ಅಡಕೆ ತೋಟ ಸಂಪೂರ್ಣ ನಾಶ| ಬೆಳೆ ಬರುತ್ತಿರುವ ಅಡಕೆ ಮರಗಳು ಮಣ್ಣ ಸೇರಿದ್ದು, ಮುಂದೆ ಜೀವನ ನಿರ್ವಹಣೆ ಹೇಗೆ ಎಂಬ ರೈತರ ಸಮಸ್ಯೆ| ಸಂಬಂಧಿಸಿದ ಇಲಾಖೆ ಕ್ರಮ ಕೈಗೊಂಡು ಮುಂದಾಗುವ ಅನಾಹುತ ತಪ್ಪಿಸಲು ಸ್ಥಳೀಯರ ಆಗ್ರಹ|
ಶಿರಸಿ(ಮಾ.24): ತಾಲೂಕಿನ ಮತ್ತಿಘಟ್ಟದ ಕೆಳಗಿನ ಕೇರಿಯಲ್ಲಿ ಸೋಮವಾರ ರಾತ್ರಿ ಒಮ್ಮಿಂದೊಮ್ಮೇಲೆ ಭೂಕುಸಿತವಾಗಿದೆ. ಅಡಕೆ ತೋಟವಿದ್ದ ಪ್ರದೇಶದಲ್ಲಿ ಭೂಮಿ ಕುಸಿದಿದ್ದರಿಂದ ಸುಮಾರು ಒಂದೂ ವರೆ ಎಕರೆ ಪ್ರದೇಶದ ತೋಟ ಮಣ್ಣಿನಡಿ ಸೇರಿದ ಘಟನೆ ನಡೆದಿದೆ.
ಕಳೆದ ಮಳೆಗಾಲದ ವೇಳೆ ಭೂಮಿ ಸಡಿಲಗೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಸಣ್ಣ ನೀರಾವರಿ ಇಲಾಖೆಯೂ ಈ ಪ್ರದೇಶದಲ್ಲಿ ಕಾಲುವೆ ನಿರ್ಮಿಸಿ ಇಲ್ಲಿಯ ರೈತರಿಗೆ ನೀರು ನೀಡುವ ವ್ಯವಸ್ಥೆ ಮಾಡಿತ್ತು. ಆದರೆ, ಈ ಕಾಲುವೆಗಳು ಸುಮಾರು 15 ವರ್ಷಗಳಷ್ಟು ಹಳೆಯದಾಗಿದ್ದು, ಎಲ್ಲ ಕಡೆ ಸಿಮೆಂಟ್ ಹಾಳಾಗಿ ನೀರು ಸೋರಿಕೆ ಆಗುತ್ತಿತ್ತು. ಇದರಿಂದಾಗಿ ಭೂಮಿ ಇನ್ನಷ್ಟು ಶಿಥಿಲವಾಗಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.
ಇಲ್ಲಿಯ ಸರ್ವೇ ನಂ. 143-2 ರಲ್ಲಿ ಕೆಳಗಿನ ಕೇರಿ ಗ್ರಾಮದ ಮಧುಸೂಧನ ನರಸಿಂಹ ಹೆಗಡೆ ಅವರಿಗೆ ಸೇರಿದ ಅಡಕೆ ತೋಟ ಸಂಪೂರ್ಣ ನಾಶವಾಗಿದೆ. ಬೆಳೆ ಬರುತ್ತಿರುವ ಅಡಕೆ ಮರಗಳು ಮಣ್ಣ ಸೇರಿದ್ದು, ಮುಂದೆ ಜೀವನ ನಿರ್ವಹಣೆ ಹೇಗೆ ಎಂಬ ಸಮಸ್ಯೆ ಕಾಡಲಾರಂಭಿಸಿದೆ. ನೀಲಕಂಠ ನಾರಾಯಣ ಭಟ್ ಅವರಿಗೆ ಸೇರಿದ ಅರ್ಧ ಎಕರೆಯಷ್ಟು ತೋಟವೂ ಕುಸಿದಿದೆ.
ಮುಂಡಗೋಡ: ಮಳಗಿ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ
ಕಾಳಜಿ ವಹಿಸಿ:
ಈ ಪ್ರದೇಶದ ಇನ್ನೂ ಕೆಲವೆಡೆ ಭೂಮಿ ಬಿರುಕುಗೊಂಡ ಸ್ಥಿತಿಯಲ್ಲಿದೆ. ಈ ಮಳೆಗಾಲದಲ್ಲಿ ಅವು ಕುಸಿಯುವ ಸಾಧ್ಯತೆ ಇದ್ದು, ಇದರಿಂದಾಗಿ ಇನ್ನೂ ದೊಡ್ಡ ಪ್ರಮಾಣದ ಹಾನಿ ಸಂಭವಿಸುವ ಸಾಧ್ಯತೆ ಇದೆ. ಈಗಲೇ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಂಡಲ್ಲಿ ಮುಂದಾಗುವ ಅನಾಹುತವನ್ನು ತಪ್ಪಿಸಬಹುದು ಎಂಬುದು ಸ್ಥಳೀಯರ ಆಗ್ರಹ.
ಮಣ್ಣು ಕುಸಿತವಾದ ಜಾಗಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ದೇವನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧುಮತಿ ನಾಯ್ಕ, ಸದಸ್ಯ ನಾರಾಯಣ ಹೆಗಡೆ ಹಸೆಮನೆ, ಜೈ ಭಾರತಿ ಭಟ್ ಇತರರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಭೂ ಕುಸಿತದಿಂದಾಗಿ ಇಲ್ಲಿಯ ರೈತರ ಜೀವನ ನಿರ್ವಹಣೆಯೇ ಸಮಸ್ಯೆಯಾಗಲಿದೆ. ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದರೂ, ಹಾನಿಯ ಪ್ರಮಾಣ ಜಾಸ್ತಿ ಇದ್ದುದರಿಂದ ಹಿರಿಯ ಅಧಿಕಾರಿಗಳಿಂದಲೇ ಸಮೀಕ್ಷೆ ಆಗಬೇಕು. ರೈತರಿಗೆ ಸೂಕ್ತ ಪರಿಹಾರ ಲಭಿಸಬೇಕು ಎಂದು ಗ್ರಾಪಂ ಸದಸ್ಯ ನಾರಾಯಣ ಹೆಗಡೆ ಹಸೆಮನೆ ತಿಳಿಸಿದ್ದಾರೆ.