* ಬಿತ್ತನೆ ಮಾಡಿದ ಹೊಲಗಳಿಗೆ ದಾಳಿ ಇಡುತ್ತಿರುವ ಹಂದಿಗಳು
* ನಿತ್ಯ ಹಗಲು, ರಾತ್ರಿ ಹಂದಿಗಳನ್ನು ಕಾಯುವುದೇ ರೈತರಿಗೀಗ ದೊಡ್ಡ ಕಾಯಕವಾಗಿದೆ
* ಹಂದಿ ಸಾಕಾಣಿಕೆದಾರರು ಪಟ್ಟಣದಿಂದ ಗ್ರಾಮೀಣ ಪ್ರದೇಶಕ್ಕೆ ಬಿಡುತ್ತಿರುವುದೇ ಸಮಸ್ಯೆಗೆ ಕಾರಣ
ಬಸವರಾಜ ಹಿರೇಮಠ
ಶಿಗ್ಗಾಂವಿ(ಜು.07): ರೈತರ ಜಮೀನುಗಳಿಗೆ ನುಗ್ಗುತ್ತಿರುವ ಹಂದಿಗಳು ಬಿತ್ತನೆ ಮಾಡಿದ ಬೀಜಗಳನ್ನು ತಿನ್ನುತ್ತಿವೆ. ಕಷ್ಟಪಟ್ಟು ಬಿತ್ತನೆ ಬೀಜ ತಂದು ಹೊಲದಲ್ಲಿ ಬಿತ್ತಿದ್ದ ರೈತರು ಹಂದಿಗಳ ಕಾಟಕ್ಕೆ ಕಂಗೆಟ್ಟಿದ್ದಾರೆ. ಸಮಸ್ಯೆಗೆ ಕಾರಣವಾಗಿರುವುದು ಹಂದಿ ಸಾಕಾಣಿಕೆದಾರರು.
undefined
ಶಿಗ್ಗಾಂವಿ ಪಟ್ಟಣದ ಸಾಕಾಣಿಕೆದಾರರು ಹಂದಿಗಳನ್ನು ತಂದು ಗ್ರಾಮೀಣ ಪ್ರದೇಶಕ್ಕೆ ಬಿಡುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ರೈತರಿಗೆ ಹಗಲು- ರಾತ್ರಿ ಹೊಲದಲ್ಲಿ ಹಂದಿಗಳನ್ನು ಕಾಯುವಂತಹ ಪರಿಸ್ಥಿತಿ ಬಂದೊದಗಿದೆ.
ತಾಲೂಕಿನ ಹಿರೇಮಲ್ಲೂರ, ಚಿಕ್ಕಮಲ್ಲೂರ ಗ್ರಾಮಗಳು ಸೇರಿದಂತೆ ಹಲವೆಡೆ ಹಂದಿಗಳನ್ನು ತಂದು ಬಿಡುತ್ತಿರುವುದರಿಂದ ಬಿತ್ತನೆ ಮಾಡಿರುವ ರೈತರ ಗೋಳನ್ನು ಕೇಳದಂತಾಗಿದೆ. ಮೊದಲೇ ಅರ್ಧಮರ್ಧ ಮಳೆಯಿಂದಾಗಿ ಕಂಗೆಟ್ಟಿರುವ ರೈತರಿಗೆ ಹಂದಿಗಳ ಹಾವಳಿಯಿಂದ ಹಗಲು- ರಾತ್ರಿ ಎನ್ನದೆ ಹೊಲ ಕಾಯುವ ಪರಿಸ್ಥಿತಿ ಬಂದೊದಗಿದೆ. ಈಗಾಗಲೇ ಶೇಂಗಾ, ಮೆಕ್ಕೆಜೋಳ, ಸೋಯಾಬಿನ್ ಬಿತ್ತನೆ ಮಾಡಿರುವ ಜಮೀನುಗಳಿಗೆ ಲಗ್ಗೆ ಇಡುತ್ತಿರುವ ಹಂದಿಗಳು ಸಂಜೆಯ ಇಳಿಹೊತ್ತಿನ ಸಮಯ, ಇಲ್ಲವೇ ಬೆಳಗಿನ ಸೂರ್ಯೊದಯ ಮೊದಲೇ ಹೊಲಗಳಿಗೆ ನುಗ್ಗಿ ಬಿತ್ತಿದ ಸಾಲನ್ನು ಹಿಡಿದು ಮೊಳಕೆಯೊಡೆದ ಬೀಜಗಳನ್ನು ಸಹ ಬಿಡದೇ ತಿನ್ನುತ್ತಿರುವುದು ರೈತರಿಗೆ ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಈ ಪರಿಸ್ಥಿತಿ ಕಳೆದ 2 ವರ್ಷಗಳಿಂದ ಮುಂದುವರೆದಿದ್ದು, ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದೆ ಎಂಬುದು ರೈತರ ಅಳಲಾಗಿದೆ.
ಇಂದಿರಾ ಕ್ಯಾಂಟೀನ್‌ಗೆ 8 ತಿಂಗಳಿಂದ ಬೀಗ: ಬಡ ಜನರ ಹೊಟ್ಟೆಗೆ ಬರೆ..!
ಕಳೆದ ವರ್ಷ ಹಿಂಗಾರಿನ ಸಮಯದಲ್ಲಿ ರೈತರು ಹಂದಿಗಳ ದಾಳಿಗೆ ಬೇಸತ್ತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಮತ್ತು ಗ್ರಾಮಕ್ಕೆ ಹಂದಿಗಳನ್ನು ಹಿಡಿಯಲು ಬಂದ ಸಾಕಾಣಿಕೆದಾರರನ್ನು ಹಿರೇಮಲ್ಲೂರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕೂಡಿ ಹಾಕಿ ಹಂದಿಗಳ ದಾಳಿಯಿಂದ ನಷ್ಟಕ್ಕೊಳಗಾದ ರೈತರು ಗ್ರಾಮಸ್ಥರು ಪಂಚಾಯಿತಿ ಅಧಿಕಾರಿಗಳ ಸಮಕ್ಷಮ ಸಾಕಾಣಿಕೆದಾರರಿಗೆ ದಂಡ ಹಾಕಿ ಅದನ್ನು ದೇವಸ್ಥಾನಗಳಿಗೆ ದೇಣಿಗೆ ರೂಪದಲ್ಲಿ ನೀಡಿದ್ದುಂಟು. ಆಗಿನ ಸಂದರ್ಭದಲ್ಲಿ ಹಂದಿಗಳನ್ನು ಬೇರೆಡೆ ಸಾಗಾಣಿಕೆ ಮಾಡಿ ಈಗ ಪುನಃ ಗ್ರಾಮೀಣ ಪ್ರದೇಶಕ್ಕೆ ಹಂದಿಗಳನ್ನು ತಂದು ಬಿಡುತ್ತಿರುವುದರಿಂದ ರೈತರಿಗೆ ತಲೆನೋವಾಗಿ ಪರಿಣಮಿಸಿದೆ.
ಪಟ್ಟಣದಲ್ಲಿರುವ ಹಂದಿ ಸಾಕಾಣಿಕೆದಾರರು ಹಳ್ಳಿಗಳಿಗೆ ಹಂದಿಗಳನ್ನು ತಂದು ಬಿಡುತ್ತಿರುವುದರಿಂದ ಈ ಸಮಸ್ಯೆ ಉದ್ಭವವಾಗಿದೆ. ಹಂದಿಗಳು ಬೆಳೆ ತಿನ್ನುವುದಕ್ಕಿಂತ ಹೆಚ್ಚಾಗಿ ಕಿತ್ತು ಹಾಳು ಮಾಡುತ್ತಿವೆ. ನಾವು ಈಗಾಗಲೇ ಪೊಲೀಸರು, ಗ್ರಾಪಂ ಮೂಲಕ ಸಾಕಾಣಿಕೆದಾರರಿಗೆ ಮನವಿ ಮಾಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಅಂತ ಹಿರೇಮಲ್ಲೂರ ಗ್ರಾಮದ ರೈತ ಮುದಿಗೌಡ್ರ ಹುತ್ತನಗೌಡ್ರ ತಿಳಿಸಿದ್ದಾರೆ.
ಹಂದಿಗಳ ಹಿಡಿದುಕೊಂಡು ಹೋಗಲು ಈಗಾಗಲೇ ಸಾಕಾಣಿಕೆದಾರರಿಗೆ ಗ್ರಾಪಂನಿಂದ ಪತ್ರದ ಮೂಲಕ ಎಚ್ಚರಿಕೆ ನೀಡಲಾಗಿದೆ. ಅದರಂತೆ ಪೊಲೀಸ್ ಇಲಾಖೆ ಮೂಲಕ ಸಾಕಾಣಿಕೆದಾರರು ಕರೆಯಿಸಿ ಸೂಚನೆ ನೀಡಲಾಗಿದೆ. ಇನ್ನು 2-3 ದಿನಗಳ ವರೆಗೆ ಕಾಲಾವಕಾಶ ನೀಡಿದ್ದು, ಹಂದಿ ಹಿಡಿದುಕೊಂಡು ಹೋಗದೇ ಇದ್ದಲ್ಲಿ ಸಾಕಾಣಿಕೆದಾರರ ಮೇಲೆ ಸೂಕ್ತ ಕ್ರಮ ಕ್ರಮ ಕೈಗೊಳ್ಳಲಾಗುವುದು ಅಂತ ಹಿರೇಮಲ್ಲೂರು ಪಿಡಿಒ ಬಿ.ಕೆ. ಸಂಶಿ ಹೇಳಿದ್ದಾರೆ.