ಕಾರವಾರ: ಭರಪೂರ ಮೀನು ಸಿಕ್ಕರೂ ಬೇಡಿಕೆಯಿಲ್ಲ, ಕಂಗಾಲಾದ ಮೀನುಗಾರರು

By Kannadaprabha NewsFirst Published Aug 5, 2021, 3:02 PM IST
Highlights

* ಗೋವಾ, ಕೇರಳ ಗಡಿಗಳ ಬಂದ್‌ನಿಂದ ಖರೀದಿಸುವವರಿಲ್ಲ
* ವಿದೇಶಗಳಿಗೆ ರಫ್ತಿಗೂ ಸಹ ಕೊರೋನಾ ಅಡ್ಡಿ
* ಸೂಕ್ತ ದರವಿಲ್ಲದೇ ಮೀನುಗಾರರಿಗೆ ನಷ್ಟ 
 

ಕಾರವಾರ(ಆ.05): ಸುದೀರ್ಘ ಎರಡು ತಿಂಗಳ ಬಳಿಕ ಯಾಂತ್ರಿಕೃತ ಮೀನುಗಾರಿಕೆ ಅವಕಾಶ ಸಿಕ್ಕಿದರೂ ಬೋಟ್‌ಗಳು ಕಡಲಿಗೆ ಇಳಿಯದಿರುವುದು ಸಾಂಪ್ರದಾಯಿಕ ಮೀನುಗಾರಿಕೆಗೆ ವರದಾನವಾಗಿದೆ. ಆದರೆ ಸಾಂಪ್ರದಾಯಿಕ ಮೀನುಗಾರಿಕೆಯಾದ ಏಂಡಿ ಬಲೆಗೆ ಬರಪೂರ ಸಿಗಡಿ ಮೀನುಗಳು ಲಭ್ಯವಾಗುತ್ತಿದ್ದರೂ ಬೇಡಿಕೆ ಇಲ್ಲದೇ ಕಂಗಾಲಾಗಿದ್ದಾರೆ.

ಜೂನ್‌, ಜುಲೈ ತಿಂಗಳಲ್ಲಿ ಆಳ ಸಮುದ್ರ ನಿಷೇಧದ ಬಳಿಕ ಆ. 1ರಿಂದ ಯಾಂತ್ರಿಕೃತ ಮೀನುಗಾರಿಕೆ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ದರ ಹೊಂದಾಣಿಕೆಯಾಗದೇ ಯಾಂತ್ರಿಕ ಬೋಟುಗಳು ಬಂದರಿನಲ್ಲೇ ಲಂಗರು ಹಾಕಿವೆ. ತೀರ ಪ್ರದೇಶದಲ್ಲಿ ನಡೆಸುವ ಏಂಡಿ ಬಲೆ ಮೀನುಗಾರಿಕೆಯ ಬಲೆಗೆ ಭರಪೂರ ಮೀನು ಬೇಟೆಯಾಗಿದೆ. ಎರಡು ತಿಂಗಳ ಬಳಿಕ ಸಾಂಪ್ರದಾಯಿಕ ಮೀನುಗಾರರ ಬಲೆಗೆ ಉತ್ತಮ ಪ್ರಮಾಣದಲ್ಲಿ ಮೀನು ಲಭಿಸಿದ್ದರೂ ಅದನ್ನು ಖರೀದಿಸುವವರೇ ಇಲ್ಲದಾಗಿದೆ.

ಮಳೆಗಾಲದ ಸಂದರ್ಭದಲ್ಲಿ ಮೀನುಗಳು ಮರಿ ಇಡುವ ಹಿನ್ನಲೆ ಕೇವಲ ದಡದ ಸಮೀಪದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶವಿದ್ದು, ಏಂಡಿ ಬಲೆ ಮೀನುಗಾರಿಕೆಯನ್ನು ಹೆಚ್ಚು ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಚಂಡಮಾರುತ ಹಾಗೂ ಮಳೆ ಹೆಚ್ಚಾಗಿದ್ದರಿಂದ ಏಂಡಿ ಬಲೆ ಹಾಕಲು ಸಾಧ್ಯವಾಗಿರಲಿಲ್ಲ. ಆಳ ಸಮುದ್ರ ಮೀನುಗಾರಿಕೆಗೆ ಅವಕಾಶ ನೀಡಿದ್ದರೂ ಯಾಂತ್ರಿಕ ಬೋಟುಗಳು ಕಡಲಿಗಿಳಿಯದ ಹಿನ್ನೆಲೆ ದಡದಲ್ಲಿ ಏಂಡಿ ಬಲೆ ಬೀಸಿದ್ದ ಮೀನುಗಾರರಿಗೆ ಸಾಕಷ್ಟು ಪ್ರಮಾಣದಲ್ಲಿ ಸಿಗಡಿ ಸೇರಿದಂತೆ ಇತರೆ ಮೀನುಗಳು ರಾಶಿ ರಾಶಿ ಬಲೆಗೆ ಬೀಳುತ್ತಿವೆ. ಹೇರಳವಾಗಿ ಮೀನು ಸಿಕ್ಕಿರುವುದಕ್ಕೆ ಸಂತಸಪಡಬೇಕಿದ್ದ ಮೀನುಗಾರರು ಸಿಗಡಿ ಮೀನು ಖರೀದಿ ಮಾಡುವವರು ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೂರ್ನಾಲ್ಕು ತಿಂಗಳಿಂದ ಮೀನುಗಾರರಿಗಿಲ್ಲ ಸಬ್ಸಿಡಿ, ಇನ್ಮುಂದೆ ಕರರಹಿತ ಡಿಸೇಲ್

ಕೋವಿಡ್‌ ಸೋಂಕಿನ ಅಬ್ಬರದಿಂದಾಗಿ ಕೇರಳ, ಗೋವಾ ಗಡಿಗಳು ಬಂದ್‌ ಮಾಡಲಾಗಿದ್ದು, ಸಿಗಡಿ ಮೀನು ಖರೀದಿಗೆ ಯಾವುದೇ ಕಂಪನಿಗಳೂ ಮುಂದೆ ಬರುತ್ತಿಲ್ಲ. ಅಲ್ಲದೇ ವಿದೇಶಗಳಿಗೆ ರಫ್ತಿಗೂ ಸಹ ಕೊರೋನಾ ಅಡ್ಡಿಯಾಗಿದ್ದು, ಸಿಗಡಿ ಪ್ಯಾಕಿಂಗ್‌ ಮಾಡುತ್ತಿದ್ದ ಕಾರ್ಖಾನೆಗಳೂ ಸಹ ಖರೀದಿಗೆ ಮುಂದೆ ಬರುತ್ತಿಲ್ಲ. ಹೀಗಾಗಿ ಕಳೆದ ಬಾರಿ ಕೆಜಿಗೆ . 140 ಮಾರಾಟವಾಗುತ್ತಿದ್ದ ಸಿಗಡಿ ಮೀನಿಗೆ ಈ ಬಾರಿ ಕೆಜಿಗೆ ಕೇವಲ 70 ರಿಂದ 80 ಬೆಲೆಯಿದೆ. ಇದರಿಂದಾಗಿ ಹೇರಳ ಪ್ರಮಾಣದಲ್ಲಿ ಸಿಗಡಿ ಲಭ್ಯವಾಗಿದ್ದರೂ ಅದನ್ನು ಮಾರಾಟ ಮಾಡಲಾಗದೇ ಮೀನುಗಾರರು ಪರದಾಡುವಂತಾಗಿದೆ. ಉತ್ತಮ ಮೀನುಗಾರಿಯಾಗಿದ್ದರೂ ಸಹ ಸೂಕ್ತ ದರವಿಲ್ಲದೇ ಮೀನುಗಾರರು ನಷ್ಟ ಅನುಭವಿಸುವಂತಾಗಿದೆ.

ಕಳೆದ ಬಾರಿ ಕೆಜಿಗೆ 140ಕ್ಕೆ ಮಾರಾಟವಾಗುತ್ತಿದ್ದ ಸಿಗಡಿ ಮೀನಿಗೆ ಈ ಬಾರಿ ಕೆಜಿಗೆ ಕೇವಲ 70 ರಿಂದ 80 ಬೆಲೆಯಿದೆ. ಈ ದರದಲ್ಲಿ ಮಾರಾಟ ಮಾಡಿದರೆ ಲಾಭ ಆಗುವುದಿಲ್ಲ. ಉತ್ತಮ ಮೀನುಗಾರಿಯಾಗಿದ್ದರೂ ಸಹ ಸೂಕ್ತ ದರವಿಲ್ಲದೇ ಮೀನುಗಾರರು ನಷ್ಟ ಅನುಭವಿಸುವಂತಾಗಿದೆ ಎಂದು ಸಾಂಪ್ರದಾಯಿಕ ಮೀನುಗಾರ ಉದಯ ಬಾನಾವಳಿಕರ್‌ ತಿಳಿಸಿದ್ದಾರೆ.  
 

click me!