ಕೃಷಿ ಕಾಯಿದೆ ವಾಪಸ್, ಸಾಲ ಮನ್ನಾಕ್ಕೆ ಒತ್ತಾಯಿಸಿ ರೈತರ ಬೃಹತ್‌ ಪ್ರತಿಭಟನೆ

By Kannadaprabha NewsFirst Published Jan 12, 2023, 1:09 PM IST
Highlights

ರೈತರ ಮೂರು ಕೃಷಿ ಕಾಯ್ದೆ ವಾಪಸಾತಿ ಹಾಗೂ ವಿದ್ಯುತ್‌ ಖಾಸಗೀಕರಣ ವಿರೋಧಿಸಿ ಮತ್ತು ರೈತರ ಸಂಪೂರ್ಣ ಸಾಲಮನ್ನಾಕ್ಕೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಬೃಹತ್‌ ಪ್ರತಿಭಟನಾ ರಾರ‍ಯಲಿ ನಡೆಸಿದರು.

ಹೊಸಪೇಟೆ (ಜ.12) : ರೈತರ ಮೂರು ಕೃಷಿ ಕಾಯ್ದೆ ವಾಪಸಾತಿ ಹಾಗೂ ವಿದ್ಯುತ್‌ ಖಾಸಗೀಕರಣ ವಿರೋಧಿಸಿ ಮತ್ತು ರೈತರ ಸಂಪೂರ್ಣ ಸಾಲಮನ್ನಾಕ್ಕೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಬೃಹತ್‌ ಪ್ರತಿಭಟನಾ ರಾರ‍ಯಲಿ ನಡೆಸಿದರು.

ನಗರದ ಗಾಂಧಿ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ(Protest) ಮೆರವಣಿಗೆ ಪುನೀತ್‌ ರಾಜ್‌ಕುಮಾರ ವೃತ್ತದಲ್ಲಿ ಪ್ರತಿಭಟನಾ ರಾರ‍ಯಲಿಯಾಗಿ ಮಾರ್ಪಟ್ಟಿತು. ಈ ವೇಳೆ ರೈತ ಸಂಘದ ರಾಜ್ಯ ಸಂಘದ ಪ್ರ.ಕಾರ್ಯದರ್ಶಿ ಜೆ. ಕಾರ್ತಿಕ್‌ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಬೇಕು. ಸ್ವಾಮಿನಾಥನ್‌ ವರದಿ ಅನ್ವಯ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಒದಗಿಸಬೇಕು.ಜತೆಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು. ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದರು.

ರೈತರು ಯಾವುದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಬಾರದು; ನಿಮ್ಮೊಂದಿಗೆ ನಾನಿದ್ದೇನೆ: ಹೆಚ್‌ಡಿಕೆ

ಹೊಸಪೇಟೆ(Hospet)ಯ ಕಮಲಾಪುರ(Kamalapur) ಹೋಬಳಿಯ ನಲ್ಲಾಪುರ ಕೆರೆಯಲ್ಲಿ 1.5 ಟಿಎಂಸಿ ನೀರು ಸಂಗ್ರಹವಾಗುತ್ತಿದೆ.2600 ಎಕರೆ ಪ್ರದೇಶದಲ್ಲಿ ನೀರಾವರಿ ಆಗುತ್ತಿದೆ. ಹಾಗಾಗಿ ಈ ಕೆರೆಯನ್ನು ಉತ್ತಮ ಗುಣಮಟ್ಟದಲ್ಲಿ ಅಭಿವೃದ್ಧಿಗೊಳಿಸಬೇಕು ಎಂದು ಒತ್ತಾಯಿಸಿದರು.

ಜಿಂದಾಲ್‌ ಕಾರ್ಖಾನೆ ಧೂಳು:

ಹೊಸಪೇಟೆಯ ಕಾಕುಬಾಳು ಗ್ರಾಮ,ಗುಂಡ್ಲವದ್ದಿಗೇರಿ, ಬೈಲುವದ್ದಿಗೇರಿ,ಗಾದಿಗನೂರು,ಭುವನಹಳ್ಳಿ, ಧರ್ಮಸಾಗರ, ಕೊಟಗಿನಹಾಳು ಗ್ರಾಮಗಳ ರೈತರ ಬೆಳೆಗಳ ಮೇಲೆ ಜಿಂದಾಲ್‌ ಕಾರ್ಖಾನೆ ಧೂಳು (ಬೂದಿ) ಬೀಳುತ್ತಿದೆ.ಇದರಿಂದ ರೈತರ ಬೆಳೆಗಳಾದ ಮೆಕ್ಕೆಜೋಳ,ಹತ್ತಿ,ಮೆಣಸಿನಕಾಯಿ, ಈರುಳ್ಳಿ ತೋಟಗಾರಿಕೆಯ ಬೆಳೆಗಳಿಗೆ ನಷ್ಟಆಗಿದೆ.ಈ ಗ್ರಾಮಗಳಲ್ಲಿ ಜನರ ಆರೋಗ್ಯವೂ ಏರುಪೇರಾಗಿದೆ.ಅಸ್ತಮಾ, ಟಿಬಿದಂತಹ ಕಾಯಿಲೆಗೆ ಬೀಳುತ್ತಿದ್ದಾರೆ. ಜಿಂದಾಲ್‌ ಕಾರ್ಖಾನೆಯ ಧೂಳು ನಿಯಂತ್ರಿಸಬೇಕು. ರೈತರಿಗೆ ಆಗುತ್ತಿರುವ ನಷ್ಟವನ್ನು ಕಾರ್ಖಾನೆ ಭರಿಸಬೇಕು ಎಂದು ಆಗ್ರಹಿಸಿದರು.

ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಿ:

ನಗರದಲ್ಲಿ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ(ISR Sugar factory) ಕಳೆದ ಎಂಟು ವರ್ಷಗಳಿಂದ ಮುಚ್ಚಿದೆ.ಈ ಭಾಗದಲ್ಲಿ ರೈತರು(Farmers) 5ರಿಂದ 6 ಲಕ್ಷ ಟನ್‌ ಕಬ್ಬನ್ನು ಬೆಳೆಯುತ್ತಿದ್ದು,ಬೇರೆ ಕಾರ್ಖಾನೆಗಳಿಗೆ ಸಾಗಿಸಲು ಸಾಗಾಣಿಕೆ ವೆಚ್ಚ ಬೀಳುತ್ತಿದೆ. ಹಾಗಾಗಿ ಸರ್ಕಾರ ಇಲ್ಲವೇ ಸಹಕಾರ ರಂಗದಲ್ಲಿ ನೂತನ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಬೇಕು.ಬೈಲುವದ್ದಿಗೇರಿ ಗ್ರಾಮದ ರೈತ ಎಂ.ಎರಿಸ್ವಾಮಿ ತೋಟದಲ್ಲಿ ಕೆಲಸ ಮಾಡುವಾಗ ವಿದ್ಯುತ್‌ ತಂತಿ ಹರಿದು ಮೃತಪಟ್ಟಿದ್ದಾರೆ.ಅವರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಕೃಷಿ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ.ಕೂಡಲೇ ಈ ಬಗ್ಗೆ ಕ್ರಮವಹಿಸಬೇಕು. ರೈತರ ಪಹಣಿಯನ್ನು .15ನಿಂದ .25ಗೆ ಏರಿಸಲಾಗಿದೆ. ಇದನ್ನೂ .10ಗೆ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರವಾಸೋದ್ಯಮ ಸಚಿವ(Tourism minister) ಆನಂದ ಸಿಂಗ್‌(Anand singh) ಮನವಿ ಸ್ವೀಕರಿಸಿದರು.ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ಡಿವೈಎಸ್ಪಿ ಕುಲಕರ್ಣಿ, ಸಿಪಿಐ ಶ್ರೀನಿವಾಸ್‌ ಮೇಟಿ, ಧರ್ಮೇಂದ್ರ ಸಿಂಗ್‌, ನಾರಾಯಣ ರೆಡ್ಡಿ, ಟಿ. ನಾಗರಾಜ್‌, ಆರ್‌. ಆರ್‌. ತಾಯಪ್ಪ, ಸಣ್ಣಕ್ಕಿ ರುದ್ರಪ್ಪ, ಮಹಾಂತೇಶ್‌ ಕೆ.ಎಚ್‌., ಜೆ. ನಾಗರಾಜ್‌, ರೇವಣ ಸಿದ್ದಪ್ಪ, ಹೇಮರೆಡ್ಡಿ, ಕೆ.ಹನುಮಂತ, ಕೆ.ಎಂ. ಕೊಟ್ರೇಶ್‌, ಅಕ್ಬರ್‌, ನವೀನ್‌, ಎಲ್‌.ಎಸ್‌. ರುದ್ರಪ್ಪ, ನಲ್ಲಪ್ಪ ಮತ್ತಿತರರಿದ್ದರು. 

ಸಕ್ಕರೆ ಕಾರ್ಖಾನೆ ನಾನು ಮುಚ್ಚಿಸಿಲ್ಲ- ಆನಂದ ಸಿಂಗ್‌

ಕೆಲವರು ಸಕ್ಕರೆ ಕಾರ್ಖಾನೆಯನ್ನು ಆನಂದ ಸಿಂಗ್‌ ಮುಚ್ಚಿಸಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ರೈತರ ಪರವಾಗಿ ನಾನು ಸುಪ್ರೀಂ ಕೋರ್ಚ್‌ನಲ್ಲಿ ಹಿರಿಯ ವಕೀಲ ಮುಕೂಲ್‌ ರೋಹ್ಟಗಿ ಅವರನ್ನು ನೇಮಿಸಿದ್ದೆ. ನಾನು ಮುಚ್ಚಿಸಿರುವೆ ಎಂಬುದನ್ನು ಸಾಬೀತುಪಡಿಸಲು ಬಹಿರಂಗವಾಗಿ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ನಗರದ ಪುನೀತ್‌ ರಾಜ್‌ಕುಮಾರ ವೃತ್ತದಲ್ಲಿ ರೈತರ ಪ್ರತಿಭಟನೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಕೆಲವರು ಸಕ್ಕರೆ ಕಾರ್ಖಾನೆ ವಿಷಯದಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕ ಬ್ಯಾಂಕ್‌ ಸಾಲ ಕಟ್ಟಲಾಗದೇ, ಕಾರ್ಖಾನೆ ಶಿಥಿಲಾವಸ್ಥೆಗೆ ಬಂದ ಹಿನ್ನೆಲೆ ಮುಚ್ಚಿದ್ದಾರೆ. ನಾನು ಮೊನ್ನೆ ಕಾರ್ಖಾನೆ ಮಾಲೀಕ ಸಿದ್ದಾರ್ಥ ಮೊರಾರ್ಕ್ ಬಳಿಯೂ ಮಾತನಾಡಿರುವೆ. ಅವರೂ ಕೂಡ ಬರುತ್ತೇನೆ ಎಂದಿದ್ದಾರೆ. ಕಾರ್ಖಾನೆ ಮಾಲೀಕ, ರೈತ ಮುಖಂಡರು, ರೈತರನ್ನು ಸೇರಿಸುವೆ. ಖುದ್ದು ನಾನೇ ಬರುತ್ತೇನೆ. ಈ ಆರೋಪ ಮಾಡುತ್ತಿರುವವರು ಬಹಿರಂಗವಾಗಿ ದಾಖಲೆ ಸಮೇತ ಸಾಬೀತುಪಡಿಸಲಿ. ರೈತರ ಸಂಘದ ಅಧ್ಯಕ್ಷ ಎಂ.ಜೆ. ಜೋಗಯ್ಯ ಇಲ್ಲೇ ಇದ್ದಾರೆ. ರೈತರು ಇಲ್ಲೇ ಇದ್ದಾರೆ. ಕೇಳಿ ಅವರನ್ನೇ ನಾನು ಮುಚ್ಚಿಸಿರುವೇನಾ? ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡಲಿ. ಸುಖಾಸುಮ್ಮನೆ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಖಾರವಾಗಿಯೇ ಹೇಳಿದರು.

ಫೆಬ್ರವರಿಯಲ್ಲಿ ಹಂಪಿ ಶುಗ​ರ್‍ಸ್ ಆರಂಭ:

ರೈತರ ಸಂಕಷ್ಟಪರಿಹಾರಕ್ಕೆ ಕಳೆದ ಎಂಟು ವರ್ಷಗಳಿಂದ ಶ್ರಮಿಸಿರುವೆ. ಸಂಸದ ಜಿ.ಎಂ.ಸಿದ್ದೇಶ್ವರ ಕಡೆಯವರು ಹೊಸಪೇಟೆಯ ಕಾರಿಗನೂರು ಬಳಿ ಕಾರ್ಖಾನೆ ಹಾಕಲು ಮುಂದಾಗಿದ್ದಾರೆ. ಫೆಬ್ರವರಿ ಅಂತ್ಯದಲ್ಲಿ ಕಾರ್ಖಾನೆ ಭೂಮಿಪೂಜೆ ನೆರವೇರಲಿದೆ. ಈಗ ಆ ಸ್ಥಳವೂ ಬೇಡ ಎಂದು ಗೊಂದಲ ಸೃಷ್ಟಿಸುತ್ತಿದ್ದಾರೆ. ಜನರಿಗೆ ನಿವೇಶನ ಕೊಡಬೇಕು ಎನ್ನುತ್ತಿದ್ದಾರೆ. ರೈತರ ಸಮಸ್ಯೆ ಪರಿಹರಿಸಲು ಹೋದರೆ ಈ ಸಮಸ್ಯೆ ತಂದಿದ್ದಾರೆ. ರೈತರಿಗಾಗಿ ನನ್ನ ಎರಡು ಕೆನ್ನೆ ಕೊಡಲು ಸಿದ್ಧ. ಆ ಕಡೇನೂ ಹೊಡೆಯಲಿ, ಈ ಕಡೇನೂ ಹೊಡೆಯಲಿ. ಅಭಿವೃದ್ಧಿ ವಿಷಯದಲ್ಲಿ ನಾನು ಹಿಂದೆ ಸರಿಯುವುದಿಲ್ಲ ಎಂದರು.

ಜೆಡಿಎಸ್‌ ಗೆದ್ದರೆ ಸಕ್ಕರೆ ಕಾರ್ಖಾನೆ ಸ್ಥಾಪನೆ: ಎಚ್‌.ಡಿ.ಕುಮಾರಸ್ವಾಮಿ

ಎರಡು ಸೈಟ್‌ ಕೇಳ್ತಾರೇ ಎಂಬ ಆರೋಪ!:

ನನ್ನ ವಿರುದ್ಧ ಕ್ಷೇತ್ರದಲ್ಲಿ ಪ್ರತಿ ಎಕರೆಗೆ ಎರಡು ಸೈಟ್‌ ಕೇಳ್ತಾರೆ ಎಂಬ ಆರೋಪ ಹೊರಿಸಲಾಗುತ್ತಿದೆ. ಇದರಿಂದ ನೂರಾರು ಕೋಟಿ ವ್ಯವಹಾರ ಮಾಡುತ್ತಿದ್ದಾರೆ ಎಂದು ದೂರಲಾಗಿದೆ. ನನ್ನಪ್ಪ ಭಾರಿ ಆಸ್ತಿ ಮಾಡಿಟ್ಟಿದ್ದಾರೆ. ನನಗೇ ದರ್ದು ಇಲ್ಲ. ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದರು.

ರೈತರ ಸ್ಥಳೀಯವಾಗಿರುವ ಸಮಸ್ಯೆ ನಾನೇ ಖುದ್ದು ನಿಂತು ಪರಿಹರಿಸುವೆ. ಜಿಂದಾಲ್‌ ಕಾರ್ಖಾನೆ ಧೂಳಿನ ವಿಷಯದಲ್ಲಿ ಹೋರಾಟ ಮಾಡಿದರೆ, ನಾನು ಮುಂಚೂಣಿಯಲ್ಲಿ ನಿಲ್ಲುವೆ. ಸರ್ಕಾರ ರೈತರ ವಿರುದ್ಧ ನಿಲುವು ತೆಗೆದುಕೊಂಡರೇ ನಾನು ರೈತರಪರ ನಿಲ್ಲುವೆ ಎಂದರು.

click me!