠ ಮಟ್ಟ 34.50 ಮೀ. ಆಗಿದ್ದು, ಹಾಲಿ 30.50 ಮೀ. ತುಂಬಿದೆ. 2019 ಹಾಗೂ 2021ರಲ್ಲಿ ಗರಿಷ್ಠ ಮಟ್ಟ ತುಂಬುವ ವೇಳೆಗೆ ಕೆಪಿಸಿ ಲಕ್ಷಾಂತರ ಕ್ಯೂಸೆಕ್‌ ನೀರನ್ನು ಏಕಾಏಕಿ ಬಿಟ್ಟಪರಿಣಾಮ ಜಲಾಶಯದ ಕೆಳಭಾಗದ ಜನರು ಸಾಕಷ್ಟುತೊಂದರೆ ಅನುಭವಿಸಿದ್ದರು. ಹೀಗಾಗಿ ಪ್ರಸಕ್ತ ವರ್ಷ ಜಿಲ್ಲಾಡಳಿತ 31 ಮೀ. ನಿಗದಿ ಮಾಡಿದ್ದು, ಈ ಮಟ್ಟತುಂಬುತ್ತಿದ್ದಂತೆ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಜಲಾನಯನ ಪ್ರದೇಶದಲ್ಲಿ ಮಳೆ ಅಧಿಕವಾದಲ್ಲಿ ಇನ್ನೂ ಹೆಚ್ಚಿನ ನೀರನ್ನು ಹೊರಬಿಡಬೇಕಾದ ಸಂದರ್ಭ ಎದುರಾಗುವ ಸಾಧ್ಯತೆಯಿದೆ.

Tap to resize

Latest Videos

Kodagu News: ಮೂರು ವರ್ಷ ಕಳೆದರೂ ನಿರಾಶ್ರಿತ ಕುಟುಂಬಕ್ಕೆ ಸಿಕ್ಕಿಲ್ಲ ಸೂರು!

ಬೈರಾ, ಕದ್ರಾ, ಗೋಟೆಗಾಳಿ, ಕೆರವಡಿ, ಸಿದ್ದರ, ಕಿನ್ನರ, ಕುರ್ನಿಪೇಟ್‌ ಮೊದಲಾದ ಗ್ರಾಮಗಳಲ್ಲಿ ಆತಂಕ ಶುರುವಾಗಿದೆ. ಜಲಾಶಯದ ಕೆಳಭಾಗದಲ್ಲಿ ದಿನನಿತ್ಯದ ವಾಹನ ಸಂಚಾರಕ್ಕಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ. ಗೇಟ್‌ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಕ್ಕೆ ಬಿಡುತ್ತಿರುವುದರಿಂದ ಈ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ.

ಬೊಮ್ಮನಹಳ್ಳಿ ಜಲಾಶಯದ 2 ಗೇಟ್‌ ತೆರೆದಿದ್ದು, 5890 ಕ್ಯೂಸೆಕ್‌, ವಿದ್ಯುತ್‌ ಉತ್ಪಾದನೆಯಿಂದ 3266 ಕ್ಯೂಸೆಕ್‌, ಒಟ್ಟು 9156 ಕ್ಯೂಸೆಕ್‌ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಸಿದ್ದಾಪುರ ತಾಲೂಕಿನಲ್ಲಿ ಒಂದು ತಾಸಿಗೂ ಅಧಿಕ ಕಾಲ ಮಧ್ಯಾಹ್ನ ಭಾರಿ ಮಳೆಯಾಗಿದೆ. ಯಲ್ಲಾಪುರ, ಶಿರಸಿ ಭಾಗದಲ್ಲಿ ಮಳೆ ಸ್ವಲ್ಪ ಕಡಿಮೆಯಾಗಿದೆ. ಜೋಯಿಡಾದಲ್ಲಿ ಆಗಾಗ ಮಳೆಯಾಗುತ್ತಿದ್ದು, ಗಾಳಿ ಜೋರಾಗಿದೆ. ಭಟ್ಕಳ, ಹೊನ್ನಾವರ, ಕುಮಟಾ ಭಾಗದಲ್ಲಿ ಆಗಾಗ ಮಳೆಯಾಗುತ್ತಿದೆ. ಕಾರವಾರ ತಾಲೂಕಿನಲ್ಲಿ ಬೆಳಗ್ಗೆ ಬಿಸಿಲು ಮೂಡಿದ್ದು, ಆಗೊಮ್ಮೆ ಈಗೊಮ್ಮೆ ಏಕಾಏಕಿ ಮೋಡ ಕವಿದು ರಭಸದಿಂದ ಮಳೆಯಾಗುತ್ತಿದೆ.

ಶುಕ್ರವಾರ ಯಲ್ಲಾಪುರದಲ್ಲಿ 1 ಮನೆಗೆ ಸಂಪೂರ್ಣ, ಮುಂಡಗೋಡ 4, ಶಿರಸಿ 3, ಸಿದ್ದಾಪುರ 2, ಜೋಯಿಡಾದಲ್ಲಿ ಒಂದು ಮನೆಗೆ ತೀವ್ರ ಹಾಗೂ ಹಳಿಯಾಳ 12, ಶಿರಸಿ 10, ಯಲ್ಲಾಪುರದಲ್ಲಿ 9, ಭಟ್ಕಳ 6, ಕುಮಟಾ ಹಾಗೂ ಸಿದ್ದಾಪುರ ತಲಾ 5, ಹೊನ್ನಾವರ, ಮುಂಡಗೋಡ, ಜೋಯಿಡಾ ತಲಾ 2, ಅಂಕೋಲಾದಲ್ಲಿ ಒಂದು ಮನೆಗೆ ಭಾಗಶಃ ಹಾನಿಯಾಗಿದೆ.

ಕರಾವಳಿಯಲ್ಲಿ ಮಳೆ ಇಳಿಮುಖ; ಮೀನುಗಾರಿಕಾ ರಸ್ತೆ ನೀರುಪಾಲು

ಭಟ್ಕಳದಲ್ಲಿ ಹಗಲು ಬಿಸಿಲು, ಸಂಜೆ ಭಾರೀ ಮಳೆ

ಭಟ್ಕಳ:  ತಾಲೂಕಿನಲ್ಲಿ ಕಳೆದ ಎರಡು​-ಮೂರು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಶುಕ್ರವಾರ ಸಂಜೆ ಧಾರಾಕಾರವಾಗಿ ಸುರಿದಿದೆ. ಶನಿವಾರ ಬೆಳಿಗ್ಗೆವರೆಗೆ 20.6 ಮಿ.ಮೀ. ಮಳೆಯಾಗಿದೆ. ಮಧ್ಯಾಹ್ನದವರೆಗೆ ಬಿಸಿಲಿನ ವಾತಾವರಣ ಇದ್ದರೆ, ಮಧ್ಯಾಹ್ನದ ನಂತರ ತುಂತುರು ಮಳೆ ಹೀಗೆ ಸಂಜೆಯ ವೇಳೆಗೆ ಭಾರೀ ಮಳೆ ಸುರಿಯಲಾರಂಭಿಸಿತ್ತು. ಕಳೆದ ಮೂರು ದಿನಗಳಿಂದ ಮಳೆ ಕಡಿಮೆಯಾಗಿದ್ದರಿಂದ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಮತ್ತೆ ಬಿರುಸು ಪಡೆದುಕೊಂಡಿದ್ದವು.

ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆಗೆ 397 ಹೆಕ್ಟೇರ್‌ ಗದ್ದೆ ಜಲಾವೃತಗೊಂಡಿದ್ದವು. ನಾಟಿ ಮಾಡಲಾದ ಗದ್ದೆಗಳಿಗೂ ನೀರು ತುಂಬಿದ್ದರಿಂದ ಭತ್ತದ ಸಸಿ ಕೊಳೆತು ಹೋಗಿ ರೈತರು ಪರಿಹಾರಕ್ಕಾಗಿ ಕೃಷಿ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಅಡಕೆ ಬೆಳೆಗೆ ವ್ಯಾಪಕ ಕೊಳೆರೋಗ ಬಂದಿದ್ದು, ಕಳೆದ ಮೂರು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಬೆಳೆಗಾರರು ರೋಗನಿರೋಧಕ ಔಷಧಿ ಸಿಂಪಡಿಸುವ ಕಾರ್ಯದಲ್ಲಿ ತೊಡಗಿದ್ದರು. ಈಗಾಗಲೇ ಕೊಳೆ ರೋಗ ಬಂದಿರುವುದರಿಂದ ಕೆಲವು ತೋಟಗಳಲ್ಲಿ ಉದುರುತ್ತಿರುವ ಕೊಳೆ ಅಡಕೆಯನ್ನು ಸಂಗ್ರಹಿಸುವುದೇ ಬೆಳೆಗಾರರಿಗೆ ಕೆಲಸವಾಗಿದೆ. ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೊಳೆ ರೋಗ ಮತ್ತಷ್ಟು ವ್ಯಾಪಿಸುವ ಸಾಧ್ಯತೆ ಇದೆ. ತಾಲೂಕಿನಲ್ಲಿ ಈಗಾಗಲೇ ಭತ್ತದ ಸಸಿ ಹಾನಿಯಾದ ಬಗ್ಗೆ ಕಂದಾಯ ಮತ್ತು ಕೃಷಿ ಇಲಾಖೆಯಿಂದ ಜಂಟಿ ಸರ್ವೆ ನಡೆಯುತ್ತಿದ್ದು, ಅಡಕೆ ಕೊಳೆ ರೋಗ ತಗುಲಿರುವ ಬಗ್ಗೆ ಜಂಟಿ ಸರ್ವೆ ನಡೆಸಬೇಕೆಂಬ ಆಗ್ರಹ ಕೇಳಿ ಬಂದಿದೆ.

click me!