ಸರ್ವ ಜನರ ಅಭಿವೃದ್ಧಿ, ಆಸರೆಯಾಗಿ ದೂರದೃಷ್ಟಿಇಟ್ಟುಕೊಂಡು ಬೆಂಗಳೂರು ನಿರ್ಮಾಣಕ್ಕೆ ಅಂಕಿತ ಹಾಕಿದ ನಾಡಪ್ರಭು ಕೆಂಪೇಗೌಡರು ಜಗತ್ತಿನ ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಮಂಡ್ಯ (ಅ.30): ಸರ್ವ ಜನರ ಅಭಿವೃದ್ಧಿ, ಆಸರೆಯಾಗಿ ದೂರದೃಷ್ಟಿಇಟ್ಟುಕೊಂಡು ಬೆಂಗಳೂರು ನಿರ್ಮಾಣಕ್ಕೆ ಅಂಕಿತ ಹಾಕಿದ ನಾಡಪ್ರಭು ಕೆಂಪೇಗೌಡರು ಜಗತ್ತಿನ ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು. ನಗರದ ಕಾಳಿಕಾಂಭ ದೇವಾಲಯದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಅನಾವರಣ ನಿಮಿತ್ತ ಮಂಡ್ಯ ಜಿಲ್ಲೆಯ ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯವಲ್ಲದೇ ರಾಷ್ಟ್ರ ಹಾಗೂ ವಿವಿಧ ದೇಶವಾಸಿಗಳಿಗೆ ನೆಲೆ ಕಲ್ಪಿಸಿರುವ ಬೆಂಗಳೂರು ಇಂದು ವಿಶ್ವಮಾನ್ಯತೆ ಗಳಿಸಿದೆ. ಇದಕ್ಕೆ ಕೆಂಪೇಗೌಡರ ಕೊಡುಗೆ ಅಪಾರವಾಗಿದೆ. ಈ ವಿಶ್ವಮಾನ್ಯತೆಯ ಬೆಂಗಳೂರು ನಿರ್ಮಾತೃವಿಗೆ ಗೌರವ ಸಲ್ಲಿಸಲು ರಾಜ್ಯ ಸರ್ಕಾರ 108 ಅಡಿ ಎತ್ತರದ ಕಂಚಿನ ಪುತ್ಥಳಿ ನಿರ್ಮಿಸಿದೆ ಎಂದರು. ನಾಡಪ್ರಭು ಕೆಂಪೇಗೌಡರ ಪುತ್ಥಳಿ ಬಳಿ 65 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಥೀಮ್ ಪಾರ್ಕ್ಗೆ ರಾಜ್ಯದ ಎಲ್ಲ ಜಿಲ್ಲೆಗಳ ಗ್ರಾಪಂಗಳಿಂದ ಮೃತ್ತಿಕೆ ಸಂಗ್ರಹಕ್ಕಾಗಿ ಜಿಲ್ಲೆಯ 233 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 1500 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ರಥ ಸಂಚಾರ ನಡೆಸಲಿದೆ ಎಂದರು.
ಕೆಆರ್‌ಎಸ್ ಬೃಂದಾವನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಪ್ರವಾಸಿಗರಿಗೆ ನಿರ್ಬಂಧ
ಕೆಂಗಲ್ ಹನುಮಂತಯ್ಯನವರ ಉದಾರತೆಯಿಂದ ವಿಧಾನಸೌಧ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೂರದೃಷ್ಟಿಯಿಂದ ರಾಜ್ಯದೆಲ್ಲೆಡೆಯಿಂದ ಪವಿತ್ರ ಮೃತ್ತಿಕೆ ಸಂಗ್ರಹಿಸಿ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಧಾರ್ಮಿಕ, ಪಾರಂಪರಿಕ, ಕಲ್ಯಾಣಿ ಇನ್ನಿತರ ಪ್ರಸಿದ್ಧ ಸ್ಥಳದಲ್ಲಿ ಮಣ್ಣು ಸಂಗ್ರಹಿಸಿ ಸಮರ್ಪಿಸಿ ಎಂದರು. ಕೆಂಪೇಗೌಡ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ಎಲ್ಲ ಸಮುದಾಯ ಹಾಗೂ ಎಲ್ಲ ಕಸುಬುಗಳಿಗೆ ಬೆಂಗಳೂರಿನಲ್ಲಿ ಮಾರುಕಟ್ಟೆಕಲ್ಪಿಸಿಕೊಟ್ಟರು. 700 ವರ್ಷಗಳ ಹಿಂದೆ ನಾಡು ಕಟ್ಟಿದ ಕೆಂಪೇಗೌಡರಂತಹ ದೊರೆಗೆ ಗೌರವ ಸಲ್ಲಿಸಲು ಜಾತಿ, ಮತ, ಪಕ್ಷ ಬೇಧವಿಲ್ಲದೇ ಎಲ್ಲರೂ ಬೆಂಬಲಿಸುವ ಮೂಲಕ ಜಿಲ್ಲೆಯ ಗೌರವವನ್ನು ಎತ್ತಿ ಹಿಡಿಯೋಣ ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಬೆಂಗಳೂರು ನಿರ್ಮಾತೃ ಕೆಂಪೇಗೌಡರಿಗೆ ಗೌರವ ಸಲ್ಲಿಸಲು ಸರ್ಕಾರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣಕ್ಕೆ ಮೃತ್ತಿಕೆ ಸಂಗ್ರಹಣೆಗೆ ಮುಂದಾಗಿದೆ. ಜನರು ಅಭಿಮಾನ ಹಾಗೂ ಭಕ್ತಿ ಗೌರವದಿಂದ ಈ ಕಾರ್ಯ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು. ಎಲ್ಲ ಸಮುದಾಯಗಳ ಭಾತೃತ್ವವನ್ನು ಕಾಪಾಡಿದ ಕೆಂಪೇಗೌಡರು ವಿಶ್ವ ನಿಬ್ಬೆರಾಗುವ ರೀತಿಯಲ್ಲಿ ಬೆಂಗಳೂರು ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದರು. ಇಂತಹ ಮೇರು ಪುರುಷನ ಸ್ಮರಣೆಗಾಗಿ ಜಿಲ್ಲೆಯೆಲ್ಲೆಡೆ ನ.7ರವರೆಗೆ 2 ರಥಗಳು ಸಂಚಿರಿಸಿ ಮೃತ್ತಿಕೆ ಸಂಗ್ರಹಿಸಲಿವೆ ಎಂದರು.
ಮೀಸಲಾತಿ ಹೆಚ್ಚಳಕ್ಕಾಗಿ ಸಮುದಾಯಗಳು ಕೇಳುವುದು ತಪ್ಪಲ್ಲ: ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಜಂಗಮ ಮಠದ ರೇಣುಕಾ ಶಿವಚಾರ್ಯ ಸ್ವಾಮೀಜಿ ವಹಿಸಿದ್ದರು. ಈ ವೇಳೆ ಶಾಸಕ ಎಂ.ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ.ಗೋಪಾಲಕೃಷ್ಣ, ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ, ತಹಸೀಲ್ದಾರ್ ಕುಂ.ಇ.ಅಹಮದ್, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮುಖಂಡರಾದ ಚಂದಗಾಲು ಶಿವಣ್ಣ, ಡಾ.ಇಂದ್ರೇಶ್, ಅಶೋಕ್ ಜಯರಾಂ, ಸಿ.ಪಿ.ಉಮೇಶ್, ಮೀರಾ ಶಿವಲಿಂಗಯ್ಯ ಹಾಗೂ ಎಎಸ್ಪಿ ವೇಣುಗೋಪಾಲ್, ಬೇಕರಿ ಅರವಿಂದ್ ಸೇರಿದಂತೆ ಹಲವರು ಇದ್ದರು.