ರಾಯಚೂರು: ಕೊರೋನಾ ಆತಂಕದ ಮಧ್ಯೆ ಪ್ರವಾಹ ಭೀತಿ

By Kannadaprabha NewsFirst Published Jul 14, 2020, 2:53 PM IST
Highlights

ಕೃಷ್ಣಾ ನದಿಗೆ ಆಲಮಟ್ಟಿ ಜಲಾಶಯದಿಂದ ನೀರು, ನದಿಪಾತ್ರದಲ್ಲಿ ಎಚ್ಚರಿಕೆ| ಜಿಲ್ಲಾಡಳಿತಕ್ಕೆ ಪ್ರವಾಹ ಸನ್ನಿವೇಶ ನಿಭಾಯಿಸುವ ಹೊರೆ| ನದಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದು ತೆಪ್ಪ ಹಾಕಿ ನದಿ ದಾಟಬಾರದೆಂದು ಎಚ್ಚರಿಕೆ ನೀಡಿದ ಜಿಲ್ಲಾಡಳಿತ|
 

ರಾಮಕೃಷ್ಣ ದಾಸರಿ

ರಾಯಚೂರು(ಜು.14): ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಮತ್ತೆ ಲಾಕ್‌ಡೌನ್‌ ಮಾಡಬೇಕು ಎನ್ನುವ ಚರ್ಚೆಗಳು ಸಾಗಿವೆ. ಕೊರೋ​ನಾ ಆತಂಕದ ನಡುವೆ ಕೃಷ್ಣಾ ನದಿಗೆ ಪ್ರವಾಹ ಭೀತಿಯು ಎದುರಾಗುವ ಸನ್ನಿವೇಶ ನಿರ್ಮಾಣಗೊಂಡಿದ್ದು, ಕೊರೋನಾ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜಿಲ್ಲಾಡಳಿತಕ್ಕೆ ಪ್ರವಾಹ ಸನ್ನಿವೇಶವನ್ನು ಸಹ ನಿಭಾಯಿಸುವ ಹೊರೆ ಬಿದ್ದಂತಾಗಿದೆ. 

ಕೃಷ್ಣಾ ನದಿ ಪಾತ್ರದ ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಇದರಿಂದ ಕೃಷ್ಣಾನದಿಗೆ ಅಡ್ಡಲಾಗಿ ನಿರ್ಮಿಸಿದ ಆಲಮಟ್ಟಿಯಿಂದ ಬಸವಸಾಗರ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡಲಾಗುತ್ತಿದೆ. ಭಾನುವಾರ ನಾರಾಯಣಪುರ ಜಲಾಶಯದಿಂದ 4 ಕ್ರಸ್ಟ್‌ಗೇಟ್‌ಗಳ ಮೂಲಕ 28,480 ಕ್ಯುಸೆಕ್‌, ಅದೇ ರೀತಿ ಸೋಮವಾರ ಏಳು ಗೇಟ್‌ಗಳ ಮೂಲಕ 46 ಸಾವಿರ ಕ್ಯುಸೆಕ್‌ ನೀರು ಹರಿದು ಬಿಡಲಾಗಿದೆ. 

ಆಲಮಟ್ಟಿ ಡ್ಯಾಂ: 45000 ಕ್ಯುಸೆಕ್‌ ಹೊರಹರಿವು, ನದಿ ತೀರಕ್ಕೆ ಹೋಗದಂತೆ ಎಚ್ಚರಿಕೆ

ಕಳೆದ ಎರಡು ದಿನಗಳಿಂದ ನದಿಯಲ್ಲಿ ನೀರಿನ ಪ್ರಮಾಣವು ಜಾಸ್ತಿಯಾಗುತ್ತಿದ್ದು, ಇದರಿಂದಾಗಿ ಜಿಲ್ಲೆ ದೇವದುರ್ಗ, ಲಿಂಗಸುಗೂರು ಮತ್ತು ರಾಯಚೂರು ತಾಲೂಕಿನ ನದಿನ ಪಾತ್ರದ ನೂರಾರು ಗ್ರಾಮಗಳು, ನಡುಗಡ್ಡೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ ಜಲಾಶಯದಿಂದ ನದಿಗೆ ಸುಮಾರು ಒಂಬತ್ತು ಲಕ್ಷ ಕ್ಯುಸೆಕ್‌ ನೀರು ಹರಿಸಲಾಗಿತ್ತು. ಇದರಿಂದಾಗಿ ಹತ್ತಾರು ಹಳ್ಳಿಗಳು ಮುಳುಗಡೆಯಾಗಿದ್ದವು. ನಡುಗಡ್ಡೆ ಪ್ರದೇಶದ ಜನರನ್ನು ಸುರಕ್ಷಿತವಾಗಿ ಸಂರಕ್ಷಿಸಲಾಗಿತ್ತು. ಇದೀಗ ಕೊರೋನಾ ಕಾಲದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವುದು ಕಳೆದ ಪ್ರವಾಹಕ್ಕಿಂತ ನಿರ್ವಹಣೆಯ ಪರಿಸ್ಥಿತಿ ಮತ್ತಷ್ಟುಭಾರವಾಗಲಿದೆ.

ಅಧಿಕಾರಿಗಳ ಭೇಟಿ:

ಜಿಲ್ಲೆ ಲಿಂಗಸುಗೂರು ತಾಲೂಕಿನ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಬಿಟ್ಟಿದ್ದರಿಂದ ಸೋಮವಾರ ನಡುಗಡ್ಡೆ ಹಾಗೂ ನದಿ ತೀರದ ಗ್ರಾಮಗಳಿಗೆ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಡಿವೈಎಸ್‌ಪಿ ಎಸ್‌.ಎಸ್‌. ಹುಲ್ಲೂರು, ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐ ಪ್ರಕಾಶರೆಡ್ಡಿ ಡಂಬಳ ಅವರು ನಡುಗಡ್ಡೆ ಗ್ರಾಮಗಳಾದ ಜಲದುರ್ಗ, ಹಂಚಿನಾಳ, ಯಳಗುಂದಿ, ಯರಗೋಡಿ, ಕಡದರಗಡ್ಡಿ ಹಾಗೂ ಶೀಲಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ನದಿಯಲ್ಲಿ ನೀರಿನ ಮಟ್ಟಹೆಚ್ಚಾಗುತ್ತಿದ್ದು ಜನ-ಜಾನುವಾರಗಳು ನದಿಗೆ ಇಳಿಯಬಾರದೆಂದು ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ನಡುಗಡ್ಡೆಗಳಾದ ಕರಕಲದೊಡ್ಡಿ, ಮಾದರಗಡ್ಡಿ ಹಾಗೂ ಹೊಂಕಮ್ಮನದೊಡ್ಡಿಯ ಜನತೆಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದು ತೆಪ್ಪ ಹಾಕಿ ನದಿ ದಾಟಬಾರದೆಂದು ಎಚ್ಚರಿಕೆ ನೀಡಿದರು.
 

click me!