20 ರ್ಷಗಳ ಬಳಿಕ ಕಣ್ವ ಜಲಾಶಯ ಭರ್ತಿ, ರೈತರ ಮೊಗದಲ್ಲಿ ಮಂದಹಾಸ

By Suvarna News  |  First Published Jun 13, 2022, 4:51 PM IST

* ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ ಕಣ್ವ ಜಲಾಶಯ
* ಜೀವನಾಡಿಯ ಭರ್ತಿಯಿಂದ ರೈತರ ಮೊಗದಲ್ಲಿ ಮಂದಹಾಸ
* ಕಳೆದ 20 ವರ್ಷಗಳಿಂದ ನೀರಿಲ್ಲದೇ ಒಣಗುವ ಸ್ಥಿತಿಗೆ ತಲುಪಿತ್ತು


ರಾಮನಗರ, (ಜೂನ್.13):  ಕಣ್ವ ಜಲಾಶಯ ಆ ಭಾಗದ ಜನರ ಜೀವನಾಡಿ. ಕಳೆದ 20 ವರ್ಷಗಳಿಂದ ನೀರಿಲ್ಲದೇ ಒಣಗುವ ಸ್ಥಿತಿಗೆ ತಲುಪಿತ್ತು. ಕಳೆದ ಹಲವು ದಿನಗಳಿಂದ ಸುರಿದ ಮಳೆರಾಯನ ಅಬ್ಬರಕ್ಕೆ ಇದೀಗ ಡ್ಯಾಂ ಗೆ ಜೀವ ಕಳೆ ಬಂದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮತ್ತೊಂದೆಡೆ ಡ್ಯಾಂ ನೋಡಲು  ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಹೌದು... ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಜೀವನಾಡಿಯಾಗಿರುವ ಕಣ್ವ ಜಲಾಶಯ ಸುಮಾರು ಎರಡು ದಶಕಗಳಿಂದ ಭರ್ತಿಯಾಗದೆ ಬಹುತೇಕ ಖಾಲಿಯಾಗಿತ್ತು. ಕೃಷಿ ಚಟುವಟಿಕೆಗಳಿಗೆ ನೀರು ಸಿಗದೇ ಈ ಭಾಗದ ರೈತರು ಹತಾಶಗೊಂಡಿದ್ದರು. ಪ್ರವಾಸಿಗರು ಬರಡು ಜಲಾಶಯ ಕಂಡು ಬೇಸರಗೊಂಡಿದ್ದರು. ಆದ್ರೆ ಕಳೆದ ಕೆಲ ದಿನಗಳಿಂದ ರಾಮನಗರ ಜಿಲ್ಲೆಯಾದ್ಯಂತ ವರುಣನ ಅಬ್ಬರದಿಂದ ಕಣ್ವ ಜಲಾಶಯ ನಳನಳಿಸುತ್ತಿದೆ. 

Tap to resize

Latest Videos

Ramanagara; ಅಧಿಕಾರಿಗಳಿಂದಲೇ ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಮೀನು ಗುಳುಂ!

ಕಣ್ವ ಡ್ಯಾಂ 33 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಸದ್ಯ 32 ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಯಾದರೆ ಕ್ರಸ್ಟ್ ಗೇಟ್ ಮೂಲಕ ನದಿಗೆ ನೀರು ಹರಿಸಲು ನೀರಾವರಿ ಇಲಾಖೆ ಸಿದ್ಧತೆ ನಡೆಸಿದೆ. ಕಣ್ವ ನದಿಗೆ 1946ರಲ್ಲಿ ಚನ್ನಪಟ್ಟಣ ತಾಲ್ಲೂಕಿನ ಗಡಿಭಾಗದಲ್ಲಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಸುಮಾರು 776 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಜಲಾಶಯ ಚನ್ನಪಟ್ಟಣ ತಾಲ್ಲೂಕಿನ ಸಾವಿರಾರು ಹೆಕ್ಟೇರ್ ಜಮೀನಿಗೆ ನೀರುಣಿಸುವ ಸಾಮರ್ಥ್ಯವನ್ನು ಹೊಂದಿದೆ. ಸ್ವಯಂ ಚಾಲಿತ ಸೈಫನ್ ವ್ಯವಸ್ಥೆ ಹೊಂದಿರುವ ಜಲಾಶಯಕ್ಕೆ ದಶಕದ ಹಿಂದೆ ಕ್ರಸ್ಟ್ ಗೇಟ್ ಅಳವಡಿಸಲಾಗಿದೆ. ಇದನ್ನ ನೋಡಲು ದೂರದ ಊರುಗಳಿಂದ ಜನರು ಬರುತ್ತಿದ್ದಾರೆ.

ಅಂದಹಾಗೆ, ಡ್ಯಾಂ ತುಂಬಿರುವ ಕಾರಣ ವೀಕ್ಷಣೆ ಮಾಡಲು ರಾಮನಗರ, ಮಂಡ್ಯ, ಮೈಸೂರು, ಬೆಂಗಳೂರು ಭಾಗದಿಂದಲೂ ಸಹ ಪ್ರವಾಸಿಗರು ಹೆಚ್ಚಾಗಿ ಬರುತ್ತಿದ್ದಾರೆ. ಸದ್ಯ ಸಂಜೆ ವೇಳೆ ಯುವಕರು, ಪ್ರೇಮಿಗಳು ಹಾಗೂ ಕುಟುಂಬ ಸಮೇತ ಬರುವ ಪ್ರವಾಸಿಗರು ಜಲಾಶಯ ತುಂಬಿರುವುದನ್ನ ಕಂಡು ಸಂತಸ ಪಡುವ ಮೂಲಕ ತುಂಬಾ ಎಂಜಾಯ್ ಮಾಡುತ್ತಿರುವುದಲ್ಲದೇ ಡ್ಯಾಂ ಎದುರು ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಎರಡು ದಶಕಗಳಿಂದ ಬತ್ತಿಹೋಗಿದ್ದ ಕಣ್ವ ಡ್ಯಾಂ ವರುಣನ ಕೃಪೆಯಿಂದ ನಳನಳಿಸುತ್ತಿದೆ. ಇದರಿಂದ ರೈತರೂ  ಹಾಗೂ ಪ್ರವಾಸಿಗರಲ್ಲಿ ಸಂತಸ ಮೂಡಿಸುತ್ತಿದೆ.

click me!