ಈದ್ಗಾದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ: ಸಚಿವ ಅಶೋಕ್‌

By Kannadaprabha NewsFirst Published Aug 12, 2022, 7:57 AM IST
Highlights

ಯಾವುದೇ ಸಂಘಟನೆಗಳಿಗೆ ಅವಕಾಶ ಇಲ್ಲ, ಕಂದಾಯ ಇಲಾಖೆ ಸಹಾಯಕ ಆಯುಕ್ತರಿಂದ ಧ್ವಜಕ್ಕೆ ಸೆಲ್ಯೂಟ್‌ 

ಬೆಂಗಳೂರು(ಆ.12):  ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನದಂದು ಯಾವುದೇ ಸಂಘಟನೆಗಳಿಗೆ ಅವಕಾಶ ನೀಡದೆ ಸರ್ಕಾರದಿಂದಲೇ ಧ್ವಜಾರೋಹಣ ನೆರವೇರಿಸಲು ನಿರ್ಧರಿಸಿದೆ. ಗುರುವಾರ ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಅಶೋಕ್‌, ಸರ್ಕಾರದ ಪರವಾಗಿ ಕಂದಾಯ ಇಲಾಖೆಯ ಸಹಾಯಕ ಆಯುಕ್ತರಿಂದ ಧ್ವಜಾರೋಹಣ ನಡೆಸಲಾಗುವುದು. ರಾಷ್ಟ್ರಧ್ವಜದ ನೀತಿ ನಿಯಮಗಳಡಿ ಎಲ್ಲರೂ ಭಾಗವಹಿಸಬಹುದು. ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕರು, ಸಂಸದರು ಪಾಲ್ಗೊಳ್ಳಬಹುದು. ಯಾವುದೇ ಸಂಘಟನೆಗಳಾಗಲಿ, ಶಾಸಕ ಜಮೀರ್‌ ಅಹ್ಮದ್‌ ಅವರು ವೈಯಕ್ತಿಕವಾಗಲಿ ಧ್ವಜಾರೋಹಣ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಧ್ವಜಾರೋಹಣ ವೇಳೆ ಭಾರತ ಮಾತಾಕೀ ಜೈ, ವಂದೇ ಮಾತರಂ ಘೋಷಣೆ ಮಾತ್ರ ಕೇಳಿ ಬರಲಿದೆ. ಬೇರೆ ಯಾವುದೇ ಘೋಷಣೆ ಮಾಡುವಂತಿಲ್ಲ. ನಿಯಮ ಪಾಲನೆ ಬಗ್ಗೆ ಪೊಲೀಸರು ಗಮನಹರಿಸಲಿದ್ದಾರೆ. ಹೆಚ್ಚು ಕಡಿಮೆ ಯಾರಾದರೂ ಗಲಾಟೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇದನ್ನು ಎಲ್ಲರೂ ಸ್ವಾಗತಿಸಲಿದ್ದಾರೆ ಎಂಬ ವಿಶ್ವಾಸ ಇದೆ. ಯಾರಿಗಾದರೂ ಹಕ್ಕಿನ ಬಗ್ಗೆ ಆಕ್ಷೇಪವಿದ್ದರೆ ಕಂದಾಯ ಇಲಾಖೆಗೆ ದೂರು ನೀಡಬಹುದು. ಜಾಗ ಕಂದಾಯ ಇಲಾಖೆ ಸೇರಿದ್ದು ಎಂದು ಕಾನೂನು ತಜ್ಞರು, ಹಿರಿಯ ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ ಎಂದರು.

ಈದ್ಗಾದಲ್ಲಿ ಜಮೀರ್‌ ಧ್ವಜಾರೋಹಣ ಬೇಡ, ಒಂದು ವೇಳೆ ಮಾಡಿದರೆ ಅಶಾಂತಿ ಸೃಷ್ಟಿ: ಹಿಂದೂ ಸಂಘಟನೆ

ಈದ್ಗಾ ಮೈದಾನ ಹೆಸರು ಬದಲು

ಇನ್ನು ಮುಂದೆ ಈದ್ಗಾ ಮೈದಾನ ಎಂದು ಇರುವುದಿಲ್ಲ. ಬದಲಿಗೆ ‘ಗುಟ್ಟಹಳ್ಳಿ-ಚಾಮರಾಜಪೇಟೆ ಕಂದಾಯ ಇಲಾಖೆ’ ಎಂದು ಇರಲಿದೆ. ಕಂದಾಯ ಇಲಾಖೆಗೆ ಜಾಗ ಸೇರಿದೆ. ಈ ಜಾಗವನ್ನು ಮುಂದಿನ ದಿನದಲ್ಲಿ ಬಿಬಿಎಂಪಿಗೆ ನೀಡಬೇಕಾ? ಬಿಡಿಎಗೆ ಕೊಡಬೇಕಾ ಅಥವಾ ಕಂದಾಯ ಇಲಾಖೆಯಲ್ಲಿಯೇ ಉಳಿಸಿಕೊಳ್ಳಬೇಕಾ ಎಂಬುದರ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು. ಸುಪ್ರೀಂ ಕೋರ್ಟ್‌ನ ಆದೇಶವನ್ನು ಪಾಲನೆ ಮಾಡಲಾಗುವುದು. ಸದ್ಯಕ್ಕೆ ಧ್ವಜಾರೋಹಣ ಮಾಡಲಾಗುವುದು. ಮುಂದೆ ಧಾರ್ಮಿಕ ಚಟುವಟಿಕೆಗಳಿಗೆ ಕೊಡಬೇಕೇ, ಬೇಡವೇ ಎಂಬುದರ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದು ಸಚಿವ ಆರ್‌.ಅಶೋಕ್‌ ಹೇಳಿದರು.

ಕನ್ನಡ ಶಾಲೆ ನಿರ್ಮಾಣಕ್ಕೆ ಕೋರ್ಟ್‌ ನೀಡಿತ್ತು ತಡೆ

ಸರ್ವೇ ನಂಬರ್‌ 40 ಗುಟ್ಟಹಳ್ಳಿಯಲ್ಲಿ 10 ಎಕರೆ 5 ಗುಂಟೆ ಇತ್ತು. ಈಗ 2.5 ಎಕರೆ ಉಳಿದಿದೆ. ಲೇಔಟ್‌ ಮಾಡಬೇಕಾದರೆ ಉಳಿದ ಜಾಗ ಬಳಸಿಕೊಳ್ಳಲಾಗಿದೆ. 1952ರಲ್ಲಿ ಸರ್ಕಾರ ಸರ್ಕಾರಿ ಕನ್ನಡ ಶಾಲೆ ನಿರ್ಮಿಸಲು ಪ್ರಸ್ತಾವನೆ ಮಂಡಿಸಿತ್ತು. ಆದರೆ, ಅಬ್ದುಲ್‌ ವಾಜಿದ್‌ ಎಂಬುವರು ನ್ಯಾಯಾಲಯಕ್ಕೆ ಹೋಗಿ ‘ನಾವು ಇಲ್ಲಿ ಪ್ರಾರ್ಥನೆ ಮಾಡುತ್ತೇವೆ. ಹೀಗಾಗಿ ಅಲ್ಲಿ ಶಾಲೆ ಬೇಡ, ಪ್ರಾರ್ಥನೆಗೆ ಅನುಮತಿ ನೀಡಿ’ ಎಂದು ಹೋಗಿದ್ದರು. ಶಾಲೆ ನಿರ್ಮಾಣಕ್ಕೆ ತಡೆ ನೀಡುವಂತೆ ಕೋರ್ಚ್‌ಗೆ ಹೋದಾಗ ಅದು ಪಾಲಿಕೆ ಪರ ಆಗುತ್ತದೆ. ನಂತರ 1956ರ ಮಾ.30ರಂದು ಮೇಲ್ಮನವಿ ವಜಾ ಮಾಡಿ ಶಾಲೆ ನಿರ್ಮಿಸುವ ಮನವಿಯನ್ನು ಎತ್ತಿ ಹಿಡಿಯಲಾಗುತ್ತದೆ. ನಂತರವೂ ಸಿವಿಲ್‌ ಕೋರ್ಟ್‌ಗೆ ಹೋದಾಗ ಶಾಲೆ ನಿರ್ಮಿಸದಂತೆ ತಡೆ ನೀಡಿ ಅವರಿಗೆ ಪ್ರಾರ್ಥನೆ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ಸಚಿವರು ಹೇಳಿದ್ದಿಷ್ಟು

*ಶಿಷ್ಟಾಚಾರದ ಪ್ರಕಾರ ಯಾರು ಬೇಕಾದರೂ ಭಾಗವಹಿಸಬಹುದು
*ಯಾವುದೇ ವ್ಯಕ್ತಿ, ಸಂಘಟನೆಗೆ ಧ್ವಜಾರೋಹಣ ಮಾಡುವಂತಿಲ್ಲ
*ಭಾರತ ಮಾತಾಕೀ ಜೈ, ವಂದೇ ಮಾತರಂ ಘೋಷಣೆಗೆ ಮಾತ್ರ ಅವಕಾಶ
 

click me!