ಒಂದೇ ಎಕರೆಗೆ 10 ಲಕ್ಷ ಲಾಭ : ರೈತರಿಗೆ ಭಾರೀ ಬಂಪರ್

By Kannadaprabha News  |  First Published Feb 23, 2021, 8:42 AM IST

ಈ ಭಾರಿ ಅಕಾಲಿಕ ಮಳೆ ಹಾಗೂ ಹವಾಮಾನ ವೈಪರಿತ್ಯದಿಂದ ಬೆಳೆಗಳು ಹಾಳಾಗಿದ್ದು, ಇದರ ಬೆನ್ನಲ್ಲೇ ರೈತರು ಒಂದು ಎಕರೆ 10 ಲಕ್ಷಕ್ಕೂ ಅಧಿಕ ಬಂಪರ್ ಲಾಭ ಪಡೆದುಕೊಂಡಿದ್ದಾರೆ


ವರದಿ :  ಸೋಮರಡ್ಡಿ ಅಳವಂಡಿ
 
 ಕೊಪ್ಪಳ (ಫೆ.23):
 ಕಳೆದ ವರ್ಷ ಅತಿಯಾದ ಮಳೆಯಿಂದ ಬಹಳಷ್ಟುಕಡೆ ದಾಳಿಂಬೆ ಬೆಳೆ ಕಾಯಿ ಕಟ್ಟಲೇ ಇಲ್ಲ. ಹೀಗಾಗಿ ಒಂದೆಡೆ ದಾಳಿಂಬೆ ಬೆಳೆಗಾರ ಸಂಕಷ್ಟಎದುರಿಸುತ್ತಿದ್ದರೆ, ಇನ್ನೊಂದೆಡೆ ಫಸಲನ್ನು ಸಂರಕ್ಷಣೆ ಮಾಡಿಕೊಂಡವರಿಗೆ ಮಾರುಕಟ್ಟೆಯಲ್ಲಿ ಬಂಪರ್‌ ಧಾರಣೆ ಸಿಕ್ಕಿದೆ.

ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಷ್ಟುದಾಳಿಂಬೆ ಹಣ್ಣು ಲಭ್ಯವಾಗುತ್ತಿಲ್ಲ. ಹೀಗಾಗಿ ಸೇಬುಗಿಂತಲೂ ದಾಳಿಂಬೆ ದುಬಾರಿಯಾಗಿದೆ. ಕೋವಿಡ್‌ನಿಂದಾಗಿ ರಫ್ತು ಇಲ್ಲದಿದ್ದರೂ ಸ್ಥಳೀಯ ಮಾರುಕಟ್ಟೆಯಲ್ಲಿ ದಾಳಿಂಬೆಯನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಆದರೂ ದಾಳಿಂಬೆ ಹಣ್ಣು ಬೇಡಿಕೆಯ ಶೇ. 20ರಷ್ಟುಲಭ್ಯವಾಗುತ್ತಿಲ್ಲ.

Tap to resize

Latest Videos

ಗುಜರಾತ್‌, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದಾಳಿಂಬೆ ಬೆಳೆಯುವ ಬಹುತೇಕ ರಾಜ್ಯಗಳಲ್ಲಿ ದಾಳಿಂಬೆ ಬೆಳೆ ನಿರೀಕ್ಷೆಯಷ್ಟುಬಂದಿಲ್ಲ. ಅತಿಯಾದ ಮಳೆಯಿಂದ ದಾಳಿಂಬೆ ಕಟಾವಿಗೆ ಬಾರದಂತಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಭರ್ಜರಿ ದರ ಬಂದಿದೆ.

'ಒಂದು ವಾರದಲ್ಲಿ ರೈತರ ಖಾತೆಗೆ ಹಣ ಜಮೆ' .

ಎಕರೆಗೆ ಕನಿಷ್ಠ 10 ಲಕ್ಷ: ಈ ವರ್ಷ ದಾಳಿಂಬೆ ಬೆಳೆಯಿಂದ ಕನಿಷ್ಠವೆಂದರೂ ಪ್ರತಿ ಎಕರೆಗೆ ನಿವ್ವಳ ಹತ್ತು ಲಕ್ಷ ರುಪಾಯಿ ಲಾಭ ಸಿಕ್ಕಿದೆ. ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿ ರೈತ ವೆಂಕಣ್ಣ ಕೊಳ್ಳಿ ಅವರ 6 ಎಕರೆ ಪ್ರದೇಶದಲ್ಲಿ ಹಾಕಿದ ದಾಳಿಂಬೆ ಬೆಳೆಯಿಂದ ಬರೋಬ್ಬರಿ ಒಂದು ಕೋಟಿಗೂ ಅಧಿಕ ಲಾಭವಾಗಿದೆ.

ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ಸುನಂದಾ ಗೆದ್ದಿಕೇರಿ ಅವರ ಸುಮಾರು 25 ಎಕರೆ ಪ್ರದೇಶದಲ್ಲಿರುವ ದಾಳಿಂಬೆ ಬೆಳೆ 4ರಿಂದ 5 ಕೋಟಿಗೂ ಅಧಿಕವಾಗಿದೆ. ಜಿಲ್ಲಾದ್ಯಂತ ಎಲ್ಲ ರೈತರಿಗೂ ಇದು ದಕ್ಕಿಲ್ಲ. ಅತಿಯಾದ ಮಳೆಯಾದ ವೇಳೆ ಹಾಳಾದ ದಾಳಿಂಬೆ ಬೆಳೆಯನ್ನು ಯಾರು ಸಂರಕ್ಷಣೆ ಮಾಡಿದ್ದಾರೋ ಅವರೆಲ್ಲರಿಗೂ ಉತ್ತಮ ಆದಾಯ ಬಂದಿದೆ.

ಉತ್ತಮ ಧಾರಣೆ:

ಮಾರುಕಟ್ಟೆಯಲ್ಲಿ ಸದ್ಯ ದಾಳಿಂಬೆ ಕೆಜಿಗೆ 250 ರು. ನಂತೆ ಮಾರಾಟವಾಗುತ್ತಿದೆ. ಸಾಮಾನ್ಯವಾಗಿ ರೈತರಿಗೆ ಕೆಜಿ ಹಣ್ಣಿಗೆ 200ರವರೆಗೂ ಧಾರಣೆ ಸಿಕ್ಕಿದೆ. ದಾಳಿಂಬೆ ಪ್ರತಿ ಕೆಜಿಗೆ 100ರಿಂದ 120 ಧಾರಣೆ ಸಿಕ್ಕರೂ ಉತ್ತಮ ಲಾಭವಾಗುತ್ತದೆ. ಎಕರೆಗೆ ಏನಿಲ್ಲವೆಂದರೂ 5ರಿಂದ 6 ಲಕ್ಷ ಲಾಭ ಸಿಗುತ್ತದೆ. ಈ ಬಾರಿ ಕೆಜಿಗೆ 200ರವರೆಗೂ ಮಾರಾಟವಾಗಿರುವುದರಿಂದ ಡಬಲ್‌ ಆದಾಯ ಬಂದಿದೆ.

ರಫ್ತು ಇಲ್ಲ:

ಸಾಮಾನ್ಯವಾಗಿ ಕೊಪ್ಪಳ, ಬಾಗಲಕೋಟೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿಯೇ ಅಧಿಕ ದಾಳಿಂಬೆಯನ್ನು ಬೆಳೆಯುತ್ತಾರೆ. ರಾಜ್ಯಾದ್ಯಂತ ಒಟ್ಟಾರೆ 13 ಜಿಲ್ಲೆಗಳಲ್ಲಿ ದಾಳಿಂಬೆಯನ್ನು ಬೆಳೆಯಲಾಗುತ್ತದೆ. ಪ್ರಸಕ್ತ ವರ್ಷ ಕೋವಿಡ್‌ನಿಂದ ದಾಳಿಂಬೆ ರಫ್ತು ಇಲ್ಲವಾಗಿದೆ. ಹೀಗಾಗಿ ಮಾರುಕಟ್ಟೆಕುಸಿಯುತ್ತದೆ ಎನ್ನುವ ಲೆಕ್ಕಾಚಾರ ಮಾಡಲಾಗಿತ್ತು. ಆದರೆ, ಉಲ್ಟಾಆಗಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿಯೇ ದಾಳಿಂಬೆಗೆ ಭಾರಿ ಬೇಡಿಕೆ ಬಂದಿದೆ. ಸೇಬಿಗಿಂತಲೂ ದುಬಾರಿಯಾಗಿ ಇದೇ ಮೊದಲ ಬಾರಿಗೆ ಮಾರಾಟವಾಗುತ್ತಿದೆ.

10 ಸಾವಿರ ಮೆಟ್ರಿಕ್‌ ಟನ್‌:

ದೇಶದಿಂದ ಪ್ರತಿವರ್ಷ ಸುಮಾರು 10 ಸಾವಿರ ಮೆಟ್ರಿಕ್‌ ಟನ್‌ ದಾಳಿಂಬೆ ರಫ್ತು ಮಾಡಲಾಗುತ್ತಿತ್ತು. ಈ ವರ್ಷ ರಫ್ತು ಮಾಡಲು ಅವಕಾಶ ಇಲ್ಲದಿದ್ದರೂ ದಾಳಿಂಬೆಗೆ ದರ ಬಂದಿರುವುದು ರೈತರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

ಬಹುತೇಕರಿಗೆ ನಷ್ಟ:  ಅತಿಯಾದ ಮಳೆಯಿಂದಾಗಿ ದಾಳಿಂಬೆ ಫಸಲು ಅಷ್ಟಾಗಿ ಬಂದಿಲ್ಲ. ಮಳೆಯ ಪ್ರಮಾಣ ಕಡಿಮೆ ಇದ್ದಾಗಲೆಲ್ಲಾ ದಾಳಿಂಬೆ ಅತ್ಯುತ್ತಮವಾಗಿ ಬೆಳೆಯುತ್ತದೆ. ಆದರೆ, ಕಳೆದ ವರ್ಷ ನಿರಂತರ ಮಳೆಯಾಗಿದ್ದರಿಂದ ದಾಳಿಂಬೆ ಬೆಳೆ ಬಹುತೇಕ ಕಾಯಿ ಕಟ್ಟಲೇ ಇಲ್ಲ. ಹೀಗಾಗಿ ಉತ್ಪಾದನೆಯಲ್ಲಿ ಭಾರಿ ಕುಸಿತವಾಗಿರುವುದೇ ದರ ಏರಿಕೆಗೆ ಕಾರಣ ಎನ್ನಲಾಗಿದೆ.

ದಾಳಿಂಬೆ ದಾಖಲೆಯ ದರದಲ್ಲಿ ಮಾರಾಟವಾಗುತ್ತಿದೆ. ಇದರಿಂದ ದಾಳಿಂಬೆಯನ್ನು ಕಾಪಾಡಿಕೊಂಡ ರೈತರು ಬರೋಬ್ಬರಿ ಆದಾಯ ಗಳಿಸಿದ್ದಾರೆ. ಈ ಬಾರಿ ರಫ್ತು ಇಲ್ಲದಿದ್ದರೂ ಸ್ಥಳೀಯ ಮಾರುಕಟ್ಟೆಯಲ್ಲಿಯೇ ಅತ್ಯಧಿಕ ಮಾರಾಟವಾಗುತ್ತಿದೆ.

ಕೃಷ್ಣ ಉಕ್ಕುಂದ, ಡಿಡಿ ತೋಟಗಾರಿಕಾ ಇಲಾಖೆ ಕೊಪ್ಪಳ

ಪ್ರಸಕ್ತ ವರ್ಷ ದಾಳಿಂಬೆಗೆ ಅತ್ಯುತ್ತಮ ದರ ಬಂದಿದೆ. ಇದರಿಂದ ಅತ್ಯುತ್ತಮವಾಗಿ ದಾಳಿಂಬೆ ಬೆಳೆ ಕಾಪಾಡಿಕೊಂಡು ಬಂದವರು ಎಕರೆಗೆ .10​- 15 ಲಕ್ಷ ಲಾಭ ಪಡೆಯಲು ಸಾಧ್ಯವಾಗಿದೆ.

ಸುನಂದಾ ಗೆದ್ದಿಕೇರಿ, ದಾಳಿಂಬೆ ಬೆಳೆಗಾರರು ಅಳವಂಡಿ

click me!