ರೈತರ ನಿದ್ದೆಗೆಡಿಸಿದ ಗದಗ-ಹೊನ್ನಾಳಿ ರಾಜ್ಯ ಹೆದ್ದಾರಿ ಕಾಮಗಾರಿ

By Kannadaprabha NewsFirst Published Dec 10, 2022, 2:23 PM IST
Highlights
  • ರೈತರ ನಿದ್ದೆಗೆಡಿಸಿದ ರಾಜ್ಯ ಹೆದ್ದಾರಿ ಕಾಮಗಾರಿ
  • ಎರಡು ವರ್ಷಗಳು ಕಳೆಯುತ್ತಾ ಬಂದರೂ ಪೂರ್ಣವಾಗದ ಗದಗ-ಹೊನ್ನಾಳಿ ರಸ್ತೆ ಕಾಮಗಾರಿ
  •  ಅಪೂರ್ಣಗೊಂಡ ರಸ್ತೆಯಿಂದ ಏಳುವ ಧೂಳಿನಿಂದಾಗಿ ಅಕ್ಕಪಕ್ಕದಲ್ಲಿ ಹೊಲಗಳ ಬೆಳೆ ಸಂಪೂರ್ಣ ಹಾಳು
  • ತ್ವರಿತವಾಗಿ ರಸ್ತೆ ಕಾಮಗಾರಿ ಪೂರೈಸುವಂತೆ ಸಾರ್ವಜನಿಕರ ಆಗ್ರಹ

ಮಹೇಶ ಛಬ್ಬಿ

ಗದ​ಗ (ಡಿ.10) : ನಮ್ಮೂರ ಸಣ್ಣ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮಾಡುತ್ತಾರೆ ಎನ್ನುವ ಕಾರಣಕ್ಕಾಗಿ ಈ ಭಾಗದ ಗ್ರಾಮಗಳ ರೈತರು ತಮ್ಮ ಜಮೀನು ಕಳೆದುಕೊಂಡಿದ್ದರೂ ಖುಷಿಯಿಂದಲೇ ಇದ್ದರು. ಆದರೆ, ಯಾವಾಗ ರಸ್ತೆ ನಿರ್ಮಾಣದ ಗುತ್ತಿಗೆ ಪಡೆದ ಕಂಪನಿ ಕೆಲಸ ಪ್ರಾರಂಭಿಸಿ ಕಾಮಗಾರಿಯಲ್ಲಿ ವಿಳಂಬ ನೀತಿ ಅನುಸರಿಸುತ್ತಾ ಬಂತೋ ಅಂದಿನಿಂದ ಈ ಗ್ರಾಮಗಳ ರೈತರಿಗೆ ನಿದ್ದೆಯೇ ಇಲ್ಲದಂತಾಗಿದೆ.

ಗದಗ ಜಿಲ್ಲೆಯ ಅನೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ರಸ್ತೆ ನಿರ್ಮಾಣದಲ್ಲಿ ಸರ್ಕಾರ ಮೀನಾ ಮೇಷ ಎಣಿಸುತ್ತಿರುವುದರಿಂದ ಸುಗಮ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ. ಗದಗ ಜಿಲ್ಲೆಯವರೇ ಲೋಕೋಪಯೋಗಿ ಸಚಿವರು ಇರುವಾಗ ಗದಗ ಜಿಲ್ಲೆಯಲ್ಲೇ ಇಂತಹ ದುಃಸ್ಥಿತಿ ಒದಗಿರುವುದು ಜನರಿಗೆ ನಿರಾಸೆ ಉಂಟುಮಾಡಿದೆ.

ವೃದ್ಧೆಯನ್ನ ಜೋಳಿಗೆಯಲ್ಲಿ ಆಸ್ಪತ್ರೆಗೆ ಹೊತ್ತೊಯ್ದ ಸಂಬಂಧಿಕರು!

ಗದಗನಿಂದ ಹೊನ್ನಾಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಮಧ್ಯ ಕರ್ನಾಟಕ-ಮುಂಬೈ ಕರ್ನಾಟಕ ಜೋಡಿಸುವುದು ಈ ಯೋಜನೆಯ ಉದ್ದೇಶ. ದ್ವಿಪಥ ನಿರ್ಮಾಣ ಕಾಮಗಾರಿ ಒಟ್ಟು 138.2 ಕಿಮೀ ರಸ್ತೆಯಿದ್ದು, ಗದಗದಿಂದ ನಾಗಾವಿ, ಶಿರುಂಜ, ಸೊರಟೂರು, ಶಿರಹಟ್ಟಿ, ಬೆಳ್ಳಟ್ಟಿಮಾರ್ಗವಾಗಿ ಮುಂದೆ ಸಾಗುವ ಈ ರಸ್ತೆ .900 ಕೋಟಿಗಳಿಗೆ ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಕಳೆದ 14ರ ಮಾಚ್‌ರ್‍ 2020ರಂದು ಸದ್ಭವ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಯಾವಾಗ ಕೆಲಸ ಪ್ರಾರಂಭವಾಯಿತೋ ಆಗಿನಿಂದಲೇ ರೈತರಿಗೆ ಸಮಸ್ಯೆ ಸೃಷ್ಟಿಯಾಗಿದೆ.

ಹೆದ್ದಾರಿ ರಸ್ತೆ ಕಾಮಗಾರಿ ಪ್ರಾರಂಭವಾಗಿ 2 ವರ್ಷಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಮುಗಿಯವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಈಗಾಗಲೇ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ ಅಕ್ಕಪಕ್ಕದಲ್ಲಿ ಡಾಂಬರೀಕರಣ ಮಾಡಿಲ್ಲ. ದಿನನಿತ್ಯ ಪ್ರಯಾಣಿಕರು, ಚಾಲಕರು ನರಕಯಾತನೆ ಅನುಭವಿಸುವಂತಾಗಿದೆ.

ಹೀಗೆ ಅಲ್ಲಲ್ಲಿ ರಸ್ತೆ ನಿರ್ಮಾಣ ಬಿಟ್ಟಿರುವುದರಿಂದ ಅನೇಕ ತಗ್ಗು, ಗುಂಡಿಗಳು ಬಿದ್ದಿವೆ. ಭಾರಿ ವಾಹನಗಳ ಧೂಳಿನಿಂದ ಗದಗ, ಬೆಳಧಡಿ, ಶಿರುಂಜ, ಯಲಿಶಿರೂರ ಮಾರ್ಗವಾಗಿ ಸಾಗುವ ಈ ಹೆದ್ದಾರಿಯ ಅಕ್ಕ ಪಕ್ಕದಲ್ಲಿರುವ ಬೆಳೆಗಳು ಹಾಳಾಗುತ್ತಿವೆ. ಬೆಂಡೆಕಾಯಿ, ಹೀರೇಕಾಯಿ, ಬೀನ್ಸ್‌, ಟೊಮ್ಯಾಟೊ, ಹೂಕೋಸು, ಬಾಳೆ, ಹತ್ತಿ ಬೆಳೆಯ ಮೇಲೆ ಧೂಳು ಕುಳಿತು ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯದಂತಾಗಿದೆ. ಸಾರ್ವಜನಿಕರ ಆರೋ​ಗ್ಯದ ಮೇಲೂ ದುಷ್ಪಾ​ರಿ​ಣಾಮ ಬೀರುತ್ತಿದೆ. ಅಸ್ತಮಾದಂತಹ ಅನೇಕ ರೋಗಗಳು ಆವರಿಸುವಂತಾಗಿದೆ. ರಸ್ತೆಗಳಿಗೆ ನೀರು ಹಾಕಿ, ಇಲ್ಲವಾದರೆ ಕಾಮಗಾರಿ ಪೂರ್ಣಗೊಳಿಸಿ ಎಂದು ಈ ಭಾಗದ ಗ್ರಾಮ​ಸ್ಥ​ರು ಒತ್ತಾಯಿಸಿದ್ದಾರೆ.

ರಸ್ತೆ ಇಲ್ಲ, ಆಸ್ಪತ್ರೆ ಇಲ್ಲ : ತಾಯಿ ಮುಂದೆಯೇ ಪ್ರಾಣಬಿಟ್ಟ ನವಜಾತ ಅವಳಿ ಮಕ್ಕಳು

ಕಳೆದೆರಡು ವರ್ಷಗಳ ಹಿಂದೆ ಕಾಮಗಾರಿ ಪ್ರಾರಂಭವಾಗಿದ್ದು, ಈ ವರೆಗೂ ಪೂರ್ಣಗೊಳ್ಳುತ್ತಿಲ್ಲ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ​ಮಳೆಗಾಲ​ದಲ್ಲಿ ಈ ರಸ್ತೆ ಸ್ಥಿತಿ ಹೇಳ​ತೀ​ರ​ದು. ಈ ಮಾರ್ಗ​ದಲ್ಲಿ ಗದಗ ನಗ​ರಕ್ಕೆ ತೆರಳಬೇಕಾ​ದರೆ ಕೈಯಲ್ಲಿ ಜೀವ ಹಿಡಿದು ಸಾಗ​ಬೇ​ಕು. ಎಷ್ಟೋ ಬಾರಿ ನಮ್ಮ ಮುಂದೆಯೇ ಬೈಕ್‌ ಸವಾರರು ಜಾರಿ ಬಿದ್ದು ಕೈಕಾಲುಗಳನ್ನು ಮುರಿದುಕೊಂಡ ಘಟನೆಗಳು ಸಂಭವಿಸಿವೆ. ಆದಾಗ್ಯೂ ಈ ಬಗ್ಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ.

ಸಿ.ಬಿ. ಸಂಶಿ, ಗದಗ ಎಪಿಎಂಸಿ ಮಾಜಿ ಸದಸ್ಯ, ಸೊರಟೂರು

ಈಗಾಗಲೇ ಜಿಲ್ಲಾಡಳಿತ ಭವನದಿಂದ ಭೂಸ್ವಾಧೀನ ಮಾಡುವ ಕೆಲಸ ಪೂರ್ಣಗೊಂಡಿದೆ. ಕೆಲ ರೈತರು ಭೂಮಿ ನೀಡಲು ನಿರಾಕರಿಸಿದ್ದರಿಂದ ಅವರ ಮನವೊಲಿಸಿ ಅವರಿಗೆ ನೀಡಬೇಕಾದ ಹಣವನ್ನು ಕೋರ್ಚ್‌ಗೆ ಒಪ್ಪಿಸಲಾಗಿದೆ. ಇನ್ನು ತಹಸೀಲ್ದಾರ್‌ರಿಂದ ಭೂಮಿಯನ್ನು ಕಬ್ಜಾ ಪಡೆಯಬೇಕಿದೆ. ಹೀಗಾಗಿ ಕಾಮಗಾರಿ ಕುಂಠಿತವಾಗಿದ್ದು ಇನ್ನೇನು ಒಂದೆರಡು ವಾರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು.

ಗುರುರಾಜ ಕೊಡೇಕಲ್‌, ಟಾಸ್‌್ಕ ಮ್ಯಾನೇಜರ್‌, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಗದಗ

click me!