ಕೊಡಗು: ನಕಲಿ ಮದ್ಯ ಸೇವಿಸಿ ಐವರ ಸಾವು

By Girish Goudar  |  First Published Mar 23, 2023, 12:30 AM IST

250 ಕುಟುಂಬಗಳಿರುವ ಹಾರಂಗಿ ಗ್ರಾಮದಲ್ಲಿ ಅಕ್ರಮವಾಗಿ ನಕಲಿ ಮದ್ಯ ಮಾರಾಟವಾಗುತ್ತಿದ್ದು, ಇಲ್ಲಿನ ಬಹುತೇಕ ಗಂಡಸರು, ಯುವಕರು ಮದ್ಯಕ್ಕೆ ದಾಸರಾಗಿ ಎಗ್ಗಿಲ್ಲದೆ ಕುಡಿಯುತ್ತಿರುವುದರಿಂದ ಈಗಾಗಲೇ ಐದು ದಿನಗಳಲ್ಲಿ ಐದು ಜನರು ಪ್ರಾಣ ಕಳೆದುಕೊಂಡಿದ್ದಾರೆ. 


ವರದಿ: ರವಿ.ಎಸ್.ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಮಾ.23):  ಸಾರಾಯಿ ಸಹವಾಸ ಹೆಂಡತಿ ಮಕ್ಕಳ ಉಪವಾಸ ಎನ್ನುವ ಗಾದೆ ಮಾತು ತೀರ ಹಳೆಯದು ಬಿಡಿ. ಆದರೆ ಇಲ್ಲಿ ಹೆಂಡತಿ ಮಕ್ಕಳ ಉಪವಾಸದ ಮಾತಿರಲಿ ಗಂಡ, ಮಕ್ಕಳು, ಮಾವಂದಿರನ್ನು ಕಳೆದುಕೊಂಡ ಮಹಿಳೆಯರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದೆ. ಹೌದು ಇಂತಹ ಹೀನಾಯ ಸ್ಥಿತಿಯ ದುರ್ಘಟನೆಗೆ ಸಾಕ್ಷಿಯಾಗಿರುವುದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಹಾರಂಗಿ ಗ್ರಾಮ. 

Latest Videos

undefined

250 ಕುಟುಂಬಗಳಿರುವ ಹಾರಂಗಿ ಗ್ರಾಮದಲ್ಲಿ ಅಕ್ರಮವಾಗಿ ನಕಲಿ ಮದ್ಯ ಮಾರಾಟವಾಗುತ್ತಿದ್ದು, ಇಲ್ಲಿನ ಬಹುತೇಕ ಗಂಡಸರು, ಯುವಕರು ಮದ್ಯಕ್ಕೆ ದಾಸರಾಗಿ ಎಗ್ಗಿಲ್ಲದೆ ಕುಡಿಯುತ್ತಿರುವುದರಿಂದ ಈಗಾಗಲೇ ಐದು ದಿನಗಳಲ್ಲಿ ಐದು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಹಲವು ಜನರು ಪ್ರಾಣ ಬಿಡುವ ಸ್ಥಿತಿ ತಲುಪಿದ್ದಾರೆ ಎನ್ನುವುದು ಮಹಿಳೆಯರು, ಗ್ರಾಮದ ಇತರೆ ಯುವಕರ ಆತಂಕ. ಗ್ರಾಮದಲ್ಲಿ ಯಾವುದೇ ಬಾರುಗಳಿಲ್ಲ, ಮದ್ಯ ಮಾರಾಟಕ್ಕೂ ಅವಕಾಶವಿಲ್ಲ. ಆದರೂ ಎರಡು ಮೂರು ವರ್ಷಗಳಿಂದ ಗ್ರಾಮದ ಏಳೆಂಟು ಕುಟುಂಬಗಳು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿವೆ. 

ಕೊಡಗು: ಅಂಚೆ ಮತಪತ್ರದ ಮೂಲಕ ಮತದಾನಕ್ಕೆ ಅವಕಾಶ

ಮದ್ಯ ಮಾರಾಟ ಮಾಡದಂತೆ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಈ ಗ್ರಾಮದ ಸದಸ್ಯರಾಗಿರುವವರು ಹಲವು ಬಾರಿ ಈ ಕುಟುಂಬಗಳಿಗೆ ಸೂಚಿಸಿವೆ. ಅಷ್ಟೇ ಅಲ್ಲ, ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ನಾಲ್ಕೈದು ಜನರನ್ನು ಪೊಲೀಸರು ಬಂಧಿಸಿ ದಂಡವನ್ನು ವಿಧಿಸಿ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ. ಆದರೂ ಇವರು ಮದ್ಯ ಮಾರಾಟ ಮಾಡುವುದನ್ನು ಬಿಟ್ಟಿಲ್ಲ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಮಣಿಕುಮಾರ್. 

ಬಾರುಗಳಲ್ಲಿ ಮಾರಾಟ ಮಾಡುವ ಮದ್ಯಕ್ಕಿಂತ ತೀರ ಕಳಪೆ ಗುಣಮಟ್ಟದ ಮದ್ಯವನ್ನೇ 50 ರೂಪಾಯಿಗೆ ಹಾರಂಗಿ ಗ್ರಾಮದಲ್ಲಿ ಮಾರಾಟ ಮಾಡಲಾಗುತ್ತಿದೆ. ಕುಶಾಲನಗರಕ್ಕೆ ಹೋಗಿ ಮದ್ಯ ಖರೀದಿಸಬೇಕಾದರೆ, 30 ರೂಪಾಯಿ ಆಟೋಗೆ ಕೊಟ್ಟು ಹೋಗಿ ಬರಬೇಕು. ಮದ್ಯದ ಬೆಲೆ 40 ರೂಪಾಯಿ. ಅಂದರೆ ಒಂದು ನೈಂಟಿ ಕುಡಿಯಬೇಕೆಂದರೆ 70 ರೂಪಾಯಿ ವ್ಯಯಿಸಬೇಕು. ಜೊತೆಗೆ ಬಾರುಗಳಲ್ಲಿ ಮಾರಾಟಕ್ಕೆ ಬೆಳಿಗ್ಗೆ 10 ರಾತ್ರಿ 10 ವರೆಗೆ ಮಾತ್ರ ಅವಕಾಶವಿದೆ. ಆದರೆ ಊರಿನಲ್ಲಿ ಆದರೆ ಯಾವುದೇ ಸಮಯಕ್ಕಾದರೂ, 50 ರೂಪಾಯಿಗೆ ಮದ್ಯ ಸಿಗುತ್ತದೆ. ಹೀಗಾಗಿ ಇದನ್ನು ಪಡೆದು ಸೇವಿಸುತ್ತಿದ್ದಾರೆ. ಇದು ಕಳಪೆ ಮದ್ಯವಾಗಿರುವುದರಿಂದ ಇದನ್ನು ಕುಡಿದು ಕಳೆದ ಐದು ದಿನಗಳಿಂದ ನಿತ್ಯ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರು ವೃದ್ಧರು, ಇಬ್ಬರು ಯುವಕರು ಮದ್ಯ ಸೇವಿಸಿ ಆನಾರೋಗ್ಯ ಪೀಡಿತರಾಗಿ ಮೃತಪಟ್ಟಿದ್ದರೆ, ಕುಡಿದು ಬೈಕು ಚಲಾಯಿಸುತ್ತಿದ್ದ ಯುವಕನಿಗೆ ಲಾರಿಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. 

ಕೊಡಗಿಗೆ ಬಂದು ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಿ, ಸಿದ್ದರಾಮಯ್ಯಗೆ ಶಾಸಕ ಅಪ್ಪಚ್ಚು ರಂಜನ್ ಸವಾಲ್

ಮದ್ಯ ಸೇವನೆ ಮಾಡುವ ವೃದ್ಧರು, ಯುವಕರು ಕೆಲಸಕ್ಕೂ ಹೋಗದೆ ಕುಡಿದು ತೂರಾಡಿಕೊಂಡು ಊರಿನಲ್ಲಿಯೇ ಇರುತ್ತಾರೆ. ಕೂಲಿಗೆ ಹೋಗದೆ ಮನೆಯಲ್ಲಿ ಇರುವ ಇವರು ಕುಡಿಯಲು ಹಣ ಇಲ್ಲದಂತೆ ಆದಾಗ ಮನೆಯಲ್ಲಿ ಅಕ್ಕಿ, ರಾಗಿ, ಪಾತ್ರೆಗಳನ್ನು ಬಿಡದೆ ಕದ್ದು ಅದನ್ನೇ ಮದ್ಯದಂಗಡಿಗೆ ಕೊಟ್ಟು ಮದ್ಯ ಸೇವಿಸುತ್ತಾರೆ. ಇದನ್ನು ಕೇಳಿದರೆ ಮದ್ಯ ಕುಡಿದು ಬರುವ ಮನೆಯಯ ಗಂಡಸರು ಗಲಾಟೆ ಮಾಡಿ ಹೆಂಗಸರು ಮಕ್ಕಳಿಗೆ ಹೊಡೆಯುತ್ತಾರೆ. ಇದೆಲ್ಲವನ್ನು ಸಹಿಸಿಕೊಂಡು ಸಾಕಾಗಿ ಹೋಗಿದೆ ಎನ್ನುತ್ತಾರೆ ನೊಂದ ಮಹಿಳೆ ರುಕ್ಯಾ. 

ಒಟ್ಟಿನಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿರುವ ನಕಲಿ ಮದ್ಯವನ್ನು ಮನಸ್ಸೋ ಇಚ್ಚೆ ಸೇವಿಸಿ ಊರಿನ ಗಂಡಸರು ಪ್ರಾಣ ಕಳೆದುಕೊಳ್ಳುತ್ತಿರುವುದು ಮಹಿಳೆಯರು ಆತಂಕಗೊಳ್ಳುವಂತೆ ಮಾಡಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಗ್ರಾಮದಲ್ಲಿ ಅಕ್ರಮ ನಕಲಿ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕುವಂತೆ ಒತ್ತಾಯಿಸಿದ್ದಾರೆ. 

click me!