
ಬೆಂಗಳೂರು(ಮೇ.03): ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನತಾ ಕರ್ಫ್ಯೂ ಇದ್ದರೂ ಕೊರೋನಾ ಮಾರ್ಗ ಸೂಚಿ ಉಲ್ಲಂಘಿಸಿ ಶವವನ್ನು ಮೆರವಣಿಗೆಯಲ್ಲಿ ಕೊಂಡೊಯ್ದ 30 ಮಂದಿ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸಮತಾ ನಗರದ ಮಣಿಗಂಡನ್(28), ಮಂಜುನಾಥ್ (38), ಭಾಸ್ಕರ್ (32), ಸುಗ್ಗುರಾಜ್ (38) ಸೇರಿ ಒಟ್ಟು 30 ಜನರ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹೆಡ್‌ಕಾನ್‌ಸ್ಟೇಬಲ್ ಕೊಟ್ಟೆಪ್ಪ ಎಂಬುವರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನು ಕೆಲವರನ್ನು ಪತ್ತೆ ಮಾಡಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
"
ಇನ್ನೂ ನಿಂತಿಲ್ಲ ಚಿತಾಗಾರಗಳ ಮುಂದೆ ಕಾಯುವ ಪರಿಸ್ಥಿತಿ : ಬೆಂಗಳೂರಲ್ಲಿ ದುಸ್ಥಿತಿ
ಸಮತಾ ನಗರದ ನಿವಾಸಿ ಗೋವಿಂದರಾಜು ಏ.28ರಂದು ಮೃತಪಟ್ಟಿದ್ದರು. ಏ.29ರಂದು ಸಂಜೆ ಮೃತರ ಕುಟುಂಬಸ್ಥರು, ಸಂಬಂಧಿಕರು 70 ರಿಂದ 80 ಜನ ಗೋವಿಂದರಾಜು ಮನೆಯಿಂದ ಅವರ ಶವವನ್ನು ತೆಗೆದುಕೊಂಡು ಸ್ಮಶಾನಕ್ಕೆ ಮೆರವಣಿಗೆ ಹೋಗುತ್ತಿದ್ದರು. ಸಂಜೆ ಪೋತಲಪ್ಪ ಗಾರ್ಡನ್ ಜಂಕ್ಷನ್ ಬಳಿ ಗಸ್ತಿನಲ್ಲಿದ್ದ ಆಡುಗೋಡಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಕೊಟ್ಟೆಪ್ಪ ಇವರನ್ನು ಗಮನಿಸಿದ್ದರು. ಇವರನ್ನು ತಡೆದು ಸರ್ಕಾರದ ಆದೇಶಗಳ ಬಗ್ಗೆ ತಿಳಿದಿಸಿದರೂ ಲೆಕ್ಕಿಸದೇ ನಾವುಗಳು ಮೆರವಣಿಗೆ ಮಾಡುತ್ತೇವೆ ಎಂದು ಕೊಟ್ಟೆಪ್ಪ ಹಾಗೂ ಇತರ ಸಿಬ್ಬಂದಿಯನ್ನು ತಳ್ಳಿಕೊಂಡು ಮುಂದೆ ಸಾಗಿದ್ದಾರೆ. ಈ ಮೂಲಕ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿದ್ದಕ್ಕೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona