
ಬೆಳಗಾವಿ(ಸೆ.01): ಬೈಲಹೊಂಗಲ ತಾಲ್ಲೂಕಿನ ಉಡಿಕೇರಿ ಗ್ರಾಮದಲ್ಲಿ ಶುಕ್ರವಾರ ಮನೆ ಮುಂದಿನ ಹುಲ್ಲು ತೆಗೆಯುವ ವೇಳೆ ವಿದ್ಯುತ್ ತಗುಲಿ ತಂದೆ, ಮಗ ಸಾವನ್ನಪ್ಪಿದ್ದಾರೆ. ಕೃಷಿಕರಾದ ಪ್ರಭು ಹುಂಬಿ (68) ಹಾಗೂ ಇವರ ಪುತ್ರ ಮಂಜುನಾಥ (29) ಮೃತಪಟ್ಟವರು.
ಮನೆ ಮುಂದಿನ ವಿದ್ಯುತ್ ಕಂಬಕ್ಕೆ ಬ್ಯಾಲೆನ್ಸಿಗೆ ಹಾಕಲಾಗಿದ್ದ ತಂತಿಗೆ ಮೇನ್ ಲೈನ್ ವಿದ್ಯುತ್ ತಂತಿ ಜೋಡಿಸಲಾಗಿತ್ತು. ತಂತಿ ಸುತ್ತ ಬೆಳೆದಿದ್ದ ಹುಲ್ಲು ತೆಗೆಯುವ ವೇಳೆ ಪ್ರಭು ಹುಂಬಿ ಅವರಿಗೆ ವಿದ್ಯುತ್ ತಗುಲಿದೆ. ಒದ್ದಾಡುತ್ತಿದ್ದ ಅವರನ್ನು ನೋಡಿ ಓಡಿ ಬಂದು ಪುತ್ರ ಮಂಜುನಾಥ ತಂದೆಯನ್ನು ಕಾಪಾಡಲು ಮುಂದಾದರು. ಆವರಿಗೂ ವಿದ್ಯುತ್ ತಗುಲಿದ್ದರಿಂದ ಸಾವು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಭು ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಮಂಜುನಾಥ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಕೆಲವೇ ನಿಮಿಷಗಳಲ್ಲಿ ಕೊನೆಯುಸಿರೆಳೆದರು. ಘಟನೆಯಿಂದ ಗ್ರಾಮದಲ್ಲಿ ಭಯದ ವಾತಾವರಣ ಆವರಿಸಿದೆ. ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳಗಾವಿ: ಕಲ್ಲಿನಿಂದ ಜಜ್ಜಿ ನಡು ಬೀದಿಯಲ್ಲೇ ಯುವಕನ ಬರ್ಬರ ಹತ್ಯೆ, ಬೆಚ್ಚಿಬಿದ್ದ ಕುಂದಾ ನಗರಿ..!
ಹೆಸ್ಕಾಂ ವಿರುದ್ಧ ಆಕ್ರೋಶ:
ಈ ಸಾವಿಗೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಮನೆ ಮುಂದೆ ಹಾಕಲಾಗಿದ್ದ ವಿದ್ಯುತ್ ಕಂಬ ತೆರುವುಗೊಳಿಸಿ ಎಂದು ಸಾಕಷ್ಟು ಸಲ ತಿಳಿಸಿದ್ದರೂ ಗಮನ ಹರಿಸಿರಲಿಲ್ಲ. ಇದರಿಂದ ಜೀವ ಹಾನಿ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.