ಧಾರವಾಡ: ಬಾಲ ಕಾರ್ಮಿಕರು ಪತ್ತೆಯಾದ್ರೆ, ಮಾಲೀಕರೊಂದಿಗೆ ಪಾಲಕರ ವಿರುದ್ಧವು ಎಫ್ಐಆರ್, ಡಿಸಿ ದಿವ್ಯ ಪ್ರಭು

By Girish Goudar  |  First Published Jun 6, 2024, 7:32 PM IST

ಕಾರ್ಮಿಕ ಇಲಾಖೆ ಅಧಿಕಾರಿಗಳು ಇತರ ಇಲಾಖೆ ಅಧಿಕಾರಿಗಳ ಸಹಕಾರ ಸಮನ್ವಯದಲ್ಲಿ ಇಟ್ಟಂಗಿ ಬಟ್ಟಿ, ಹೊಟೆಲ್, ಬೇಕರಿ, ಖಾನಾವಳಿ ಸೇರಿದಂತೆ ಇತರ ಉದ್ಯಮ ಸ್ಥಳಗಳ ಮೇಲೆ ನಿರಂತರ ದಾಳಿ ಮಾಡಿ, ಮಕ್ಕಳನ್ನು ರಕ್ಷಸಬೇಕು: ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು 
 


ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ(ಜೂ.06):  ಕಾರ್ಮಿಕ ಇಲಾಖೆ ಅಧಿಕಾರಿಗಳು ಇನ್ನೂ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಬಾಲ ಕಾರ್ಮಿಕರು ಪತ್ತೆಯಾದ ಪ್ರಕರಣಗಳಲ್ಲಿ ದುಡಿಸಿಕೊಳ್ಳುವ ಮಾಲೀಕನೊಂದಿಗೆ ಪತ್ತೆಯಾದ ಮಕ್ಕಳ ಪಾಲಕರ ವಿರುದ್ಧವು ಪ್ರಕರಣ ದಾಖಲಿಸಬೇಕು. ಮತ್ತು ಅವರ ವಿರುದ್ಧ ಸಹ ಕ್ರಮಕೈಗೊಳ್ಳಬೇಕು. ಮಾಲೀಕ ಮತ್ತು ಪಾಲಕ ಇಬ್ಬರನ್ನು ಜವಾಬ್ದಾರಗೊಳಿಸಿದಾಗ ಇದರ ಗಂಭೀರತೆ ಅರ್ಥವಾಗಿ ಬಾಲಕಾರ್ಮಿಕ ಪದ್ಧತಿ ನಿಯಂತ್ರಣವಾಗುತ್ತದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಮತ್ತು ಟಾಸ್ಕ್‌ಪೋರ್ಸ್‌ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದ್ದಾರೆ. 

Tap to resize

Latest Videos

ಇಂದು(ಗುರುವಾರ) ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಕಾರ್ಯಕಾರಿ ಸಮಿತಿ ಸಭೆ ಮತ್ತು ಜಿಲ್ಲಾ ಟಾಸ್ಕ್‌ಪೋರ್ಸ್‌ ಸಮಿತಿ ಸಭೆ ಜರುಗಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿ ದೊಡ್ಡದು ಇಲ್ಲಿನ ಸಣ್ಣ, ಮಧ್ಯಮ ಉದ್ಯಮಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಬಳಕೆ ಮಾಡಿಕೊಳ್ಳುತ್ತಾರೆ. ಇದರಿಂದ ಮಕ್ಕಳ ಶೈಕ್ಷಣಿಕ, ದೈಹಿಕ ಬೆಳವಣಿಗೆ ಕುಂಠಿತವಾಗಿ, ಪ್ರಗತಿಯಿಂದ ಹಿಂದೆ ಉಳಿಯುತ್ತಾರೆ. ಆದ್ದರಿಂದ ಕಾರ್ಮಿಕ ಇಲಾಖೆ ಅಧಿಕಾರಿಗಳು ಇತರ ಇಲಾಖೆ ಅಧಿಕಾರಿಗಳ ಸಹಕಾರ ಸಮನ್ವಯದಲ್ಲಿ ಇಟ್ಟಂಗಿ ಬಟ್ಟಿ, ಹೊಟೆಲ್, ಬೇಕರಿ, ಖಾನಾವಳಿ ಸೇರಿದಂತೆ ಇತರ ಉದ್ಯಮ ಸ್ಥಳಗಳ ಮೇಲೆ ನಿರಂತರ ದಾಳಿ ಮಾಡಿ, ಮಕ್ಕಳನ್ನು ರಕ್ಷಸಬೇಕು ಎಂದು ಹೇಳಿದರು. 

ಧಾರವಾಡದಲ್ಲಿ ದಾಖಲೆಯ 5ನೇ ಗೆಲುವು ಸಾಧಿಸಿದ ಜೋಶಿ..!

ರೇಡ್ ಮಾಡಿದಾಗ ಸಿಗುವ ಮಕ್ಕಳಿಗೆ ಶಿಕ್ಷಣ, ವಸತಿ ನಿಲಯ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸಿರಿ ಸರಕಾರದಿಂದ ಅನುಮತಿ ಪಡೆದು ಮಕ್ಕಳ ಉತ್ತಮ ಓದಿಗೆ ಅಗತ್ಯ ಸೌಲಭ್ಯ ಕಲ್ಪಿಸೋಣ. ಮಕ್ಕಳು ಶಿಕ್ಷಣ ಪಡೆಯುವುದು ಅವರ ಹಕ್ಕು ಅವರ ಹಕ್ಕು ವ್ಯರ್ಥವಾಗದಂತೆ ಇಲಾಖೆಗಳು ಕೆಲಸ ಮಾಡಬೇಕು ಪತ್ತೆ ಹಚ್ಚುವ ಪ್ರತಿ ಬಾಲ ಕಾರ್ಮಿಕರನ ಕುರಿತು ಒಂದು ಅಧ್ಯಯನ ಮಾಡಿ ಬಾಲ ಕಾರ್ಮಿಕತ್ವಕ್ಕೆ ನಿಖರವಾದ ಕಾರಣಗಳು ಮತ್ತು ಅದಕ್ಕೆ ಪರಿಹಾರಗಳನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಗುರುತಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು. 

ಕಿಶೋರ ಕಾರ್ಮಿಕರಿಗೆ ಮತ್ತು ಪಾಲಕರಿಗೆ ಬಾಲಕಾರ್ಮಿಕ ಕಾಯ್ದೆ ಕುರಿತು ಜಾಗೃತಿ ಮೂಡಿಸಬೇಕು ಕೌಶಲ್ಯಯುತ ತರಬೇತಿಗಳನ್ನು ನೀಡಬೇಕು. ಅವರ ಪಾಲಕರಿಗೆ ಸರಕಾರದ ಯೋಜನೆಗಳ ಮುಖಾಂತರ ಸ್ವಯಂ ಉದ್ಯೋಗ ಹೊಂದಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಬಾಲಕಾರ್ಮಿಕರ ಶಿಕ್ಷಣಕ್ಕೆ ಒತ್ತು ನೀಡಬೇಕು ಶಾಲಾ ಶಿಕ್ಷಣ ಇಲಾಖೆಯು ಶಾಲೆಗೆ ಸೇರಿದ ಮಕ್ಕಳ ಬಗ್ಗೆ ಕಾಳಜಿವಹಿಸಬೇಕು. ಅದರೊಂದಿಗೆ ಬಾಲಕಾರ್ಮಿಕರನ್ನು ಶಾಲೆಗೆ ದಾಖಲಿಸಿದಾಗ ಹೆಚ್ಚು ಜಾಗೃತಿ ವಹಿಸಬೇಕು ಮಕ್ಕಳ ಸಹಾಯವಾಣಿ 1098 ರ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಜನರಿಗೆ ತಲುಪಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು. 

ಬಾಲಕಾರ್ಮಿಕ ಪದ್ಧತಿ ತಡೆಗಟ್ಟಲು ತಹಶೀಲ್ದಾರ ಅಧ್ಯಕ್ಷತೆಯಲ್ಲಿ ತಾಲೂಕು ಟಾಸ್ಕಪೋರ್ಸ ಸಮಿತಿ ಇದೆ ಜಿಲ್ಲೆಯಲ್ಲಿ ತಾಲೂಕು ಟಾಸ್ಕಪೋರ್ಸ ಸಮಿತಿಗಳು ವಿವಿಧ ಸ್ಥಳಗಳಲ್ಲಿ ಸುಮಾರು 720 ತಪಾಸಣೆ ಮಾಡಿದ್ದಾರೆ ಎಂದು ವರದಿ ಸಲ್ಲಿಸಿದ್ದಿರಿ. ಇದು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಆಗಬೇಕೆಂದು ತಿಳಿಸಿದರು. 

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಅವರು ಮಾತನಾಡಿ, ಮಾರ್ಕೆಟ್, ಸರ್ಕಲ್, ಬಸನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಮಹಿಳೆಯರು ಚಿಕ್ಕಮಕ್ಕಳನ್ನು ಮೈಗೆ ಕಟ್ಟಿಕೊಂಡು ಭೀಕ್ಷೆ ಬೇಡುತ್ತಾರೆ. ಇದನ್ನು ನಿಯಂತ್ರಿಸಬೇಕು.ಶಾಲೆಗಳಿಗೆ ಓದಲು ಬಾಲ ಕಾರ್ಮಿಕರನ್ನು ಸೇರಿಸಿದ ಬಗ್ಗೆ ಮಾಹಿತಿ ನೀಡಿದರೆ, ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಲು ಸಹಾಯವಾಗುತ್ತದೆ ಎಂದು ಅವರು ಹೇಳಿದರು. 

ಕೆಲವು ಪ್ರತಿಭಟನೆ ಚಳುವಳಿಗಳಲ್ಲಿ ಅನಗತ್ಯವಾಗಿ ಶಾಲಾ-ಕಾಲೇಜು ಮಕ್ಕಳ ಬಳಕೆ ಆಗುತ್ತಿದೆ. ಇದನ್ನು ನಿಲ್ಲಿಸಬೇಕೆಂದು ಅವರು ಹೇಳಿದರು.ಸಹಾಯಕ ಕಾರ್ಮಿಕ ಆಯುಕ್ತೆ ಶ್ವೇತಾ ಸಂಗಮ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಬಾಲಕಾರ್ಮಿಕರ ಪತ್ತೆಗಾಗಿ ನಿರಂತರ ತಪಾಸಣೆಯೊಂದಿಗೆ ಕಳೆದ ವರ್ಷ 27 ದಿಡೀರ್ ದಾಳಿಗಳನ್ನು ಮತ್ತು ಪ್ರಸಕ್ತ ವರ್ಷ 34 ಅನಿರೀಕ್ಷಿತ ದಾಳಿಗಳನ್ನು ಕೈಗೊಳ್ಳಲಾಗಿದೆ 35 ಮಕ್ಕಳನ್ನು ರಕ್ಷಿಸಲಾಗಿದೆ. ಪ್ರಸಕ್ತ ವರ್ಷ ಏಳು ಪ್ರಕರಣ ದಾಖಲಿಸಿ 1.10 ಲಕ್ಷ ದಂಡ ವಿಧಿಸಲಾಗಿದೆ ಎಂದು ತಿಳಿಸಿದರು. 

ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹದಿಂದ ಸರ್ಕಾರ ಪತನ: ಜಗದೀಶ್‌ ಶೆಟ್ಟರ್‌

ಮಕ್ಕಳ ಹಾಗೂ ಸಾರ್ವಜನಿಕರ ಜಾಗೃತಿಗಾಗಿ ಬೀದಿ ನಾಟಕ, ಗೋಡೆಬರಹ, ಕರಪತ್ರ, ಕಾನೂನು ಅರಿವು-ನೆರವು ಕಾರ್ಯಕ್ರಮ, ತರಬೇತಿ ಕಾರ್ಯಕ್ರಮಗಳನ್ನು, ಜಿಲ್ಲೆಯಲ್ಲಿ ನಿರಂತರವಾಗಿ ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು. ಬರುವ ಜೂನ 12 ರಂದು ಜಿಲ್ಲೆಯಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಿಸಲಾಗುತ್ತಿದೆ. ಬಾಲಕಾರ್ಮಿಕ ಮುಕ್ತ ಜಿಲ್ಲೆ ಆಗಿಸುವ ನಿಟ್ಟಿನಲ್ಲಿ ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಸಹಾಯಕ ಕಾರ್ಮಿಕ ಆಯುಕ್ತೆ ಶ್ವೇತಾ ಸಂಗಮ ತಿಳಿಸಿದರು. 

ಜಿಲ್ಲಾ ಬಾಲಕಾರ್ಮಿಕ ಸಂಘದ ಯೋಜನಾ ಅಧಿಕಾರಿ ಬಸವರಾಜ ಪಂಚಾಕ್ಷರಿಮಠ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಹೆಸ್ಕಾಂ ಇಇ ಎಂ.ಎಂ. ನದಾಫ, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ, ಕಾರ್ಮಿಕ ಅಧಿಕಾರಿಗಳಾದ ಮಾರಿಕಾಂಬಾ, ಲಲಿತಾ ಸಾತೆನಹಳ್ಳಿ ಸೇರಿದಂತೆ ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕರು, ಪೊಲೀಸ್ ಅಧಿಕಾರಿಗಳು ಹಾಗೂ ಇತರ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

click me!