ಮೆಟ್ರೋ ಹ್ಯಾಂಡಲ್‌ ಹಿಡಿದು ಸರ್ಕಸ್‌ ಮಾಡಿದ ವಿದ್ಯಾರ್ಥಿಗೆ ₹500 ದಂಡ

By Kannadaprabha NewsFirst Published Oct 19, 2023, 7:23 AM IST
Highlights

ಮೆಟ್ರೋ ರೈಲಿನೊಳಗೆ ಹ್ಯಾಂಡಲ್‌ ಹಿಡಿದು ಕಸರತ್ತು ಮಾಡಿದ ವಿದ್ಯಾರ್ಥಿಗೆ ಬಿಎಂಆರ್‌ಸಿಎಲ್‌ ₹500 ದಂಡ ವಿಧಿಸಿದೆ. ಮಂಗಳವಾರ ರಾತ್ರಿ 11ರ ಸುಮಾರಿಗೆ ಹಸಿರು ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಮೀತ್ ಪಟೇಲ್‌ ಮೆಟ್ರೋದಲ್ಲಿನ ಹ್ಯಾಂಡಲ್‌ಗಳನ್ನು ಹಿಡಿದು ರೋಲಿಂಗ್‌ ಕಸರತ್ತು ಮಾಡಿದ್ದಾನೆ. 

ಬೆಂಗಳೂರು (ಅ.19): ಮೆಟ್ರೋ ರೈಲಿನೊಳಗೆ ಹ್ಯಾಂಡಲ್‌ ಹಿಡಿದು ಕಸರತ್ತು ಮಾಡಿದ ವಿದ್ಯಾರ್ಥಿಗೆ ಬಿಎಂಆರ್‌ಸಿಎಲ್‌ ₹500 ದಂಡ ವಿಧಿಸಿದೆ. ಮಂಗಳವಾರ ರಾತ್ರಿ 11ರ ಸುಮಾರಿಗೆ ಹಸಿರು ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಮೀತ್ ಪಟೇಲ್‌ ಮೆಟ್ರೋದಲ್ಲಿನ ಹ್ಯಾಂಡಲ್‌ಗಳನ್ನು ಹಿಡಿದು ರೋಲಿಂಗ್‌ ಕಸರತ್ತು ಮಾಡಿದ್ದಾನೆ. ಅದನ್ನು ಆತನ ಸ್ನೇಹಿತರು ವಿಡಿಯೋ ಮಾಡಿದ್ದಾರೆ. ಈ ಹುಚ್ಚಾಟಕ್ಕೆ ಸಹ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಕಸರತ್ತನ್ನು ವಿಡಿಯೋ ಮಾಡಿದ ಮೆಟ್ರೋ ಸಿಬ್ಬಂದಿ ಅದನ್ನು ಯಲಚೇನಹಳ್ಳಿ ಭದ್ರತಾ ಸಿಬ್ಬಂದಿಗೆ ತೋರಿಸಿದ್ದಾರೆ. 

ಅದೇ ನಿಲ್ದಾಣದಲ್ಲಿ ಸಿಬ್ಬಂದಿ ವಿದ್ಯಾರ್ಥಿಗಳನ್ನು ತಡೆದು ₹500 ದಂಡ ವಿಧಿಸಿದ್ದಾರೆ. ಅಲ್ಲದೆ ಮೆಟ್ರೋದಲ್ಲಿ ಈ ರೀತಿಯ ವರ್ತನೆ ತೋರದಂತೆ ಎಚ್ಚರಿಕೆ ಕೂಡ ನೀಡಿದ್ದಾರೆ. ವಿಡಿಯೋದಲ್ಲಿ ಒಬ್ಬ ವಿದ್ಯಾರ್ಥಿ ಮೆಟ್ರೋ ರೈಲಿನ ಪರಿಕರಕ್ಕೆ ಹಾನಿ ಆಗುವಂತೆ ವರ್ತಿಸಿರುವುದು ಕಂಡು ಬಂದಿದೆ. ಹೀಗಾಗಿ ಆತನಿಗೆ ₹500 ದಂಡ ವಿಧಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಕಾರ್ಯಾಚರಣೆ ಹಾಗೂ ನಿರ್ವಹಣೆ ವಿಭಾಗದ ಮುಖ್ಯಸ್ಥ ಶಂಕರ್‌ ತಿಳಿಸಿದರು.

Latest Videos

ಅಂಬಿಕಾಪತಿ ಮನೆಗೆ ಕೆಂಪಣ್ಣ ಹೋಗಿದ್ದೇಕೆ?: ಡಿ.ವಿ.ಸದಾನಂದಗೌಡ

ನೇರಳೆ ಮಾರ್ಗ ಮೆಟ್ರೋ ರೈಲಲ್ಲಿ ಬಾರಿ ರಷ್‌: ನಮ್ಮ ಮೆಟ್ರೋ’ ಸಂಪೂರ್ಣ ನೇರಳೆ ಮಾರ್ಗವನ್ನು ಪ್ರಾರಂಭಿಸಿದ ಬಳಿಕ ಹೆಚ್ಚಾದ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಹೆಚ್ಚುವರಿ ಶಾರ್ಟ್‌ ಲೂಪ್‌ ರೈಲುಗಳ ಸಂಚಾರ ಆರಂಭಿಸಲಾಗಿದೆ. ಮಧ್ಯಾಹ್ನ 4.45ರ ಬಳಿಕ ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣದ ನಡುವೆ 12 ಶಾರ್ಟ್‌ ಲೂಪ್‌ ರೈಲುಗಳ ಸಂಚಾರ ನಡೆಸಲಾಗಿದೆ. ಸರ್‌.ಎಂ.ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣ, ಸೆಂಟ್ರಲ್‌ ಕಾಲೇಜು ನಡುವೆಯೂ ಹೆಚ್ಚಿನ ಮೆಟ್ರೋ ರೈಲುಗಳನ್ನು ಓಡಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದರು.

ಬೈಯಪ್ಪನಹಳ್ಳಿ-ಕೆ.ಆರ್‌.ಪುರ ಹಾಗೂ ಕೆಂಗೇರಿ-ಚಲ್ಲಘಟ್ಟ ನಡುವಿನ ಸಂಚಾರ ಆರಂಭವಾದ ಬಳಿಕ ಮೆಟ್ರೋದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ಕಳೆದ ಎರಡು ದಿನಗಳಿಂದ ಪ್ರಯಾಣಿಕರ ಸಂಖ್ಯೆ 7 ಲಕ್ಷ ಮೀರಿದೆ. ಗುರುವಾರವೂ 7,01,267 ಪ್ರಯಾಣಿಕರು ಸಂಚರಿಸಿದ್ದಾರೆ. ಅದರಲ್ಲೂ, ಸಂಚಾರ ದಟ್ಟಣೆ ಸಂದರ್ಭದಲ್ಲಿ ಪ್ರಯಾಣಿಕರು ಸೀಟು ಹೋಗಲಿ, ನಿಂತುಕೊಂಡು ಪ್ರಯಾಣಿಸುವುದೂ ಸಾಧ್ಯವಾಗದಷ್ಟು ರೈಲುಗಳು ತುಂಬುತ್ತಿವೆ. ಹೀಗಾಗಿ ಬಿಎಂಆರ್‌ಸಿಎಲ್‌ ಪ್ರಯಾಣಿಕರ ದಟ್ಟಣೆಯಿರುವ ಮೆಟ್ರೋ ನಿಲ್ದಾಣಗಳ ನಡುವೆ 3 ನಿಮಿಷಕ್ಕೊಂದರಂತೆ ರೈಲುಗಳನ್ನು ಸಂಚರಿಸುತ್ತಿದೆ. ಆದರೂ ಪ್ರಯಾಣಿಕರ ದಟ್ಟಣೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ.

ನನ್ನ ಬಗ್ಗೆ ತೀರ್ಪು ನೀಡಲು ಕಟೀಲ್‌, ಎಚ್‌ಡಿಕೆ ನ್ಯಾಯಾಧೀಶರೆ?: ಡಿಕೆಶಿ

ನಮ್ಮ ಮೆಟ್ರೋ 45 ಕಿ.ಮೀ. ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ 50 ರೈಲುಗಳನ್ನು ಹೊಂದಿತ್ತು. ಇದೀಗ 73 ಕಿ.ಮೀ. ಆದಾಗ ಕೇವಲ ಏಳು ರೈಲುಗಳು ಹೆಚ್ಚಾಗಿವೆ. ಪ್ರಸ್ತುತ ಬಿಎಂಆರ್‌ಸಿಎಲ್‌ 57 ರೈಲುಗಳನ್ನು ಹೊಂದಿದ್ದು, ಅವುಗಳಲ್ಲಿ 33 ನೇರಳೆ ಮಾರ್ಗಕ್ಕೆ ಹಾಗೂ 24 ಹಸಿರು ಮಾರ್ಗಕ್ಕೆ ನಿಯೋಜನೆ ಆಗಿವೆ. ಐದು ರೈಲುಗಳನ್ನು ನಿರ್ವಹಣೆಗೆ ಮೀಸಲಿಡಬೇಕಾಗುತ್ತದೆ. ಹೀಗಾಗಿ ನೇರಳೆ ಮಾರ್ಗದಲ್ಲಿ 30 ಹಾಗೂ 22 ರೈಲುಗಳು ಹಸಿರು ಮಾರ್ಗದಲ್ಲಿ ನಿತ್ಯ ಸಂಚರಿಸುತ್ತವೆ. ಪ್ರಯಾಣಿಕರ ದಟ್ಟಣೆ ಆಧರಿಸಿ ರೈಲುಗಳ ಸಂಚಾರ ಸಮಯವನ್ನು ಕಡಿಮೆಗೊಳಿಸಲಾಗುತ್ತಿದೆ.

click me!