ಬಸ್‌ನ ಎಂಜಿನ್ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ ದೊಡ್ಡದಾಗಿ ಇಡೀ ಬಸ್ ಸುಟ್ಟು ಭಸ್ಮವಾಗಿದೆ. ಪ್ರಾಥಮಿಕ ಮಾಹಿತಿಯಂತೆ ಬಸ್ ಒಳಗೆ ನೀರು ಸೇರಿ ಶಾರ್ಟ್ ಸರ್ಕ್ಯೂಟ್ ಉಂಟಾದ ಹಿನ್ನೆಲೆಯಲ್ಲಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಭಸ್ಮವಾಗಿದೆ.
ಬೆಂಗಳೂರು(ಆ.07): ಕೆಂಪಾಪುರ ಬಳಿಯ ಹೊರವರ್ತುಲ ರಸ್ತೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಹೋಗಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಗೊರಗುಂಟೆಪಾಳ್ಯದಿಂದ ಕೆಆರ್ ಪುರ ಟಿನ್ ಫ್ಯಾಕ್ಟರಿಗೆ ಸೇವೆ ನೀಡುವ KA 41 D 2679 ನೋಂದಣಿ ಸಂಖ್ಯೆಯ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಹೊರವರ್ತುಲ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಸಾಗುತ್ತಿತ್ತು. ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹೊರವರ್ತುಲ ರಸ್ತೆಯಲ್ಲಿ ನೀರು ನಿಂತಿದ್ದು, ಆ ನೀರು ಎಲೆಕ್ಟ್ರಿಕ್ ಬಸ್ ಒಳಗೂ ಹರಿದಿದೆ. ಅದರಿಂದಾಗಿ ಕೆಂಪಾಪುರ ಬಳಿ ಏಕಾಏಕಿ ಬಸ್ ಸ್ಥಗಿತಗೊಂಡಿದೆ. ಚಾಲಕನಿಗೆ ಬಸ್ ಸ್ಟಾರ್ಟ್ ಮಾಡಲು ಸಾಧ್ಯವಾಗಿರಲಿಲ್ಲ. ಅದಾದ 20ರಿಂದ 30 ನಿಮಿಷದಲ್ಲಿ ಬಸ್‌ನ ಎಂಜಿನ್ ಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಅದನ್ನು ಗಮನಿಸಿದ ಬಸ್‌ನ ಚಾಲಕ ಮತ್ತು ನಿರ್ವಾಹಕರು ಬಸ್‌ನಲ್ಲಿದ್ದ 10ಕ್ಕೂ ಹೆಚ್ಚಿನ ಪ್ರಯಾಣಿಕರನ್ನು ಕೆಳಗಿಳಿಸಿ, ಅವರನ್ನು ಬೇರೆ ಬಸ್‌ನಲ್ಲಿ ಕಳುಹಿಸಿದ್ದಾರೆ.
ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳಿಗೆ ಮಲೆಯಾಳಿ ಚಾಲಕರು; ಕನ್ನಡಿಗರಿಗೆ ಕೈಕೊಟ್ಟ ಸರ್ಕಾರ
ನಂತರ ಬಸ್‌ನ ಎಂಜಿನ್ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ ದೊಡ್ಡದಾಗಿ ಇಡೀ ಬಸ್ ಸುಟ್ಟು ಭಸ್ಮವಾಗಿದೆ. ಪ್ರಾಥಮಿಕ ಮಾಹಿತಿಯಂತೆ ಬಸ್ ಒಳಗೆ ನೀರು ಸೇರಿ ಶಾರ್ಟ್ ಸರ್ಕ್ಯೂಟ್ ಉಂಟಾದ ಹಿನ್ನೆಲೆಯಲ್ಲಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.