ಮಂಡ್ಯ: ಹಳ್ಳಿಯಲ್ಲಿ ರೈತರ ಸೂಪರ್‌ ಮಾರ್ಕೆಟ್‌!

By Kannadaprabha NewsFirst Published Sep 29, 2019, 12:42 PM IST
Highlights

ಮಾಲ್ ಸಂಸ್ಕೃತಿ ಹಳ್ಳಿಗಳಿಗೂ ವ್ಯಾಪಿಸ್ತಿದೆ. ಮಂಡ್ಯದಲ್ಲಿ ರೈತರದ್ದೇ ಆದ ಸೂಪರ್‌ ಮಾರುಕಟ್ಟೆ ದಶಕಗಳಷ್ಟು ಹಿಂದಿನಿಂದಲೇ ಸಹಕಾರ ಸಂಘದ ಅಡಿ 1200 ಷೇರುದಾರರ ನೆರವಿನಿಂದ ಬೆಳೆದು ಬರುತ್ತಿದೆ. ಅನೇಕ ಏಳು ಬೀಳುಗಳನ್ನು ಕಂಡು ಈಗ ಪ್ರಬುದ್ಧಮಾನಕ್ಕೆ ಬಂದಿದೆ.

ಮಂಡ್ಯ(ಸೆ. 29): ಮಾಲ್‌ ಸಂಸ್ಕೃತಿ ಈಗ ಸಣ್ಣ ಪುಟ್ಟಹಳ್ಳಿಗಳಿಗೂ ದಾಪುಗಾಲು ಇಡುತ್ತಿದೆ. ಆದರೆ, ಇಲ್ಲೊಂದು ರೈತರದ್ದೇ ಆದ ಸೂಪರ್‌ ಮಾರುಕಟ್ಟೆದಶಕಗಳಷ್ಟು ಹಿಂದಿನಿಂದಲೇ ಸಹಕಾರ ಸಂಘದ ಅಡಿ 1200 ಷೇರುದಾರರ ನೆರವಿನಿಂದ ಬೆಳೆದು ಬರುತ್ತಿದೆ. ಅನೇಕ ಏಳು ಬೀಳುಗಳನ್ನು ಕಂಡು ಈಗ ಪ್ರಬುದ್ಧಮಾನಕ್ಕೆ ಬಂದಿದೆ.

ಮಳವಳ್ಳಿ ತಾಲೂಕಿನ ತಳದವಾದಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವುದರ ಜೊತೆಗೆ ಒಂದೇ ಸೂರಿನಡಿ ಜೀವನ ಮತ್ತು ವ್ಯವಸಾಯಕ್ಕೆ ಅಗತ್ಯವಾಗಿರುವ ವಸ್ತುಗಳ ಪೂರೈಸುವ ಮಾಲ್‌ ಮಾದರಿಯ ಮಾರುಕಟ್ಟೆಯ ಹೊಸ ರೂಪ ಎಲ್ಲರನ್ನೂ ಸೆಳೆದುಕೊಳ್ಳುತ್ತಿದೆ. ತಳಗವಾದಿ ಸಹಕಾರ ಸಂಘ ಕೋಟ್ಯಂತರ ರು. ವೆಚ್ಚದಲ್ಲಿ ರೂಪಿಸಿರುವ ರೈತ ಮಾರ್ಕೆಟ್‌ ಷೇರುದಾರರ ನೆರವಿನಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

ಮಂಡ್ಯ: ಇಲ್ಲಿ ಕುರಿ, ಮೇಕೆ ಮಾಂಸವೇ ಪ್ರಸಾದ..!

ಈ ಸೂಪರ್‌ ಮಾರುಕಟ್ಟೆಸುಮಾರು 32 ಕೋಟಿ ರು. ವಾರ್ಷಿಕ ವಹಿವಾಟು ನಡೆಸುತ್ತಿದೆ. 1949ರಲ್ಲಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ 300 ಮಂದಿ ಷೇರುದಾರರೊಂದಿಗೆ ನೆರೆಯ ಕಾಗೇಪುರ, ದೇವಿಪುರ. ಜೆ.ಸಿ.ಪುರ ಗ್ರಾಮಗಳ ಜನರ ಅನುಕೂಲಕ್ಕಾಗಿ ಸಹಕಾರ ಸಂಘವನ್ನು ಸ್ಥಾಪನೆ ಮಾಡಲಾಗಿತ್ತು. 1987ರ ತನಕ ಕುಂಟುತ್ತಲೇ ಸಾಗಿತು. ನಂತರ ಸಹಕಾರ ಸಂಘವು 10 ವರ್ಷಗಳ ಕಾಲ ಮುಚ್ಚಿ ಹೋಗಿತ್ತು.

ಯಶಸ್ವಿ ಯಶೋಗಾಥೆ:

ಸರ್ಕಾರ ಶಾಶ್ವತವಾಗಿ ಈ ಸಹಕಾರ ಸಂಘವನ್ನು ಮುಚ್ಚುವ ನೋಟಿಸ್‌ ಜಾರಿ ಮಾಡಿದ ನಂತರ ಎಚ್ಚೆತ್ತುಕೊಂಡ ಗ್ರಾಮಸ್ಥರು ಹಿರಿಯರ ಮಾರ್ಗದರ್ಶನದೊಂದಿಗೆ ಕೆ.ಚೌಡಯ್ಯ, ಕಾಳಪ್ಪ ಸೇರಿದಂತೆ ಇತರರು ಮತ್ತೆ ಹೊಸ ಸಮಿತಿಯನ್ನು ರಚನೆ ಮಾಡಿಕೊಂಡು ಕೆ. ಚೌಡಯ್ಯರವರ ಅಧ್ಯಕ್ಷತೆಯಲ್ಲಿ ಸಹಕಾರ ಸಂಘಕ್ಕೆ ಮರುಜೀವ ತುಂಬಿದರು. 2002-03ರಲ್ಲಿ 5 ಲಕ್ಷ ಬಂಡವಾಳವಿತ್ತು, ಸಹಕಾರ ಸಂಘದ ಅಧ್ಯಕ್ಷರಾಗಿ ಹನುಮಂತು ಅಧಿಕಾರ ವಹಿಸಿಕೊಂಡ ನಂತರ ಸಂಘದ ಚಟುವಟಿಕೆಗಳು ಚುರುಕುಗೊಂಡವು. ಷೇರುದಾರರು ಮತ್ತು ನಿರ್ದೇಶಕರ ಸಹಕಾರದೊಂದಿಗೆ ಹಂತ ಹಂತವಾಗಿ ಸಹಕಾರ ಸಂಘವನ್ನು ಅಭಿವೃದ್ಧಿ ಪಡಿಸುತ್ತಾ ಪ್ರತಿ ವರ್ಷವೂ ಒಂದೊಂದು ಯೋಜನೆಗಳನ್ನು ಜಾರಿಗೆ ತಂದರು. ಯಶಸ್ವಿಯಾಗಿ ಸಾಗಿರುವ ಮಾರುಕಟ್ಟೆಯೊಂದರ ಯಶೋಗಾಥೆ ಇದು.

ಟ್ರಾಫಿಕ್ ಪೊಲೀಸ್ ಕಿರಿಕಿರಿ: ರಿಸಿಪ್ಟ್ ಕೇಳಿದ್ದಕ್ಕೆ ಬಿತ್ತು ಗೂಸಾ..!

ಸಹಕಾರ ಸಂಘದಲ್ಲಿ ಬಂದ ಲಾಭದಲ್ಲಿ ರೈತರ ಅನುಕೂಲಕ್ಕಾಗಿ ರೈತ ಮಾರುಕಟ್ಟೆನಿರ್ಮಾಣವಾಗಿರುವುದು ರಾಜ್ಯದಲ್ಲೇ ಮೊದಲ ಬಾರಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿವರ್ಷ ಕೊಟ್ಯಂತರ ರು. ವಾಹಿವಾಟು ನಡೆಸಿ ಲಾಭಗಳಿಸುತ್ತಿರುವುದು ಒಂದು ಕಡೆಯಾದರೇ ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಂದು ವಸ್ತುಗಳು ಒಂದೆ ಸೂರಿನಡಿ ಸಿಗುತ್ತಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ.

ರೈತರ ಸೂಪರ್‌ ಮಾರ್ಕೆಟ್‌ ಬೆಳೆದು ಬಂದದ್ದು ಹೀಗೆ:

ಸಹಕಾರ ಸಂಘದ ಸ್ವಂತ ಹಣದಿಂದ 2011-12ರಲ್ಲಿ ವಾಹಿವಾಟುಗಾಗಿ 70 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ನೂತನ ಕಟ್ಟಡ ನಿರ್ಮಿಸಿದರು. ಗ್ರಾಮೀಣ ಪ್ರದೇಶದ ಜನರಿಗೆ ಒಂದೆ ಸೂರಿನಲ್ಲಿ ರಿಯಾಯಿತಿ ದರದಲ್ಲಿ ಎಲ್ಲಾ ಕೃಷಿ ಮತ್ತು ಅಗತ್ಯ ವಸ್ತುಗಳ ಬೇಡಿಕೆಗಳನ್ನು ಈಡೇರಿಸಬೇಕೆಂಬ ಹಂಬಲದೊಂದಿಗೆ ರೈತ ಸೂಪರ್‌ ಮಾರ್ಕೆಟ್‌ ನಿರ್ಮಿಸಲು ಚಿಂತನೆ ನಡೆಸಿದರು.

*16-17ರಲ್ಲಿ ಒಂದು ಕೋಟಿ ರೂ ವೆಚ್ಚದಲ್ಲಿ ರೈತ ಮಾರುಕಟ್ಟೆಸ್ಥಾಪನೆ ಮಾಡಿದರು. ಮಾರುಕಟ್ಟೆಗೆ ಅಭಿವೃದ್ಧಿಗಾಗಿ ನಾಬಾರ್ಡ್‌ನಿಂದ 36.70 ಲಕ್ಷ ಸಾಲ ಪಡೆಯಲಾಯಿತು. ಅದರಲ್ಲಿ ಕೇವಲ 15 ಲಕ್ಷ ಸಾಲವನ್ನು ಮಾತ್ರ ಸಹಕಾರ ಸಂಘವು ಪಾವತಿ ಮಾಡಬೇಕಿದೆ.

ಮಾರುಕಟ್ಟೆಸೌಲಭ್ಯ:

*ರೈತ ಮಾರುಕಟ್ಟೆಯಲ್ಲಿ ಪ್ರತಿಯೊಂದು ಆಹಾರ ಧಾನ್ಯಗಳು, ಪಶು ಆಹಾರ, ಬಟ್ಟೆ, ಕಬ್ಬಿಣ, ಸಿಮೆಂಟ್‌ ಸೇರಿದಂತೆ ದಿನಬಳಕೆಗೆ ಬೇಕಾದ ಎಲ್ಲಾ ವಸ್ತುಗಳು ಸಿಗುವಂತೆ ಕ್ರಮ ಕೈಗೊಳ್ಳಲಾಗಿದೆ.

*ಎಲ್ಲವನ್ನೂ ಪ್ರತ್ಯೇಕವಾಗಿಯೇ ವಿಭಾಗಗಳನ್ನು ವಿಂಗಡಿಸಲಾಗಿದೆ, ರೈತರ ಅನುಕೂಲಕ್ಕಾಗಿ ಒಕ್ಕಣೆ ಯಂತ್ರ, ಲಾರಿ, ಗೂಡ್ಸ್‌ ಆಟೋ ಸೇರಿದಂತೆ ಇತರೆ ಉಪಪಕರಣಗಳನ್ನು ಕಡಿಮೆ ಬಾಡಿಗೆಗೆ ನೀಡಲಾಗುತ್ತಿದೆ.

ಉತ್ತಮ ಗುಣಮಟ್ಟ, ರಿಯಾಯಿತಿ ದರ:

* ಸಹಕಾರ ಸಂಘವು ನೇರವಾಗಿ ಕಂಪನಿಗಳ ಮೂಲಕ ವ್ಯವಹಾರ ನಡೆಸುತ್ತಿದ್ದರಿಂದ ಎಲ್ಲಾ ವಸ್ತುಗಳು ಕಡಿಮೆ ಬೆಲೆಯಲ್ಲಿ ಗುಣಮಟ್ಟದ ವಸ್ತುಗಳನ್ನು ತಂದು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಸ್ತುಗಳನ್ನು ನೀಡಲಾಗುತ್ತಿದೆ. ಪ್ರತಿಯೊಂದು ವಸ್ತುವನ್ನು ಕೊಂಡಾಗ ರಶೀದಿ ನೀಡಲಾಗುತ್ತಿದೆ. ವಸ್ತುವಿನ ದರ, ಮತ್ತು ಉಳಿತಾಯವನ್ನು ರಶೀದಿಯಲ್ಲಿ ಮಾಹಿತಿ ನೀಡುವ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುವುದರ ಮೂಲಕ ಉತ್ತಮ ಸೇವೆ ಸಲ್ಲಿಸಲಾಗುತ್ತಿದೆ.

ರೈತರಿಗೆ ಸಾಲಸೌಲಭ್ಯ:

*ಎಂಕೆಸಿಸಿಲ್‌ ಸಾಲ, ಮಧ್ಯಮಾವಧಿ ಸಾಲ, ವ್ಯವಸಾಯೇತರ ಸಾಲ, ಚಿನ್ನಾಭರಣ ಸಾಲ, ಆವರ್ತನ ಠೇವಣೆ ಮೇಲಿನ ಸಾಲ, ಪಶು ಭಾಗ್ಯ ಸಾಲ, ಎಫ್ಡಿ ಠೇವಣೆ ಸಾಲವನ್ನು ಷೇರುದಾರರಿಗೆ ನೀಡಲಾಗುತ್ತಿದೆ.

ರಾಜ್ಯದಲ್ಲಿಯೇ ಮೊದಲ ರೈತ ಮಾರುಕಟ್ಟೆ:

ತಳದವಾದಿ ರೈತರ ಸೂಪರ್‌ ಮಾರ್ಕೆಟ್‌ ರಾಜ್ಯದಲ್ಲಿಯೇ ಮೊದಲ ರೈತ ಮಾರುಕಟ್ಟೆ. ರಾಜ್ಯ ಮಟ್ಟದ ಸಹಕಾರ ಪ್ರಶಸ್ತಿ, ಮೂರು ಬಾರಿ ಜಿಲ್ಲಾ ಮಟ್ಟದ ಪ್ರಶಸ್ತಿ, ಅಧ್ಯಕ್ಷರಿಗೆ ಸಹಕಾರ ರತ್ನ ಪ್ರಶಸ್ತಿ, ಕೆ. ಚೌಡಯ್ಯ ಪ್ರಶಸ್ತಿ ಅಭಿಸಿದೆ. ಜೊತೆಗೆ ನಾಬಾರ್ಡ್‌ನ ಅಧ್ಯಕ್ಷ ಹರ್ಷಕುಮಾರ್‌ ಬನ್ವಾಲ… ಭೇಟಿ ನೀಡಿ ಶಹಬಾಸ್‌ ಎಂದಿದ್ದಾರೆ.

ರೈತರಿಂದ ನೇರ ಖರೀದಿ ಚಿಂತನೆ:

ಸಂಬಾರು ಪದಾರ್ಥ ಹಾಗೂ ಇತರೆ ಬೆಳೆಗಳು ಹವಾಮಾನ ವೈಪರೀತ್ಯದಿಂದಾಗಿ ದಿಢೀರನೇ ಬೆಲೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಹಕಾರ ಸಂಘದಿಂದಲೇ ನೇರವಾಗಿ ಬೆಳೆಗಳನ್ನು ಖರೀದಿಸಿ ಶೇಖರಣೆ ಮಾಡುವುದರ ಮೂಲಕ ಬೆಲೆಯಲ್ಲಿ ಸುಧಾರಣೆ ಕಾಣಬೇಕೆಂಬ ಚಿಂತನೆ ನಡೆಸಲಾಗುತ್ತಿದೆ ಎನ್ನುತ್ತಾರೆ ಮುಖಂಡರು.

-ಸಿ. ಸಿದ್ದರಾಜು ಮಾದಹಳ್ಳಿ

click me!