ಅತಿಯಾದ ಮಳೆಯಿಂದಾಗಿ ಮನೆಗಳಲ್ಲಿ ಸಾಮಗ್ರಿ, ಹೊಲದಲ್ಲಿನ ಬೆಳೆ ಕಳೆದುಕೊಂಡು ಸಂತ್ರಸ್ತರಾಗಿರುವ ಜನರಿಗೆ ಇದೀಗ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ
ಶಿವಾನಂದ ಗೊಂಬಿ
ಹುಬ್ಬಳ್ಳಿ(ಸೆ.11): ‘ಊರಾಗ ಎಲ್ರಿಗೂ ಕೆಮ್ಮು ನೆಗಡಿ ಬಂದೈತಿ.. ಗುಳಗಿ ನುಂಗಿ ನುಂಗಿ ಸಾಕಾಗೈತಿ..’ ಇದು ಅತಿವೃಷ್ಟಿಯಿಂದ ತೊಂದರೆ ಅನುಭವಿಸಿದ ತಾಲೂಕಿನ ಮಂಟೂರ ಗ್ರಾಮದ ನಿವಾಸಿ ಮಂಜುನಾಥ ಹೇಳುವ ಮಾತು. ಅತಿಯಾದ ಮಳೆಯಿಂದಾಗಿ ಮನೆಗಳಲ್ಲಿ ಸಾಮಗ್ರಿ, ಹೊಲದಲ್ಲಿನ ಬೆಳೆ ಕಳೆದುಕೊಂಡು ಸಂತ್ರಸ್ತರಾಗಿರುವ ಜನರಿಗೆ ಇದೀಗ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಅದಕ್ಕೆ ತಕ್ಕಂತೆ ಇದೀಗ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಬಹುತೇಕ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡಿವೆ.
ಈ ವರ್ಷ ಮೇ ತಿಂಗಳಲ್ಲೇ ವರುಣನ ಅಬ್ಬರತೆ ಶುರುವಾಗಿದೆ. ಬಳಿಕ ಜೂನ್, ಜುಲೈನಲ್ಲಿ ಮಳೆ ಸುರಿದಿದೆ. ಇನ್ನೂ ಕಳೆದ ವಾರ ಕುಂಭದ್ರೋಣ ಮಳೆಯಿಂದ ಹತ್ತಾರು ಗ್ರಾಮಗಳಿಗೆ ನೀರು ನುಗ್ಗಿತ್ತು. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಊರೊಳಗಿನ ಜನತೆ ರಾತ್ರಿಯನ್ನು ನಿದ್ದೆ ಇಲ್ಲದೇ ಕಳೆಯುವಂತಾಗಿತ್ತು. ಮಹಿಳೆಯರು, ಮಕ್ಕಳು, ವೃದ್ಧರು ಸಂಜೆ ವೇಳೆ ಮಳೆ ಶುರುವಾದರೆ ರಾತ್ರಿ ಮತ್ತೆ ಮನೆಗಳಿಗೆ ನೀರು ನುಗ್ಗುತ್ತದೆ ಎಂಬ ಭೀತಿಯಲ್ಲಿ ಗುಡಿ, ಸಮುದಾಯ ಭವನಗಳಿಗೆ ತೆರಳಿ ಮಲಗಿದ್ದಾರೆ.
ಧಾರವಾಡ: ಶೀಘ್ರದಲ್ಲೇ IIT CAMPUS ಉದ್ಘಾಟನೆ - ಪ್ರಲ್ಹಾದ್ ಜೋಶಿ
ಕೆಲ ಗ್ರಾಮಗಳಲ್ಲಿ ರಾತ್ರಿ ದೇವಸ್ಥಾನಗಳಲ್ಲಿ ಮಲಗಿ ಬೆಳಿಗ್ಗೆ ಎದ್ದು ಮನೆಗಳಿಗೆ ಬರುತ್ತಾರೆ. ಅಂತಹ ಸ್ಥಿತಿ ಹಲವು ಗ್ರಾಮಗಳಲ್ಲಿದೆ. ಹೀಗಾಗಿ ಮಳೆಯಲ್ಲೇ ನೆನೆದಿರುವುದರಿಂದ ನೆಗಡಿ, ಕೆಮ್ಮು, ಜ್ವರ ಮಾಮೂಲು ಎಂಬಂತಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೋ, ಮೆಡಿಕಲ್ ಶಾಪಿಗೋ ಹೋಗುವುದು ಮಾತ್ರೆ ಇಸಿದುಕೊಂಡು ಬಂದು ಸೇವಿಸಿ ಮಲಗುವುದು ಮಾಮೂಲಾಗಿದೆ.
ಸಹಜವಾಗಿ ಮಳೆ ನೀರು ಕುಡಿಯುವ ನೀರಲ್ಲಿ ಮಿಶ್ರಣವಾಗುವುದರಿಂದ ನೀರು ಕಲ್ಮಶವಾಗಿರುತ್ತದೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಜೋರಾಗಿದೆ. ಪ್ರವಾಹ ಪೀಡಿತ ಗ್ರಾಮಗಳಲ್ಲಿ ನೀರು ನಿಂತ ಪರಿಣಾಮ ಸೊಳ್ಳೆಗಳ ಕಾಟವೂ ವಿಪರೀತವಾಗಿದೆ. ಮಲೇರಿಯಾ, ಚಿಕೂನ್‌ಗುನ್ಯಾ, ವೈರಲ್ ಫಿವರ್, ವಾಂತಿ ಬೇಧಿ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ಆತಂಕ ಜನರಲ್ಲಿದೆ.
ಆರೋಗ್ಯ ಚಿಕಿತ್ಸಾ ಶಿಬಿರ:
ಇದೀಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗ್ರಾಮಗಳಲ್ಲಿ ಸಂಚರಿಸುತ್ತಿದ್ದಾರೆ. ಏನಾದರೂ ಆರೋಗ್ಯದ ಸಮಸ್ಯೆ ಎದುರಾದರೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ಕೊಡುವಂತೆ ಸೂಚಿಸಲಾಗುತ್ತಿದೆ. ಆದರೆ ಜಿಲ್ಲಾಡಳಿತವೇ ಮುಂಜಾಗ್ರತಾ ಕ್ರಮವಾಗಿ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸಾಮೂಹಿಕ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ನಡೆಸಬೇಕು. ಜತೆಗೆ ಗ್ರಾಪಂ ಕೂಡ ಫಾಗಿಂಗ್ ಮಾಡಿಸಲು, ನೀರು ನಿಲ್ಲದಂತೆ ನೋಡಿಕೊಳ್ಳಬೇಕಿದೆ. ಇದಕ್ಕಾಗಿ ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಬೇಕು. ಈ ಮೂಲಕ ಸಂತ್ರಸ್ತರಿಗೆ ನೆರವಾಗಬೇಕಿದೆ ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ.
ಅಡಬಿಟ್ಟಿ ಮತ್ತು ಲಂಚದ ಹಣದಲ್ಲಿ ಬಿಜೆಪಿ ಜನಸ್ಪಂದನಾ ಕಾರ್ಯಕ್ರಮ: ಗುಡುಗಿದ ಸಿದ್ದು
ಊರಾಗ ಎಲ್ಲರಿಗೂ ನೆಗಡಿ, ಕೆಮ್ಮು ಬಂದೈತಿ ನೋಡ್ರಿ. ಬಹಳಷ್ಟುಜನರಿಗೆ ಜ್ವರಾ ಕೂಡ ಬಂದೈತಿ. ಊರೆಲ್ಲ ನೀರು ನಿಂತು ತಂಪು ಹೆಚ್ಚಾಗೈತಿ. ಹೀಂಗಾಗಿ ಮಕ್ಕಳು- ಮರಿಗಳು, ವೃದ್ಧರು, ಹೆಣ್ಮಕ್ಕಳು ಜಡ್ಡಿಗೆ ಬಿದ್ದಾರ್ರಿ.. ಊರಾಗ ಡಾಕ್ಟ್ರು ಬಂದು ಚಿಕಿತ್ಸೆ ಕೊಟ್ಟರೆ ಚಲೋ ಆಗತೈತಿ ಅಂತ ಇಂಗಳಹಳ್ಳಿ ಗ್ರಾಮಸ್ಥ ಹನುಮಂತಪ್ಪ ವಡ್ಡರ ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗದ ಭೀತಿಯಂತೂ ಇದೆ. ಅದಕ್ಕೆ ತಕ್ಕಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಯಾರಿಗಾದರೂ ಆರೋಗ್ಯದ ಸಮಸ್ಯೆ ಕಂಡು ಬಂದರೆ ತಕ್ಷಣವೇ ಪಿಎಚ್‌ಸಿ ಕೇಂದ್ರಕ್ಕೆ ತೆರಳುವಂತೆ ಸೂಚಿಸಲಾಗುತ್ತಿದೆ. ಕಾಳಜಿ ಕೇಂದ್ರದಲ್ಲಿ ನಮ್ಮ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದೆ ಅಂತ ಡಿಎಚ್‌ಒ ಶಿವನಗೌಡ ಹೇಳಿದ್ದಾರೆ.