ಪ್ರಸಕ್ತ ಮುಂಗಾರು ಆರಂಭಗೊಂಡು ಒಂದೂವರೆ ತಿಂಗಳು ಕಳೆದಿದ್ದರೂ ಸಹ ನಿರೀಕ್ಷೆಯ ಪ್ರಮಾಣದಲ್ಲಿ ಮಳೆಯಾಗದ ಕಾರಣಕ್ಕೆ ರೈತರು ಕೃಷಿ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಕೆಲವರು ವಿವಿಧ ಬೆಳೆಗಳನ್ನು ಬಿತ್ತಿ ನೀರಿಲ್ಲದೆ ಆತಂಕಗೊಂಡು ಮಳೆಗಾಗಿ ದೇವರ ಮೊರೆ ಹೋಗಿದ್ದರು. ಇದೀಗ ಪ್ರಸ್ತುತ ವಾರದಲ್ಲಿಯೇ ಮಳೆಯ ಕೊರತೆ ಭೀತಿ ಮರೆಯಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಸಹ ಚುರುಕು ಪಡೆದುಕೊಂಡಿವೆ.
ರಾಮಕೃಷ್ಣ ದಾಸರಿ
ರಾಯಚೂರು(ಜು.22): ಮುಂಗಾರು ಕ್ಷೀಣಗೊಂಡಿದ್ದರಿಂದ ಕಂಗಾಲಾಗಿದ್ದ ರೈತರು ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆಯನ್ನು ಕಂಡು ಸಂತಸಗೊಳ್ಳುತ್ತಿದ್ದಾರೆ. ಪ್ರಸಕ್ತ ವಾರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆಗೆ ಬರಡಾಗಿದ್ದ ಭೂಮಿಗೆ ಇದೀಗ ಜೀವ ಕಳೆ ಬರಲಾರಂಭಿಸಿದ್ದು, ತಡವಾಗಿಯಾದರೂ ಕರುಣೆ ತೋರಿದ ವರುಣನ ಕೃಪೆಯಿಂದಾಗಿ ಹಸಿರಿನ ತೋರಣ ಪರಸಿರುವ ಭರವಸೆಯನ್ನುಂಟು ಮಾಡಿದೆ.
undefined
ಪ್ರಸಕ್ತ ಮುಂಗಾರು ಆರಂಭಗೊಂಡು ಒಂದೂವರೆ ತಿಂಗಳು ಕಳೆದಿದ್ದರೂ ಸಹ ನಿರೀಕ್ಷೆಯ ಪ್ರಮಾಣದಲ್ಲಿ ಮಳೆಯಾಗದ ಕಾರಣಕ್ಕೆ ರೈತರು ಕೃಷಿ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಕೆಲವರು ವಿವಿಧ ಬೆಳೆಗಳನ್ನು ಬಿತ್ತಿ ನೀರಿಲ್ಲದೆ ಆತಂಕಗೊಂಡು ಮಳೆಗಾಗಿ ದೇವರ ಮೊರೆ ಹೋಗಿದ್ದರು. ಇದೀಗ ಪ್ರಸ್ತುತ ವಾರದಲ್ಲಿಯೇ ಮಳೆಯ ಕೊರತೆ ಭೀತಿ ಮರೆಯಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಸಹ ಚುರುಕು ಪಡೆದುಕೊಂಡಿವೆ.
ಕುಡಿಯುವ ನೀರೇ ಇಲ್ಲಿ ವಿಷ: ಕವರ್ ಸ್ಟೋರಿ ಕಾರ್ಯಾಚರಣೆಯಲ್ಲಿ ಕರಾಳ ಸತ್ಯ ಬಯಲು
ಕಳೆದ ವಾರ ಜಿಲ್ಲೆಯಲ್ಲಿ 35 ಮಿ.ಮೀ ಮಳೆ ಕೊರೆಯಾಗಿತ್ತು. 113 ಮಿ.ಮೀ ವಾಡಿಕೆ ಮಳೆ ಬರಬೇಕಿದ್ದರೆ ಕೇವಲ 81 ಮಿ.ಮೀ ಸುರಿದಿತ್ತು. ಇಂಥ ಸಮಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಸರಾಸರಿ ಶೇ.40ರಷ್ಟುಮಳೆ ಸುರಿದಿದೆ. ಕಳೆದ ಒಂದು ವಾರದ ಸರಾಸರಿ ಮಳೆ ಪರಿಗಣಿಸಿದರೆ ಶೇ.31.07ರಷ್ಟುಮಳೆಯಾದಂತಾಗಿದ್ದು, ಇದು ವಾರದ ವಾಡಿಕೆಯಷ್ಟಾಗಿದೆ. ಹೋದ ಒಂದು ವಾರದಲ್ಲಿ ರಾಯಚೂರು ತಾಲೂಕಿನಲ್ಲಿ 37.8 ಮಿಮೀ, ಮಾನ್ವಿಯಲ್ಲಿ 29.6 ಮಿಮೀ, ಸಿರವಾರದಲ್ಲಿ 34.7 ಮಿಮೀ, ದೇವದುರ್ಗದಲ್ಲಿ 44.7 ಮಿಮೀ, ಲಿಂಗಸುಗೂರಿನಲ್ಲಿ 28.9 ಮಿಮೀ, ಸಿಂಧನೂರಿನಲ್ಲಿ 22.6 ಮಿಮೀ ಹಾಗೂ ಮಸ್ಕಿ ತಾಲೂಕಿನಲ್ಲಿ 23.7 ಮಿಮೀ ಮಳೆಯಾಗಿದೆ.
ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ವರದಿಯಂತೆ ಇನ್ನೂ ಒಂದು ವಾರ ಮಳೆ ಮುಂದುವರಿಯುವ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿರುವುದರಿಂದ ಜಿಲ್ಲೆಯಲ್ಲಿ ಭಾರಿ ಮಳೆ, ಪ್ರವಾಹ ಕುರಿತು ಮುಂಜಾಗೃತೆ ವಹಿಸಲು ಜಿಲ್ಲಾಡಳಿತ ಮುಂದಾಗಿದೆ.
ಇನ್ನು ವಾರದ ಕಾಲ ಮಳೆ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಹವಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ರಾಯಚೂರು ಡಿಸಿ ಎಲ್.ಚಂದ್ರಶೇಖರ ನಾಯಕ ತಿಳಿಸಿದ್ದಾರೆ.
ಆಧಾರ್ ಜೋಡಣೆ, ತಿದ್ದುಪಡಿಗೆ ಹಣ ವಸೂಲಿ: ಜನಸಾಮಾನ್ಯರ ಆಕ್ರೋಶ..!
ಇಷ್ಟು ದಿನ ಮಳೆ ಕೊರತೆ ಅನುಭವಿಸಿದ ರೈತರಿಗೆ ಇದೀಗ ಸುರಿಯುತ್ತಿರುವ ಜಿಟಿಜಿಟಿ ಮಳೆಯು ಆಸರೆಯಾಗಿ ನಿಂತಿದೆ. ಈಗಾಗಲೇ ಬಿತ್ತಿರುವ ಬೆಳೆಗಳಿಗೆ ಅನುಕೂಲಮಾಡಿಕೊಡುವ ನಿಟ್ಟಿನಲ್ಲಿ ಮಳೆಯಾಗುತ್ತಿರುವುದು, ಮಂಕಾಗಿದ್ದ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುವಂತೆ ಮಾಡಿದೆ ಎಂದು ರೈತ ಮುಖಂಡ ಎನ್.ಲಕ್ಷ್ಮಣಗೌಡ ಕಡಗಂದೊಡ್ಡಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಇಷ್ಟು ದಿನ ಮಳೆಯ ಕೊರತೆಯನ್ನು ಕಾಣಲಾಗಿತ್ತು. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಎಲ್ಲೆಡೆ ಉತ್ತಮವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಾಡಿಕೆಯ ಮಳೆಯಾದಂತಾಗಿದೆ. ಮುಂದಿನ ಒಂದು ವಾರಗಳ ಕಾಲ ಮಳೆಯಾಗುವ ಸಾಧ್ಯತೆಗಳಿವೆ ಎಂದು ರಾಯಚೂರಿನ ಹವಮಾನ ತಜ್ಞ ಡಾ.ಶಾಂತಪ್ಪ ತಿಳಿಸಿದ್ದಾರೆ.