
ಬಡತನ, ಕಷ್ಟಗಳ ನಡುವೆಯೂ ಸಾಧನೆಯ ಕನಸು ಕಾಣುವವರಿಗೆ ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಕಲಬುರಗಿ ಜಿಲ್ಲೆಯ ವೈಷ್ಣವಿ ಧರಿ ಉತ್ತಮ ಉದಾಹರಣೆ. ಕೂಲಿ ಕೆಲಸ ಮಾಡಿ ಮಗಳನ್ನು ಓದಿಸುತ್ತಿರುವ ತಾಯಿಯ ಪರಿಶ್ರಮಕ್ಕೆ ಈಗ ಫಲ ಸಿಕ್ಕಿದೆ. ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಸಿಕೊಂಡ ವೈಷ್ಣವಿ, ಇದೀಗ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ನಿಡಗುಂದಾ ಗ್ರಾಮದ ವೈಷ್ಣವಿ ಧರಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆಯುವ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ (SGFI) ಅಂಡರ್-17 ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾಳೆ. ಪ್ರಸ್ತುತ ಕಲಬುರಗಿಯ ಎನ್‌ಎ ಕನ್ಯಾ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವೈಷ್ಣವಿ, ತಂಡದಲ್ಲಿ ಆಲ್‌ರೌಂಡರ್ ಆಗಿ ಸ್ಥಾನ ಪಡೆದಿದ್ದಾಳೆ.
ವೈಷ್ಣವಿಗೆ ತಂದೆ ಇಲ್ಲ. ತಾಯಿ ಮುತ್ತಮ್ಮ ನಿಡಗುಂದಾ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಮಗಳ ಶಿಕ್ಷಣಕ್ಕಾಗಿ ಆಕೆಯನ್ನು ಕಲಬುರಗಿಯ ವಿಶ್ವಲ್ ನಗರದಲ್ಲಿರುವ ತನ್ನ ಅಕ್ಕನ ಮನೆಯಲ್ಲಿ ಇರಿಸಿದ್ದಾರೆ. ಆರ್ಥಿಕ ಸಂಕಷ್ಟಗಳ ನಡುವೆಯೂ ಮಗಳ ಓದು ಮತ್ತು ಕ್ರೀಡಾ ಆಸಕ್ತಿಗೆ ಬೆಂಬಲ ನೀಡುತ್ತಿದ್ದಾರೆ.
ವೈಷ್ಣವಿಗೆ ಆರಂಭದಲ್ಲಿ ಕ್ರಿಕೆಟ್ ಬಗ್ಗೆ ಹೆಚ್ಚಿನ ತಿಳಿವಳಿಕೆ ಇರಲಿಲ್ಲ. 5ನೇ ತರಗತಿಯಲ್ಲಿ ಶಾಲೆಗೆ ಸೇರಿದ ಬಳಿಕ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ ಕೋಬಾಳ ಅವರ ಮೂಲಕ ಕ್ರಿಕೆಟ್ ಪರಿಚಯವಾಯಿತು. ನಂತರ ಎನ್‌ವಿ ಡಿಗ್ರಿ ಕಾಲೇಜು ಕ್ರಿಕೆಟ್ ಕ್ಲಬ್‌ನಲ್ಲಿ ತರಬೇತಿ ಪಡೆಯಲು ಆರಂಭಿಸಿದಳು. ಕೋಚ್‌ಗಳಾದ ಕೃಷ್ಣ, ನರೇಂದ್ರ, ಸಚಿನ್ ಹಾಗೂ ದೈಹಿಕ ಶಿಕ್ಷಕ ಸಂತೋಷ ಕೋಬಾಳ ಅವರ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ನಡೆಸಿದಳು. ಆರಂಭದಲ್ಲಿ ಕ್ರಿಕೆಟ್‌ನ ಗಂಧಗಾಳಿಯೂ ತಿಳಿಯದಿದ್ದ ಬಾಲಕಿ, ಇಂದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ವಿಶೇಷ.
ವೈಷ್ಣವಿ ಈಗಾಗಲೇ ಹಲವು ರಾಜ್ಯಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ತನ್ನ ಪ್ರತಿಭೆ ಪ್ರದರ್ಶಿಸಿದ್ದಾಳೆ.
- 2024-25: ಗೋಕಾಕ್‌ನಲ್ಲಿ ನಡೆದ ರಾಜ್ಯಮಟ್ಟದ ಎಸ್‌ಜಿಎಫ್‌ಐ ಅಂಡರ್-14 ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದಿದ್ದಳು.
- 2025-26: ಕೋಲಾರದಲ್ಲಿ ನಡೆದ ಅಂಡರ್-17 ವಿಭಾಗದ ಪಂದ್ಯಾವಳಿಯಲ್ಲಿ ಆಡಿದ್ದಳು.
- 2026-27: ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ನಡೆದ ರಾಜ್ಯಮಟ್ಟದ ಎಸ್‌ಜಿಎಫ್‌ಐ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ವಿಭಾಗೀಯ ಹಂತಕ್ಕೆ ಆಯ್ಕೆಯಾಗಿದ್ದಳು.
ಈ ಸಾಧನೆಯೇ ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡುವ ಅವಕಾಶ ತಂದುಕೊಟ್ಟಿದೆ.
ವೈಷ್ಣವಿಗೆ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟರ್ ಶ್ರೇಯಾಂಕಾ ಪಾಟೀಲ್ ಅವರಂತೆ ಉತ್ತಮ ಆಟಗಾರ್ತಿಯಾಗಬೇಕೆಂಬ ಆಸೆಯಿದೆ. ಮಹಿಳಾ ಕ್ರಿಕೆಟ್‌ನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿ ದೇಶಕ್ಕೆ ಹೆಸರು ತರುವ ಕನಸು ಕಾಣುತ್ತಿದ್ದಾಳೆ. ನವೆಂಬರ್ 10ರಿಂದ 15ರವರೆಗೆ ನಡೆಯುತ್ತಿರುವ ಎಸ್‌ಜಿಎಫ್‌ಐ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಆಡುವ ಅವಕಾಶಕ್ಕಾಗಿ ಸಿದ್ಧಳಾಗಿದ್ದಾಳೆ.
ಕಲ್ಯಾಣ ಕರ್ನಾಟಕದ ಐವರು ಬಾಲಕಿಯರಿಗೆ ರಾಷ್ಟ್ರಮಟ್ಟದ ಅವಕಾಶ
ವೈಷ್ಣವಿ ಧರಿ ಮಾತ್ರವಲ್ಲದೆ ಕಲ್ಯಾಣ ಕರ್ನಾಟಕ ಭಾಗದ ಒಟ್ಟು ಐವರು ಬಾಲಕಿಯರು ಅಂಡರ್-17 ವಿಭಾಗದ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಗಂಗೋತ್ರಿ ರಾಠೋಡ್ (ಕಲಬುರಗಿ): ಸ್ಪಿನ್ನರ್
ಅಂಜಲಿ ಕಟ್ಟಿಮನಿ (ಕಲಬುರಗಿ): ಸೀಮರ್
ಅವನಿ ಗಾಯಕವಾಡ್ (ಚಿತ್ತಾಪುರ): ಆರಂಭಿಕ ಬ್ಯಾಟರ್
ಪವಿತ್ರಾ (ಲಿಂಗಸುಗೂರು): ಬೌಲರ್
ವೈಷ್ಣವಿ ಧರಿ (ಕಲಬುರಗಿ): ಆಲ್‌ರೌಂಡರ್
ಕಡುಬಡತನದ ಹಿನ್ನೆಲೆಯಿಂದ ಬಂದಿರುವ ವೈಷ್ಣವಿಗೆ ಕ್ರಿಕೆಟ್ ತರಬೇತಿ ಹಾಗೂ ಕ್ರೀಡಾ ಸಾಮಗ್ರಿಗಳ ನೆರವು ದೊರೆಯುತ್ತಿದೆ. ಕೆಲವು ದಾನಿಗಳ ಸಹಕಾರದಿಂದ ಕ್ರೀಡಾ ಸಾಮಗ್ರಿಗಳನ್ನು ಒದಗಿಸಲಾಗಿದೆ. ಓದಿನಲ್ಲೂ ಆಸಕ್ತಿ ಹೊಂದಿರುವ ಈಕೆ ಕ್ರೀಡಾ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ಶಿಕ್ಷಕರು ಮತ್ತು ಹಿತೈಷಿಗಳ ಆಶಯ.