ದಾಳಿ ಮಾಡಿದ ಚಿರತೆ ಕೊಂದು ಪ್ರಾಣ ರಕ್ಷಿಸಿಕೊಂಡ ತಂದೆ, ಮಗ

By Kannadaprabha News  |  First Published Sep 3, 2021, 3:20 PM IST

*   ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಕಾಮನಹಳ್ಳಿಯಲ್ಲಿ ನಡೆದ ಘಟನೆ
*   ಚಿರತೆ ಕೊಂದು ಪರಾಕ್ರಮ ಮೆರೆದ ತಂದೆ-ಮಗ
*   ಚಿರತೆಯ ದಾಳಿಯಿಂದಾಗಿ ಓರ್ವನಿಗೆ ಗಾಯ 
 


ಹಾನಗಲ್ಲ(ಸೆ.03): ಹೊಲದಲ್ಲಿ ತಮ್ಮ ಮೇಲೆ ಏಕಾಏಕಿ ದಾಳಿ ಮಾಡಿದ ಚಿರತೆಯ ಜತೆ ಸೆಣಸಿದ ತಂದೆ-ಮಗ ಅದನ್ನು ಹತ್ಯೆಗೈದು ಪರಾಕ್ರಮ ಮೆರೆದಿದ್ದಾರೆ. ತಾಲೂಕಿನ ಕಾಮನಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಸೋಮವಾರವೇ ಈ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ತಂದೆ-ಮಗನ ಶೌಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ತಾಲೂಕಿನ ಕಾಮನಹಳ್ಳಿ ತಾಂಡಾ ನಿವಾಸಿ ಸೋಮಣ್ಣ ಲಮಾಣಿ ತನ್ನ ಮಗ ಸಂತೋಷ ಜೊತೆ ಸೋಮವಾರ ಬೆಳಗ್ಗೆ ತಮ್ಮ ಕೃಷಿ ಜಮೀನಿಗೆ ಹೋಗಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭ​ವಿ​ಸಿ​ದೆ. ಅರಣ್ಯಕ್ಕೆ ಹೊಂದಿಕೊಂಡಿರುವ ಜಮೀನಿಗೆ ನಸುಕಿನ ವೇಳೆ ತೆರಳಿದ್ದ ತಂದೆ, ಮಗನ ಮೇಲೆ ಚಿರತೆ ಹಠಾತ್‌ ದಾಳಿ ಮಾಡಿದೆ. ಕಂಗೆಟ್ಟಸೋಮಣ್ಣ, ಸಂತೋಷ ಪ್ರಾಣರಕ್ಷಣೆಗಾಗಿ ಪ್ರತಿ ದಾಳಿ ಮಾಡಿದ್ದಾರೆ. ಸಂತೋಷ ತನ್ನ ಕೈಯ್ಯಲ್ಲಿದ್ದ ಕೊಡಲಿಯಿಂದ ಚಿರತೆಗೆæ ಬಲವಾದ ಏಟು ನೀಡಿದ್ದಾನೆ. ಈ ಹೊಡೆತಕ್ಕೆ ಚಿರತೆ ತತ್ತರಿಸಿಹೋಗಿದೆ. ಸುಮಾರು ಹೊತ್ತಿನ ಬಳಿಕ ಒದ್ದಾಡಿ ಪ್ರಾಣ ಬಿಟ್ಟಿದೆ.

Tap to resize

Latest Videos

ತಂದೆ ಆಸ್ಪತ್ರೆಗೆ:

ಚಿರತೆಯ ದಾಳಿಯಿಂದಾಗಿ ಸೋಮಪ್ಪನ ಕೈ ಮತ್ತು ಬೆನ್ನಿಗೆ ಗಾಯವಾಗಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಬಳಿಕ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿಯುತ್ತಿದ್ದಾನೆ.

ಬ್ಯಾಡಗಿ: ಮತ್ತೆ ಚಿರತೆ ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ

ಈ ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾವೇರಿ ಆಸ್ಪತ್ರೆಗೆ ಭೇಟಿ ನೀಡಿ ಸೋಮಪ್ಪನ ಆರೋಗ್ಯ ವಿಚಾರಿಸಿದ್ದಾರೆ. ಆತ ನೀಡಿದ ಮಾಹಿತಿ ಪ್ರಕಾರ ಶೋಧ ನಡೆಸಿದಾಗ ಕಾಮನಹಳ್ಳಿ ಅರಣ್ಯ ಪ್ರದೇಶದಲ್ಲಿ ಚಿರತೆಯ ಶವ ಸಿಕ್ಕಿದೆ. ಆದರೆ ಚಿರತೆಯ ನಾಲ್ಕು ಕಾಲುಗಳನ್ನು ಕತ್ತರಿಸಲಾಗಿದೆ. ಸಂತೋಷ ಸ್ನೇಹಿತ ಮಂಜುನಾಥ ಲಮಾಣಿ ಹೀಗೆ ಚಿರತೆಯ ಕಾಲುಗಳನ್ನು ಕತ್ತರಿಸಿರುವ ಬಗ್ಗೆ ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ. ಆ ಕುರಿತು ಮಂಜುನಾಥನ ವಿಚಾರಣೆ ನಡೆಸಿ ಚಿರತೆಯ ನಾಲ್ಕು ಕಾಲುಗಳನ್ನು ವಶಕ್ಕೆ ಪಡೆದಿದ್ದಾರೆ.

ನ್ಯಾಯಾಂಗ ಬಂಧನ:

ಹಾನಗಲ್ಲ ಪಶು ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಚಿರತೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಚಿರತೆ ಹತ್ಯೆ ಮತ್ತು ಚಿರತೆಯ ಕಾಲುಗಳನ್ನು ಬಚ್ಚಿಟ್ಟಅಪರಾಧ ಮೇಲೆ ಸಂತೋಷ ಲಮಾಣಿ ಮತ್ತು ಮಂಜುನಾಥ ಲಮಾಣಿ ಎಂಬುವವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಡಿಎಫ್‌ಒ ಬಾಲಕೃಷ್ಣ ಎಸ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ. ಬಸವರಾಜಪ್ಪ, ವಲಯ ಅರಣ್ಯಾಧಿಕಾರಿ ಶಿವರಾಜ ಮಠದ, ಉಪವಲಯ ಅರಣ್ಯಾಧಿಕಾರಿ ಎಸ್‌.ಎಂ. ತಳವಾರ, ಎಸ್‌.ಕೆ. ರಾಥೋಡ, ಅರಣ್ಯ ರಕ್ಷಕರಾದ ಪರಸಪ್ಪ ತಿಳವಳ್ಳಿ, ವಿಶ್ಬನಾಥ ರಟ್ಟಿಹಳ್ಳಿ, ಹನುಮಂತಪ್ಪ ಉಪ್ಪಾರ, ಸಂತೋಷ ಸವಣೂರ, ಮಂಜುನಾಥ ಚವ್ಹಾಣ, ಬಸವಮ್ಮ ಗೌರಿಹಳ್ಳಿ, ಪದ್ಮನಾಭ ಪೂಜಾರ, ಆರ್‌.ಪಿ. ಗುರ್ಕಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
 

click me!