
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.20): ಕೊಡಗು ಎಂದ್ರೆ ದಕ್ಷಿಣ ಕಾಶ್ಮೀರ, ಭಾರತದ ಸ್ವಿಡ್ಜರ್ಲ್ಯಾಂಡ್ ಎಂದೆಲ್ಲಾ ಹೆಸರು ವಾಸಿಯಾಗಿತ್ತು. ಹಾಗಾಗಿಯೇ ಇಲ್ಲಿನ ಕೂಲ್ ಕೂಲ್ ವಾತಾವರಣವನ್ನು ಎಂಜಾಯ್ ಮಾಡಬೇಕೆಂಬ ದೃಷ್ಟಿಯಿಂದ ಹೊರ ಜಿಲ್ಲೆ, ರಾಜ್ಯಗಳಿಂದಲೂ ಪ್ರವಾಸಿಗರು ಕೊಡಗಿಗೆ ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ಬೇಸಿಗೆಗೂ ಮುನ್ನವೇ ಕೊಡಗಿನ ಪ್ರಕೃತಿಗೆ ತದ್ವಿರುದ್ಧವಾಗಿ ರಣ ಬಿಸಿಲು ಹೊಡೆಯುತ್ತಿದ್ದು ಜನರು ತತ್ತರಿಸುವಂತೆ ಆಗಿದೆ. ಅದರಲ್ಲೂ ಮಡಿಕೇರಿ ಎಂದರೆ ಮಂಜಿನ ನಗರಿ ಎಂದೇ ಖ್ಯಾತಿ ಪಡೆದಿತ್ತು. ಚಳಿಗಾಲ ಮುಗಿಯುವವರೆಗೆ ಅಂದರೆ ಫೆಬ್ರವರಿ ಅಂತ್ಯದವರೆಗೂ ಸಾಮಾನ್ಯವಾಗಿ ಮಂಜಿನ ವಾತಾವರಣ ಕೊಡಗಿನಲ್ಲಿ ಇರುತಿತ್ತು.
ಆದರೆ ಈ ಬಾರಿ ಫೆಬ್ರವರಿ ಮಧ್ಯಭಾಗದಲ್ಲಿಯೇ ಮಂಜಿನ ಮುಖ ನೋಡಲು ಅವಕಾಶ ಇಲ್ಲ ಎನ್ನುವಂತೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಜಿಲ್ಲೆಯಲ್ಲಿ ಎತ್ತೇಚ್ಛ ಮಳೆ ಸುರಿದಿತ್ತು. 2024 ರ ಏಪ್ರಿಲ್ ತಿಂಗಳಿನಿಂದಲೇ ಸಾಕಷ್ಟು ಪ್ರಮಾಣದಲ್ಲಿಯೇ ಪೂರ್ವ ಮುಂಗಾರು ಮಳೆ ಸುರಿದಿತ್ತು. ಜೂನ್ ಆರಂಭದಿಂದಲೇ ಮುಂಗಾರು ಮಳೆ ಶುರುವಾಗಿ ಫೆಂಗಲ್ ಚೆಂಡಮಾರುತ್ತ ಸೇರಿದಂತೆ ಸೈಕ್ಲಾನ್ಗಳ ಪರಿಣಾಮವಾಗಿ ಡಿಸೆಂಬರ್ ತಿಂಗಳವರೆಗೂ ಮಳೆ ಸುರಿದಿತ್ತು. ಆ ಬಳಿಕ ಹಿಂಗಾರು ಮಳೆ ಎಂದು ಒಂದೇ ಒಂದು ಹನಿ ಬೀಳಲಿಲ್ಲ. ಇದರಿಂದಾಗಿ ಕೊಡಗಿನ ವಾತಾವರಣ ಮತ್ತು ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿದ್ದು, ಬಿಸಿಲಿನ ತಾಪಮಾನ ಏರಿಕೆಯಾಗಿದೆ.
ಬ್ರಿಟಿಷರ ವಿರುದ್ಧ ಸಾಹಿತ್ಯ ರಚಿಸಿದ್ದ ಪಂಜೆ ಮಗೇಶರಾಯರು: ಸಾಹಿತಿ ಅರವಿಂದ ಚೊಕ್ಕಾಡಿ ಅಭಿಮತ
ಜೊತೆಗೆ ಕೊಡಗಿನಲ್ಲಿ ವರ್ಷದಿಂದ ವರ್ಷಕ್ಕೆ ವಿವಿಧ ಕಾರಣಗಳಿಂದ ಅರಣ್ಯದ ಪ್ರಮಾಣವೂ ಕಡಿಮೆಯಾಗುತ್ತಿರುವುದರಿಂದ ಹೀಗೆ ತಾಪಮಾನ ಜಾಸ್ತಿಯಾಗುವುದಕ್ಕೆ ಕಾರಣ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಕೊಡಗು ಜಿಲ್ಲೆಯಲ್ಲಿ ಎಂತಹದ್ದೇ ಬಿರು ಬೇಸಿಗೆಯಲ್ಲಾದರೂ 25 ರಿಂದ 28 ರಷ್ಟು ತಾಪಮಾನ ದಾಖಲಾದರೆ ಅದೇ ಹೆಚ್ಚು ಎನ್ನುವಂತಹ ತಂಪಾದ ವಾತಾವರಣ ಇರುತಿತ್ತು. ಆದರೀಗ ಫೆಬ್ರವರಿಯಲ್ಲೇ 32 ರಿಂದ 33 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ದಾಖಲಾಗುತ್ತಿದೆ. ಬೆಳಗ್ಗಿನ ಸಮಯದಲ್ಲಿ ಕೊಡಗಿನಲ್ಲಿ ಹೆಚ್ಚೆಂದರೆ 14 ರಿಂದ 15 ರಷ್ಟು ದಾಖಲಾಗುತ್ತಿದ್ದ ತಾಪಮಾನ, ಈಗ ಬೆಳಿಗ್ಗೆ 7 ಗಂಟೆಗೆ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ.
ಮಧ್ಯಾಹ್ನ 2 ಗಂಟೆಯ ಅವಧಿ ಎನ್ನುವಷ್ಟರಲ್ಲಿ ಬರೋಬ್ಬರಿ 32 ರಿಂದ 33 ಡಿಗ್ರಿ ಸೆಲ್ಸಿಯನ್ಸ್ ಬಿಸಿಲು ತತ್ತರಿಸುವಂತೆ ಮಾಡುತ್ತಿದೆ. ಹೀಗಾಗಿ ಜನರು ಮನೆಬಿಟ್ಟು ರಸ್ತೆಗಳಲ್ಲಿ ಓಡಾಡಬೇಕಾದರೆ ಭಯಪಡುವಂತೆ ಆಗಿದೆ. ಜೊತೆಗೆ ಎಳನೀರು, ಜ್ಯೂಸ್, ಮಜ್ಜಿಗೆ, ಕಲ್ಲಂಗಡಿ ಸೇರಿದಂತೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಆದರೆ ಇಷ್ಟೊಂದು ಬಿಸಿಲಿನ ಪರಿಣಾಮವೋ ಏನೋ ಎಳನೀರಿನ ದರವೂ ಕೂಡ ಜಾಸ್ತಿಯಾಗಿದೆ. ಇದುವರೆಗೆ 40 ರೂಪಾಯಿ ಇದ್ದ ಎಳನೀರಿನ ಬೆಲೆ ಈಗ 50 ರೂಪಾಯಿಗೆ ತಲುಪಿದೆ.
ಮದುವೆ ಸೇರಿ ಇತರೆ ಸಮಾರಂಭಗಳಿಗೆ ಮದ್ಯ ಖರೀದಿಸಲು ಸಾಂದರ್ಭಿಕ ಸನ್ನದು ಕಡ್ಡಾಯ: ಕೊಡಗಿನಲ್ಲಿ ತೀವ್ರ ವಿರೋಧ
ತಂಪು ಪಾನೀಯಗಳ ಬೆಲೆ ಕೂಡ ಜಾಸ್ತಿಯಾಗಿದ್ದು ಜನರು ಅವುಗಳನ್ನು ಕುಡಿಯುವುದೋ ಬೇಡವೋ ಎಂದು ಚಿಂತಿಸುವಂತಾಗಿದೆ. ಬಿಸಿಲಿನಲ್ಲಿ ಓಡಾಡಲು ಸಾಧ್ಯವಾಗದೆ ಮಳೆಗಾಲದಲ್ಲಿ ಕೊಡೆಗಳ ಮೊರೆ ಹೋದಂತೆ ಬಿಸಿಲಿನಲ್ಲೂ ಕೊಡೆಗಳ ಮೊರೆ ಹೋಗುವಂತೆ ಆಗಿದೆ. ಹೂವು, ಹಣ್ಣುಗಳು ಸೇರಿದಂತೆ ಬೀದಿ ಬದಿಯ ವ್ಯಾಪಾರಿಗಳು ಕೊಡೆ ಹಿಡಿದು ಕುಳಿತು ವ್ಯಾಪಾರ ಮಾಡುವಂತಾಗಿದೆ. ಈ ಕುರಿತು ಮಾತನಾಡಿರುವ ಸ್ಥಳೀಯರು ನಾವು ಹಿಂದೆಂದೂ ಇಷ್ಟೊಂದು ಪ್ರಮಾಣದ ಬಿಸಿಲನ್ನು ಫೆಬ್ರವರಿ ತಿಂಗಳಿನಲ್ಲಿ ನೋಡಿರಲಿಲ್ಲ. ಆದರೆ ಈ ಬಾರಿ ಈಗಾಗಲೇ ಇಷ್ಟು ಬಿಸಿಲಿದ್ದು, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಗತಿಯೇನು ಎಂದು ಚಿಂತಿಸುತ್ತಿದ್ದಾರೆ.