ಮನೆ ಮಕ್ಕಳಂತಿದ್ದ ಜಾನುವಾರುಗಳನ್ನು ರೈತ ಹೀಗೆ ಅಸಹಾಯಕತೆಯಿಂದ ಮಾರುತ್ತಿರೋದು ವಿಪರ್ಯಾಸವೇ ಸರಿ
ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ
ಹಾವೇರಿ(ನ.17): ಜಾನುವಾರುಗಳಿಗೆ ಬರುವ ಚರ್ಮ ಗಂಟು ರೋಗ ರೈತನ ಬದುಕಿನ ಮೇಲೆ ಬರೆ ಎಳೆದಿದೆ. ಲಂಪಿಸ್ಕಿನ್ ರೋಗ ರೈತನ ಬದುಕನ್ನೇ ಬರ್ಬಾದ್ ಮಾಡಿದೆ. ರೋಗದಿಂದ ಚೇತರಿಸಿಕೊಂಡ ಎತ್ತುಗಳು ಉಳಮೆ ಮಾಡಲು ಶಕ್ತಿ ಕಳೆದುಕೊಂಡು ನಿತ್ರಾಣವಾಗಿವೆ. ಇದರಿಂದ ಅಸಹಾಯಕನಾದ ಅನ್ನದಾತ ಬಂದಷ್ಟು ಬೆಲೆಗೆ ಎತ್ತುಗಳನ್ನು ಮಾರಾಟ ಮಾಡ್ತಿದ್ದಾನೆ. ಈ ವರ್ಷ ಮಳೆಯಿಂದ ರೈತನ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಇದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಇತ್ತ ಲಂಪಿಸ್ಕಿನ್ ರೋಗ ಜಾನುವಾರುಗಳನ್ನು ಬಲಿ ಪಡೆಯುತ್ತಿದೆ. ಇಂಥ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರು ತಮ್ಮ ಜೀವನಾಡಿಯಾಗಿರೋ ಎತ್ತುಗಳನ್ನು ಬಂದ ಬೆಲೆಗೆ ಮಾರಾಟ ಮಾಡ್ತಿದ್ದಾರೆ.
undefined
ಚರ್ಮ ಗಂಟು ರೋಗ ತಮ್ಮ ಎತ್ತುಗಳಿಗೂ ಬರಬಹುದು ಎಂಬ ಆತಂಕದಿಂದ ಕಂಗೆಟ್ಟ ರೈತ ಎತ್ತುಗಳನ್ನು ಬಂದ ಬೆಲೆಗೆ ಮಾರಾಟ ಮಾಡ್ತಿದ್ದಾನೆ. ಹಾವೇರಿ ಜಿಲ್ಲೆಯಲ್ಲಿ ಜಾನುವಾರುಗಳ ಚರ್ಮ ಗಂಟು ರೋಗ ಮರಣ ಮೃದಂಗ ಬಾರಿಸಿದೆ. ಪಶು ಸಂಗೋಪನೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಈಗಾಗಲೇ ಸುಮಾರು 2000 ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. ರೋಗದಿಂದ ಚೇತರಿಸಿಕೊಂಡ ಎತ್ತುಗಳು ಉಳುಮೆ ಮಾಡುವ ಶಕ್ತಿ ಕಳೆದುಕೊಂಡಿವೆ. ರೋಗದಿಂದ ಬಳಲಿ ರೋಗ ನಿರೋಧಕ ಶಕ್ತಿ ಕಳೆದುಕೊಂಡಿರುವ ಎತ್ತುಗಳನ್ನು ಕಸಾಯಿಖಾನೆಯವರೂ ಖರೀದಿ ಮಾಡ್ತಿಲ್ಲ. ಇತ್ತ ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತ ಮಾಡಿಕೊಂಡ ಸಾಲ ತೀರಿಸಬೇಕಿದೆ. ಹೀಗಾಗಿ ರೈತರು ಬಂದ ಬೆಲೆಗೆ ಜಾನುವಾರು ಮಾರಾಟ ಮಾಡ್ತಿದ್ದಾರೆ.
ಕೊಪ್ಪಳದಲ್ಲಿ ವಿಚಿತ್ರ ಕಾಯಿಲೆಗೆ 20ಕ್ಕೂ ಅಧಿಕ ರಾಸುಗಳ ಸಾವು: ರೈತರು ಕಂಗಾಲು
ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದ ಎತ್ತುಗಳನ್ನು 40,000 ಸಾವಿರಕ್ಕೆ ಮಾರಾಟ ಮಾಡ್ತಿದ್ದಾರೆ. ಐದತ್ತು ಸಾವಿರ ರೂಪಾಯಿಗೆ ಹಸು, ಕರು ಸೇಲ್ ಆಗ್ತಿವೆ. ಚರ್ಮಗಂಟು ರೋಗಕ್ಕೆ ಸಾವಿರಾರು ಜಾನುವಾರುಗಳು ಸಾವನ್ನಪ್ಪಿವೆ. ಇದರಿಂದ ರೈತರು ದಿಕ್ಕು ಕಾಣದಂತಾಗಿದ್ದಾರೆ. ಚರ್ಮ ಗಂಟು ರೋಗ ಸಾಂಕ್ರಾಮಿಕವಾಗಿದ್ದು, ರೋಗ ವ್ಯಾಪಿಸಬಹುದು ಎಂಬ ಕಾರಣಕ್ಕೆ ಹಾವೇರಿಯಲ್ಲಿ ಪ್ರತಿ ಗುರುವಾರ ನಡೆಯುತ್ತಿದ್ದ ಜಾನುವಾರು ಸಂತೆ ಕೂಡಾ ಬಂದ್ ಮಾಡಲಾಗಿತ್ತು. ಇದರಿಂದ ಎತ್ತುಗಳನ್ನು ಮಾರೋಕೆ ಮಾರ್ಕೇಟ್ ಕೂಡಾ ಇಲ್ಲ. ಎತ್ತುಗಳಮಾರ್ಕೇಟ್ ದರ ಕೂಡಾ ಕುಸಿದು ಬಿದ್ದಿದೆ.ಮಾರುಕಟ್ಟೆ ಸಿಗದೇ ಬಂದ ಬೆಲೆಗೆ ರಸ್ತೆಯಲ್ಲಿಯೇ ಎತ್ತುಗಳ ಮಾರಾಟ ಮಾಡಲಾಗ್ತಿದೆ.
ಅಸಹಾಯಕತೆಯಲ್ಲಿರೋ ರೈತರಿಗೆ ಬೇರೆ ದಾರಿಯೇ ಕಾಣದಾಗಿದೆ. ಮೇವಿನ ಕೊರತೆ, ಸಾಲದ ಹೊಡೆತ, ರೋಗದಿಂದ ತ್ರಾಣ ಕಳೆದುಕೊಂಡ ಜಾನುವಾರುಗಳನ್ನು ಮಾರೋದೊಂದೇ ಪರಿಹಾರ ಅಂತಿದ್ದಾರೆ ರೈತರು. ಮನೆ ಮಕ್ಕಳಂತಿದ್ದ ಜಾನುವಾರುಗಳನ್ನು ರೈತ ಹೀಗೆ ಅಸಹಾಯಕತೆಯಿಂದ ಮಾರುತ್ತಿರೋದು ವಿಪರ್ಯಾಸವೇ ಸರಿ.