ದಾವಣಗೆರೆಯಲ್ಲಿ ಫಲವತ್ತಾದ ಮಣ್ಣಿನ ಮಾರಾಟ ಭರಾಟೆ ಜೋರು

By Suvarna NewsFirst Published Jun 12, 2022, 3:38 PM IST
Highlights

* ಫಲವತ್ತಾದ ಮಣ್ಣಿನ ಮಾರಾಟ ಭರಾಟೆ ಜೋರು
* ದಾವಣಗೆರೆಯಲ್ಲಿ ಜೋರಾಗಿದೆ ಮಣ್ಣು ಮಾರಾಟ 
* ಇಟ್ಟಿಗೆ ಭಟ್ಟಿಗಳಿಗೆ ಮಣ್ಣು ಮಾರಾಟ ಮಾಡುತ್ತಿರವ ರೈತರು

ದಾವಣಗೆರೆ, (ಜೂನ್ 12):  ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನಲ್ಲಿ ಫಲವತ್ತಾದ ಮಣ್ಣಿನ ಮಾರಾಟ ಭರಾಟೆ ಜೋರಾಗಿದೆ. ಹರಿಹರ ಹರಪನಹಳ್ಳೀ ರಸ್ತೆ, ಕುಮಾರಪಟ್ಟಣಕ್ಕೆ ಹೋಗುವ ರಸ್ತೆ ಮಾರ್ಗದಲ್ಲಿ ನೂರಾರು ಇಟ್ಟಿಗೆ ಭಟ್ಟಿಗಳು ತಲೆಎತ್ತಿದ್ದು ಕೋಟ್ಯಾಂತರ ರೂ ಬ್ಯುಸಿನೆಸ್ ನಡೆಯುತ್ತಿದೆ. ಈ ಇಟ್ಟಿಗೆ ಭಟ್ಟಿಗಳಲ್ಲಿ ಕೆಲವಕ್ಕೆ ಮಾತ್ರ ಪರವಾನಿಗೆಗೆ ಪಡೆದಿದ್ದು ಉಳಿದವು ಬಹುತೇಕ ಅನಧಿಕೃತವಾಗಿ ಇಟ್ಟಿಗೆ ವ್ಯಾಪಾರ ಮಾಡುತ್ತಿದೆ. ಈ ಅನಧಿಕೃತ, ಅನುಮತಿ ಇಲ್ಲದ ನೂರಾರು ಇಟ್ಟಿಗೆ ಭಟ್ಟಿಗಳಿಗೆ  ಭೂತಾಯಿ  ಒಡಲನ್ನು ಬಗೆದು  ನೂರಾರು ಲೋಡ್  ಮಣ್ಣನ್ನು ಪ್ರತಿನಿತ್ಯ ಬಳಸಲಾಗುತ್ತಿದೆ.  

ಫಲವತ್ತಾದ ಕೃಷಿ ಭೂಮಿ ಮಣ್ಣನ್ನು ಮಾರಾಟ ಮಾಡುತ್ತಿರುವ ರೈತರು 
ಇಟ್ಟಿಗೆ ಬರುವ  1ಲೋಡಿಗೆ 7- 8ಸಾವಿರ ರೂಪಾಯಿ ದರವಿದ್ದು ರೈತರೇ ಇಟ್ಟಿಗೆ ಉದ್ದಿಮೆದಾರರಿಗೆ ಮಣ್ಣು ಕೊಡುತ್ತಿದ್ದಾರೆ.  ಹರಿಹರ ತಾಲ್ಲೂಕಿನಾದ್ಯಂತ ಅಕ್ರಮವಾಗಿ ಹೊಳೆ ಮಣ್ಣು ಸಾಗಾಣಿಕೆ ಆಗುತ್ತಿದ್ದು ಇದು ಒಂದು ದೊಡ್ಡ ಮಾಫಿಯವಾಗಿ ಬೆಳೆದಿದೆ.  ಹರಿಹರ ತಾಲ್ಲೂಕಿನಾದ್ಯಂತ ಎಗ್ಗಿಲ್ಲದೆ ಹೊಳೆ ಮಣ್ಣಿನ ಮಾಫಿಯಾ ನಡೆಯುತ್ತಿದೆ.  ಅಕ್ರಮವಾಗಿ ತಾಲ್ಲೂಕಿನ ಗುತ್ತೂರು, ದೀಟೂರು, ಪಾಮೇನಹಳ್ಳಿ,ಸಾರಥಿ,ಕರ್ಲಹಳ್ಳಿ,ಚಿಕ್ಕಬಿದರಿ ಗ್ರಾಮಗಳಲ್ಲಿ ಉಳುಮೆ ಮಾಡುವಂಥ ಜಮೀನುಗಳಲ್ಲಿ ಅಕ್ರಮವಾಗಿ ಹೊಳೆ ಮಣ್ಣಿನ ಮಾಫಿಯಾ ನಡೆಯುತ್ತಿದೆ.

Davanagere: ಮನೆ ಕಟ್ಟಿಸಬೇಕೆಂದಿದ್ದ ಹಣದಲ್ಲಿ ಶಾಲಾ ಕೊಠಡಿ ನಿರ್ಮಿಸಿದ ನೌಕರ

ಸರ್ಕಾರದ ಆದೇಶದಂತೆ ತಮ್ಮ ಜಮೀನುಗಳ ಅಭಿವೃದ್ಧಿಗೆ ದೃಷ್ಟಿಯಿಂದ 3ಅಡಿ ವರೆಗೂ ಮಾತ್ರ ಜಮೀನನ್ನ ಅಗಿಯಲು ಅವಕಾಶವಿದೆ   ಆದ್ರೆ   3 ಅಡಿಗಿಂತ ಕೆಳಗೆ ಜಮೀನಿನನ್ನು ಅಗಿಯಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುವ ಮಾಫಿಯಾದವರು ಸರ್ಕಾರದ ಕಾನೂನು ಆದೇಶಗಳನ್ನು ಉಲ್ಲಂಘನೆ ಮಾಡಿ ಸರಿಸುಮಾರು ಹತ್ತರಿಂದ ಇಪ್ಪತ್ತು ಅಡಿಗಿಂತ ಹೆಚ್ಚಿನ ಆಳದವರೆಗೂ ಮಣ್ಣನ್ನ ಅಗೆಯುತ್ತಿದ್ದಾರೆ. ಅದರಲ್ಲೂ ಜೆಸಿಬಿ ಹಿಟಾಚಿ ಬಳಸಿ ಭೂತಾಯಿಯ ಒಡಲನ್ನು ಬಗೆದು ಯಥೇಚ್ಛವಾಗಿ ಮಣ್ಣನ್ನು ತೆಗೆದು,10 ವೀಲ್,6 ವೀಲ್ ಲಾರಿಗಳ ಮೂಲಕ ಯಾವುದೇ ಪರ್ಮಿಟ್ ಇಲ್ಲದೆ ಅಕ್ರಮವಾಗಿ ಮಣ್ಣನ್ನು ಸಾಗಾಣಿಕೆ ಮಾಡುತ್ತಿದ್ದಾರೆ. 

ಈ ಮಣ್ಣು ಅಕ್ರಮಕ್ಕೆ ಅಧಿಕಾರಿಗಳೇ ಸಾಥ್ 
ಮಣ್ಣು ಮಾರಾಟ ಮಾಡುವ ಬ್ರೋಕರ್ ಗಳು ಹುಟ್ಟಿಕೊಂಡಿದ್ದು ರೈತರು ಉದ್ದಿಮೆದಾರರ ನಡುವೆ ವ್ಯವಹಾರ ಕುದುರಿಸುತ್ತಾರೆ.  ಈ ಮಣ್ಣು ಮಾರಾಟ ದಾವಣಗೆರೆ ಜಿಲ್ಲೆಯ ಗಣಿ ಮತ್ತು ಭೂವಿಜ್ನಾನ ಇಲಾಖೆ, ಹರಿಹರ ತಾಲ್ಲೂಕಿನ ತಹಶೀಲ್ದಾರ್ ಕಚೇರಿ, ಸ್ಥಳೀಯ ಪೊಲೀಸರು, ಹರಿಹರದ ಶಾಸಕ ಎಸ್  ರಾಮಪ್ಪ ಸೇರಿದಂತೆ ಎಲ್ಲರಿಗು ಗೊತ್ತಿದ್ದು ನಡೆಯುತ್ತಿದೆ.   ಇಟ್ಟಿಗೆ ಉದ್ಯಮದಿಂದ ಸಿಗುವ ಕಮಿಷನ್ ಆಸೆಗಾಗಿ  ರೈತರ ಫಲವತ್ತಾದ ಭೂಮಿಯನ್ನು ಬಲಿಕೊಡುತ್ತಿರುವ ಅಧಿಕಾರಿಗಳು ಅಕ್ರಮ ಮಣ್ಣು ಮಾರಾಟಕ್ಕೆ ಬ್ರೇಕ್ ಹಾಕಿಲ್ಲ.. ಈ ಮಣ್ಣು ಮಾರಾಟಕ್ಕು ಗಣಿ ಮತ್ತು ಭೂ ವಿಜ್ನಾನ ಇಲಾಖೆ  ಟನ್  ಗೆ ಇಷ್ಟು ಎಂದು  ರಾಯಲ್ಟಿ ಕಟ್ಟಿಸಿಕೊಳ್ಳಬೇಕು  ಒಂದು ವೇಳೆ ಅಕ್ರಮವಾಗಿ ಸಾಗಣೆ ಮಾಡಿದ್ದರೇ ಸೀಜ್ ಮಾಡಬೇಕು.. ರೈತರಿಗೆ ಮಣ್ಣು ಮಾರಾಟ ಮಾಡದಂತೆ ತಿಳುವಳಿಕೆ ಮೂಡಿಸಬೇಕು. ಆದ್ರೆ ಇದ್ಯಾವುದು ಆಗುತ್ತಿಲ್ಲ. ಒಂದು ರೀತಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಸ್ಥಿತಿ ಹರಿಹರ ತಾಲ್ಲೂಕಿನಲ್ಲಿ  ನಿರ್ಮಾಣವಾಗಿದ್ದು ಅಕ್ರಮ ಮಣ್ಣು ಮಾರಾಟಕ್ಕೆ ಕಡಿವಾಣ ಇಲ್ಲದಂತಾಗಿದೆ. ಎಷ್ಟೋ ರೈತರು  ಫಲವತ್ತಾದ ಮಣ್ಣು ಕಳೆದುಕೊಂಡು ತಮ್ಮ ಭೂಮಿಯನ್ನು ಬಂಜರು ಮಾಡಿಕೊಂಡಿರುವ ಉದಾಹರಣೆಗಳಿವೆ. ಇನ್ನಾದ್ರು ಇಟ್ಟಿಗೆ ಉದ್ಯಮ ಬೆಳೆಸಲು ರೈತರ ಫಲವತ್ತಾದ ಕೃಷಿ ಮಣ್ಣು ಮಾರಾಟವಾಗದಂತೆ ಅಧಿಕಾರಿಗಳು ತಡೆ ಹಾಕಬೇಕಿದೆ. 

ಈ ರೀತಿ ಸರ್ಕಾರದ ಕಾನೂನು ಆದೇಶಗಳನ್ನು ಉಲ್ಲಂಘಿಸಿ ಭೂತಾಯಿ ಒಡಲನ್ನು ಬಗೆದು ಅಕ್ರಮವಾಗಿ ಮಣ್ಣನ್ನು ಸಾಗಿಸುತ್ತಿರುವರ ಮೇಲೆ ಕಾನೂನು  ಕ್ರಮ ತೆಗೆದುಕೊಳ್ಳಬೇಕು.  ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಈ ಮಣ್ಣು ಮಾಫಿಯಾವನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡ ಜಿ ಮಂಜುನಾಥ್   ರೈತ ಸಂಘಟನೆಗಳು   ಹರಿಹರ ತಾಲ್ಲೂಕು ದಂಡಾಧಿಕಾರಿ ಡಾ॥ ಅಶ್ವತ್ಥ್ ಎಂ.ಬಿ ಇವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.  ಈ ವಿಚಾರಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ಪಡೆದು ನಮ್ಮ ಕಂದಾಯ ಇಲಾಖೆಯ ಚೌಕಟ್ಟಿನ ಅಡಿಯಲ್ಲಿ ಏನು ಕ್ರಮ ತೆಗೆದುಕೊಳ್ಳಲು ಸಾಧ್ಯವೋ ಈ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ, ಅದೇ ರೀತಿ ಅಕ್ರಮ ಮಣ್ಣು ಸಾಗಣೆ  ತಡೆಗಟ್ಟುವ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ.

click me!