ಅಡಿಕೆಗೆ ಬಾಧಿಸುತ್ತಿರುವ ಎಲೆಚುಕ್ಕಿ ರೋಗದ ನಿಯಂತ್ರಣಕ್ಕಾಗಿ ಜಗದ್ಗುರುಗಳ ಮೊರೆಹೋದ ಕೃಷಿಕರು

By Suvarna News  |  First Published Oct 30, 2022, 9:18 PM IST

ಮಲೆನಾಡು ಜಿಲ್ಲೆಗಳ ಅಡಿಕೆ ತೋಟಗಳಿಗೆ ವ್ಯಾಪಕವಾಗಿ ಹರಡುತ್ತಿರುವ ಎಲೆಚುಕ್ಕಿ ರೋಗ ನಿವಾರಣೆಗಾಗಿ ಅಡಿಕೆ ಬೆಳೆಗಾರರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠದ ಭಾರತೀತೀರ್ಥ ಸ್ವಾಮೀಜಿಗಳನ್ನು ಭೇಟಿ ಮಾಡಿ ಅನುಗ್ರಹಕ್ಕಾಗಿ ಪ್ರಾರ್ಥಿಸಿದರು.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್  

ಚಿಕ್ಕಮಗಳೂರು (ಅ.30): ಮಲೆನಾಡು ಜಿಲ್ಲೆಗಳ ಅಡಿಕೆ ತೋಟಗಳಿಗೆ ವ್ಯಾಪಕವಾಗಿ ಹರಡುತ್ತಿರುವ ಎಲೆಚುಕ್ಕಿ ರೋಗ ನಿವಾರಣೆಗಾಗಿ ಅಡಿಕೆ ಬೆಳೆಗಾರರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠದ ಭಾರತೀತೀರ್ಥ ಸ್ವಾಮೀಜಿಗಳನ್ನು ಭೇಟಿ ಮಾಡಿ ಅನುಗ್ರಹಕ್ಕಾಗಿ ಪ್ರಾರ್ಥಿಸಿದರು. ಚಿಕ್ಕಮಗಳೂರು, ಶೃಂಗೇರಿ, ಹೊರನಾಡು, ಕಳಸ, ಶಿವಮೊಗ್ಗ, ತೀರ್ಥಹಳ್ಳಿ ಸೇರಿದಂತೆ ಮಲೆನಾಡು ಜಿಲ್ಲೆಗಳ ಅನೇಕ ಭಾಗವನ್ನು ವ್ಯಾಪಿಸಿರುವ ಎಲೆಚುಕ್ಕಿ ರೋಗಕ್ಕೆ ಪರಿಹಾರ ಕ್ರಮಗಳನ್ನು ಸೂಚಿಸಬೇಕೆಂದು ಜಗದ್ಗುರುಗಳಲ್ಲಿ ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯ ಧರ್ಮದರ್ಶಿಗಳಾದ ಭೀಮೇಶ್ವರ ಜೋಷಿಗಳು, ಅನೇಕ ಕೃಷಿಕರು ಹಾಗೂ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಅವರು ಗುರುಗಳಲ್ಲಿ ಪ್ರಾರ್ಥನೆ ಮಾಡಿದರು. ಶಾರದಾಪೀಠದ ನರಸಿಂಹವನದ ಗುರು ನಿವಾಸದಲ್ಲಿ ವಿಧುಶೇಖರಭಾರತೀ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ನಿಯೋಗ ಜಿಲ್ಲೆಯ ಅಡಿಕೆ ಬೆಳೆಗಾರರು ಭೇಟಿ ಮಾಡಿ ಎಲೆಚುಕ್ಕಿ ರೋಗಕ್ಕೆ ಸೂಕ್ತ ಪರಿಹಾರವನ್ನು ತಾವು ಅನುಗ್ರಹಿಸಿ ಪರಿಹಾರ ನೀಡಬೇಕು ಎಂದು ಪ್ರಾರ್ಥನೆ ಸಲ್ಲಿಸಿದರು. 

Tap to resize

Latest Videos

ಕಳೆದ 5 ದಶಕಗಳಿಂದ ಮಲೆನಾಡಿನ ಪ್ರಮುಖ ಬೆಳೆಗಳು ಮಣ್ಣು ಪಾಲು 
ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿಗಳಾದ ಭೀಮೇಶ್ವರ ಜೋಶಿ ಅವರು ಮಾತನಾಡಿ, ಕಳೆದ 5  ದಶಕಗಳಿಂದ ಮಲೆನಾಡಿನ ಪ್ರಮುಖ ಬೆಳೆಯಾದ ಅಡಿಕೆಗೆ ಹಳದಿ ಎಲೆ ರೋಗ ತಗುಲಿ ರೈತರ ತೋಟಗಳು ಹಂತ ಹಂತವಾಗಿ ನಾಶವಾಗುತ್ತಾ ಬಂದಿದೆ. ಹತ್ತು ವರ್ಷಗಳಿಂದ ಹವಾಮಾನ ವೈಪರೀತ್ಯದಿಂದ ಬೆಳೆಹಾನಿ, ಕೊಳೆರೋಗವನ್ನು ಕೃಷಿಕರು ಎದುರಿಸುತ್ತಿದ್ದು ಅವರ ಬದುಕು ಸಂಪೂರ್ಣವಾಗಿ ಅತಂತ್ರವಾಗಿದೆ.ಇದಲ್ಲದೇ ಕಳಸ, ಹೊರನಾಡು, ಶೃಂಗೇರಿಯ ನೆಮ್ಮಾರು, ಕೆರೆಕಟ್ಟೆ, ಭಾಗದ ಅಡಿಕೆ ತೋಟಗಳು ಕಳೆದ ವರ್ಷವೇ ಹಳದಿ ಎಲೆ ರೋಗಕ್ಕೆ ತತ್ತರಿಸಿ ಅಳಿವಿನ ಅಂಚನ್ನು ತಲುಪಿದೆ. ಕಳೆದ ಎರಡು ವರ್ಷಗಳಿಂದ ಅಡಿಕೆಗೆ ಎಲೆ ಚುಕ್ಕಿ ರೋಗ ಮಲೆನಾಡಿನಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ತೋಟಗಳು ನಾಶವಾಗುತ್ತಿದೆ ಇದಕ್ಕೆ ಪರಿಹಾರ ಕ್ರಮಗಳು ದೊರೆಯಬೇಕಿದೆ ಎಂದರು. 

ಎಲೆಚುಕ್ಕಿ ರೋಗಕ್ಕೆ ಔಷಧ ಒದಗಿಸದ ಸರ್ಕಾರ; ರೈತರ ಆಕ್ರೋಶ

ಹತ್ತು ದಿನ ಕೋಟಿ ಕುಂಕುಮಾರ್ಚನೆಗೆ ಸಲಹೆ 
ಈ ಕುರಿತು ಭಕ್ತರನ್ನು ಅನುಗ್ರಹಿಸಿದ ಜಗದ್ಗುರು ವಿಧುಶೇಖರಭಾರತೀ ಶ್ರೀಗಳು  ಭಾರತದೇಶ ಕೃಷಿ ಪ್ರಧಾನವಾದ ದೇಶವಾಗಿದ್ದು, ರೈತರು ಶ್ರಮಪಟ್ಟು ಬೆಳೆಸುವ ಬೆಳೆಗಳು ಪ್ರಸ್ತುತ ನಾಶವಾಗುತ್ತಿರುವ ಕುರಿತು ನಮಗೆ ಅತ್ಯಂತ ಬೇಸರವಾಗಿದೆ. ಅಡಿಕೆ ಎಲೆಚುಕ್ಕಿ ರೋಗ ನಿವಾರಣೆಗೆ ಮತ್ತು ರೈತರ ಬದುಕಿನ ಶ್ರೇಯಸ್ಸಿಗಾಗಿ ಮಾಘ ಮಾಸದಲ್ಲಿ ಹತ್ತು ದಿನ ಕೋಟಿ ಕುಂಕುಮಾರ್ಚನೆ ಹಾಗೂ 11ನೇ ದಿನ ಲಲಿತಾ ಹೋಮವನ್ನು ಶಾರದಾ ಪೀಠದಲ್ಲಿ ನಡೆಸಬೇಕು ಎಂದು ನಮ್ಮ ಗುರುಗಳಾದ ಭಾರತೀತೀರ್ಥ ಸ್ವಾಮೀಜಿಯವರು ಅಪ್ಪಣೆ ಮಾಡಿದ್ದಾರೆ. ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

 

ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ, ಮೊದಲೇ ಕ್ರಮ ಕೈಗೊಂಡ್ರೆ ಮುಂದಾಗುವ ಅನಾಹುತ ತಡೆಯಬಹುದು: ಡಾ.ನಿರಂಜನ್

ನಾವು ನೀಡುವ ಮಂತ್ರಾಕ್ಷತೆ ಹಾಗೂ ಶಾರದೆಯ ಸನ್ನಿಧಿಯಲ್ಲಿ ರೈತರು ಪ್ರಾರ್ಥನೆ ಮಾಡಿದ ಕುಂಕುಮ ಪ್ರಸಾದವನ್ನು ಪ್ರತಿ ರೈತರು ತೋಟಗಳಲ್ಲಿ ಸಿಂಪಡಿಸಬೇಕು. ಇಂದಿನಿಂದಲೇ ರೈತರಿಗೆ ಬಂದಿರುವ ಸಂಕಷ್ಟ ದೂರವಾಗುತ್ತದೆ ಎಂದು ರೈತರಿಗೆ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.ರೈತರು ತೋಟಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಿ ವಲಸೆ ಹೋಗುವ ಪರಿಸ್ಥಿತಿ ಉಂಟಾಗಿದ್ದು ಶಾರದೆ ಹಾಗೂ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತೀ ಸ್ವಾಮೀಜಿಗಳ ಅನುಗ್ರಹದಿಂದ ಕೃಷಿಕರ ಬದುಕು ಅಭಿವೃದ್ದಿಯಾಗಬೇಕು ಅವರ  ಅನುಗ್ರಹ ಮಾನವ ಸಂಕುಲಕ್ಕೆ ಅವಶ್ಯವಾದುದು ಎಂದರು.ಈ ವೇಳೆ ಮ್ಯಾಮ್ಕೋಸ್ ಅಧ್ಯಕ್ಷ ಮಹೇಶ್, ನಿರ್ದೇಶಕ ಸುರೇಶ್ಚಂದ್ರ ಅಂಬ್ಲೂರು, ಕೃಷಿಕರಾದ ಜಿ.ಎಂ ಸತೀಶ್, ಕವಿಲುಕೂಡಿಗೆ ಶ್ರೀಧರ್ರಾವ್, ಮಂಜಪ್ಪಯ್ಯ, ಶ್ರೇಯಸ್ಸು, ವಿಜಯರಂಗ ಕೋಟೆತೋಟ, ಕೆ.ಆರ್ ಪ್ರಭಾಕರ್, ಬಿ.ಕೆ ರವಿ, ಕೆ.ಆರ್ ಭಾಸ್ಕರ್, ಕೇಶವೆಗೌಡ್ರು, ರುದ್ರಯ್ಯ ಆಚಾರ್ಯ, ಆಶಾಲತಾ ಜೈನ್, ತಿಮ್ಮಪ್ಪ ಗೌಡ್ರು ಇದ್ದರು.

click me!