ಮಾಜಿ ಮುಖ್ಯಮಂತ್ರಿ ರಾಜಕೀಯ ಲಾಭಕ್ಕಾಗಿ ಇಂತಹ ಹೇಳಿಕೆಯನ್ನು ನೀಡುವ ಮೂಲಕ ಸಹೋದರಂತೆ ಇರುವ ನಮ್ಮನ್ನು ಒಡೆದು ಆಳುವ ನೀತಿಗೆ ಮುಂದಾಗಿದ್ದಾರೆ: ಬಸವರಾಜ ಬಂಕದ
ಗಜೇಂದ್ರಗಡ(ನ.03): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುತ್ತೇವೆ ಎಂದಿದ್ದು ಖಂಡನಾರ್ಹ. ಹೀಗಾಗಿ ತಮ್ಮ ಹೇಳಿಕೆ ಹಿಂಪಡೆಯದಿದ್ದರೆ ರಾಜ್ಯದ ಯಾವ ಮೂಲೆಯಲ್ಲಿ ಸಿದ್ದರಾಮಯ್ಯ ನಿಂತರೂ ಅವರನ್ನು ಸೋಲಿಸುತ್ತೇವೆ ಎಂದು ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಬಂಕದ ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸದಾಶಿವ ಆಯೋಗದ ವರದಿ ಜಾರಿ ಕುರಿತು ನೀಡಲಾಗಿದೆ ಎನ್ನುವ ಹೇಳಿಕೆ ಖಂಡಿಸಿ ಸದಾಶಿವ ಆಯೋಗ ವರದಿ ಜಾರಿ ವಿರೋಧಿ ಹೋರಾಟ ಸಮಿತಿಯಿಂದ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಪಕ್ಷ ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತದೆ ಎನ್ನುವ ವಿಶ್ವಾಸವಿದೆ. ನಾವು ಅದನ್ನು ಮಾಡೇ ತೀರುತ್ತೇವೆ. ನೀವು ಬೇಡ ಅಂದರೂ ಮಾಡುತ್ತೇವೆ ಎಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೀಗಾಗಿ ಸದಾಶಿವ ಆಯೋಗದ ವರದಿ ಜಾರಿಗೆ ನಮ್ಮ ವಿರೋಧವಿದೆ. ಆದರೆ ಮಾಜಿ ಮುಖ್ಯಮಂತ್ರಿ ರಾಜಕೀಯ ಲಾಭಕ್ಕಾಗಿ ಇಂತಹ ಹೇಳಿಕೆಯನ್ನು ನೀಡುವ ಮೂಲಕ ಸಹೋದರಂತೆ ಇರುವ ನಮ್ಮನ್ನು ಒಡೆದು ಆಳುವ ನೀತಿಗೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಹಿಂದುಳಿದ ವರ್ಗದ ನಾಯಕ ಎಂದುಕೊಂಡಿದ್ದೇವು. ಆದರೆ ಅವರು ನಮ್ಮಲ್ಲಿಯೇ ಒಡಕು ಮೂಡಿಸುವ ಕೆಲಸ ಮಾಡಿದ್ದು ಆಕ್ಷೇಪಾರ್ಹ ಎಂದರು.
ಮಂಡಲ್ ವರದಿ ವೇಳೆ ಸಿದ್ದರಾಮಯ್ಯ ಎಲ್ಲಿದ್ರು? ಶ್ರೀರಾಮುಲು ವಾಗ್ದಾಳಿ
ದಲಿತ ಮುಖಂಡ ಪ್ರಶಾಂತ ರಾಠೋಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಹಿಂಪಡೆಯಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು. ಸಾಮಾಜಿಕ ಜಾಲತಾಣದಲ್ಲಿ ಈಗ ಹರಿದಾಡುತ್ತಿರುವ ವಿಡಿಯೋದಲ್ಲಿ ಸಿದ್ದರಾಮಯ್ಯ ಅವರು ಒಂದೆರಡು ಸಮುದಾಯಗಳನ್ನು ಓಲೈಸುವುದಕ್ಕಾಗಿ 99 ಸಮುದಾಯಗಳನ್ನು ತುಳಿಯುವ ಕೆಲಸವನ್ನು ಮಾಡಿದ್ದಾರೆ. ಆದರೆ ವಿಡಿಯೋ ಇತ್ತೀಚೆಗೆ ಮಾಡಿದ್ದಾ ಅಥವಾ ಹಳೆಯದಾ ಎಂಬುದು ತಿಳಿದಿಲ್ಲ. ಹೀಗಾಗಿ ಹೇಳಿಕೆ ಕುರಿತು ಸ್ಪಷ್ಟಪಡಿಸದಿದ್ದರೆ 99 ಸಮುದಾಯಗಳು ಒಗ್ಗಟ್ಟಾಗಿ ಅವರನ್ನು ಸೋಲಿಸುವ ಕೆಲಸ ಮಾಡುತ್ತೇವೆ ಎಂದರು.
ಮುಖಂಡ ಈಶಪ್ಪ ರಾಠೋಡ ಮಾತನಾಡಿ, ಕಾಂಗ್ರೆಸ್ ವರಿಷ್ಠ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಜಿ ಶಾಸಕ ಜಿ.ಎಸ್. ಪಾಟೀಲ ಅವರ ಮೂಲಕ ಮನವಿ ನೀಡುತ್ತೇವೆ. ಹೇಳಿಕೆ ಕುರಿತು ಸ್ಪಷ್ಟೀಕರಣ ಸಿಗದಿದ್ದರೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ಮುದಿಯಪ್ಪ ಮುಧೋಳ, ರೂಪ್ಲೇಶ ರಾಠೋಡ, ಮೂಕಪ್ಪ ನಿಡಗುಂದಿ, ಷಣ್ಮುಖಪ್ಪ ಚಿಲ್‌ಝರಿ, ದುರಗಪ್ಪ ಮುಧೋಳ, ಮುತ್ತಪ್ಪ ಲಕ್ಕಲಕಟ್ಟಿ, ಗೋಪಾಲ ಭಜಂತ್ರಿ, ಕನಕಪ್ಪ ಕಲ್ಲೊಡ್ಡರ, ಹನುಮಂತಪ್ಪ ಚಳಗೇರಿ, ಬಸವರಾಜ ಮುಧೋಳ ಇದ್ದರು.