ಅತಿವೃಷ್ಟಿಯಿಂದಾಗಿ ಇಳುವರಿ ಕಾಣದ ಈರುಳ್ಳಿ, ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಪಾತಾಳಕ್ಕೆ, ಅನ್ಯ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು, ಸ್ಥಳೀಯ ಬೆಳೆಗೆ ದೊರೆಯದ ಬೆಲೆ
ರಾಮಕೃಷ್ಣ ದಾಸರಿ
ರಾಯಚೂರು(ನ.03): ಕರುಣೆಯಿಲ್ಲದ ದೇವರು ಕಷ್ಟಗಳನ್ನೆಲ್ಲಾ ರೈತರ ಹೆಗಲಿಗೆ ಹಾಕುತ್ತಲೆಯಿದ್ದು, ಭೂಮಿಯನ್ನೇ ನಂಬಿ ಬದುಕುತ್ತಿರುವವರ ಬದುಕು ಮೂರಾಬಟ್ಟೆಯಾಗುತ್ತಿದೆ. ಜಿಲ್ಲೆಯಲ್ಲಿ ಈರುಳ್ಳಿ ಬೆಳೆದ ರೈತರು ಕಣ್ಣೀರಲ್ಲಿಯೇ ಕಾಲ ಕಳೆಯುವಂತಾಗಿದೆ. ಅತಿಯಾದ ಮಳೆ, ಅನ್ಯ ರಾಜ್ಯಗಳಿಂದ ಅತೀ ಹೆಚ್ಚಿನ ರೀತಿಯಲ್ಲಿ ಆವಕ ಮಾಡಿಕೊಳ್ಳುತ್ತಿರುವುದು, ತೀವ್ರ ತೇವಾಂಶದಿಂದಾಗಿ ಈರುಳ್ಳಿ ಕೊಳೆತು ಹೋಗುತ್ತಿರುವುದು, ಗಗನಕ್ಕೇರಿದ ರಸಗೊಬ್ಬರದ ಬೆಲೆ, ಮುಕ್ತ ಮಾರುಕಟ್ಟೆಯಲ್ಲಿ ಪಾತಾಳಕ್ಕಿಳಿದ ಬೆಲೆಯಿಂದಾಗಿ ಈರುಳ್ಳಿಯನ್ನು ಬೆಳೆದ ರೈತರು ಕಣ್ಣೀರಲ್ಲಿ ಕೈತೊಳೆಯುವಂತಹ ದುಸ್ಥಿತಿ ನಿರ್ಮಾಣಗೊಂಡಿದೆ.
ರಾಯಚೂರು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅದರಲ್ಲಿಯೂ ರಾಯಚೂರು, ಮಾನ್ವಿ,ದೇವದರ್ಗ ಹಾಗೂ ಲಿಂಗಸುಗೂರು ತಾಲೂಕಿನ ಸುಮಾರು 50 ಸಾವಿರಕ್ಕು ಹೆಚ್ಚು ಎಕರೆ ಪ್ರದೇಶದಲ್ಲಿ ರೈತರು ಈರುಳ್ಳಿ ಬೆಳೆಯನ್ನು ಹಚ್ಚಿದ್ದಾರೆ. ಪ್ರತಿ ಎಕರೆಗೆ ಏನಿಲ್ಲಾ ಎಂದರೂ ಸಹ 20 ರಿಂದ 30 ಸಾವಿರ ಖರ್ಚು ಮಾಡಿ ಬೆಳೆಯನ್ನು ಬೆಳೆದ ಅನ್ನದಾತನಿಗೆ ಅತಿವೃಷ್ಟಿಯ ಹೊಡೆತವು ನೆಮ್ಮದಿಗೆ ಕೊಳ್ಳಿಯನ್ನಿಟ್ಟಿತ್ತು. ಇದೀಗ ಕಳೆದ ಎರಡ್ಮೂರು ತಿಂಗಳಿನಿಂದ ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯು ತೀವ್ರ ಕಡಿಮೆಯಾಗಿರುವುದು ರೈತರಲ್ಲಿ ಆತಂಕವನ್ನುಂಟು ಮಾಡಿದೆ.
ರಾಯಚೂರಿನ ಇಬ್ಬರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ, ವಿಶೇಷ ಕ್ಷೇತ್ರದಲ್ಲಿ ಸಾಧನೆ
ಪಾತಾಳ ಕಂಡ ದರ:
ಕಳೆದ ವರ್ಷ ಈರುಳ್ಳಿ ಬೆಳೆದ ರೈತನು ಭಾರಿ ಲಾಭದ ಮುಖ ಕಾಣದಿದ್ದರು ಸಹ ಹೂಡಿದ ಹಣ ಮೇಲಿನ ಖರ್ಚು-ವೆಚ್ಚವನ್ನು ಸರಿಪಡಿಸುವಷ್ಟುಮೊತ್ತವನ್ನು ಸಂಪಾದಿಸಿದ್ದನು. ಆದರೆ, ಕಳೆದ ಹಲವು ತಿಂಗಳಿನಿಂದ ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಳೆಯು ಪ್ರತಿ ಕ್ವಿಂಟಾಲ್‌ಗೆ 250 ರಿಂದ 500 ವರೆಗೆ ದರವು ಏರಿಳಿತ ಕಾಣುತ್ತಿದೆ. ಕಳೆದ ವರ್ಷ 1500 ರಿಂದ 4200 ರು. ವರೆಗೆ ಮಾರುಕಟ್ಟೆಯಲ್ಲಿ ಈರುಳ್ಳಿ ದರವಿತ್ತು. ಆದರೆ, ಇದೀಗ ಕನಿಷ್ಠ ದರವು ಭಾರಿ ಪ್ರಮಾಣದಲ್ಲಿ ಇಳಿಕೆ ಆಗುತ್ತಿರುವುದರಿಂದ ರೈತರಿಗೆ ಹಾಕಿದ ಬಂಡವಾಳವು ಸಹ ಬಾರದಂತಾಗಿದೆ.
ದರ ಕಡಿಮೆಗೇನು ಕಾರಣ?:
ಸ್ಥಳೀಯ ರೈತರು ಬೆಳೆದ ಈರುಳ್ಳಿಗೆ ಮುಕ್ತ ಮಾರುಕಟ್ಟೆಯಲ್ಲಿ ಲಾಭ ಸಿಗುತ್ತಿಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ಈರುಳ್ಳಿ ಬೆಳೆದು ಹೊರ ದೇಶಕ್ಕೆ ರಫ್ತು ಮಾಡಲಾಗುತ್ತಿತ್ತು. ಆದರೆ, ಅದೇ ಈರುಳ್ಳಿ ಈಗ ರಾಯಚೂರು ಜಿಲ್ಲೆಯ ಮುಕ್ತ ಮಾರುಕಟ್ಟೆಗೆ ಆಗಮಿಸುತ್ತಿವೆ. ಇದರಿಂದಾಗಿ ಗುಣಮಟ್ಟದ ಕೊರತೆಯಿಂದಾಗಿ ಸ್ಥಳೀಯ ಈರುಳ್ಳಿಗೆ ಬೆಲೆಯಿಲ್ಲದಂತಾಗಿದೆ. ಪ್ರಸಕ್ತ ಸಾಲಿನ ಮುಂಗಾರು-ಹಿಂಗಾರಿನಲ್ಲಿ ಅತಿಯಾದ ಮಳೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಬೆಲೆ ಕೈಗೆಟುಕದ ಕಾರಣಕ್ಕೆ ಹೊರ ರಾಜ್ಯಗಳಿಂದ ಈರುಳ್ಳಿಯನ್ನು ತರಿಸಿಕೊಳ್ಳುತ್ತಿರುವುದೇ ದರ ಕಡಿಮೆಗೆ ಕಾರಣವಾಗಿದೆ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸುತ್ತಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಸಿಎಂಗೆ ಬಿಟ್ಟ ಸಂಗತಿ: ಸಚಿವ ಬೈರತಿ ಬಸವರಾಜ
ಒಟ್ಟಿನಲ್ಲಿ ಈರುಳ್ಳಿ ಬೆಲೆಯಿಂದ ಲಾಭ ಪಡೆಯುವ ಆಸೆಯನ್ನೊಂದಿದ್ದ ರೈತರಿಗೆ ನಿರಾಸೆಯೇ ಉಳಿದುಬಿಟ್ಟಿದ್ದು, ಕಣ್ಣ ಮುಂದೆಯೇ ಇಳುವರಿ ಕಾಣದ ಬೆಳೆಯನ್ನು ಕಂಡು ರೈತರು ಕಣ್ಣೀರು ಸುರಿಸುವಂತಾಗಿದೆ.
ಹಲವು ತಿಂಗಳಿನಿಂದ ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿಗೆ ದರವಿಲ್ಲದಂತಾಗಿದೆ. ಅತಿಯಾದ ಮಳೆಯಿಂದಾಗಿ ಈರುಳ್ಳಿ ಬೆಳೆ ಇಳುವರಿ ಸಹ ಕಂಡಿಲ್ಲ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಹ ಬೆಳೆ ನಷ್ಟದ ಸಮೀಕ್ಷೆ ನಡೆಸುವಲ್ಲಿ ವಿಳಂಬ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಕೂಡಲೇ ಸಮೀಕ್ಷೆ ನಡೆಸಿ ರೈತರಿಗೆ ಬೆಳೆ ನಷ್ಟದ ಪರಿಹಾರವನ್ನು ಒದಗಿಸಬೇಕು. ಮುಕ್ತ ಮಾರುಕಟ್ಟೆಯಲ್ಲಿ ನಿಗದಿತ ಕನಿಷ್ಠ ಬೆಲೆಯನ್ನು ನಿರ್ಧರಿಸಿ ಈರುಳ್ಳಿ ಬೆಳೆದ ರೈತರ ಕೈ ಹಿಡಿಯುವ ಕೆಲಸವನ್ನು ಮಾಡಬೇಕು ಅಂತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಎನ್.ಲಕ್ಷ್ಮಣಗೌಡ ಕಡಗಂದೊಡ್ಡಿ ತಿಳಿಸಿದ್ದಾರೆ.