ಕೆವಿಜಿ ಬ್ಯಾಂಕ್‌ನಲ್ಲಿ ರೈತರ ಸಭೆಯಲ್ಲಿ ಎಚ್ಚರಿಕೆ| ಸಾಲದ ಮೇಲಿನ ಪೂರ್ಣ ಬಡ್ಡಿ, ಶೇ. 50ರಷ್ಟು ಅಸಲು ಮನ್ನಾಕ್ಕೆ ಆಗ್ರಹ| 15 ದಿನಗಳ ಒಳಗೆ ಬ್ಯಾಂಕ್ ಈ ಕುರಿತು ತೀರ್ಮಾನ ತೆಗೆದುಕೊಂಡು ಬೇಡಿಕೆಗಳಿಗೆ ಸ್ಪಂದನೆ ನೀಡಬೇಕು| ರೈತರಿಗೆ ಕಿರುಕುಳ ನೀಡುವಂತಿಲ್ಲ|
ಧಾರವಾಡ(ಫೆ.19): ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವ್ಯಾಪ್ತಿಯ ರೈತರು, ತಮ್ಮ ಸಾಲವನ್ನು ಒಟಿಎಸ್(ಒನ್ ಟೈಮ್ ಸೆಟ್ಲಮೆಂಟ್) ಯೋಜನೆ ಅಡಿ ಸಂಪೂರ್ಣ ಬಡ್ಡಿ ಮನ್ನಾ ಮಾಡುವುದು, ಅಸಲಿನಲ್ಲಿ ಶೇ. 50ರಷ್ಟು ಕಡಿತಗೊಳಿಸಿ ಉಳಿದ ಹಣವನ್ನು ತುಂಬಲು ಆರು ತಿಂಗಳು ಸಮಯಾವಕಾಶ ಕೋರಿ ಗುರುವಾರ ಬ್ಯಾಂಕ್ ಅಧಿಕಾರಿಗಳಿಗೆ ಆಗ್ರಹಿಸಿದರು.
ಧಾರವಾಡ ಸೇರಿದಂತೆ ಬ್ಯಾಂಕ್ ವ್ಯಾಪ್ತಿಯ ಜಿಲ್ಲೆಯ ರೈತರು ಆಗಮಿಸಿ ಈ ಕುರಿತು ಬ್ಯಾಂಕ್ ಆವರಣದಲ್ಲಿಯೇ ಬ್ಯಾಂಕ್ ಅಧ್ಯಕ್ಷರು, ಮಹಾಪ್ರಬಂಧಕರ ಸಮ್ಮುಖದಲ್ಲಿ ರೈತರು ಸಭೆ ನಡೆಸಿ, ಕಳೆದ ಆರು ವರ್ಷಗಳಲ್ಲಿ ಬರಗಾಲ, ಅತಿವೃಷ್ಟಿ ಹಾಗೂ ಕೊರೋನಾದಿಂದ ರೈತರು ಕಂಗಾಲಾಗಿದ್ದಾರೆ. ಈ ಮಧ್ಯೆ 2017ರಲ್ಲಿ ರಾಜ್ಯ ಸರ್ಕಾರ ಸಾಲಮನ್ನಾ ಯೋಜನೆ ಘೋಷಣೆ ಮಾಡಿದ್ದರಿಂದ ಬಹುತೇಕ ರೈತರು ಸಾಲವನ್ನು ಮರುಪಾವತಿ ಮಾಡಿಲ್ಲ. ಹೀಗಾಗಿ ಒಂದು ಲಕ್ಷ ರು. ಸಾಲ ಪಡೆದ ರೈತರು ಬಡ್ಡಿ ಸಮೇತ ಐದಾರು ಲಕ್ಷ ತುಂಬುವ ಸ್ಥಿತಿ ಬಂದಿದೆ ಎಂದು ಅಧಿಕಾರಿಗಳಿಗೆ ರೈತ ಮುಖಂಡರು ಮನವರಿಕೆ ಮಾಡಿದರು.
ಕೆವಿಜಿ ಬ್ಯಾಂಕ್ ಹೊರತುಪಡಿಸಿ ಉಳಿದ ಬ್ಯಾಂಕ್ಗಳು ಬಡ್ಡಿ ಪೂರ್ತಿ ಮನ್ನಾ ಮಾಡಿ ಅಸಲಿನಲ್ಲೂ ಕಡಿತಗೊಳಿಸಿ ರೈತರಿಂದ ಬಾಕಿ ಮೊತ್ತವನ್ನು ತುಂಬಿಸಿಕೊಂಡಿವೆ. ಅದೇ ರೀತಿ ಕೆವಿಜಿ ಬ್ಯಾಂಕ್ ಸಹ ರೈತರ ಬೇಡಿಕೆಗಳಿಗೆ ಮನ್ನಣೆ ನೀಡಬೇಕು. ಮೊದಲೇ ರೈತರು ಕಂಗಾಲಾಗಿದ್ದು, ಬ್ಯಾಂಕ್ಗಳಿಂದ ರೈತರ ಮನೆಗಳಿಗೆ ನೋಟಿಸ್ ಬರುತ್ತಿವೆ. ಇದರಿಂದ ರೈತರು ಆತಂಕಕ್ಕೆ ಈಡಾಗಿದ್ದು, ಕೂಡಲೇ ನೋಟಿಸ್ ನೀಡುವ ಪ್ರಕ್ರಿಯೆ ನಿಲ್ಲಿಸಬೇಕೆಂದು ಆಗ್ರಹಿಸಿದರು.
15 ದಿನಗಳ ಒಳಗೆ ಬ್ಯಾಂಕ್ ಈ ಕುರಿತು ತೀರ್ಮಾನ ತೆಗೆದುಕೊಂಡು ಬೇಡಿಕೆಗಳಿಗೆ ಸ್ಪಂದನೆ ನೀಡಬೇಕು. ಜತೆಗೆ ರೈತರಿಗೆ ಕಿರುಕುಳ ನೀಡುವಂತಿಲ್ಲ. ಒಂದು ವೇಳೆ ರೈತರಿಗೆ ನೋಟಿಸ್ ನೀಡಿದರೆ ತಮ್ಮ ಶಾಖೆಗಳಿಗೆ ಬೀಗ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮೂರುಸಾವಿರ ಮಠದ ವಿರುದ್ಧ ಅಪಪ್ರಚಾರ ಸಹಿಸಲ್ಲ
ರೈತರ ಮನವಿ ಸ್ವೀಕರಿಸಿದ ಬ್ಯಾಂಕ್ ಮಹಾಪ್ರಬಂಧಕ ರವಿಚಂದ್ರನ್, ಕಟಬಾಕಿ ಹೊಂದಿರುವ ರೈತರ ಸಾಲವನ್ನು ಒಟಿಎಸ್ ಮಾಡಲು ಅವಕಾಶವಿದೆ. ಆದರೆ, ಅಸಲಿನಲ್ಲಿ ಶೇ. 50ರಷ್ಟು ಕಡಿತ ಮಾಡುವುದರ ಬಗ್ಗೆ ಸಭೆ ನಡೆಸಿ ತೀರ್ಮಾನ ಮಾಡಿ ತಮಗೆ ಶೀಘ್ರ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ರೈತ ಮುಖಂಡರಾದ ಭೀಮಪ್ಪ ಕಾಸಾಯಿ, ಶಂಕರಗೌಡ ಪಾಟೀಲ, ನಾಗಪ್ಪ ಕರಲಿಂಗಣ್ಣವರ, ಎಂ.ಎಸ್. ಯರಗಂಬಳಿಮಠ, ಮಲ್ಲಿಕಾರ್ಜುನ ಕರಡಿಗುಡ್ಡ, ಗೌಡಪ್ಪ ಹೊಸಮನಿ, ಮಲ್ಲಿಕಾರ್ಜುನ ಪಟಾತ್ ಮತ್ತಿತರರು ಇದ್ದರು.