ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು ಸಮಯ ಬದಲಾಗುತ್ತಾ? ಪ್ರಯಾಣಿಕರ ಬೇಡಿಕೆಯೇನು?

Published : Sep 14, 2026, 08:30 AM IST
Bengaluru Mangalore Vande Bharat

ಸಾರಾಂಶ

ಮಂಗಳೂರು-ಬೆಂಗಳೂರು ನಡುವೆ ಪ್ರಸ್ತಾವಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಕರಾವಳಿ ಕರ್ನಾಟಕದ ರೈಲು ಪ್ರಯಾಣಿಕರ ಸಂಘಟನೆಗಳು ಹಾಗೂ ವಾಣಿಜ್ಯ ವಲಯ ಬದಲಾಯಿಸುವಂತೆ ಒತ್ತಾಯಿಸಿವೆ.

ಮಂಗಳೂರು (ಸೆ.14): ಯಶವಂತಪುರ-ಮಂಗಳೂರು ಜಂಕ್ಷನ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಾಯೋಗಿಕ ಸಂಚಾರದ ವೇಳಾಪಟ್ಟಿಯೇ ಪ್ರಸ್ತಾವಿತ ಕಾಯಂ ಸಂಚಾರದ ವೇಳಾಪಟ್ಟಿ ಆಗಬಾರದು. ಈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಪ್ರತಿದಿನ ಬೆಳಗ್ಗೆ ಮಂಗಳೂರಿನಿಂದಲೇ ಹೊರಡುವಂತೆ ವೇಳಾಪಟ್ಟಿ ರೂಪಿಸಬೇಕು ಎಂದು ಕರಾವಳಿ ಕರ್ನಾಟಕದ ರೈಲು ಪ್ರಯಾಣಿಕರ ಸಂಘಟನೆಗಳು ಹಾಗೂ ವಾಣಿಜ್ಯ ವಲಯ ಒತ್ತಾಯಿಸಿದೆ.

ಪ್ರಸ್ತಾವಿತ ವಂದೇ ಭಾರತ್ ರೈಲು ಬೆಳಗ್ಗೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳಿ, ರಾತ್ರಿ ಮಂಗಳೂರಿಗೆ ಮರಳುವಂತೆ ವೇಳಾಪಟ್ಟಿ ರೂಪಿಸಬೇಕು ಎಂದು ಪಶ್ಚಿಮ ಕರಾವಳಿ ರೈಲು ಯಾತ್ರಿ ಅಭಿವೃದ್ದಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಅಧಿಕೃತ ಹಾಗೂ ವ್ಯವಹಾರಿಕ ಕೆಲಸಗಳನ್ನು ಹೊಂದಿರುವ ನೂರಾರು ಕರಾವಳಿ ಜನರಿಗೆ ಬೆಳಗಿನ ರೈಲು ಅತ್ಯಂತ ಅನುಕೂಲವಾಗಲಿದೆ. ರೈಲು ಬೆಂಗಳೂರಿಗೆ ರಾತ್ರಿ ತಡವಾಗಿ ತಲುಪಿದರೆ ಅದರ ಪ್ರಯೋಜನ ಕರಾವಳಿ ಭಾಗದ ಜನರಿಗೆ ಸೀಮಿತವಾಗಲಿದೆ ಎಂದು ಅವರು ಹೇಳಿದ್ದಾರೆ.

ಕೆನಾರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಪಿ.ಬಿ. ಅಹ್ಮದ್ ಮುದಸ್ಸರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಿಂದ ಬೆಳಗ್ಗೆ ರೈಲು ಹೊರಟರೆ ಬೆಂಗಳೂರಿಗೆ ತೆರಳುವವರು ಮಧ್ಯಾಹ್ನದ ವೇಳೆಗೆ ತಮ್ಮ ವ್ಯವಹಾರ ಅಥವಾ ಅಧಿಕೃತ ಕೆಲಸಗಳನ್ನು ಪೂರ್ಣಗೊಳಿಸಿ ರಾತ್ರಿ ರೈಲಿನಲ್ಲಿ ವಾಪಸ್ ಬರಲು ಸಾಧ್ಯವಾಗುತ್ತದೆ. ಇದರಿಂದ ಒಂದು ದಿನವಿಡೀ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ತಪ್ಪಲಿದೆ ಎಂದು ಅವರು ಹೇಳಿದ್ದಾರೆ.

ಪ್ರಾಯೋಗಿಕ ಸಂಚಾರ

ಸೆ.10ರಂದು ನಡೆದ ಪ್ರಾಯೋಗಿಕ ಸಂಚಾರದಲ್ಲಿ 16 ಬೋಗಿಗಳ ವಂದೇ ಭಾರತ್ ರೈಲು ಯಶವಂತಪುರದಿಂದ ಮಂಗಳೂರು ಜಂಕ್ಷನ್‌ಗೆ 7 ಗಂಟೆ 5 ನಿಮಿಷಗಳಲ್ಲಿ, ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ 6 ಗಂಟೆ 49 ನಿಮಿಷಗಳಲ್ಲಿ ಸಂಚರಿಸಿತ್ತು. ಎರಡೂ ದಿಕ್ಕಿನ ಪ್ರಯಾಣವನ್ನು ಆರು ಗಂಟೆಯೊಳಗೆ ಪೂರ್ಣಗೊಳಿಸುವ ಗುರಿ ರೈಲ್ವೆಯದ್ದಾಗಿದೆ ಎಂದು ಮೂಲಗಳು ತಿಳಿಸಿವೆ.

PREV
Read more Articles on
click me!

Recommended Stories

ವಾತಾವರಣದಲ್ಲಿ ತೀವ್ರ ಬದಲಾವಣೆ: ಇಂದು ರಾಜ್ಯದ 17 ಜಿಲ್ಲೆಗಳಲ್ಲಿ ಮಳೆ, ಈ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ ಎಚ್ಚರಿಕೆ
North Karnataka: ಉತ್ತರಕ್ಕೆ ಮತ್ತೆ ಮೋಸ? 43 ತಾಲೂಕುಗಳಿಗೆ ನ್ಯಾಯ ಎಲ್ಲಿದೆ? ಇಲ್ಲಿ ಬರ ಘೋಷಣೆ ಏಕೆ ಅನಿವಾರ್ಯ? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್