ಶಿರಹಟ್ಟಿ ಪಟ್ಟಣಕ್ಕೂ ವಕ್ಕರಿಸಿದ ಕೊರೋನಾ: ಆತಂಕದಲ್ಲಿ ಜನತೆ

Kannadaprabha News   | Asianet News
Published : Jun 22, 2020, 07:59 AM IST
ಶಿರಹಟ್ಟಿ ಪಟ್ಟಣಕ್ಕೂ ವಕ್ಕರಿಸಿದ ಕೊರೋನಾ: ಆತಂಕದಲ್ಲಿ ಜನತೆ

ಸಾರಾಂಶ

ಲಾರಿ ಚಾಲಕ, ಐದು ತಿಂಗಳ ಗರ್ಭಿಣಿಗೆ ಕೊರೋನಾ ದೃಢ| ಮಾಡಿ ಮಧ್ಯಾಹ್ನ 2 ಗಂಟೆಯಿಂದ ಎಲ್ಲ ವ್ಯಾಪಾರ ವಹಿವಾಟು ಅಂಗಡಿ ಬಂದ್‌ ಮಾಡಲು ಸೂಚನೆ| ಸರ್ಕಾರ ಎಷ್ಟೇ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸಿದರೂ ಕ್ಯಾರೆ ಎನ್ನದ ಜನ|

ಶಿರಹಟ್ಟಿ(ಜೂ.22): ಶಿರಹಟ್ಟಿ ಪಟ್ಟಣದ ಓರ್ವ ವ್ಯಕ್ತಿ ಹಾಗೂ ಗ್ರಾಮೀಣ ಪ್ರದೇಶದ ಓರ್ವ ಮಹಿಳೆಗೆ ಭಾನುವಾರ ಕೋವಿಡ್‌-19 ಸೋಂಕು ದೃಢಪಟ್ಟಿದ್ದು, ಇಬ್ಬರನ್ನು ಗದಗ ಜಿಮ್ಸ್‌ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಶಿರಹಟ್ಟಿಪಟ್ಟಣದ ಮಟ್ಟಿಬಾವಿ ಪ್ಲಾಟ್‌ ನಿವಾಸಿ 34 ವರ್ಷದ ಪುರುಷ ಹಾಗೂ ತಾಲೂಕಿನ ಮಜ್ಜೂರ ಗ್ರಾಮದ 29 ವರ್ಷದ ಐದು ತಿಂಗಳ ಗರ್ಭಿಣಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ. ಜಿಲ್ಲಾಧಿಕಾರಿಗಳ ಆದೇಶ ಮತ್ತು ಸೂಚನೆ ಮೇರೆಗೆ ತಹಸೀಲ್ದಾರ್‌ ಯಲ್ಲಪ್ಪ ಗೋಣೆಣ್ಣನವರ ಎರಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸೋಂಕಿತರ ಪ್ರದೇಶಗಳನ್ನು ಸೀಲ್ಡೌನ್‌ ಮಾಡಿರುವುದಾಗಿ ತಿಳಿಸಿದ್ದಾರೆ.

ರಹಟ್ಟಿ ಪಟ್ಟಣದ ಸೋಂಕಿತ ವ್ಯಕ್ತಿ ಲಾರಿ ಚಾಲಕನಾಗಿದ್ದು, ಎಲ್ಲಿಯೂ ಹೊರಗಡೆ ಹೋಗಿಲ್ಲ ಯಾರ ಸಂಪರ್ಕವನ್ನು ಹೊಂದಿಲ್ಲ ಎನ್ನುವ ಮಾಹಿತಿ ನೀಡುತ್ತಿದ್ದು, ಇವನಲ್ಲಿ ಕೊರೋನಾ ಪಾಸಿಟಿವ್‌ ಕಾಣಿಸಿಕೊಂಡಿರುವ ಕುರಿತು ಆತಂಕ ಹುಟ್ಟಿದ್ದು, ವೈದ್ಯ ಸಿಬ್ಬಂದಿ ತಪಾಸಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಗದಗ: ಒಂದೇ ದಿನ 18 ಜನರಿಗೆ ಕೊರೋನಾ ಸೋಂಕು ದೃಢ

ಅದೇ ರೀತಿ ತಾಲೂಕಿನ ಮಜ್ಜೂರ ಗ್ರಾಮದ 29 ವರ್ಷ ವಯಸ್ಸಿನ ಗರ್ಭಿಣಿ ಮಹಿಳೆಯ ಅಣ್ಣ 8 ದಿನಗಳ ಹಿಂದೆ ಗೋವಾದಿಂದ ಮನೆಗೆ ಬಂದು ಹೋಗಿರುವ ಮಾಹಿತಿ ದೊರೆತಿದ್ದು, ಪ್ರಥಮ ಸಂಪರ್ಕ ಸೋಂಕಿತರೆಂದು 14 ದಿನಗಳ ಕಾಲ ಎರಡು ಕುಟುಂಬದ ಸದಸ್ಯರನ್ನು ಹೋಂ ಕ್ವಾರಟೈನ್‌ಗೆ ಒಳಪಡಿಸಲಾಗಿದೆ.

ಶಿರಹಟ್ಟಿ ಪಟ್ಟಣದ ಸೋಂಕಿತ ವ್ಯಕ್ತಿ ತೀವ್ರ ಜ್ವರ ಭಾದೆ, ಕೆಮ್ಮು ಅಂತಾ ಶಿರಹಟ್ಟಿತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಎಂದು ತಾಲೂಕಾಸ್ಪತ್ರೆ ವೈದ್ಯ ಸುಭಾಸ ದಾಯಗೊಂಡ ಹೇಳುತ್ತಿದ್ದು, ಅಲ್ಲಿ ಗುಣಮುಖ ಆಗದೇ ಇರುವುದರಿಂದ ಪಟ್ಟಣದ ಎರಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಖಾಸಗಿ ಆಸ್ಪತ್ರೆ ವೈದ್ಯರನ್ನು 14 ದಿನಗಳ ವರೆಗೆ ಹೋಂ ಕ್ವಾರಂಟೈನ್‌ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಆತಂಕಕ್ಕೊಳಗಾದ ಜನತೆ:

ಮೊದಲ ಬಾರಿ ಶಿರಹಟ್ಟಿ ಪಟ್ಟಣದಲ್ಲಿ ಕೊರೋನಾ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಜನತೆ ಆತಂಕಕ್ಕೊಳಗಾಗಿದ್ದು, ಪಟ್ಟಣ ಪಂಚಾಯಿತಿ ವತಿಯಿಂದ ಧ್ವನಿ ವರ್ಧಕದ ಮೂಲಕ ಪ್ರಚಾರ ಮಾಡಿ ಮಧ್ಯಾಹ್ನ 2 ಗಂಟೆಯಿಂದ ಎಲ್ಲ ವ್ಯಾಪಾರ ವಹಿವಾಟು ಅಂಗಡಿಗಳನ್ನು ಬಂದ್‌ ಮಾಡಲು ಸೂಚಿಸಲಾಯಿತು. ಪಟ್ಟಣದಲ್ಲಿ ಕೊರೋನಾ ಪಾಸಿಟಿವ್‌ ಕಾಣಿಸಿಕೊಂಡರೂ ಭಾನುವಾರ ಸಂತೆ ದಿನವಾದ್ದರಿಂದ ಕಂಕಣ ಸೂರ್ಯಗ್ರಹಣವನ್ನು ಲೆಕ್ಕಿಸದೇ ಜನಜಂಗುಳಿ ಸೇರಿದ್ದು, ಅಧಿಕಾರಿಗಳು, ಸರ್ಕಾರ ಎಷ್ಟೇ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸಿದರೂ ಕ್ಯಾರೆ ಎನ್ನುತ್ತಿಲ್ಲ.
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!