'ಕೃಷಿ ಸಚಿವ ಬಿ.ಸಿ.ಪಾಟೀಲ್ ಕ್ಷಮೆ ಕೇಳಲು ಆಗ್ರಹ'

By Kannadaprabha NewsFirst Published Sep 13, 2020, 3:19 PM IST
Highlights

ಕೃಷಿ ಸಚಿವ ಬಿ.ಸಿ ಪಾಟೀಲ್ ಕ್ಷಮೆ ಯಾಚಿಸಬೇಕು ಎಂದು ರೈತ ಸಂಘ ಆಗ್ರಹಿಸಿದೆ. ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. 

ಕೋಲಾರ (ಸೆ.13):  ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ಅಜ್ಞಾನಿಗಳು ಎಂದು ಹೇಳಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರು ಕೂಡಲೇ ಕ್ಷಮೆ ಕೇಳಬೇಕೆಂದು ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಬಿ.ಸಿ ಪಾಟೀಲ್‌ ಅವರ ಪ್ರತಿಕೃತಿ ದಹಿಸುವ ಮೂಲಕ ಗಾಂಧಿವನದ ಬಳಿ ಪ್ರತಿಭಟನೆ ನಡೆಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರವು ಅನೇಕ ಕಾಯ್ದೆ ಕಾನೂನುಗಳನ್ನು ತಿದ್ದುಪಡಿ ಮಾಡಿ ರೈತರಿಗೆ ಅನಾನುಕೂಲ ಮಾಡಿವೆ. ಕೊರೋನಾ ಸೋಂಕು ಇದ್ದಾಗಲೂ ರೈತರ ಕಷ್ಟಗಳನ್ನು ಅರಿಯದೆ ಅವರಿಗೆ ಹುಣ್ಣಿನ ಮೇಲೆ ಬರೆ ಎಳೆದಂತೆ ಅನೇಕ ತಿದ್ದುಪಡಿಗಳನ್ನು ತರಲಾಗಿದೆ.

ಎಪಿಎಂಸಿ ಮಾರಾಟ ತಿದ್ದುಪಡಿ, ವಿದ್ಯುತ್‌ ಖಾಸಗೀಕರಣ, ಕೃಷಿ ಜಮೀನುಗಳನ್ನು ಶ್ರೀಮಂತರು ಮತ್ತು ರಿಯಲ್‌ ಎಸ್ಟೇಟ್‌ ಮಾಫಿಯಾಗಳಿಗೆ ಖರೀದಿ ಮಾಡಲು ಅವಕಾಶ ಕೊಟ್ಟು ರೈತರನ್ನು ಬೀದಿ ಪಾಲು ಮಾಡಲು ಹೊರಟಿವೆ. ಬಿ.ಸಿ. ಪಾಟೀಲ್‌ ಅವರು ರೈತ ಮುಖಂಡರನ್ನು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ರಾಜ್ಯ ಸರ್ಕಾರವು ತಂದಿರುವ ಕಾಯ್ದೆಗಳು ರೈತ ವಿರೋಧಿಯಾಗಿವೆ. ಈ ಕಾಯ್ದೆಗಳಿಂದ ರೈತರು ಬೀದಿ ಪಾಲಾಗಲಿದ್ದಾರೆ ಇದನ್ನು ಪ್ರಶ್ನೆ ಮಾಡುವ ರೈತ ಮುಖಂಡರನ್ನು ಅಜ್ಞಾನಿಗಳು ಎನ್ನುವುದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಕೊಪ್ಪಳ: ಅಕ್ರಮ ಚಟುವಟಿಕೆ, ಜಿಲ್ಲಾ ಉಸ್ತುವಾರಿ ಸಚಿವರಿಂದಲೇ ಎಸ್ಪಿಗೆ ಪತ್ರ .

ನಿಮ್ಮ ಜ್ಞಾನ ಏನಿದೆ ಎನ್ನುವುದು ನಮಗೂ ಗೊತ್ತಿದೆ. ನಿಮ್ಮ ಸ್ಥಿತಿ ಗತಿ ಏನು ಎಂಬುದೂ ನಮಗೆ ಗೊತ್ತಿದೆ. ಆದರೆ ನೀವು ರೈತ ಹೋರಾಟಗಾರರನ್ನು ಹೀಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಟಿ.ಎನ್‌. ರಾಮೇಗೌಡ, ಮಾತನಾಡಿ, ರೈತರ ಮತ್ತು ರೈತ ಮುಖಂಡರ ಬಗ್ಗೆ ಮಾತನಾಡಿದ ಯಾವ ರಾಜಕಾರಣಿಗಳು ಅಧಿಕಾರದಲ್ಲಿ ಉಳಿಯುವುದಿಲ್ಲ ಆದರೆ ಇರುವಷ್ಟು ದಿವಸ ರೈತರ ಹಿತಕ್ಕಾಗಿ ದುಡಿಯಬೇಕು. ಆದರೆ ಬಿ.ಸಿ.ಪಾಟಿಲ್‌ ಅವರು ರೈತರನ್ನು ಬೀದಿ ಪಾಲು ಮಾಡಲು ಹೊರಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

click me!