
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ(ಜೂ.12): ಕೇರಳದಿಂದ ಕಾಲ್ನಡಿಗೆಯ ಮೂಲಕವಾಗಿ ಹಜ್ ಯಾತ್ರೆ ಹೊರಟಿರುವ ಮಲಪ್ಪುರಂ -ಕನ್ನಿ ಪುರದ ನಿವಾಸಿ ಶಿಹಾಬ್ ಚೊಟ್ಟೂರ್ ಉಡುಪಿ ಜಿಲ್ಲೆಯನ್ನು ಸಾಗಿ ಮುಂದೆ ಹೋಗಲಿದ್ದಾರೆ. ಉಡುಪಿ ಜಿಲ್ಲೆಯ ಗಡಿಭಾಗವಾಗಿರುವ ಹೆಜಮಾಡಿಯಲ್ಲಿ ಅವರನ್ನು ಕಣ್ಣಂಗಾರ್ ಜುಮ್ಮಾ ಮಸೀದಿಯ ಖತೀಬ್ ಅಶ್ರಫ್ ಸಖಾಫಿ ಅವರ ಮೂಲಕ ಸ್ವಾಗತಿಸಲಾಯಿತು. ಬಳಿಕ ಮೂಳೂರಿನಲ್ಲಿ ಊಟ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಶನಿವಾರ ರಾತ್ರಿ ಉಡುಪಿಯಲ್ಲಿ ವಿಶ್ರಾಂತಿ ಪಡೆದ ಬಳಿಕ ಅವರು ತಮ್ಮ ಪ್ರಯಾಣವನ್ನು ಮುಂದುವರಿಸುತ್ತಿದ್ದಾರೆ.
ಇವರ ಈ ಪುಣ್ಯ ಕಾರ್ಯವನ್ನು ಗುರುತಿಸುವ ನಿಟ್ಟಿನಲ್ಲಿ ಪ್ರತಿಯೊಂದು ಊರಿನಲ್ಲೂ ಮುಸ್ಲಿಂ ಸಮುದಾಯದ ಯುವಕರು, ಮಕ್ಕಳು, ಮಹಿಳೆಯರು ಮಾರ್ಗದ ಬದಿಯಲ್ಲಿ ನಿಂತು ಶುಭ ಹಾರೈಸುತ್ತಿದ್ದಾರೆ. ಕಾಪುವಿನಲ್ಲೂ ಕಿಕ್ಕಿರಿದ ಜನಜಂಗುಳಿ ಕಂಡುಬಂತು.
UDUPI; 16 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ
ಸದ್ಯ ಶಿಹಾಬ್ ಮಲಪ್ಪುರಂ ಜಿಲ್ಲೆಯ ಕನ್ನಿ ಪುರದಲ್ಲಿ ಸೂಪರ್ ಮಾರ್ಕೆಟ್ ನಡೆಸುತ್ತಿದ್ದಾರೆ. ಕಾಲ್ನಡಿಗೆಯಲ್ಲೇ ಹಜ್ ಯಾತ್ರೆ ಕೈಗೊಳ್ಳಬೇಕು ಅನ್ನೋದು ಇವರ ದಶಕಗಳ ಕನಸಾಗಿತ್ತು. 2023 ನೇ ಸಾಲಿನ ಹಜ್ ಯಾತ್ರೆಯನ್ನು ಕಾಲ್ನಡಿಗೆಯ ಮೂಲಕ ಆರಂಭಿಸಿದ್ದು, ಪ್ರತಿದಿನ 25 ಕಿಲೋಮೀಟರ್ ನಡೆಯುತ್ತಿದ್ದಾರೆ. ಮುಂದಿನ 280 ದಿನಗಳಲ್ಲಿ, 8640 ಕಿಲೋಮೀಟರ್ ಹಾದಿಯನ್ನು ತಲುಪುವ ಗುರಿ ಹೊಂದಿದ್ದಾರೆ. ಪಾಕಿಸ್ತಾನ, ಇರಾನ್, ಇರಾಕ್, ಸೌದಿ ಅರೇಬಿಯಾ ಮೂಲಕ ಮೆಕ್ಕಾ ತಲುಪಲಿದ್ದಾರೆ.
ಇವರ ಈ ಸುದೀರ್ಘ ಪ್ರಯಾಣಕ್ಕೆ ವಿದೇಶಾಂಗ ವ್ಯವಹಾರ ಸಚಿವಾಲಯದಿಂದ ಎಲ್ಲಾ ಅನುಮತಿಗಳನ್ನು ಪಡೆದಿದ್ದು ವಿವಿಧ ದೇಶಗಳ ಗಡಿ ದಾಟಲು ವೀಸಾ ಹಾಗೂ ರಾಯಭಾರ ಕಚೇರಿಗಳಿಂದ ಅನುಮತಿ ಪತ್ರವನ್ನು ಪಡೆದುಕೊಂಡಿದ್ದಾರೆ. ತನ್ನ ಜೊತೆ ಸುಮಾರು 10 ಕೆಜಿ ತೂಕದ ಬ್ಯಾಗು ಇಟ್ಟುಕೊಂಡಿದ್ದು, ಕೆಲವೇ ಕೆಲವು ಜೊತೆ ಬಟ್ಟೆಗಳು ಹಾಗೂ ಅಗತ್ಯ ವಸ್ತುಗಳನ್ನು ಆ ಬ್ಯಾಗ್‌ನಲ್ಲಿ ಇರಿಸಿಕೊಂಡಿದ್ದಾರೆ. ಮಾರ್ಗ ಮಧ್ಯದಲ್ಲಿ ಸಿಗುವ ಮಸೀದಿಗಳಲ್ಲಿ ವಾಸ್ತವ್ಯ ಮಾಡಿ ಅಲ್ಲಿಯ ಜನರು ನೀಡುವ ಸತ್ಕಾರವನ್ನು ಪಡೆದು ಪ್ರಯಾಣ ಮುಂದುವರಿಸುತ್ತಿದ್ದಾರೆ.
Udupi; 15ನೇ ಶತಮಾನದ ವಿಜಯನಗರ ಕಾಲದ ಶಾಸನ ಪತ್ತೆ
ಕೇರಳ ಮತ್ತು ಕರ್ನಾಟಕದ ಮಾರ್ಗದಲ್ಲಿ ವಿಶೇಷ ಸ್ವಾಗತ ಸಿಕ್ಕಿರುವುದಕ್ಕೆ ಶಿಹಾಬ್ ಸಂತೋಷ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಕೇರಳ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಪಂಜಾಬ್ ದಾಟಿ ವಾಘಾ ಗಡಿಯಿಂದ ಪಾಕಿಸ್ತಾನ ತಲುಪಿ ತಮ್ಮ ಪ್ರಯಾಣವನ್ನು ಮುಂದುವರಿಸಲಿದ್ದಾರೆ.
ಇವರ ಪ್ರಯಾಣದ ವೇಳೆ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ನಿಂತು ಸಮುದಾಯದ ಜನರು ಸ್ವಾಗತಿಸುತ್ತಿರುವುದು ವಿಶೇಷವಾಗಿದೆ. ಜನರು ಜಮಾತಿನಿಂದ ಜಮಾತಿನ ವರೆಗೆ ಕಾಲ್ನಡಿಗೆಯಲ್ಲಿ ಇವರ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ಉಡುಪಿಯ ಪಡುಬಿದ್ರೆಯಲ್ಲಿ ಅಬ್ದುಲ್ ರೆಹಮಾನ್ ಮುಸ್ಲಿಯಾರ್ ಅವರು ಶಾಲು ಹೊದಿಸಿ ಅಭಿನಂದಿಸಿದರೆ, ಉಚ್ಚಿಲದಲ್ಲಿ ಸಾಮಾಜಿಕ ಕಾರ್ಯಕರ್ತ ನಿಸಾರ್ ಅಹಮದ್ ರಾಷ್ಟ್ರಧ್ವಜ ನೀಡಿ ಗೌರವಿಸಿದರು. ಹೀಗೆ ಕಾಲ್ನಡಿಗೆಯ ಮಾರ್ಗದ ಉದ್ದಕ್ಕೂ ನಾನಾ ರೀತಿಯಲ್ಲಿ ಇವರನ್ನು ಬರಮಾಡಿಕೊಳ್ಳಲಾಗಿದೆ.