ಕೊಪ್ಪಳ: ಅಧಿಕಾರಿ ಯಡವಟ್ಟು, ಸಂಕಷ್ಟದಲ್ಲಿ ಅನ್ನದಾತ

By Web Desk  |  First Published Nov 30, 2019, 10:17 AM IST

ಪ್ರಧಾನಿ ಮೋದಿ ಅವರ ಮಹಾತ್ವಾಂಕ್ಷೆಯ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಗೆ ಮಸಿ ಬಳಿಯಲು ಈ ರೀತಿ ಮಾಡಲಾಗುತ್ತದೆ ಎನ್ನುವ ಅನುಮಾನ| ಕೇವಲ ಒಂದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪದೇ ಪದೇ ಈ ರೀತಿಯಾಗಲು ಕಾರಣವೇನು ಎಂಬದಕ್ಕೆ ಯಾರ ಬಳಿಯೂ ಉತ್ತರವಿಲ್ಲ| ಈ ಕುರಿತು ಸಮಗ್ರ ತನಿಖೆ ನಡೆಸಿದರೆ ನಿಜಾಂಶ ತಿಳಿಯಲಿದೆ ಎನ್ನುವುದು ರೈತರ ಆಗ್ರಹ|


ಸೋಮರಡ್ಡಿ ಅಳವಂಡಿ

ಕೊಪ್ಪಳ(ನ.30): ಬೇಟಗೇರಿ ಗ್ರಾಮ ಪಂಚಾಯಿತಿಯ ಪಿಡಿಒ ಅಕ್ಬರ್‌ ಮೀಠಾಯಿ ಅವರ ಸಾಲು ಸಾಲು ಯಡವಟ್ಟಿನಿಂದ ಈ ಪಂಚಾಯಿತಿ ವ್ಯಾಪ್ತಿಯ ಸಾವಿರಾರು ರೈತರಿಗೆ ಹತ್ತಾರು ಕೋಟಿ ರುಪಾಯಿ ಬೆಳೆ ವಿಮಾ ಪರಿಹಾರ ಬಾರದಂತೆ ಆಗಿದ್ದು ತೀವ್ರ ಬರಗಾಲದಲ್ಲಿ ಬೇಯುತ್ತಿರುವ ರೈತರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

Tap to resize

Latest Videos

ಪ್ರಕರಣ-1

2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಮತ್ತು ಸಜ್ಜೆಯ ಬೆಳೆ ಕಟಾವು ಪರೀಕ್ಷೆಯನ್ನು ನೀರಾವರಿ ಭೂಮಿಯಲ್ಲಿ ಮಾಡಿದ್ದರಿಂದ ರೈತರಿಗೆ ಬರೋಬ್ಬರಿ 2.60 ಕೋಟಿ ಬೆಳೆ ವಿಮಾ ಪರಿಹಾರ ಬಂದಿಲ್ಲ.

ಪ್ರಕರಣ-2

2018-19ನೇ ಸಾಲಿನ ಹಿಂಗಾರು ಬೆಳೆ ಕಟಾವನ್ನು ರಾಜ್ಯಪಾಲರ ಹೆಸರಿನಲ್ಲಿ ಇರುವ ಭೂಮಿಯಲ್ಲಿ (ಬೋಚನಳ್ಳಿ ಪ್ರೌಢಶಾಲೆ) ಇರುವ ಸರ್ವೇ ನಂಬರ್‌ ಭೂಮಿಯಲ್ಲಿ ಮಾಡಿ, ಅತ್ಯುತ್ತಮ ಇಳುವರಿ ಬಂದಿದೆ ಎನ್ನುವ ವರದಿ ನೀಡಲಾಗಿದೆ.

ಪ್ರಕರಣ-3

2018-19ನೇ ಸಾಲಿನ ಹಿಂಗಾರಿಯ ಬಿಳಿಜೋಳ ಬೆಳೆ ಕಟಾವು ಪರೀಕ್ಷೆಯನ್ನು ನೀರಾವರಿ ಪ್ರದೇಶದಲ್ಲಿ ಮಾಡುವ ಮೂಲಕ ಅತ್ಯುತ್ತಮ ಇಳುವರಿ ಬಂದಿದೆ ಎಂದು ವರದಿ ಮಾಡಿದ್ದರಿಂದ ಬೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಿರಾರು ರೈತರಿಗೆ ಕೋಟ್ಯಂತರ ರುಪಾಯಿ ಬೆಳೆವಿಮೆ ಪರಿಹಾರ ಬಾರದಂತೆ ಆಗಿದೆ. ವಿರೂಪಾಕ್ಷಪ್ಪ ಹರನಾಳಗಿ ಹೊಲದಲ್ಲಿ ಬಿಳಿಜೋಳ ಬೆಳೆ ಕಟಾವು ಮಾಡಲಾಗಿದೆ ಎಂದು ವರದಿ ತಯಾರಿಸಲಾಗಿದೆ. ಅಷ್ಟಕ್ಕೂ ನೀರಾವರಿ ಭೂಮಿಯಲ್ಲಿ ಬಿಳಿಜೋಳ ಬೆಳೆಯುವುದೇ ಇಲ್ಲ. ಆದರೂ ಅತ್ಯುತ್ತಮವಾಗಿ ಇಳುವರಿ ಬಂದಿದೆ ಎಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಸಾಮಾನ್ಯವಾಗಿ ಬೆಳೆ ವಿಮಾ ಪರಿಹಾರ ನೀಡುವ ಕುರಿತು ನಡೆಯುವ ಬೆಳೆ ಕಟಾವು ಪರೀಕ್ಷೆಯು ಅಂಕಿ ಸಂಖ್ಯಾ ಇಲಾಖೆ, ಕೃಷಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನೊಳಗೊಂಡು ಬೆಳೆ ವಿಮೆ ಕಂಪನಿಯವರ ಉಪಸ್ಥಿತಿಯಲ್ಲಿ ನಡೆಯುತ್ತದೆ. ಆದರೆ ಬೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದೆರಡು ವರ್ಷಗಳಿಂದ ಗ್ರಾಮ ಪಂಚಾಯಿತಿ ಅಧಿಕಾರಿ ಮಾತ್ರ ಯಾಕೆ ಬೆಳೆ ಕಟಾವು ವರದಿ ತಯಾರಿಸಿದ್ದಾರೆ ಎಂಬದು ಯಕ್ಷಪ್ರಶ್ನೆಯಾಗಿದೆ.

ಕೇಂದ್ರಕ್ಕೆ ಮಸಿ:

ಪ್ರಧಾನಿ ನರೇಂದ್ರ ಮೋದಿ ಅವರ ಮಹಾತ್ವಾಂಕ್ಷೆಯ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಗೆ ಮಸಿ ಬಳಿಯಲು ಈ ರೀತಿ ಮಾಡಲಾಗುತ್ತದೆ ಎನ್ನುವ ಅನುಮಾನ ಕಾಡತೊಡಗಿದೆ. ಕೇವಲ ಒಂದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪದೇ ಪದೇ ಈ ರೀತಿಯಾಗಲು ಕಾರಣವೇನು ಎಂಬದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಸಿದರೆ ನಿಜಾಂಶ ತಿಳಿಯಲಿದೆ ಎನ್ನುವುದು ರೈತರ ಆಗ್ರಹ.

ಬರಲೇ ಇಲ್ಲ ಪರಿಹಾರ

2018-19ನೇ ಸಾಲಿನ ಮುಂಗಾರು ಹಂಗಾಮು ಬೆಳೆ ಕಟಾವು ಪರೀಕ್ಷೆ ತಪ್ಪು ಎನ್ನುವುದು ಸಾಬೀತಾಗಿದೆ. ಅಲ್ಲದೆ ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಸ್ವತಃ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರೇ ಸೂಚಿಸಿದ್ದಾರೆ. ಅಧಿಕಾರಿಗೆ ಶಿಕ್ಷೆಯಾದರೆ ಸಾಲದು, ರೈತರಿಗೆ ಪರಿಹಾರ ಸಿಗುವಂತೆ ಆಗಬೇಕು ಎಂದು ಆದೇಶ ಹೊರಡಿಸಿ ತಿಂಗಳಾದರೂ ರೈತರಿಗೆ ಪರಿಹಾರ ದೊರಕಿಲ್ಲ.

ಈ ರೀತಿ ಪದೇ ಪದೇ ಪಿಡಿಒ ತಪ್ಪು ವರದಿ ನೀಡುವುದರಲ್ಲಿ ಹುನ್ನಾರ ಅಡಗಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿಸ್ಥ ಅಧಿಕಾರಿಗಳಿಗೆ ಶಿಕ್ಷೆ ಕೊಟ್ಟು, ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ತಾಪಂ ಮಾಜಿ ಸದಸ್ಯ ವೀರೇಶ ಸಜ್ಜನ್‌ ಅವರು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನೀರಾವರಿ ಪ್ರದೇಶದಲ್ಲಿ ಬಿಳಿಜೋಳ ಬೆಳೆಯುವುದೇ ಇಲ್ಲ. ಆದರೂ ಅಲ್ಲಿಯೇ ಕಟಾವು ಪರೀಕ್ಷೆ ಮಾಡಿ, ಅತ್ಯುತ್ತಮ ಇಳುವರಿ ಬಂದಿದೆ ಎಂದು ವರದಿ ಮಾಡಿದ್ದಾರೆ. ಕೂಡಲೇ ರೈತರಿಗೆ ಪರಿಹಾರ ನೀಡುವಂತೆ ಸರ್ಕಾರ ಆದೇಶಿಸಿ ಈ ಕುರಿತು ತನಿಖೆ ನಡೆಸಬೇಕು ಎಂದು ರೈತ ಪ್ರಭು ಭೋವಿ ಅವರು ತಿಳಿಸಿದ್ದಾರೆ. 

ಬೆಳೆ ಕಟಾವು ಪರೀಕ್ಷೆಯಿಂದ ಆಗಿರುವ ತಪ್ಪನ್ನು ಸರಿಪಡಿಸಲು ಈಗಾಗಲೇ ಸಚಿವರು ಸೂಚಿಸಿದ್ದಾರೆ. ಸರ್ಕಾರದ ಹಂತದಲ್ಲಿದ್ದು ಇನ್ನೂ ಪರಿಹಾರ ಬಂದಿಲ್ಲ ಎಂದು ಕೊಪ್ಪಳ ಜಿಪಂ ಸಿಇಒ ರಘುನಂದನ್‌ ಮೂರ್ತಿ ಅವರು ತಿಳಿಸಿದ್ದಾರೆ. 
 

click me!