ಒಂದೇ ಆಸ್ತಿಗೆ 2 ಬಾರಿ ತೆರಿಗೆ: ಬಿಬಿಎಂಪಿಗೆ ದಂಡ

By Kannadaprabha NewsFirst Published Apr 5, 2021, 7:47 AM IST
Highlights

ನಿರ್ಲಕ್ಷ್ಯಕ್ಕೆ ಶಿಕ್ಷೆ| ತೆರಿಗೆ ಕಟ್ಟಿದ್ದರೂ ನೋಟಿಸ್‌ ನೀಡಿದ್ದ ಅಧಿಕಾರಿಗಳು| ಒತ್ತಡ ಹೇರಿ ಮತ್ತೆ ತೆರಿಗೆ ಪಾವತಿಸಿಕೊಂಡಿದ್ದ ಪಾಲಿಕೆ| ಗ್ರಾಹಕರ ಹಕ್ಕುಗಳ ವೇದಿಕೆ ತೀರ್ಪು| ದೂರುದಾರರಿಗೆ ಪರಿಹಾರ ನೀಡುವಂತೆ ಬಿಬಿಎಂಪಿಗೆ ಆದೇಶಿಸಿದ ಗ್ರಾಹಕರ ಹಕ್ಕುಗಳ ವೇದಿಕೆ| 

ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು(ಏ.05): ಒಂದೇ ಆಸ್ತಿಗೆ ಎರಡು ಬಾರಿ ಆಸ್ತಿ ತೆರಿಗೆ ಪಾವತಿಸಿಕೊಂಡಿದ್ದ ಬಿಬಿಎಂಪಿ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಹಕರ ಹಕ್ಕುಗಳ ವೇದಿಕೆ, ಗ್ರಾಹಕನಿಂದ ಎರಡನೇ ಬಾರಿ ಪಾವತಿಸಿಕೊಂಡಿದ್ದ ತೆರಿಗೆ ಮೊತ್ತಕ್ಕೆ ಶೇ.18ರಷ್ಟು ಬಡ್ಡಿ ಜೊತೆಗೆ 13 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದೆ.

ಒಂದೇ ಆಸ್ತಿಗೆ ಒಂದೇ ವರ್ಷದಲ್ಲಿ ಎರಡು ಬಾರಿ ಆಸ್ತಿ ತೆರಿಗೆ ಪಾವತಿಸಬೇಕು ಎಂಬದಾಗಿ ಯಾವುದೇ ಕಾನೂನಿನಲ್ಲಿ ಉಲ್ಲೇಖಿಸಿಲ್ಲ. ಆದರೂ, ಒಮ್ಮೆ ತೆರಿಗೆ ಪಾವತಿಸಿದ್ದರೂ ಮತ್ತೊಮ್ಮೆ ನೋಟಿಸ್‌ ನೀಡಿ ತೆರಿಗೆ ಪಾವತಿಸಿಲ್ಲವೆಂದು ಬಡ್ಡಿ ಹಾಗೂ ದಂಡ ವಿಧಿಸಿರುವುದು ಗ್ರಾಹಕರ ಹಕ್ಕುಗಳ ಉಲ್ಲಂಘನೆ ಮಾಡಿದಂತಾಗಿದೆ ಎಂದು ವೇದಿಕೆ ಆದೇಶದಲ್ಲಿ ಹೇಳಿದೆ.ದೂರುದಾರ ಆನ್‌ಲೈನ್‌ ಮೂಲಕ ಆಸ್ತಿ ತೆರಿಗೆ ಪಾವತಿಸಿರುವುದನ್ನು ಗಮನ ಹರಿಸದ ಅಧಿಕಾರಿಗಳು ಎರಡನೇ

ಬಾರಿ ತೆರಿಗೆ ಪಾವತಿಸುವಂತೆ ನೋಟಿಸ್‌ ಜಾರಿ ಮಾಡುವುದು ನಿರ್ಲಕ್ಷ್ಯತನವಾಗಿದೆ. ಹೀಗಾಗಿ, ಗ್ರಾಹಕರಿಂದ ಎರಡನೇ ಬಾರಿ ತೆರಿಗೆ ಪಾವತಿಸಿರುವ .24,650ಕ್ಕೆ ಶೇ.18ರಷ್ಟು ಬಡ್ಡಿಯೊಂದಿಗೆ ಹಿಂದಿರುಗಿಸಬೇಕು. ಜೊತೆಗೆ ಮಾನಸಿಕವಾಗಿ ಹಿಂಸೆ ನೀಡಿದರ ಪರಿಹಾರವಾಗಿ 10 ಸಾವಿರ, ಕಾನೂನು ಹೋರಾಟ ನಡೆಸಿದ್ದಕ್ಕಾಗಿ 3 ಸಾವಿರಗಳನ್ನು ಆದೇಶದ ಪ್ರತಿ ತಲುಪಿದ 60 ದಿನದಲ್ಲಿ ಪಾವತಿಸಲು ಬಿಬಿಎಂಪಿಗೆ ಸೂಚಿಸಿದೆ.

ಬೆಂಗಳೂರು ಮತ್ತಷ್ಟು ವಿಸ್ತಾರ..!

ಪ್ರಕರಣದ ಹಿನ್ನೆಲೆ:

ಪ್ರಕಾಶ್‌ನಗರದ ನಿವಾಸಿ ಕೆ.ಎಚ್‌.ವಿ.ಬಾಬು ಎಂಬುವರು ತಮ್ಮ ಆಸ್ತಿಗೆ 2016-17ನೇ ಸಾಲಿನಲ್ಲಿ 10,087 ತೆರಿಗೆಯನ್ನು 2016ರ ಏಪ್ರಿಲ್‌ 27ರಂದು ಆನ್‌ಲೈನ್‌ ಮೂಲಕ ಪಾವತಿ ಮಾಡಿದ್ದರು. ಈ ಸಂಬಂಧ ಮೊಬೈಲ್‌ನಲ್ಲಿ ಸ್ಕ್ರೀನ್‌ಶಾಟ್‌ ತೆಗೆದು ಸಂಗ್ರಹಿಸಿ ಕೊಂಡಿದ್ದರು. ಅಲ್ಲದೆ, ರಸೀದಿ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪಾಲಿಕೆ ಅಧಿಕಾರಿಗಳು ಇತ್ತ ಗಮನ ಹರಿಸಿರಲಿಲ್ಲ.

ಈ ನಡುವೆ ದೂರುದಾರರಿಗೆ ನೋಟಿಸ್‌ ಜಾರಿ ಮಾಡಿದ್ದ ಬಿಬಿಎಂಪಿ ಕಂದಾಯ ವಿಭಾಗ, 2017-18ನೇ ವರ್ಷದ ತೆರಿಗೆ ಮತ್ತು 2016-17ನೇ ವರ್ಷದ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಅದಕ್ಕೆ ಬಡ್ಡಿ ಮತ್ತು ದಂಡ ಸೇರಿ .24,650 ಪಾವತಿಸಬೇಕು ಎಂದು ಸೂಚಿಸಿದ್ದರು. ಈಗಾಗಲೇ ಪಾವತಿ ಮಾಡಿರುವುದಾಗಿ ತಿಳಿಸಿದರೂ, ಗಮನ ಹರಿಸದ ಅಧಿಕಾರಿಗಳು ಒತ್ತಡ ಹೇರಿ ಎರಡನೇ ಬಾರಿ ತೆರಿಗೆ ಪಾವತಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿ ಬಾಬು ಗ್ರಾಹಕರ ಹಕ್ಕುಗಳ ವೇದಿಕೆಯಲ್ಲಿ ಅರ್ಜಿ ಸಲ್ಲಿಸಿದ್ದರು.

ದೂರಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಿದ್ದ ಬಿಬಿಎಂಪಿ ಪರ ವಕೀಲರು, 2016-17ನೇ ವರ್ಷದ ಆಸ್ತಿ ತೆರಿಗೆ .10,087 ಪಾವತಿ ಮಾಡಿರುವುದು ಮತ್ತು ಪಾಲಿಕೆ ಖಾತೆಗೆ ಜಮೆಯಾಗಿರುವ ಸಂಬಂಧ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲ. ಹೀಗಾಗಿ ದೂರದಾರರಿಗೆ ನೋಟಿಸ್‌ ನೀಡಿ ಬಾಕಿ ತೆರಿಗೆ ಪಾವತಿಸುವಂತೆ ಕೋರಲಾಗಿದೆ. ಅಲ್ಲದೆ, ದೂರುದಾರರು ಬಿಬಿಎಂಪಿಯ ‘ಗ್ರಾಹಕ’ ಆಗುವುದಿಲ್ಲ. ಆದ್ದರಿಂದ ಈ ಅಂಶವನ್ನು ಗ್ರಾಹಕರ ಹಕ್ಕುಗಳ ವೇದಿಕೆಯಲ್ಲಿ ತೀರ್ಮಾನಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು. ಆದರೆ ದೂರುದಾರ ‘ಗ್ರಾಹಕ’ ಆಗುತ್ತಾನೆ ಛಿಂದು ಪ್ರಕರಣವೊಂದರಲ್ಲಿ ಕೇರಳ ಹೈಕೋರ್ಟ್‌ ನೀಡಿದ ತೀರ್ಪು ಉಲ್ಲೇಖಿಸಿ ಪಾಲಿಕೆಯ ವಾದವನ್ನು ತಳ್ಳಿಹಾಕಿತು. ವಾದ-ಪ್ರತಿವಾದ ಆಲಿಸಿದ ವೇದಿಕೆಯ ಅಧ್ಯಕ್ಷ ಕೆ.ಎಸ್‌.ಬೀಳಗಿ, ಸದಸ್ಯರಾದ ಎಂ.ಬಿ.ಸೀನಾ, ಮಮತಾ ಅವರಿದ್ದ ತ್ರಿಸದಸ್ಯ ಪೀಠ, ದೂರುದಾರರಿಗೆ ಪರಿಹಾರ ನೀಡುವಂತೆ ಬಿಬಿಎಂಪಿಗೆ ಆದೇಶಿಸಿದೆ.
 

click me!