ದಶಕ ಕಳೆದರೂ ದಕ್ಕದ ಪರಿಹಾರ: ಸಿಂಗಟಾಲೂರು ಏತ ನೀರಾವರಿಗಾಗಿ ಭೂಮಿ ನೀಡಿದ ರೈತರ ಗೋಳು..!

By Kannadaprabha NewsFirst Published Aug 11, 2023, 10:45 PM IST
Highlights

ವಿಜಯನಗರ ಜಿಲ್ಲೆಯ 3025.23 ಎಕರೆ, ಗದಗ ಜಿಲ್ಲೆಯ 3865.35 ಎಕರೆ, ಕೊಪ್ಪಳ ಜಿಲ್ಲೆಯ 436.31 ಎಕರೆ, ಹಾವೇರಿ ಜಿಲ್ಲೆಯ 5.10 ಎಕರೆ ಸೇರಿದಂತೆ ಒಟ್ಟು 7234.09 ಎಕರೆ ಜಮೀನು ಭೂ ಕೋರಿಕೆ ಸಂಸ್ಥೆಯವರಿಂದ ಸ್ವೀಕೃತಿಗೊಂಡ ವಿಸ್ತೀರ್ಣವಾಗಿದೆ. ಇದರಲ್ಲಿ ಈಗಾಗಲೇ 5977 ಎಕರೆ ಐ ತೀರ್ಪುಗೊಂಡಿದೆ. 1257.09 ಎಕರೆ ಜಮೀನಿಗೆ ಆಯಾ ಪ್ರದೇಶದ ಮಾರಾಟದ ಅಂಕಿ- ಅಂಶಗಳ ಆಧಾರದ ಮೇಲೆ ರೈತರಿಗೆ ಪರಿಹಾರವನ್ನು ಸರ್ಕಾರ ನೀಡಬೇಕಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ(ಆ.11): ಸಿಂಗಟಾಲೂರು ಏತ ನೀರಾವರಿ ಕಾಲುವೆ ನಿರ್ಮಾಣ ಹಾಗೂ ಕೆರೆ ತುಂಬಿಸುವ ಯೋಜನೆ ಸೇರಿದಂತೆ ವಿವಿಧ ಉದ್ದೇಶಕ್ಕಾಗಿ 4 ಜಿಲ್ಲೆಗಳ 1257 ಎಕರೆ ಜಮೀನು ಕಳೆದುಕೊಂಡ ರೈತರಿಗೆ ದಶಕ ಕಳೆದರೂ ಪರಿಹಾರ ಮಾತ್ರ ದಕ್ಕಿಲ್ಲ. 2012ರಲ್ಲೇ ಯೋಜನೆ ಪೂರ್ಣಗೊಂಡು ಲೋಕಾರ್ಪಣೆಯಾಗಿದೆ. ಆದರೆ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾದ ಜಮೀನು, ಕಾಲುವೆ ನಿರ್ಮಾಣ, ಕೆರೆ ತುಂಬಿಸುವ ಯೋಜನೆ, ಸಂತ್ರಸ್ತರ ಸ್ಥಳಾಂತರ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಈವರೆಗೂ 7500 ಎಕರೆ ಜಮೀನು ಭೂಸ್ವಾಧೀನವಾಗಿದೆ.

ವಿಜಯನಗರ ಜಿಲ್ಲೆಯ 3025.23 ಎಕರೆ, ಗದಗ ಜಿಲ್ಲೆಯ 3865.35 ಎಕರೆ, ಕೊಪ್ಪಳ ಜಿಲ್ಲೆಯ 436.31 ಎಕರೆ, ಹಾವೇರಿ ಜಿಲ್ಲೆಯ 5.10 ಎಕರೆ ಸೇರಿದಂತೆ ಒಟ್ಟು 7234.09 ಎಕರೆ ಜಮೀನು ಭೂ ಕೋರಿಕೆ ಸಂಸ್ಥೆಯವರಿಂದ ಸ್ವೀಕೃತಿಗೊಂಡ ವಿಸ್ತೀರ್ಣವಾಗಿದೆ. ಇದರಲ್ಲಿ ಈಗಾಗಲೇ 5977 ಎಕರೆ ಐ ತೀರ್ಪುಗೊಂಡಿದೆ. 1257.09 ಎಕರೆ ಜಮೀನಿಗೆ ಆಯಾ ಪ್ರದೇಶದ ಮಾರಾಟದ ಅಂಕಿ- ಅಂಶಗಳ ಆಧಾರದ ಮೇಲೆ ರೈತರಿಗೆ ಪರಿಹಾರವನ್ನು ಸರ್ಕಾರ ನೀಡಬೇಕಿದೆ.

Singatalur Lift Irrigation: ಎರಡು ದಶಕ ಕಳೆದರೂ ಸಿಗದ ಸೌಲಭ್ಯ

ಬಹುತೇಕ ಹುದ್ದೆ ಖಾಲಿ:

ಇಲ್ಲಿನ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯಲ್ಲಿ ವಿಶೇಷ ಭೂಸ್ವಾಧಿನಾಧಿಕಾರಿ, ಶಿರಸ್ತೇದಾರ, ಪ್ರಥಮದರ್ಜೆ ಸಹಾಯಕ, 5 ಜನ ಮೋಜುಣಿದಾರರು, 1 ಕಂಪ್ಯೂಟರ್‌ ಆಪರೇಟರ್‌, 1 ಬೆರಳಚ್ಚುಗಾರ, 3 ಡಿ ದರ್ಜೆ ಸಿಬ್ಬಂದಿ, ವಾಹನ ಚಾಲಕ ಸೇರಿದಂತೆ ಬಹುತೇಕ ಹುದ್ದೆಗಳು ಖಾಲಿ ಇವೆ. ಇಲ್ಲಿನ ಸಿಬ್ಬಂದಿ ಕೊರತೆಯಿಂದಾಗಿ ಪರಿಹಾರದ ಕಡತಗಳು ಸರಿಯಾಗಿ ವಿಲೇವಾರಿಯಾಗುತ್ತಿಲ್ಲ.

ಹೊಸ ಭೂಸ್ವಾಧೀನ ಕಾಯ್ದೆ ಪ್ರಕಾರ ರೈತರ ಭೂಮಿ ಸ್ವಾಧೀನಕ್ಕೂ ಮುನ್ನ ಶೇ. 50ರಷ್ಟುಪರಿಹಾರಧನವನ್ನು ಧಾರವಾಡ ನೀರಾವರಿ ನಿಗಮದಲ್ಲಿ ಠೇವಣಿ ಮಾಡಬೇಕಿದೆ. ಒಂದು ವೇಳೆ ಪರಿಹಾರಧನ ಠೇವಣಿ ಇಲ್ಲದಿದ್ದರೆ ಪ್ರಕರಣ ಅಸಿಂಧುವಾಗುತ್ತಿತ್ತು. ಈ ಮುಜುಗರವನ್ನು ತಪ್ಪಿಸಿಕೊಳ್ಳಲು ಸರ್ಕಾರ ಕರ್ನಾಟಕ ನೀರಾವರಿ ನಿಗಮ ಧಾರವಾಡ ಕೇಂದ್ರ ಕಚೇರಿಯ ವ್ಯಾಪ್ತಿಗೆ ಒಳಪಟ್ಟಿರುವ ಎಲ್ಲ ಯೋಜನೆಗಳಿಗೆ ಸಂಬಂಧಪಟ್ಟಂತೆ ಹಿಂದಿನ ಸರ್ಕಾರ .130 ಕೋಟಿ ಕಾರ್ಪಸ್‌ ಫಂಡ್‌ ಠೇವಣಿ ಮಾಡಿ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ.

ಈ ಕಾರ್ಪಸ್‌ ಫಂಡ್‌ ಆಧಾರದ ಮೇಲೆ ರೈತರ ಪರಿಹಾರಧನ ಕಡತಗಳು, ತಕ್ಕ ಮಟ್ಟಿಗೆ ವಿಲೇವಾರಿಯಾಗಿವೆ. ಬಲದಂಡೆ ಭಾಗದ ರೈತರಿಗೆ .4.7 ಕೋಟಿ ಪರಿಹಾರ ವಿತರಿಸಿದೆ. ಉಳಿದ ಪ್ರಕರಣಗಳಿಗೆ ಪರಿಹಾರ ವಿತರಣೆಯು ವಿವಿಧ ಹಂತದಲ್ಲಿದೆ.

ಹೂವಿನಹಡಗಲಿಗೆ ಉಸ್ತುವಾರಿ ಸಚಿವ

ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಅವರು ಆ. 11ರಂದು ಮಲ್ಲಿಗೆ ನಾಡು ಹೂವಿನಹಡಗಲಿಯಲ್ಲಿ ಕೆಡಿಪಿ ಸಭೆ ನಡೆಸಲಿದ್ದಾರೆ. ನೀರಾವರಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಕ್ಕೆ ಇಂಬು ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಈ ಭಾಗದ ರೈತರಿಗೆ ಅನುಕೂಲವಾಗುವ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ, ಮಾಜಿ ಡಿಸಿಎಂ ದಿ. ಎಂ.ಪಿ. ಪ್ರಕಾಶರ ಕನಸಿನ ಕೆಎಸ್‌ಆರ್‌ಪಿ ತರಬೇತಿ ಕೇಂದ್ರ ಸ್ಥಾಪನೆ, ತುಕ್ಕು ಹಿಡಿದಿರುವ ಕುಡುಗೋಲು ಮಟ್ಟಿಏತ ನೀರಾವರಿ ಯೋಜನೆ, ಹೀಗೆ ಬೇಡಿಕೆಗಳು ಬೆಟ್ಟದಷ್ಟಿವೆ.

ಕೊಪ್ಪಳ: ನೀರು ಬಾರದ ಕಾಲುವೆಗೆ ಕೋಟ್ಯಂತರ ರು. ವೆಚ್ಚ!

ಯೋಜನೆಗೆ ಭೂಮಿ ಕಳೆದುಕೊಂಡು ಕಚೇರಿಗೆ ನಿತ್ಯ ಅಲೆದಾಡಬೇಕಿದೆ. ವಿಶೇಷ ಭೂಸ್ವಾಧೀನಾಧಿಕಾರಿ ಸೇರಿದಂತೆ ಸಾಕಷ್ಟು ಸಿಬ್ಬಂದಿ ಕೊರತೆ ಇದೆ. ಆದರಿಂದ ರೈತರ ಕಷ್ಟ ಕೇಳೋರಿಲ್ಲ, ಪರಿಹಾರ ಇನ್ನೂ ಸಿಕ್ಕಿಲ್ಲ ಅಂತ ಬರದೂರು ರೈತ ಹನುಮಪ್ಪ ಮಲ್ಲಪ್ಪ ನಾಡಗೌಡ ಹೇಳಿದ್ದಾರೆ. 

ವಿಜಯನಗರ ಜಿಲ್ಲೆಯಲ್ಲೇ ತುಂಗಭದ್ರಾ ಹರಿಯುತ್ತಿದೆ. ಇದರಿಂದ ರೈತರು ಹೆಚ್ಚು ಭತ್ತ, ಕಬ್ಬು, ಹತ್ತಿ, ಮೆಕ್ಕೆಜೋಳ ಬೆಳೆ ಬೆಳೆಯುತ್ತಿದ್ದಾರೆ. ಈ ಭಾಗದ ರೈತರ ಮಕ್ಕಳ ಭವಿಷ್ಯಕ್ಕಾಗಿ ಕೊಯಿಲಾರಗಟ್ಟಿಯಲ್ಲಿ ಕೃಷಿ ಸಂಶೋಧನಾ ಕೇಂದ್ರ ಮಂಜೂರು ಮಾಡಬೇಕಿದೆ ಎಂದು ಹೂವಿನಹಡಗಲಿ ರೈತ ಮುಖಂಡ ಎಂ. ಗಂಗಾಧರ ತಿಳಿಸಿದ್ದಾರೆ.  

click me!