
ವರದಿ: ಲಿಂಗೇಶ್ ಮರಕಲೆ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೀದರ್
ಬೀದರ್ (ಆ.19): ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳನ್ನು ಅತಿವೃಷ್ಟಿ ಪ್ರದೇಶಗಳೆಂದು ಘೋಷಿಸಬೇಕು ಎನ್ನುವ ನನ್ನ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ಪಂದನೆ ನೀಡಿದ್ದಾರೆ. ಹಾಗಾಗಿ ರೈತರು ಆತಂಕಕ್ಕೆ ಒಳಗಾಗಬಾರದು ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಮನವಿ ಮಾಡಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಸಚಿವರು, ಪ್ರಸಕ್ತ ಸಾಲಿನಲ್ಲಿ ಔರಾದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಮಳೆಯಾಗಿದೆ. ಔರಾದ ಹಾಗೂ ಕಮಲನಗರ ತಾಲ್ಲೂಕಿನಾದ್ಯಂತ ಸಂಚರಿಸಿ ಬೆಳೆ ಹಾನಿ ಮತ್ತು ಮನೆಹಾನಿಯನ್ನು ಕಣ್ಣಾರೆ ವೀಕ್ಷಿಸಿದ್ದೇನೆ.
ಮನೆ ಹಾನಿಯಾದ ಬಡ ಜನತೆಗೆ ಸರ್ಕಾರದ ಮೊದಲ ಕಂತಿನ ಪರಿಹಾರವನ್ನು ತುರ್ತಾಗಿ ವಿತರಿಸಿದ್ದೇನೆ. ಸಿಡಿಲು ಬಡಿತ ಮತ್ತು ಪ್ರವಾಹಕ್ಕೆ ಸಿಲುಕಿ ಮರಣ ಹೊಂದಿದವರ ಮನೆಗೆ ಭೇಟಿ ಮಾಡಿ ಪರಿಹಾರ ಧನ ವಿತರಿಸಲಾಗಿದೆ. ಜಾನುವಾರು ನಷ್ಟ ಅನುಭವಿಸಿದ ರೈತರಿಗೂ ಸ್ಪಂದಿಸಲಾಗಿದೆ. ಅಧಿಕಾರಿಗಳ ಸಭೆ ನಡೆಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮತ್ತು ನಿರಾಶ್ರಿತರಿಗೆ ಮನೆಗಳನ್ನು ಕಟ್ಟಿಸಿಕೊಡಲು ಕ್ರಮ ವಹಿಸುವಂತೆ ನಿರ್ದೇಶನ ನೀಡಿದ್ದೇನೆ ಎಂದಿದ್ದಾರೆ.
ರಸ್ತೆ ಅಪಘಾತ: ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಶಾಸಕ ಶರಣು ಸಲಗರ
ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರನ್ನು ಭೇಟಿ ಮಾಡಿ ಔರಾದ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ಎರಡೂ ತಾಲ್ಲೂಕುಗಳನ್ನು ಕೂಡಲೇ ಅತಿವೃಷ್ಟಿ ಪ್ರದೇಶವೆಂದು ಘೋಷಿಸಿ ಪರಿಹಾರಕ್ಕಾಗಿ ಅವಶ್ಯಕ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದೇನೆ. ಇದಕ್ಕೆ ಮುಖ್ಯಮಂತ್ರಿಯವರು ಮತ್ತು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಅನ್ವಯ ಹಾನಿಯ ಬಗ್ಗೆ ವಿಸ್ತೃತ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇನ್ನೂ ರಾಜ್ಯದ ಯಾವುದೇ ತಾಲ್ಲೂಕುಗಳನ್ನು ಅತಿವೃಷ್ಟಿ ಪ್ರದೇಶಗಳೆಂದು ಘೋಷಿಸಿಲ್ಲ. ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಅನ್ವಯ ಸರ್ಕಾರವು ಅತಿವೃಷ್ಟಿ ಪ್ರದೇಶಗಳ ಬಗ್ಗೆ ಘೋಷಿಸುತ್ತದೆ. ಔರಾದ ಹಾಗೂ ಕಮಲನಗರ ತಾಲ್ಲೂಕುಗಳು ಅತಿವೃಷ್ಟಿ ಪ್ರದೇಶವೆಂದು ಘೋಷಣೆಯಾಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಔರಾದ ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ಈ ವರ್ಷ ಅತೀ ಹೆಚ್ಚು ರೈತರು ಬೆಳೆ ವಿಮೆಗೆ ಹೆಸರು ನೋಂದಾಯಿಸಿದ್ದಾರೆ.
ಕೇಂದ್ರ ಸಚಿವ ಭಗವಂತ, ಶಾಸಕ ಸಲಗರ ಮಧ್ಯೆ ಗಲಾಟೆ: ಖೂಬಾ ಕಾರು ಜಖಂ
ವಿಮಾ ಕಂಪನಿಗಳಿಂದಲೂ ಸರ್ವೇ ಕೆಲಸ ನಡೆಯುತ್ತಿದೆ. ಬೆಳೆ ಹಾನಿಯಾದ ರೈತರಿಗೆ ಅಗತ್ಯ ಪರಿಹಾರ ಸಿಗಲಿದೆ ಎಂದು ತಿಳಿಸಿದ್ದಾರೆ. ಸರ್ಕಾರ ರೈತರ ಹಿತದೃಷ್ಟಿಗೆ ಬದ್ಧವಾಗಿದೆ. ನಾನು ಸದಾ ನಿಮ್ಮೊಂದಿಗಿದ್ದೇನೆ. ಹಾನಿಗೆ ಒಳಗಾದ ಯಾವೊಬ್ಬ ರೈತರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ರೈತರು ಯಾವುದೇ ಕಾರಣಕ್ಕೂ ಆತಂತಕ್ಕೆ ಒಳಗಾಗಬಾರದು ಎಂದು ಸಚಿವರು ಮನವಿ ಮಾಡಿದ್ದಾರೆ.