ಕಟ್ಟಿಗೆ-ಕಲ್ಲಿನಿಂದ ಚಿರತೆ ಮೇಲೆ ದಾಳಿ| 2 ಕಿಲೋ ಮೀಟರ್ ತೆವಲಿಕೊಂಡು ಮನೆ ತಲುಪಿದ ರೈತರು| ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಬುಳ್ಳಾಪುರದಲ್ಲಿ ಗ್ರಾಮದಲ್ಲಿ ನಡೆದ ಘಟನೆ| ಗಾಯಗೊಂಡ ರೈತರಿಗೆ ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ|
ರಟ್ಟೀಹಳ್ಳಿ(ಮಾ.24): ರೈತರಿಬ್ಬರು ಚಿರತೆಯೊಂದಿಗೆ 20 ನಿಮಿಷ ಸೆಣಸಾಡಿ ಅದನ್ನು ಕಟ್ಟಿಗೆಯಿಂದ ಬಡಿದು ಕೊಂದು ತಮ್ಮ ಪ್ರಾಣ ರಕ್ಷಿಸಿಕೊಂಡ ಘಟನೆ ತಾಲೂಕಿನ ಬುಳ್ಳಾಪುರದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಗ್ರಾಮದ ರೈತರಾದ ಗದಿಗೆಪ್ಪ ಹಾಲಪ್ಪ ಎಳೆಹೊಳೆ ಹಾಗೂ ಕೃಷ್ಣಪ್ಪ ಮೂಡಬಾಗಿಲ ಜಮೀನಿಗೆ ನೀರು ಹಾಯಿಸಲು ಹೋದ ವೇಳೆ ಚಿರತೆ ದಾಳಿ ನಡೆಸಿ ತೀವ್ರ ಗಾಯಗೊಳಿಸಿದ್ದು ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
undefined
ಆಗಿದ್ದೇನು?
ಹಳ್ಳಿಯಲ್ಲಿ ರಾತ್ರಿ ವೇಳೆ ತ್ರಿಫೇಸ್ ವಿದ್ಯುತ್ ನೀಡುವ ಕಾರಣ ಈ ರೈತರು ಜಮೀನಿಗೆ ನೀರು ಹಾಯಿಸಲು ರಾತ್ರಿ 9.30ರ ವೇಳೆ ತೆರಳಿದ್ದಾರೆ. ಸ್ವಲ್ಪ ಭಾಗಕ್ಕೆ ನೀರು ಹಾಯಿಸಿದ ಬಳಿಕ ನೀರು ಕುಡಿಯಲು ಗದಿಗೆಪ್ಪ ಹೋಗಿದ್ದಾರೆ. ಈ ವೇಳೆ ಚಿರತೆ ಇವರ ಮೇಲೆ ದಾಳಿ ನಡೆಸಿದಾಗ ಚೀರಿಕೊಂಡಿದ್ದಾರೆ. ಅಲ್ಲಿಯೇ ಇದ್ದ ಕೃಷ್ಣಪ್ಪ ಇವರ ರಕ್ಷಣೆಗೆ ಧಾವಿಸಿದ್ದಾರೆ. ಆಗ ಇಬ್ಬರ ಮೇಲೆಯೂ ಚಿರತೆ ದಾಳಿ ನಡೆಸಿದೆ. ಇದರಿಂದ ಧೃತಿಗೆಡದ ಇಬ್ಬರು ಸುಮಾರು ಹೊತ್ತು ಚಿರತೆಯೊಂದಿಗೆ ಸೆಣಸಾಡಿದ್ದಾರೆ. ಆಗ ಗದಿಗೆಪ್ಪನ ಗುತ್ತಿಗೆ ಭಾಗಕ್ಕೆ ಚಿರತೆ ಕಚ್ಚಿ ತೀವ್ರ ಗಾಯಗೊಳಿಸಿದೆ. ಅಂತಹ ನೋವಿನಲ್ಲೂ ಇಬ್ಬರೂ ಅಲ್ಲಿಯೇ ಅಕ್ಕಪಕ್ಕದಲ್ಲಿದ್ದ ಕಟ್ಟಿಗೆ ಹಾಗೂ ಕಲ್ಲು ತೆಗೆದುಕೊಂಡು ಚಿರತೆ ಮೇಲೆ ಪ್ರತಿ ದಾಳಿ ನಡೆಸಿದ್ದಾರೆ. ಇದರಿಂದ ಚಿರತೆ ನಿತ್ರಾಣಗೊಂಡಿದೆ. ತೀವ್ರ ಗಾಯಗೊಂಡಿದ್ದ ಇವರು ತಕ್ಷಣ ಅಲ್ಲಿಂದ ಸುಮಾರು ಎರಡು ಕಿಲೋ ಮೀಟರ್ ತೆವಳಿಕೊಂಡು ಮನೆ ತಲುಪಿದ್ದಾರೆ. ರಕ್ತಸಿಕ್ತ ಇವರನ್ನು ನೋಡಿದ ಮನೆಯವರು ತಕ್ಷಣ ಅವರನ್ನು ರಾಣಿಬೆನ್ನೂರು ಆಸ್ಪತ್ರೆಗೆ ದಾಖಲಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ದಾಖಲಿಸಿದ್ದಾರೆ. ಇವರ ಸ್ಥಿತಿ ಗಂಭೀರವಾಗಿದ್ದರಿಂದ ಮತ್ತೆ ದಾವಣಗೆರೆಯಿಂದ ಚಿತ್ರದುರ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗಾಯಾಳುಗಳ ಕುಟುಂಬಸ್ಥರು ತಿಳಿಸಿದ್ದಾರೆ.
ಹಾನಗಲ್ಲ: ಅಮಾನವೀಯ ಕೃತ್ಯಕ್ಕೆ ಬಲಿಯಾದ ಬಾಲಕ
ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಚಿರತೆಗಳು:
ತುಂಗಾ ಮೇಲ್ಡಂಡೆ ಕಾಲುವೆ ನಿರ್ಮಿಸಿದ ಬಳಿಕ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು ರೈತರು ರಾತ್ರಿ ಜಮೀನಿಗೆ ತೆರಳಲು ಭಯಪಡುತ್ತಿದ್ದಾರೆ. ಕಡೂರು, ಬುಳ್ಳಾಪುರ ಹಾಡೆ, ಕಣವಿಶಿದ್ಗೇರಿ ಭಾಗದ ಯುಟಿಪಿ ಕಾಲುವೆಯ ಬಂಡೆಗಳಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದ್ದು ಇವುಗಳ ಸೆರೆಗೆ ಬೋನ್ ಅಳವಡಿಸಬೇಕೆಂದು ರೈತರು ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ಭಾಗದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಿರುವುದರಿಂದ ಇವುಗಳ ಸೆರೆಗೆ ಬೋನ್ ಇಡಲಾಗಿದೆ. ಗ್ರಾಮದ ಸುತ್ತಮುತ್ತ ಗುಡ್ಡ ಹಾಗೂ ಯುಪಿಟಿ ಕಾಲುವೆ ಪಕ್ಕದಲ್ಲಿ ಬಂಡೆಗಳು ಇರುವುದರಿಂದ ಚಿರತೆಗಳು ತಮ್ಮ ಆವಾಸ ತಾಣವಾಗಿ ಮಾಡಿಕೊಂಡಿವೆ. ಸೋಮವಾರ ರಾತ್ರಿ ಚಿರತೆ ನಡೆಸಿದ ದಾಳಿಯಲ್ಲಿ ಓರ್ವ ರೈತರಿಗೆ ಗಂಭೀರವಾಗಿ ಗಾಯವಾಗಿರುವ ಮಾಹಿತಿ ಇದೆ. ಚಿರತೆಗಳ ಸೆರೆಗೆ ಮತ್ತಷ್ಟುಬೋನ್ ಅಳವಡಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ ತಿಳಿಸಿದ್ದಾರೆ.
ಒಂದು ವಾರ ಹಗಲು, ಒಂದು ವಾರ ರಾತ್ರಿ ವೇಳೆ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿದೆ. ರೈತರು ರಾತ್ರಿ ವೇಳೆ ನೀಡುವ ಸಮಯವನ್ನು ಬದಲಾಯಿಸುವ ಕುರಿತು ಅರ್ಜಿ ಸಲ್ಲಿಸಿದರೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜು ಮರಿಗೌಡ್ರ ಹೇಳಿದ್ದಾರೆ.