Coastal Karnataka: ಕರಾವಳಿಗೆ 'ಐದು ಸಾವಿರ ಕೋಟಿ' ರಹಸ್ಯ, ಕೇಸರಿ ಕೋಟೆ ಛಿದ್ರಕ್ಕೆ ಸಿಎಂ ಡಿಕೆ ಶಿವಕುಮಾರ್ ಪ್ಲ್ಯಾನ್!

Published : Sep 14, 2026, 11:42 AM IST
DK Shivakumar

ಸಾರಾಂಶ

ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯು ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ರಾಜಕೀಯ ಶಕ್ತಿ ವೃದ್ಧಿಸುವ ತಂತ್ರವಾಗಿದೆ. ಅಭಿವೃದ್ಧಿ ಯೋಜನೆಗಳ ಮೂಲಕ ಮತದಾರರ ಮನಗೆಲ್ಲುವ ಗುರಿಯೊಂದಿಗೆ, ವಿಶೇಷ ಆರ್ಥಿಕ ಪ್ಯಾಕೇಜ್, ಪ್ರವಾಸೋದ್ಯಮ ಅಭಿವೃದ್ಧಿ, ಮತ್ತು ತುಳು ಭಾಷೆಗೆ ಮಾನ್ಯತೆಯಂತಹ ನಿರೀಕ್ಷೆಗಳು ಗರಿಗೆದರಿವೆ.

ಮಂಗಳೂರು: ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ರಾಜಕೀಯ ಶಕ್ತಿ ವೃದ್ಧಿಸಲು ಅಭಿವೃದ್ಧಿಯ ಅಸ್ತ್ರವನ್ನು ಪ್ರಯೋಗಿಸಲು ರಾಜ್ಯ ಸರ್ಕಾರ ಮುಂದಾಗಿದೆಯೇ ಎಂಬ ಕುತೂಹಲ ಮೂಡಿದ್ದು, ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯತ್ತ ಇಡೀ ರಾಜ್ಯದ ಚಿತ್ತ ನೆಟ್ಟಿದೆ.

ಕರಾವಳಿ ರಾಜಕೀಯ: ಮಂಗಳೂರು ಸಭೆಯ ಹಿಂದಿನ ರಹಸ್ಯವೇನು?

ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಹಲವು ವರ್ಷಗಳಿಂದ ನಿರೀಕ್ಷಿತ ರಾಜಕೀಯ ಯಶಸ್ಸು ಸಿಗುತ್ತಿಲ್ಲ. ರಾಜ್ಯದ ಹಲವು ಭಾಗಗಳಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಸಾಧಿಸಿದರೂ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ 2028ರ ವಿಧಾನಸಭಾ ಚುನಾವಣೆಗೆ ಮುನ್ನ ಕರಾವಳಿಯಲ್ಲಿ ಪಕ್ಷದ ನೆಲೆಯನ್ನು ಬಲಪಡಿಸುವ ತಂತ್ರಗಾರಿಕೆಯ ಭಾಗವಾಗಿಯೇ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದೆ ಎಂಬ ರಾಜಕೀಯ ಚರ್ಚೆ ಆರಂಭವಾಗಿದೆ.

2013ರ ಬಳಿಕ ಕರಾವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷಿತ ಮಟ್ಟದ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. 2018ರ ನಂತರದ ಚುನಾವಣೆಗಳಲ್ಲೂ ಪಕ್ಷಕ್ಕೆ ಹಿನ್ನಡೆ ಮುಂದುವರಿದಿದೆ. ರಾಜ್ಯಾದ್ಯಂತ ಕಾಂಗ್ರೆಸ್ ಪರ ಅಲೆ ಕಂಡುಬಂದ ಸಂದರ್ಭಗಳಲ್ಲಿಯೂ ಕರಾವಳಿ ಭಾಗದಲ್ಲಿ ಬಿಜೆಪಿ ತನ್ನ ಹಿಡಿತವನ್ನು ಉಳಿಸಿಕೊಂಡಿರುವುದು ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಿದೆ. ಗ್ಯಾರಂಟಿ ಯೋಜನೆಗಳು ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರೂ ಕರಾವಳಿಯ ರಾಜಕೀಯ ಸಮೀಕರಣದಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಬದಲಾವಣೆ ಕಂಡುಬಂದಿಲ್ಲ. ಹೀಗಾಗಿ ಮುಂದಿನ ಚುನಾವಣೆಗೆ ಮುನ್ನ ಅಭಿವೃದ್ಧಿ ಯೋಜನೆಗಳ ಮೂಲಕ ಕರಾವಳಿಯ ಮತದಾರರ ಮನಗೆಲ್ಲುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.

ಡಿಕೆಶಿ ಟಾರ್ಗೆಟ್ ಕರಾವಳಿ?

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ತಂತ್ರಗಾರಿಕೆಯಲ್ಲಿ ಕರಾವಳಿ ಭಾಗಕ್ಕೆ ವಿಶೇಷ ಸ್ಥಾನ ಸಿಕ್ಕಿರುವುದು ಈಗ ಚರ್ಚೆಯ ವಿಷಯವಾಗಿದೆ. ಅಭಿವೃದ್ಧಿ, ಪ್ರವಾಸೋದ್ಯಮ, ಬಂಡವಾಳ ಹೂಡಿಕೆ ಹಾಗೂ ಮೂಲಸೌಕರ್ಯ ಯೋಜನೆಗಳ ಮೂಲಕ ಕರಾವಳಿಯ ಆರ್ಥಿಕ ಚಿತ್ರಣವನ್ನೇ ಬದಲಿಸುವ ಉದ್ದೇಶ ಸರ್ಕಾರಕ್ಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ಮಂಗಳೂರನ್ನು ‘ಡೆಡ್ ಸಿಟಿ’ ಎಂದು ಡಿ.ಕೆ. ಶಿವಕುಮಾರ್ ಉಲ್ಲೇಖಿಸಿದ್ದ ಹಿನ್ನೆಲೆಯಲ್ಲಿ, ಮಂಗಳೂರು ಸೇರಿದಂತೆ ಇಡೀ ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರದ ಒತ್ತು ಮತ್ತಷ್ಟು ಕುತೂಹಲ ಮೂಡಿಸಿದೆ.

ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಸುಮಾರು ಐದು ಸಾವಿರ ಕೋಟಿ ಮೊತ್ತದ ಬೃಹತ್ ಪ್ರಸ್ತಾವನೆ ಸಿದ್ಧವಾಗಿರುವುದು ಗಮನ ಸೆಳೆಯುತ್ತಿದೆ. ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ರೂಪ ನೀಡುವ ಉದ್ದೇಶ ಇದರಲ್ಲಿದೆ ಎನ್ನಲಾಗಿದೆ. ಬೀಚ್‌ಗಳು, ನದಿಗಳು ಹಾಗೂ ಕರಾವಳಿಯ ನೈಸರ್ಗಿಕ ಸಂಪನ್ಮೂಲಗಳನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸುವ ಯೋಜನೆಗಳಿಗೂ ಒತ್ತು ನೀಡಲಾಗುತ್ತಿದೆ.

ಕರ್ನಾಟಕ ಜಲಸಾರಿಗೆ ಮಂಡಳಿ ಮೂಲಕ ಜಲಸಾರಿಗೆ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯೂ ಇದೆ. ಇದರ ಜತೆಗೆ ಸುಮಾರು ಸಾವಿರ ಕೋಟಿ ರೂ. ಮೊತ್ತದ ಆರು ಪ್ರಮುಖ ಯೋಜನೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಅನುಷ್ಠಾನಗೊಳಿಸುವ ಚಿಂತನೆಯೂ ಸರ್ಕಾರದ ಮುಂದಿದೆ ಎನ್ನಲಾಗಿದೆ. ಕರಾವಳಿ ಭಾಗದಲ್ಲಿ ಬಿಜೆಪಿ ಹಲವು ವರ್ಷಗಳಿಂದ ತನ್ನ ಪ್ರಬಲ ರಾಜಕೀಯ ನೆಲೆಯನ್ನು ನಿರ್ಮಿಸಿಕೊಂಡಿದೆ. ಹೀಗಾಗಿ ಕಾಂಗ್ರೆಸ್‌ಗೆ ಇಲ್ಲಿ ಕೇವಲ ಚುನಾವಣಾ ಪ್ರಚಾರ ಅಥವಾ ಗ್ಯಾರಂಟಿ ಯೋಜನೆಗಳ ಮೂಲಕವೇ ರಾಜಕೀಯ ಸಮೀಕರಣ ಬದಲಿಸುವುದು ಸುಲಭವಲ್ಲ.

ಇದೀಗ ಅಭಿವೃದ್ಧಿ ಯೋಜನೆಗಳ ಮೂಲಕ ಉದ್ಯೋಗ, ಪ್ರವಾಸೋದ್ಯಮ, ಹೂಡಿಕೆ ಹಾಗೂ ಮೂಲಸೌಕರ್ಯಕ್ಕೆ ಉತ್ತೇಜನ ನೀಡುವುದರಿಂದ ಕರಾವಳಿಯ ಯುವಜನತೆ ಮತ್ತು ಉದ್ಯಮ ವಲಯವನ್ನು ಸೆಳೆಯಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿದೆ. ವಿಶೇಷವಾಗಿ ಮಂಗಳೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಆಧಾರಿತ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದರಿಂದ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಬಹುದು. ಇದರ ರಾಜಕೀಯ ಲಾಭವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಡೆಯುವುದು ಸರ್ಕಾರದ ತಂತ್ರವಾಗಿರಬಹುದು ಎಂಬ ವಿಶ್ಲೇಷಣೆಯೂ ಇದೆ.

ಸೆ.18ರ ಸಂಪುಟ ಸಭೆಯಲ್ಲಿ ಏನೇನು ಘೋಷಣೆ ಮತ್ತು ನಿರೀಕ್ಷೆ?

ಕರಾವಳಿಯ ಪ್ರಮುಖ ನಿರೀಕ್ಷೆಗಳಲ್ಲಿ ಮೊದಲನೆಯದು ವಿಶೇಷ ಆರ್ಥಿಕ ಪ್ಯಾಕೇಜ್. ಕರಾವಳಿ ಕರ್ನಾಟಕಕ್ಕೆ ಸುಮಾರು ಐದು ಸಾವಿರ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ನೀಡಬೇಕು ಎಂಬ ಬೇಡಿಕೆ ಈಗಾಗಲೇ ಸರ್ಕಾರದ ಮುಂದಿದೆ. ಮೂಲಸೌಕರ್ಯ, ಪ್ರವಾಸೋದ್ಯಮ, ಮೀನುಗಾರಿಕೆ, ಕೈಗಾರಿಕೆ, ಉದ್ಯೋಗ ಸೃಷ್ಟಿ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಈ ಹಣವನ್ನು ಬಳಸಬೇಕು ಎಂಬುದು ಬೇಡಿಕೆಯ ಹಿಂದಿನ ಉದ್ದೇಶ.

ಕರಾವಳಿಯ ಜನರ ಭಾವನೆಗೆ ಸಂಬಂಧಿಸಿದ ಮತ್ತೊಂದು ಪ್ರಮುಖ ವಿಚಾರ ತುಳು ಭಾಷೆ. ತುಳುವನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಮಂಗಳೂರಿನಲ್ಲೇ ಸಚಿವ ಸಂಪುಟ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಇನ್ನೂ ಮಂಗಳೂರಿನ ಬಹುಕಾಲದ ಮತ್ತೊಂದು ಕನಸು ಐಟಿ ಕ್ಷೇತ್ರದ ದೊಡ್ಡ ಬೆಳವಣಿಗೆ. ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಮಂಗಳೂರು ತನ್ನದೇ ಆದ ಸಾಮರ್ಥ್ಯ ಹೊಂದಿದ್ದರೂ, ಬೆಂಗಳೂರಿನ ಮಟ್ಟಿಗೆ IT ಉದ್ಯೋಗಾವಕಾಶಗಳು ಇಲ್ಲಿ ಬೆಳೆಯಲು ಸಾಧ್ಯವಾಗಿಲ್ಲ.

ಮಂಗಳೂರಿನಲ್ಲಿ ದೊಡ್ಡ ಮಟ್ಟದ IT Park ಅಥವಾ IT ಹಬ್ ಸ್ಥಾಪನೆಯಾದರೆ ಕರಾವಳಿಯ ಯುವಕರಿಗೆ ಸ್ಥಳೀಯವಾಗಿಯೇ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಬಹುದು. ಮಂಗಳೂರಿನಲ್ಲಿ ಕೈಗಾರಿಕೆಗಳಿಗೆ ಅಗತ್ಯವಿರುವ ಭೂಮಿ ಮತ್ತು ಮೂಲಸೌಕರ್ಯದ ಕೊರತೆ ಹಲವು ವರ್ಷಗಳಿಂದ ಸಮಸ್ಯೆಯಾಗಿದೆ. ಬೈಕಂಪಾಡಿ ಸೇರಿದಂತೆ ಅಸ್ತಿತ್ವದಲ್ಲಿರುವ ಕೈಗಾರಿಕಾ ಪ್ರದೇಶಗಳ ರಸ್ತೆಗಳು ಮತ್ತು ಮೂಲಸೌಕರ್ಯವನ್ನು ಸುಧಾರಿಸುವುದು, ಹೊಸ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದು, ಹೂಡಿಕೆದಾರರಿಗೆ ಅನುಕೂಲಕರ ವಾತಾವರಣ ನಿರ್ಮಿಸುವುದು ಮುಂತಾದ ಬೇಡಿಕೆಗಳು ಸರ್ಕಾರದ ಮುಂದಿವೆ. ಸಮುದ್ರ ಸಂಪನ್ಮೂಲ, ಜಲಕೃಷಿ, ಮೀನು ಸಂಸ್ಕರಣೆ, ಸಾಗರ ವಿಜ್ಞಾನ ಹಾಗೂ ಸಮುದ್ರ ಆಧಾರಿತ ಆರ್ಥಿಕ ಚಟುವಟಿಕೆಗಳಲ್ಲಿ ಸಂಶೋಧನೆ ಮತ್ತು ಶಿಕ್ಷಣಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ದೊಡ್ಡ ಉತ್ತೇಜನ ನೀಡಬಹುದು. ಇಂತಹ ಸಂಸ್ಥೆ ಸ್ಥಾಪನೆಯಾದರೆ ಕರಾವಳಿಯಲ್ಲೇ ಸಮುದ್ರ ಆಧಾರಿತ ಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ದೊಡ್ಡ ಶಿಕ್ಷಣ ಕೇಂದ್ರ ರೂಪುಗೊಳ್ಳುವ ಸಾಧ್ಯತೆ ಇದೆ.

ಟೆಂಪಲ್ ಟೂರಿಸಂನತ್ತ ಸರ್ಕಾರದ ಚಿತ್ತ!

ಕರಾವಳಿಯ ಧಾರ್ಮಿಕ ಪ್ರವಾಸೋದ್ಯಮಕ್ಕೂ ದೊಡ್ಡ ಅವಕಾಶವಿದೆ. ಗೋಕರ್ಣ, ಮುರುಡೇಶ್ವರ, ಕೊಲ್ಲೂರು, ಉಡುಪಿ, ಶೃಂಗೇರಿ, ಹೊರನಾಡು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮತ್ತು ಮಂಗಳೂರು ಸೇರಿದಂತೆ ಪ್ರಮುಖ ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸುವ ಟೆಂಪಲ್ ಟೂರಿಸಂ ಸರ್ಕ್ಯೂಟ್ ರೂಪಿಸುವ ಬೇಡಿಕೆ ಇದೆ. ಇಂತಹ ಪ್ರವಾಸೋದ್ಯಮ ಕಾರಿಡಾರ್ ನಿರ್ಮಾಣವಾದರೆ ಪ್ರವಾಸಿಗರು ಒಂದು ಸ್ಥಳಕ್ಕೆ ಭೇಟಿ ನೀಡಿ ಹಿಂದಿರುಗುವುದಕ್ಕಿಂತ ಹಲವು ದಿನಗಳ ಕಾಲ ಕರಾವಳಿ ಮತ್ತು ಮಲೆನಾಡಿನಲ್ಲಿ ಪ್ರವಾಸ ಮಾಡುವ ಸಾಧ್ಯತೆ ಹೆಚ್ಚುತ್ತದೆ.

ಇದರ ಪರಿಣಾಮವಾಗಿ ಹೋಟೆಲ್, ಸಾರಿಗೆ, ಸ್ಥಳೀಯ ಆಹಾರ, ಹಸ್ತಕಲೆ ಮತ್ತು ಸಣ್ಣ ವ್ಯಾಪಾರಗಳಿಗೂ ಆರ್ಥಿಕ ಲಾಭ ದೊರೆಯಬಹುದು. ಜೊತೆಗೆ ಮಂಗಳೂರು–ಗೋವಾ ಕ್ರೂಸ್ ಸೇವೆಯ ನಿರೀಕ್ಷೆಯೂ ಗಮನ ಸೆಳೆಯುತ್ತಿದೆ. ಮಂಗಳೂರು ಬಂದರನ್ನು ಪ್ರವಾಸೋದ್ಯಮದೊಂದಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಸಂಪರ್ಕಿಸಿ, ಸಮುದ್ರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಪ್ರಯತ್ನಗಳು ನಡೆದರೆ ಮಂಗಳೂರು ಕೇವಲ ವಾಣಿಜ್ಯ ಬಂದರು ನಗರವಾಗಿರದೆ ಕ್ರೂಸ್ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗುವ ಅವಕಾಶ ಹೊಂದಿದೆ.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲೂ ಕರಾವಳಿಗೆ ಹೊಸ ಅವಕಾಶಗಳಿವೆ. ಮಂಗಳೂರು ಈಗಾಗಲೇ ದಕ್ಷಿಣ ಭಾರತದ ಪ್ರಮುಖ ವೈದ್ಯಕೀಯ ಕೇಂದ್ರಗಳಲ್ಲಿ ಒಂದಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ನೆರೆಯ ರಾಜ್ಯಗಳಿಂದಲೂ ಚಿಕಿತ್ಸೆಗಾಗಿ ಜನರು ಮಂಗಳೂರಿಗೆ ಬರುತ್ತಾರೆ. (ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು) 

PREV
Read more Articles on
click me!

Recommended Stories

ಗೃಹಜ್ಯೋತಿ ಫ್ರೀ ಕರೆಂಟ್ ಅಂತ ಹೇಳಿ ಜನರ ಜೇಬಿಗೆ ಕತ್ತರಿ ಹಾಕಿತಾ ಬೆಸ್ಕಾಂ? ಸಣ್ಣ ಮನೆಗಳಿಗೂ ಬಂತು ₹5 ಸಾವಿರ ಬಿಲ್!
ಸೆ.17ರ ಕಲ್ಯಾಣ ಕರ್ನಾಟಕ ಉತ್ಸವದಂದು 'ಪ್ರತ್ಯೇಕ ರಾಜ್ಯ ಧ್ವಜ' ಹಾರಾಟ; ಕನ್ನಡಪರ ಸಂಘಟನೆಗಳಿಂದ ಮುಹೂರ್ತ ಫಿಕ್ಸ್!