ಎಲ್ಲೆಂದರಲ್ಲಿ ಪಿಪಿಇ ಕಿಟ್ ಎಸೆದು ಪರಿಸರ ಹಾಳು| ಮೇಡಿ ಅಗ್ರಹಾರದ ಚಿತಾಗಾರದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸೋಂಕು ಹಬ್ಬುವ ಭೀತಿ| ನಿತ್ಯ 40ರಿಂದ 50ಕ್ಕೂ ಹೆಚ್ಚು ಕೊರೋನಾ ಸೋಂಕಿತರ ಶವಗಳನ್ನು ಹೊತ್ತು ಬರುತ್ತಿರುವ ಆ್ಯಂಬುಲೆನ್ಸ್‌ಗಳು| ಸರ್ಕಾರ ಈ ಬಗ್ಗೆ ಗಮನ ಹರಿಸಬೇಕೆಂದು ಗ್ರಾಮಸ್ಥರ ಆಗ್ರಹ|
ಬೆಂಗಳೂರು(ಮೇ.03): ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರಕ್ಕೆ ಬಳಸಿದ ಹಾಸಿಗೆ, ದಿಂಬು, ಪಿಪಿಇ ಕಿಟ್ ಸೇರಿದಂತೆ ಇತರೆ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿರುವುದರಿಂದ ನಗರದ ಹೊರ ವಲಯದ ಮೇಡಿ ಅಗ್ರಹಾರದ ಚಿತಾಗಾರದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸೋಂಕು ಹಬ್ಬುವ ಭೀತಿ ಮನೆ ಮಾಡಿದೆ.
ಮೇಡಿ ಅಗ್ರಹಾರ- ವಡೇರಹಳ್ಳಿ ಸುತ್ತಮುತ್ತ 12ಕ್ಕೂ ಹೆಚ್ಚು ಗ್ರಾಮಗಳಿದ್ದು, ನಿತ್ಯ 40ರಿಂದ 50ಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳು ಕೊರೋನಾ ಸೋಂಕಿತರ ಶವಗಳನ್ನು ಹೊತ್ತು ಬರುತ್ತಿವೆ. ಅಂತ್ಯಸಂಸ್ಕಾರ ನಡೆಸಿದ ಬಿದಿರಿನ ಚಟ್ಟ, ರೋಗಿಯ ಮೇಲಿನ ಬಟ್ಟೆ, ಹಾಸಿಗೆ, ದಿಂಬುಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಚಿತಾಗಾರದ ಸುತ್ತಮುತ್ತ ಪರಿಸರ ಹಾಳು ಮಾಡಿ, ರೋಗ ಹರಡಲು ಇಲ್ಲಿನ ಸಿಬ್ಬಂದಿ ಕಾರಣರಾಗಿದ್ದಾರೆ.
undefined
ಸಾಲ ಮಾಡಿ ಅಂತ್ಯ ಸಂಸ್ಕಾರಕ್ಕೆ ಲಂಚ ಕೊಟ್ಟ ಮಹಿಳೆ: ಚಿತಾಗಾರ ಸಿಬ್ಬಂದಿಯ ಕ್ರೌರ್ಯ
ಜೊತೆಗೆ ಆಂಬುಲೆನ್ಸ್ ಸಿಬ್ಬಂದಿ ವಾಹನದಲ್ಲಿದ್ದ ಪ್ಲಾಸ್ಟಿಕ್ ಬಾಟಲ್, ಹೂವು, ಪಿಪಿಇ ಕಿಟ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಕೆಲ ಚಾಲಕರು ತಾಸುಗಟ್ಟಲೇ ಕಾಯುವ ಸಮಯದಲ್ಲಿ ಮದ್ಯಪಾನ ಮಾಡುತ್ತಿದ್ದಾರೆ. ಇದರಿಂದ ಇಡೀ ಪರಿಸರ ಹಾಳಾಗುವ ಜೊತೆಗೆ ಸೋಂಕಿನ ಭೀತಿ ಆವರಿಸಿದೆ. ಕೂಡಲೇ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸ್ಮಶಾನಕ್ಕೆ ಹೊಂದಿಕೊಂಡಂತೆ ಸ್ಲಂಬೋರ್ಡ್‌ಗೆ ಸೇರಿದ 450ಕ್ಕೂ ಹೆಚ್ಚು ಮನೆಗಳಿದ್ದು, ಅಲ್ಲಿನ ನಿವಾಸಿಗಳು ಆತಂಕದಲ್ಲಿ ದಿನಗಳನ್ನು ನೂಕುತ್ತಿದ್ದಾರೆ. ಈ ಸಂಬಂಧ ಗ್ರಾಪಂ ಅಧಿಕಾರಿಗಳಿಂದ ಹಿಡಿದು ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಈ ಕೂಡಲೇ ಇದರ ಬಗ್ಗೆ ಗಮನ ಹರಿಸದಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona