* ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಜೀಪ್‌ನಲ್ಲಿ 7ಕ್ಕೂ ಹೆಚ್ಚು ಜನರ ಸಂಚಾರ
* ಹೊಟೆಲ್‌ಗಳ ಪಾರ್ಸೆಲ್ ಅವಲಂಬಿಸಿದ್ದವರಿಗೆ ಹಸಿವಿನ ಸಂಕಷ್ಟ
* ಬೀದಿನಾಯಿ ಬೆಕ್ಕುಗಳು, ರಾಸುಗಳಿಗೂ ಆಹಾರವಿಲ್ಲದೆ ಪರದಾಟ
ಹುಬ್ಬಳ್ಳಿ(ಮೇ.26): ಕಠಿಣ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ನಾಕಾಬಂದಿಗಳ ಮೂಲಕ ಪೊಲೀಸರ ಕಠಿಣ ತಪಾಸಣೆ ಮುಂದುವರೆದಿದ್ದು, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡದ್ದಕ್ಕೆ ಮಂಗಳವಾರ ಮಹಾನಗರ ಪಾಲಿಕೆ, ಸಾರಿಗೆ ಸಂಸ್ಥೆ, ವೈದ್ಯೆ ಸೇರಿ ಹಲವರು ದಂಡ ತೆತ್ತಿದ್ದಾರೆ. ಜನರಿಗೆ ಮಾಸ್ಕ್ ಧರಿಸಿಕೊಳ್ಳಿ, ಸಾಮಾಜಿಕ ಅಂತರ ಕಾಪಾಡಿ ಎಂದು ಬುದ್ಧಿ ಹೇಳುವ ನೌಕರರೇ ದಂಡ ತೆತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಅಗತ್ಯ ವಸ್ತು ಕೊಳ್ಳಲು ಬೆಳಗ್ಗೆ 8 ಗಂಟೆವರೆಗೂ ಅವಕಾಶವಿರುವ ಕಾರಣ ಈ ಸಮಯದಲ್ಲಿ ಜನ ಅಂಗಡಿ ಮುಂಗಟ್ಟುಗಳ ಎದುರು ಮುಗಿಬಿದ್ದು ಹಾಲು ಹಣ್ಣು, ತರಕಾರಿ ಖರೀದಿ ಮಾಡಿದರು. ಈ ನಡುವೆ ಲಾಕ್‌ಡೌನ್‌ನ ಎರಡನೇ ದಿನವೂ ನ್ಯಾಯಬೆಲೆ ಅಂಗಡಿಗಳ ಎದುರು ಸರದಿ ಸಾಲು ಕಂಡುಬಂತು.
undefined
ಮನೆಯೇ ಮಳಿಗೆ:
ನಗರದಲ್ಲಿ ಹಲವು ವ್ಯಾಪಾರಿಗಳು ವಹಿವಾಟಿಗಾಗಿ ವಾಮಮಾರ್ಗ ಅನುಸರಿಸುತ್ತಿರುವುದು ಕಂಡುಬಂದಿದೆ. ಬೇಕರಿ, ದಿನಸಿ ಅಂಗಡಿಗಳು, ಮಾಂಸದ ಅಂಗಡಿಗಳ ವ್ಯಾಪಾರಸ್ಥರು ತಮ್ಮ ಮಳಿಗೆಗಳನ್ನೇನೊ ಬಂದ್ ಇಟ್ಟಿದ್ದಾರೆ. ಆದರೆ, ಮನೆಗಳಿಂದಲೇ ವ್ಯಾಪಾರ ಮಾಡುತ್ತಿದ್ದಾರೆ. ಗ್ರಾಹಕರು ಅತಿಥಿಯಂತೆ ಮನೆಗೆ ಹೋಗಿ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಅದರಂತೆ ಚಿಕ್ಕಪುಟ್ಟಖಾನಾವಳಿಗಳಲ್ಲಿ ಕೂಡ ಹೀಗೆ ನಡೆಯುತ್ತಿದೆ. ಪಾರ್ಸೆಲ್ ನೀಡಲಾಗುತ್ತಿದೆ.
ಲಾಕ್‌ಡೌನ್: ಬೀದಿ ಬದಿ ವ್ಯಾಪಾರಸ್ಥರಿಗೆ ಪರಿಹಾರದ ಹಣ ಸಾಲಕ್ಕೆ ಚುಕ್ತಾ ಆಗುವ ಭೀತಿ
ದಂಡ ವಸೂಲಿ:
ಚೆನ್ನಮ್ಮ ಸರ್ಕಲ್ ಬಳಿ ವಾಹನ ತಪಾಸಣೆ ವೇಳೆ ಮಹಾನಗರ ಪಾಲಿಕೆ ಸಿಬ್ಬಂದಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಜೀಪ್‌ನಲ್ಲಿ 7ಕ್ಕೂ ಹೆಚ್ಚು ಜನರು ಸಂಚಾರ ಮಾಡುತ್ತಿದ್ದರು. ಇದನ್ನು ಕಂಡ ಉಪನಗರ ಪೊಲೀಸರು ವಾಹನ ತಡೆದು 250 ರು. ದಂಡ ಕಟ್ಟಿಸಿಕೊಂಡು ಬಿಟ್ಟಿದ್ದಾರೆ. ಅಲ್ಲದೆ ಖಾಸಗಿ ಕಂಪನಿಯೊಂದರ ಸ್ಟಾಫ್ ಬಸ್‌ನಲ್ಲಿ ಮಾಸ್ಕ್ ಇಲ್ಲದೇ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿಯನ್ನು ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಇದನ್ನು ನೋಡಿದ ಪೊಲೀಸರು ಚಾಲಕನಿಗೆ ದಂಡವನ್ನು ಹಾಕಿದ್ದಾರೆ. ಇನ್ನೂ ಸಾರಿಗೆ ಸಂಸ್ಥೆಯ ಸಿಬ್ಬಂದಿಯೂ ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದರು. ಅವರನ್ನೂ ಹಿಡಿದು ದಂಡ ಹಾಕಿ ಕಳುಹಿಸಲಾಯಿತು.
ಇದೇ ವೇಳೆ ಬ್ಯಾಂಕ್‌ವೊಂದರ ಸಿಬ್ಬಂದಿ ಕೂಡ ಮಾಸ್ಕ್ ಇಲ್ಲದೇ ಆಗಮಿಸಿದರು. ಅವರನ್ನು ತಡೆದು ಕೇಳಿದರೆ ನಾನು ಹೆಲ್ಮೆಟ್ ಹಾಕಿದ್ದೇನೆ. ಹೀಗಾಗಿ ಮಾಸ್ಕ್ ಅಗತ್ಯವಿಲ್ಲ ಎಂದು ಪೊಲೀಸರೊಂದಿಗೆ ವಾಗ್ವಾದಕ್ಕೂ ಇಳಿದರು. ಆದರೆ ಪೊಲೀಸರು ಮಾಸ್ಕ್ ಇಲ್ಲದಿರುವುದರಿಂದ ದಂಡ ಕಟ್ಟಿಮುಂದೆ ತೆರಳಿ ಎಂದು ತಾಕೀತು ಮಾಡಿ ದಂಡ ಕಟ್ಟಿಸಿಕೊಂಡರು.
ನಗರದ ಹಳೇ ಕೋರ್ಟ್ ಸರ್ಕಲ್ ಬಳಿ ವೈದ್ಯೆಯೊಬ್ಬರು ಮಾಸ್ಕ್ ಧರಿಸದೇ ಕಾರಿನಲ್ಲಿ ಸಂಚರಿಸುತ್ತಿದ್ದರು. ಇವರಿಗೂ ಪೊಲೀಸರು ದಂಡ ಕಟ್ಟಲು ಸೂಚಿಸಿದರು. ಆದರೆ, ವೈದ್ಯೆ ಕೆಲ ಹೊತ್ತು ವಾದ ಮಾಡಿದ್ದಾರೆ. ಸಮಜಾಯಿಷಿಗೆ ಬಗ್ಗದ ಪೊಲೀಸರು ದಂಡ ಕಟ್ಟಿಸಿಕೊಂಡರು. ಅಲ್ಲದೇ, ನೀವೇ ಜನರಿಗೆ ಮಾಸ್ಕ್ ಧರಿಸಿ ಎಂದು ಬುದ್ಧಿ ಹೇಳುವವರು ನೀವೆ ಮಾಸ್ಕ್ ಹಾಕಲ್ಲ ಎಂದರೆ ಹೇಗೆ? ಎಂದು ತರಾಟೆ ತೆಗೆದುಕೊಂಡು ಕಳುಹಿಸಿದರು. ಒಟ್ಟಿನಲ್ಲಿ ಮಂಗಳವಾರ ಸಾರ್ವಜನಿಕರಿಗೆ ಬುದ್ಧಿ ಹೇಳುವವರೇ ದಂಡ ತೆತ್ತಾಂತಾಗಿದೆ.
ಹಸಿವಿನ ಸಂಕಷ್ಟ
ನಗರದಲ್ಲಿ ಮಧ್ಯಾಹ್ನದ ಬಳಿಕ ಎಲ್ಲವೂ ಸ್ತಬ್ಧವಾಗಿತ್ತು. ವಾಹನಗಳ ಓಡಾಟ, ಅಂಗಡಿ ಮುಂಗಟ್ಟುಗಳು ಬಂದ್, ಜನಸಂಚಾರವಿಲ್ಲದೆ ಸ್ಮಶಾನ ಮೌನ ಆವರಿಸಿದಂತಾಗಿದೆ. ಹೆಚ್ಚಿನದಾಗಿ ಹೊಟೆಲ್‌ಗಳ ಪಾರ್ಸೆಲ್ ಅವಲಂಬಿಸಿದ್ದವರಿಗೆ ಈಗ ಹಸಿವಿನ ಸಂಕಷ್ಟ ಎದುರಾಗಿದೆ. ಹೊಟೆಲ್‌ಗಳು ಬಂದ್ ಆಗಿರುವ ಕಾರಣ ಉದ್ಯೋಗಸ್ಥರು ಊಟಕ್ಕಾಗಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೀದಿನಾಯಿ ಬೆಕ್ಕುಗಳು, ರಾಸುಗಳಿಗೂ ಆಹಾರವಿಲ್ಲದೆ ಪರದಾಟ ಶುರುವಾಗಿದೆ. ಕಳೆದ ಅಲೆಯ ವೇಳೆಯಷ್ಟು ಸಂಘಟನೆಗಳು ಅನ್ನಾಹಾರ ನೀಡಿದಷ್ಟುಈ ಬಾರಿ ಮುಂದೆ ಬಾರದ ಕಾರಣ ಹಸಿವಿನ ಸಂಕಷ್ಟ ಆವರಿಸಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona